* ಬಜೆಟ್ ಮಂಡನೆಗೆ ಕೇಂದ್ರದ ತಯಾರಿ
* 'ಹಲ್ವಾ' ಸ್ಥಾನ ಆಕ್ರಮಿಸಿದ 'ಸ್ವೀಟ್ಸ್'
* ಒಮಿಕ್ರಾನ್‌ನಿಂದ ಸಂಪ್ರದಾಯಕ್ಕೆ ಬ್ರೇಕ್
ನವದೆಹಲಿ(ಜ.28): ಕೊರೋನಾ ವೈರಸ್ ಹಾಗೂ ಓಮಿಕ್ರಾನ್ ಕಳವಳದ ಮಧ್ಯೆ, ಹಣಕಾಸು ಸಚಿವಾಲಯವು ಈ ವರ್ಷದ ಕೇಂದ್ರ ಬಜೆಟ್ 2022 ಕ್ಕಿಂತ ಮೊದಲು ತಯಾರಿಸುವ ಸಾಂಪ್ರದಾಯಿಕ 'ಹಲ್ವಾ ಸಮಾರಂಭ'ವನ್ನು ಕೈಬಿಟ್ಟಿದೆ. ಸಾಂಪ್ರದಾಯಿಕ ‘ಹಲ್ವಾ ಸಮಾರಂಭ’ದೊಂದಿಗೆ ನೌಕರರನ್ನು ಮನೆಯಿಂದ ದೂರ, ಬಜೆಟ್ ದಾಖಲೆ ಮುದ್ರಿಸುವ ಕಾರ್ಯ ಆರಂಭವಾಗಿದೆ. ಆದರೆ ಈ ವರ್ಷ ಈ ನೌಕರರಿಗೆ ಹಲ್ವಾ ಬದಲು ಸಿಹಿ ಹಂಚಲಾಗಿದೆ. ಈ ಬಗ್ಗೆ ಗುರುವಾರ ನೀಡಿದ ಹೇಳಿಕೆಯಲ್ಲಿ, ಹಣಕಾಸು ಸಚಿವಾಲಯವು "ಕೇಂದ್ರ ಬಜೆಟ್ ತಯಾರಿಕೆ ಪ್ರಕ್ರಿಯೆಯ ಅಂತಿಮ ಹಂತವನ್ನು ಗುರುತಿಸಲು, ಲಾಕ್-ಇನ್" ಮಾಡುವ ಮೊದಲು ಉದ್ಯೋಗಿಗಳಿಗೆ ಅವರ ಕೆಲಸದ ಸ್ಥಳಗಳಲ್ಲಿ ಸಿಹಿ ಹಂಚಲಾಗಿದೆ. ಪ್ರತಿ ವರ್ಷ ಈ ಸಮಯದಲ್ಲಿ ಹಲ್ವಾ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಆದರೆ ಚಾಲ್ತಿಯಲ್ಲಿರುವ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಆರೋಗ್ಯ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಅಗತ್ಯತೆಯ ದೃಷ್ಟಿಯಿಂದ ಈ ಸಂಪ್ರದಾಯ ಕೈಬಿಡಲಾಗಿದೆ ಎನ್ನಲಾಗಿದೆ.
ಬಜೆಟ್‌ನ ಗೌಪ್ಯತೆಯನ್ನು ಕಾಯ್ದುಕೊಳ್ಳಲು, ಬಜೆಟ್ ದಾಖಲೆಗಳನ್ನು ಸಿದ್ಧಪಡಿಸುವ ಅಧಿಕಾರಿಗಳು ತಮ್ಮ ಕುಟುಂಬದಿಂದ ದೂರ, ಕಚೇರಿಯಲ್ಲಿಯೇ ದೂರವಿರಬೇಕು ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿರುವ ಪ್ರಿಂಟಿಂಗ್ ಪ್ರೆಸ್‌ನೊಳಗೆ ಪ್ರಿಂಟಿಂಗ್ ಕೆಲಸಗಾರರು ಕನಿಷ್ಠ ಕೆಲವು ವಾರಗಳ ಕಾಲ ಉಳಿದುಕೊಳ್ಳಬೇಕಾಗುತ್ತದೆ. ಹಣಕಾಸು ಸಚಿವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರ ಈ ನೌಕರರು-ಅಧಿಕಾರಿಗಳು ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.
undefined
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1, 2022 ರಂದು ಮಂಡಿಸಲಿದ್ದಾರೆ. ಇದು ಅವರ ನಾಲ್ಕನೇ ಬಜೆಟ್ ಆಗಲಿದೆ. ಈ ಬಾರಿಯ ಬಜೆಟ್ ಕೂಡ ಕಾಗದ ರಹಿತವಾಗಿರುತ್ತದೆ. ಮೊದಲ ಬಾರಿಗೆ, ಐತಿಹಾಸಿಕ ಉಪಕ್ರಮದ ಅಡಿಯಲ್ಲಿ 2021-22 ರ ಬಜೆಟ್ ಅನ್ನು ಕಾಗದರಹಿತ ರೂಪದಲ್ಲಿ ಮಂಡಿಸಲಾಗಿಇತ್ತು. ಸಂಸದರು ಮತ್ತು ಸಾರ್ವಜನಿಕರಿಗೆ ಬಜೆಟ್ ದಾಖಲೆಗಳನ್ನು ಸುಲಭವಾಗಿ ತಲುಪಿಸಲು ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ.
ಹಲ್ವಾ ಹಂಚೋದು ಏಕೆ ಗೊತ್ತಾ?
ಬಜೆಟ್ ಮಂಡನೆಗೆ ಹತ್ತು ಅಥವಾ ಹನ್ನೆರಡು ದಿನ ಮುಂಚಿತವಾಗಿ ಬಜೆಟ್‌ನ ಪೂರ್ವಭಾವಿ ತಯಾರಿ ಪೂರ್ಣಗೊಂಡ ನಂತರ ಹಣಕಾಸು ಇಲಾಖೆಯ ಅಧಿಕಾರಿಗಳು ಬಜೆಟ್‌ನ ಅಂತಿಮ ಪ್ರತಿ ತಯಾರಿಸುವ ಕಾರ್ಯ ಆರಂಭಿಸುತ್ತಾರೆ. ತಿಂಗಳುಗಳ ಕಾಲ ಹಣಕಾಸು ಇಲಾಖೆಯ ಅಧಿಕಾರಿಗಳು ಸಂಸತ್ ಭವನದ ನಾರ್ತ್ ಬ್ಲಾಕ್‌ನಲ್ಲಿ ಗುಪ್ತವಾಗಿ ಬಜೆಟ್ ಸಿದ್ಧಪಡಿಸುತ್ತಿರುತ್ತಾರೆ.
ಬಜೆಟ್‌ನ ಅಂತಿಮ ಪ್ರತಿಯ ತಯಾರಿ ಆರಂಭವಾಗಿ, ನಂತರ ಮುದ್ರಣವಾಗಿ, ಕೊನೆಗೆ ಬಜೆಟ್ ಮಂಡನೆಯವರೆಗೂ ಅವರು ಮನೆಗೆ ಹೋಗುವಂತಿಲ್ಲ. ಬಜೆಟ್‌ನಲ್ಲಿರುವ ಅಂಶಗಳು ಸೋರಿಕೆಯಾಗಬಾರದು ಎಂದು ಅವರನ್ನು ಅಲ್ಲೇ ಉಳಿಸಿಕೊಳ್ಳಲಾಗುತ್ತದೆ. ಹೀಗಾಗಿ ವಿತ್ತ ಮಂತ್ರಿಗಳು ನಾರ್ತ್ ಬ್ಲಾಕ್‌ನಲ್ಲಿ ಸಿಹಿ ತಯಾರಿಸಿ ಅವರೆಲ್ಲರಿಗೂ ಹಂಚುವ ಮೂಲಕ ಖುಷಿಪಡಿಸುವ ಸಂಪ್ರದಾಯವಿದೆ.