
ನವದೆಹಲಿ (ಜೂನ್ 28, 2023): ಟೊಮೆಟೋ ಬೆಲೆ ದಿಢೀರ್ ಗಗನಕ್ಕೇರಿದ್ದು ಕೇಜಿಗೆ 20 ರಿಂದ 30 ರು. ಇದ್ದ ಬೆಲೆ ಬಹುತೇಕ ರಾಜ್ಯಗಳಲ್ಲಿ 100 ರೂ. ತಲುಪಿದೆ. ಇನ್ನು ಮಧ್ಯಪ್ರದೇಶ ಇಂದೋರ್‌ನಲ್ಲಿ 110 ರೂ. ಗಡಿದಾಟುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.
ಈ ಬಾರಿ ಮುಂಗಾರು ದೇಶವನ್ನು ತಡವಾಗಿ ಪ್ರವೇಶಿಸಿದ್ದು ಹಾಗೂ ಅತಿಯಾದ ಬಿಸಿಲಿನಿಂದ ಟೊಮೆಟೋ ಬೆಳೆಗೆ ಹಾನಿಯುಂಟಾಗಿದೆ. ಮತ್ತೊಂದೆಡೆ ಈ ವರ್ಷ ಟೊಮೆಟೋ ಬೆಳೆ ಬಿತ್ತನೆಯೂ ಕಡಿಮೆ ಪ್ರಮಾಣದಲ್ಲಿದ್ದರೆ, ಇನ್ನು ಕೆಲವೆಡೆ ಅತಿಯಾದ ಮಳೆಯಿಂದಾಗಿಯೂ ಬೆಳೆ ನಾಶವಾಗಿದೆ. ಹೀಗಾಗಿ ದೇಶದೆಲ್ಲೆಡೆ ಟೊಮೆಟೋ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಸಗಟು ದರವು 70-90 ರೂ. ಗೆ ಏರಿದೆ.
ಇದನ್ನು ಓದಿ: Good News: ಬೇಳೆ ಕಾಳುಗಳ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ
ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಗಟು ದರವು ಬೆಲೆ 80 ರಿಂದ 90 ರೂ. ಗೇರಿದ್ದು ಚಿಲ್ಲರೆ ಮಾರಾಟವು ಕೇಜಿಗೆ 100 ರೂ. ಗೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಕೇಜಿಗೆ 125 ರೂ. ಗೆ ಏರಿಕೆಯಾಗಿದೆ. ಮುಂದಿನ ಕೆಲ ದಿನಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಟೊಮೆಟೋ ಮಾರುಕಟ್ಟೆಗೆ ಪೂರೈಕೆಯಾಗದೇ ಇದ್ದಲ್ಲಿ ಬೆಲೆಯು ಕೇಜಿಗೆ 150 ರೂ. ವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬೆಲೆ ಏರಿಕೆಗೆ ಮೋದಿ ಸರ್ಕಾರ ಕಾರಣ: ಕಾಂಗ್ರೆಸ್
ಟೊಮೆಟೋ ಬೆಲೆ ಏರಿಕೆಗೆ ಪ್ರಧಾನಿ ಮೋದಿ ಕೈಗೊಂಡ ತಪ್ಪು ನಿರ್ಧಾರಗಳೇ ಕಾರಣ ಎಂದು ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಟೊಮೆಟೋ, ಈರುಳ್ಳಿ ಮತ್ತು ಆಲೂಗೆಡ್ಡೆಗಳು ಪ್ರಮುಖ ಆದ್ಯತೆಗಳೆಂದು ಮೋದಿ ಬಣ್ಣಿಸಿದ್ದಾರೆ. ಆದರೆ ಅವರ ತಪ್ಪು ನೀತಿಗಳಿಂದಾಗಿ ಮೊದಲು ಟೊಮೆಟೋವನ್ನು ರಸ್ತೆಯಲ್ಲಿ ಬಿಸಾಕಲಾಯಿತು. ಇದೀಗ ಅದರ ಬೆಲೆ ಕೇಜಿಗೆ 100 ರೂ. ಆಗಿದೆ’ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಶೀಘ್ರದಲ್ಲಿಯೇ ಅಕ್ಕಿ ದರ 10 ರೂ. ಹೆಚ್ಚಳ
ಬೆಲೆ ಏರಿಕೆ ತಡೆಯಲು ಸರ್ಕಾರದಿಂದ ‘ಟೊಮೆಟೋ ಗ್ರಾಂಡ್ ಚಾಲೆಂಜ್’
ಟೊಮೆಟೋ ಬೆಲೆಯಲ್ಲಿ ದಿಢೀರ್ ಏರಿಕೆ ಮತ್ತು ಇಳಿಕೆಯನ್ನು ತಡೆಗಟ್ಟಲು ವಿನೂತನ ಯೋಜನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ‘ಟೊಮೆಟೋ ಗ್ರೇಟ್ ಚಾಲೆಂಜ್’ ಅನ್ನು ಸರ್ಕಾರ ಆರಂಭಿಸಲಿದೆ ಎಂದು ಕೇಂದ್ರ ಗ್ರಾಹಕ ಸಚಿವಾಲಯ ಮಂಗಳವಾರ ಹೇಳಿದೆ. ಈ ಯೋಜನೆಯ ಮೂಲಕ ಟೊಮೆಟೋ ಉತ್ಪಾದನೆಯ ಹೆಚ್ಚಳ, ಸಂಸ್ಕರಣೆ ಮತ್ತು ಸಂಗ್ರಹಣೆಗೆ ಸೇರಿದಂತೆ ಹಲವು ಅಭಿಪ್ರಾಯಗಳನ್ನು ಜನರಿಂದ ಸಂಗ್ರಹ ಮಾಡಲಾಗುತ್ತದೆ.
‘ನಾವು ಈ ವಾರ ಟೊಮೆಟೋ ಗ್ರಾಂಡ್ ಚಾಲೆಂಜ್ ಅನ್ನು ಆರಂಭ ಮಾಡಲಿದ್ದೇವೆ. ಈ ಮೂಲಕ ನಾವು ಸೃಜನಾತ್ಮಕ ಅಭಿಪ್ರಾಯಗಳು, ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಇದನ್ನೇ ನಾವು ಈರುಳ್ಳಿ ಬೆಲೆ ಹೆಚ್ಚಳವಾದಾಗಲೂ ಕೈಗೊಂಡಿದ್ದೆವು. ಈ ವೇಳೆ ನಾವು 600ಕ್ಕೂ ಹೆಚ್ಚು ಅಭಿಪ್ರಾಯಗಳನ್ನು ಪಡೆದುಕೊಂಡಿದ್ದು, ಅದರಲ್ಲಿ 13 ಅಭಿಪ್ರಾಯಗಳನ್ನು ತಜ್ಞರೊಂದಿಗೆ ಚರ್ಚಿಸುತ್ತಿದೇವೆ ಎಂದು ಗ್ರಾಹಕ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಗಗನಕ್ಕೇರಿದ ತರಕಾರಿ ಬೆಲೆ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ! ಯಾವುದಕ್ಕೆ ಎಷ್ಟು ಬೆಲೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.