*ಹರ್ಷದ್ ಮೆಹ್ತಾ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಪತ್ನಿ
*30 ವರ್ಷಗಳಿಂದ ಮೆಹ್ತಾ ಕುಟುಂಬ ಅನುಭವಿಸಿದ ನೋವು, ಅವಮಾನಗಳ ಬಗ್ಗೆ ವೆಬ್ ಸೈಟ್ ನಲ್ಲಿ ವಿವರಣೆ
*ಆರೋಪ ಸಾಬೀತಾಗದಿದ್ರೂ ಮಾಧ್ಯಮಗಳಲ್ಲಿ ಇಂದಿಗೂ ಹರ್ಷದ್ ಮೆಹ್ತಾ ಅವರ ನಿಂದನೆ ಮುಂದುವರಿದಿದೆ ಎಂಬ ಆರೋಪ
ನವದೆಹಲಿ (ಜು.8): ಹರ್ಷದ್ ಮೆಹ್ತಾ (Harshad Mehta),ಈ ಹೆಸರನ್ನು ಭಾರತೀಯರು (Indians) ಮರೆಯಲು ಸಾಧ್ಯವೆ? ಬಹುಕೋಟಿ ಷೇರು ಹಗರಣದ ಸೃಷ್ಟಿಕರ್ತ, ಬಿಗ್ ಬುಲ್ ಮೃತಪಟ್ಟು 20 ವರ್ಷಗಳ ಬಳಿಕ ಆತನ ಪತ್ನಿ ಜ್ಯೋತಿ ಈಗ ಮೌನ ಮುರಿದಿದ್ದಾರೆ. ಪತಿಯ ಪರ ಬ್ಯಾಟಿಂಗ್ ಮಾಡಲು ವೆಬ್ ಸೈಟ್ ವೊಂದನ್ನು ಪ್ರಾರಂಭಿಸಿದ್ದಾರೆ. ಈ ವೆಬ್ ಸೈಟ್ ಮೂಲಕ ಜ್ಯೋತಿ (Jyoti) ತನ್ನ ಪತಿ ವೈದ್ಯಕೀಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಕಳೆದ 30 ವರ್ಷಗಳಲ್ಲಿ ಆಕೆ ಹಾಗೂ ಕುಟುಂಬದ ಇತರ ಸದಸ್ಯರು ಅನುಭವಿಸಿದ ನೋವು, ಅವಮಾನಗಳ ಬಗ್ಗೆಯೂ ವಿವರಿಸಿದ್ದು 'ಗುಂಪು ಶಿಕ್ಷೆಯ' ವ್ಯವಸ್ಥೆಯನ್ನು ಟೀಕಿಸಿದ್ದಾರೆ ಕೂಡ.
ಹರ್ಷದ್ ಮೆಹ್ತಾ ಅವರ ಸಾವಿನ ಬಗ್ಗೆ https://www.harshadmehta.in ಎಂಬ ವೆಬ್ ಸೈಟ್ ನಲ್ಲಿ ವಿವರಿಸಿರುವ ಪತ್ನಿ, 'ಜೈಲಿನ ಅಧಿಕಾರಿಗಳು ಜೀವ ಉಳಿಸಬಹುದಾದ ಅತ್ಯಮೂಲ್ಯ ನಾಲ್ಕು ಗಂಟೆಗಳನ್ನು ವ್ಯರ್ಥ ಮಾಡಿದರು. ಹರ್ಷದ್ ಮೆಹ್ತಾ ಎದೆ ನೋವಿನ ಬಗ್ಗೆ ಮಾಹಿತಿ ನೀಡಿದರು ಕೂಡ ಅದನ್ನು ಗಂಭೀರವಾಗಿ ಪರಿಗಣಿಸದೆ ಜೀವ ಉಳಿಸಬಹುದಾದ ಸಮಯ ವ್ಯರ್ಥ ಮಾಡಿದರು. ಎದೆ ನೋವಿನ ಬಗ್ಗೆ ಹರ್ಷದ್ ಮೆಹ್ತಾ ಪಕ್ಕದ ಸೆಲ್ ನಲ್ಲಿದ್ದ ತಮ್ಮ ಸುಧೀರ್ ಗೆ ಮಾಹಿತಿ ನೀಡಿದ್ದರು. ಅವರನ್ನು ಪರೀಕ್ಷಿಸಿದ ಜೈಲಿನ ವೈದ್ಯರ ಬಳಿ ಹೃದಯಾಘಾತವಾದಾಗ ನೀಡುವ ಯಾವುದೇ ಔಷಧ ಇರಲಿಲ್ಲ. ಹೀಗಾಗಿ ಹರ್ಷದ್ ಮೆಹ್ತಾ 54 ದಿನಗಳ ಮುನ್ನ ಅಂದರೆ ಅವರು ಆರೆಸ್ಟ್ ಆಗುವ ಸಮಯದಲ್ಲಿ ನಾನು ನೀಡಿದ್ದ ಔಷಧಗಳಿರುವ ತುರ್ತು ಕಿಟ್ ನಿಂದ ಸೊರ್ಬಿಟ್ರೇಟ್ ಎಂಬ ಮಾತ್ರೆ ನೀಡಲು ತಿಳಿಸಿದ್ದರು. ಇದ್ರಿಂದಾಗಿ ಅವರು ನಾಲ್ಕು ಗಂಟೆಗಳ ಕಾಲ ಬದುಕುಳಿಯಲು ಸಾಧ್ಯವಾಗಿತ್ತು. ಆದ್ರೆ ಈ ಗೋಲ್ಡನ್ ಅವರ್ ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಜೈಲಿನ ಅಧಿಕಾರಿಗಳು ಮಾಡಿಲ್ಲ' ಎಂದು ಆರೋಪಿಸಿದ್ದಾರೆ.
Price Fall:ಎಸಿ, ಫ್ರಿಜ್, ವಾಷಿಂಗ್ ಮಷಿನ್ ಬೆಲೆ ಶೀಘ್ರದಲ್ಲೇ ಇಳಿಕೆ! ಅಗ್ಗವಾಗಲಿವೆಯಾ ಎಲೆಕ್ಟ್ರಾನಿಕ್ ಸಾಮಗ್ರಿಗಳು?
ಪ್ರಕರಣದಲ್ಲಿ ಹರ್ಷದ್ ಮೆಹ್ತಾ ಜೊತೆಗೆ ಅವರ ಇಬ್ಬರು ತಮ್ಮಂದಿರನ್ನು ದೋಷಿಗಳೆಂದು ಪರಿಗಣಿಸಲಾಗಿತ್ತು. ಅದು ಬಿಟ್ಟರೆ ಕುಟುಂಬದ ಬೇರೆ ಯಾವುದೇ ಸದಸ್ಯರ ಹೆಸರಿರಲಿಲ್ಲ. ಆದರೂ ನಮ್ಮ ಕುಟುಂಬದ ಸದಸ್ಯರು ಕಳೆದ 30 ವರ್ಷಗಳಿಂದ 'ಗುಂಪು ಶಿಕ್ಷೆಗೊಳಗಾಗಿದ್ದೇವೆ' ಎಂದು ಜ್ಯೋತಿ ಹೇಳಿದ್ದಾರೆ. ಅಲ್ಲದೆ, ಹರ್ಷದ್ ಅವರ ಸಾವನ್ನು ಬ್ಯಾಂಕುಗಳು ಹಾಗೂ ಆದಾಯ ತೆರಿಗೆ ಇಲಾಖೆ ದುರ್ಬಳಕೆ ಮಾಡಿಕೊಂಡಿವೆ ಎಂಬ ಗಂಭೀರ ಆರೋಪವನ್ನು ಕೂಡ ಮಾಡಿದ್ದಾರೆ. ಸುಪರ್ದುದಾರರು (Custodian) ಕೂಡ ತಪ್ಪು ಕ್ಲೇಮ್ಸ್ ಗಳನ್ನು ವಿರೋಧಿಸಲಿಲ್ಲ. ಬದಲಿಗೆ ನಮ್ಮ ಪರಿಸ್ಥಿತಿಯ ಲಾಭ ಪಡೆದು, ಆದಾಯ ತೆರಿಗೆ ಇಲಾಖೆ ಹಾಗೂ ಬ್ಯಾಂಕುಗಳಿಗೆ ಅನೇಕ ವಿಧದಲ್ಲಿ ನೆರವು ನೀಡಿದರು ಎಂದು ಆರೋಪಿಸಿದ್ದಾರೆ. ನಮ್ಮ ವಿರುದ್ಧ ಕ್ಲೈಮ್ ಗಳನ್ನು ಅಂತಿಮಗೊಳಿಸಿ ಸುಪರ್ದುದಾರರು (Custodian) ಆದಾಯ ತೆರಿಗೆ ಇಲಾಖೆಗೆ 3285.46 ಕೋಟಿ ರೂ. ಹಾಗೂ ಬ್ಯಾಂಕುಗಳಿಗೆ 1716.07 ಕೋಟಿ ರೂ. ಬಿಡುಗಡೆ ಮಾಡಿದರು. ಸುಪರ್ದುದಾರರು ಹರ್ಷದ್ ಮೆಹ್ತಾ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ರೂಪಿಸಿದ್ದ ಕಾನೂನುಗಳನ್ನು ಉಲ್ಲಂಘಿಸಿದ್ದರು ಎಂಬ ಆರೋಪವನ್ನು ಕೂಡ ಜ್ಯೋತಿ ಮಾಡಿದ್ದಾರೆ.
Wheat Flour Export:ಗೋಧಿ ಹಿಟ್ಟು,ರವೆ, ಮೈದಾ ರಫ್ತಿಗೆ ನಿರ್ಬಂಧ; ಬೆಲೆ ಇಳಿಕೆ ಆಗುತ್ತಾ?
ಮಾಧ್ಯಮಗಳು ಹರ್ಷದ್ ಮೆಹ್ತಾ ಅವರನ್ನು 'ವಂಚಕ' ಎಂದು ಕರೆಯುವ ಮೂಲಕ ಇಂದಿನ ತನಕವೂ ಅವರ ನಿಂದನೆಯನ್ನು ಮುಂದುವರಿಸಿವೆ. ಅವರ ವಿರುದ್ಧದ ಆರೋಪಗಳು ಸಾಬೀತು ಆಗದಿದ್ದರೂ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ಹೀಗಾಗಿ ಮರಣೋತ್ತರವಾಗಿಯಾದ್ರೂ ಅವರನ್ನು ಆರೋಪಗಳಿಂದ ಮುಕ್ತಗೊಳಿಸಲು ನಾನು ನಿರ್ಧರಿಸಿದ್ದೇನೆ. ಮಾಧ್ಯಮ, ಚಲನಚಿತ್ರ ಹಾಗೂ ವೆಬ್ ಸೀರಿಸ್ ಗಳು ಹರ್ಷದ್ ಮೆಹ್ತಾ ಅವರನ್ನು ಇನ್ನೂ ಜೀವಂತವಾಗಿಟ್ಟಿವೆ. ಹೀಗಾಗಿ ಮರಣೋತ್ತರವಾಗಿ ಅವರನ್ನು ಬೆಂಬಲಿಸೋದು ನನ್ನ ಕರ್ತವ್ಯ ಎಂದು ನಂಬಿದ್ದೇನೆ ಎಂದು ಜ್ಯೋತಿ ಹೇಳಿದ್ದಾರೆ.