ಎಲ್ಲರ ನಿರೀಕ್ಷೆ ಮೀರಿ ಜಿಡಿಪಿ 8.2%ಕ್ಕೇರಿಕೆ - 6 ತ್ರೈಮಾಸಿಕಗಳಲ್ಲೇ ಇದು ಅಧಿಕ

Kannadaprabha News   | Kannada Prabha
Published : Nov 29, 2025, 06:48 AM IST
GDP Growth

ಸಾರಾಂಶ

ಭಾರತದ ಆರ್ಥಿಕತೆ (ಜಿಡಿಪಿ) ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ.8.2ರಷ್ಟು ಬೆಳವಣಿಗೆ ಕಂಡಿದ್ದು, ಇದು ನಿರೀಕ್ಷೆಗೂ ಮೀರಿದ ಪ್ರಗತಿಯಾಗಿದೆ ಹಾಗೂ ಕಳೆದ 6 ಆರ್ಥಿಕ ತ್ರೈಮಾಸಿಕದಲ್ಲಿಯೇ ಅತ್ಯಧಿಕವಾಗಿದೆ

  ನವದೆಹಲಿ :  ಭಾರತದ ಆರ್ಥಿಕತೆ (ಜಿಡಿಪಿ) ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ.8.2ರಷ್ಟು ಬೆಳವಣಿಗೆ ಕಂಡಿದ್ದು, ಇದು ನಿರೀಕ್ಷೆಗೂ ಮೀರಿದ ಪ್ರಗತಿಯಾಗಿದೆ ಹಾಗೂ ಕಳೆದ 6 ಆರ್ಥಿಕ ತ್ರೈಮಾಸಿಕದಲ್ಲಿಯೇ ಅತ್ಯಧಿಕವಾಗಿದೆ. ಈ ಮೂಲಕ ಅಮೆರಿಕದ ಸುಂಕ ಏರಿಕೆಯ ಹೊಡೆತವನ್ನು ಭಾರತ ಹಿಮ್ಮೆಟ್ಟಿಸಿದ್ದು, ‘ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ’ ಎಂಬ ಪಟ್ಟ ಉಳಿಸಿಕೊಂಡಿದೆ.

‘ಅಮೆರಿಕವು ಹೆಚ್ಚಿನ ಆಮದು ಸುಂಕ ವಿಧಿಸಿ ಭಾರತದ ಆರ್ಥಿಕತೆಗೆ ಪೆಟ್ಟು ನೀಡಿದೆ. ಇದರ ಪರಿಣಾಮ ಜಿಡಿಪಿ ಶೇ.7 ಅಥವಾ 7.5ರಷ್ಟು ಬೆಳವಣಿಗೆ ಆಗಬಹುದು’ ಎಂದು ಭಾವಿಸಲಾಗಿತ್ತು. ಆದರೆ ಮೋದಿ ಸರ್ಕಾರ ದಸರಾಗೂ ಮುನ್ನ ಜಿಎಸ್ಟಿ ಸ್ತರ ಹಾಗೂ ದರಗಳಲ್ಲಿ ಇಳಿಕೆ ಮಾಡಿ ಮಹತ್ವದ ನಿರ್ಧಾರ ಕೈಗೊಂಡಿತ್ತು. ಇದರಿಂದ ಉದ್ಯಮವು ಉತ್ತೇಜಿತವಾಗಿ ಹೆಚ್ಚು ಉತ್ಪಾದನೆಗೆ ಕೈ ಹಾಕಿದ್ದು ಹಾಗೂ ನವರಾತ್ರಿ, ದೀಪಾವಳಿ ವೇಳೆ ಜನರು ಹೆಚ್ಚೆಚ್ಚು ಖರೀದಿ ಮಾಡಿದ್ದು- ಜಿಡಿಪಿ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

ಜಿಡಿಪಿಯು ಕಳೆದ ವರ್ಷ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ.5.6ರಷ್ಟು ಮಾತ್ರ ಬೆಳವಣಿಗೆ ಕಂಡಿತ್ತು. ಇದು 7 ತ್ರೈಮಾಸಿಕದ ಕನಿಷ್ಠವಾಗಿತ್ತು. ಆದರೆ ಬಳಿಕ ಕಳೆದ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್‌) ಶೇ.7.8ರಷ್ಟು ಬೆಳವಣಿಗೆ ಸಾಧಿಸಿ ಕೊಂಚ ಚೇತರಿಕೆ ಕಂಡಿತ್ತು.

ಉತ್ಪಾದನಾ ವಲಯ ತೇಜಿ:

ದೇಶದ ಒಟ್ಟು ದೇಶೀಯ ಉತ್ಪನ್ನದ ಶೇ.14ರಷ್ಟಿರುವ ಉತ್ಪಾದನಾ ವಲಯ, 2ನೇ ತ್ರೈಮಾಸಿಕದಲ್ಲಿ ಶೇ.9.1ರಷ್ಟು ಬೆಳವಣಿಗೆಯಾಗಿದೆ, ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಇದರ ಬೆಳವಣಿಗೆ ಕೇವಲ ಶೇ.2.2ರಷ್ಟಿತ್ತು. ಆದರೆ ಈ ಸಲ ಜಿಎಸ್ಟಿ ಇಳಿಕೆ ಪರಿಣಾಮ, ಹೆಚ್ಚು ಖರೀದಿ ನಡೆಯುವ ವಿಶ್ವಾಸದಲ್ಲಿದ್ದ ಉತ್ಪಾದಕರು ಭಾರಿ ಪ್ರಮಾಣದ ಉತ್ಪಾದನೆ ಮಾಡಿದ್ದರು. ಇದರ ಬೆನ್ನಲ್ಲೇ ಖರೀದಿಯೂ ಭಾರಿ ಪ್ರಮಾಣದಲ್ಲಿ ಹೆಚ್ಚಿತ್ತು. ಹೀಗಾಗಿ ಜಿಡಿಪಿ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ.

ಭಾರತಕ್ಕೆ ಹೋಲಿಸಿದರೆ, ಚೀನಾ ಕೇವಲ ಶೇ.4.8 ಬೆಳವಣಿಗೆ ದಾಖಲಿಸಿದೆ. ಹೀಗಾಗಿ ಭಾರತದ ಆರ್ಥಿಕತೆ ಇತರ ಹಲವು ದೇಶಗಳಿಗಿಂತ ಉತ್ತಮವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ನಮ್ಮ ನೀತಿಯ ಪ್ರತಿಬಿಂಬ

ಜಿಡಿಪಿ ಏರಿಕೆಯು ನಮ್ಮ ಅಭಿವೃದ್ಧಿ ಪರ ನೀತಿಗಳು ಮತ್ತು ಸುಧಾರಣಾ ಕ್ರಮಗಳನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮ ಜನರ ಕಠಿಣ ಪರಿಶ್ರಮ ಮತ್ತು ಉದ್ಯಮಶೀಲತೆಯನ್ನು ಸಹ ಬಿಂಬಿಸುತ್ತದೆ. ನಮ್ಮ ಸರ್ಕಾರವು ಸುಧಾರಣಾ ಕ್ರಮ ಮುಂದುವರಿಸುತ್ತದೆ. ಪ್ರತಿ ನಾಗರಿಕನ ಜೀವನ ಸುಲಲಿತವಾಗುವಂತೆ ನೋಡಿಕೊಳ್ಳುತ್ತದೆ.

- ನರೇಂದ್ರ ಮೋದಿ, ಪ್ರಧಾನಿ

ಆರ್ಥಿಕತೆ ಬಲವಾಗಿದೆ

ಇಂದು ಬಿಡುಗಡೆಯಾದ ಜಿಡಿಪಿ ವರದಿ, ಭಾರತೀಯ ಆರ್ಥಿಕತೆಯ ಬಲವಾಗಿದೆ ಎಂಬುದನ್ನು ತೋರಿಸುತ್ತದೆ. ಶೇ.8.2ರ ನೈಜ ಜಿಡಿಪಿ ಬೆಳವಣಿಯೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂಬುದನ್ನು ಸಾಬೀತುಪಡಿಸಿದೆ.

- ನಿರ್ಮಲಾ ಸೀತಾರಾಮನ್‌, ವಿತ್ತ ಸಚಿವೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?