2023-24ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಹೀಗಿರುವಾಗ ತೆರಿಗೆ ಉಳಿತಾಯ ಮಾಡಲು ಯಾವೆಲ್ಲ ಮಾರ್ಗಗಳಿವೆ ಎಂಬ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಹಾಗಾದ್ರೆ ತೆರಿಗೆ ಉಳಿತಾಯ ಮಾಡಲು ತೆರಿಗೆದಾರರು ಏನ್ ಮಾಡ್ಬೇಕು? ಇಲ್ಲಿದೆ 6 ಟಿಪ್ಸ್.
Business Desk:ಗಳಿಸಿದ ಆದಾಯಕ್ಕೆ ತೆರಿಗೆ ಸರ್ಕಾರಕ್ಕೆ ತೆರಿಗೆ ಪಾವತಿಸೋದು ನಾಗರಿಕರ ಜವಾಬ್ದಾರಿ. ಆದರೆ, ಆದಾಯದ ಮೇಲಿನ ತೆರಿಗೆಯಲ್ಲಿ ಉಳಿತಾಯ ಮಾಡಲು ಕೂಡ ಅನೇಕ ಕಾನೂನಾತ್ಮಕ ಮಾರ್ಗಗಳಿವೆ. ಭಾರತದಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರೋರು ತೆರಿಗೆ ಪಾವತಿಸೋದು ಕಡ್ಡಾಯ. ಆದರೆ, ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಲು ಕೂಡ ಕೆಲವು ಮಾರ್ಗಗಳನ್ನು ಸೂಚಿಸಲಾಗಿದೆ. ಕೆಲವೊಂದು ಯೋಜನೆಗಳಲ್ಲಿ ಹೂಡಿಕೆ, ಗೃಹಸಾಲ, ನಿವೃತ್ತಿ ಯೋಜನೆಗಳಿಗೆ ತೆರಿಗೆ ವಿನಾಯಿತಿ ಸೌಲಭ್ಯಗಳಿವೆ. ಹಾಗೆಯೇ ಆದಾಯ ತೆರಿಗೆ ಕಾಯ್ದೆಯ ಕೆಲವೊಂದು ಸೆಕ್ಷನ್ ಗಳ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನವನ್ನು ಕೂಡ ನೀಡಲಾಗಿದೆ. ಪ್ರಸ್ತುತ 2023-24ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಐಟಿಆರ್ ಸಲ್ಲಿಕೆ ಮಾಡೋರು ತೆರಿಗೆ ಉಳಿತಾಯಕ್ಕಿರುವ ಮಾರ್ಗಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ತೆರಿಗೆ ಉಳಿತಾಯ ಮಾಡಲು ಏನ್ ಮಾಡಬಹುದು? ಇಲ್ಲಿದೆ ಮಾಹಿತಿ.
1.ತೆರಿಗೆ ಕಡಿತಗಳು ಹಾಗೂ ವಿನಾಯ್ತಿಗಳ ಬಗ್ಗೆ ಅರಿಯಿರಿ
ಭಾರತೀಯ ತೆರಿಗೆ ಕಾನೂನುಗಳು ವೈಯಕ್ತಿಕ ತೆರಿಗೆದಾರರಿಗೆ ಅನೇಕ ಕಡಿತಗಳು ಹಾಗೂ ವಿನಾಯ್ತಿಗಳ ಸೌಲಭ್ಯವನ್ನು ಒದಗಿಸಿದೆ. ಅಂಥ ಕೆಲವು ತೆರಿಗೆ ಕಡಿತ ಹಾಗೂ ವಿನಾಯ್ತಿಗಳ ಮಾಹಿತಿ ಇಲ್ಲಿದೆ.
ಸೆಕ್ಷನ್ 80C: ಈ ಸೆಕ್ಷನ್ ಅಡಿಯಲ್ಲಿ ತೆರಿಗೆದಾರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ), ಜೀವ ವಿಮಾ ಪ್ರೀಮಿಯಂಗಳು ಹಾಗೂ ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳು (ಇಎಲ್ ಎಸ್ ಎಸ್) ಮುಂತಾದವುಗಳಲ್ಲಿ ಮಾಡಿರುವ ಹೂಡಿಕೆಗಳ ಮೇಲೆ ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಬಹುದು.
ಸೆಕ್ಷನ್ 24(b):ಈ ಸೆಕ್ಷನ್ ಗೃಹಸಾಲಗಳ ಮೇಲೆ ಪಾವತಿಸಿದ ಬಡ್ಡಿಯ ಮೇಲೆ ಕಡಿತಗಳನ್ನು ಕ್ಲೇಮ್ ಮಾಡಲು ಅವಕಾಶ ನೀಡುತ್ತದೆ. ಆ ಮೂಲಕ ತೆರಿಗೆಗೊಳಪಡುವ ಆದಾಯವನ್ನು ತಗ್ಗಿಸುತ್ತದೆ.
ಸೆಕ್ಷನ್ 10(14): ಉದ್ಯೋಗಿಗಳು ಮನೆ ಬಾಡಿಗೆ ಭತ್ಯೆ (HRA),ಪ್ರಯಾಣ ರಜೆ ಭತ್ಯೆ (LTA) ಹಾಗೂ ವೈದ್ಯಕೀಯ ಭತ್ಯೆಗಳ ಮೇಲೆ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದು.
ಐಟಿಆರ್ ಸಲ್ಲಿಕೆ ಮಾಡುತ್ತಿದ್ದೀರಾ? ಯಾವ ತೆರಿಗೆ ವ್ಯವಸ್ಥೆ ಆಯ್ಕೆ ಮಾಡೋದು ಉತ್ತಮ? ಇಲ್ಲಿದೆ ಮಾಹಿತಿ
2.ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ
ತೆರಿಗೆ ಉಳಿತಾಯ ಮಾಡುವ ಹೂಡಿಕೆಗಳಿಂದ ತೆರಿಗೆ ಭಾರವನ್ನು ತಗ್ಗಿಸಿಕೊಳ್ಳಬಹುದು. ಭಾರತದಲ್ಲಿ ತೆರಿಗೆ ಉಳಿತಾಯ ಮಾಡುವ ಕೆಲವು ಜನಪ್ರಿಯ ಹೂಡಿಕೆಗಳೆಂದರೆ ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆ (ELSS),ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ), ಜೀವ ವಿಮಾ ಪ್ರೀಮಿಯಂಗಳು ಹಾಗೂ ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳು (ಎಫ್ ಡಿಗಳು) ಸೇರಿವೆ.
3.ಗೃಹಸಾಲದ ಗರಿಷ್ಠ ಪ್ರಯೋಜನ
ಒಂದು ವೇಳೆ ನೀವು ಗೃಹಸಾಲ ಪಡೆದಿದ್ದರೆ ಆಗ ಪ್ರಿನ್ಸಿಪಲ್ ಮೊತ್ತ ಹಾಗೂ ಬಡ್ಡಿ ಪಾವತಿ ಎರಡರ ಮೇಲೂ ತೆರಿಗೆ ಪ್ರಯೋಜನ ಪಡೆಯಬಹುದು. ಸೆಕ್ಷನ್ 80C ಹಾಗೂ 24(b)ಅಡಿಯಲ್ಲಿ ಈ ಪ್ರಯೋಜನ ಪಡೆಯಬಹುದು.
4.ಆಸ್ತಿ ಆದಾಯ
ನಿಮ್ಮ ಬಳಿ ಹೆಚ್ಚಿನ ಆಸ್ತಿಗಳಿದ್ದರೆ ಕೂಡ ನಿಮ್ಮ ತೆರಿಗೆ ಉಳಿತಾಯವನ್ನು ಹೆಚ್ಚಿಸಿಕೊಳ್ಳಬಹುದು. ಉದಾಹರಣೆಗೆ ನೀವು ಒಂದು ಮನೆಯಲ್ಲಿ ವಾಸಿಸುತ್ತಿದ್ದು, ಇನ್ನೊಂದು ಮನೆ ಅಥವಾ ಕಟ್ಟಡವನ್ನು ಬಾಡಿಗೆಗೆ ನೀಡಿದ್ದರೆ ಅದರ ಮೇಲಿನ ಗೃಹಸಾಲಕ್ಕೆ ಪಾವತಿಸಿರುವ ಬಡ್ಡಿ ಮೇಲೆ ಕೂಡ ನೀವು ತೆರಿಗೆ ಕಡಿತಗಳನ್ನು ಕ್ಲೇಮ್ ಮಾಡಬಹುದು.
ITR ಫೈಲ್ ಮಾಡಿದ ಬಳಿಕ ತೆರಿಗೆ ರೀಫಂಡ್ ಪಡೆಯಲು ಎಷ್ಟು ಸಮಯ ಬೇಕು? ಇಲ್ಲಿದೆ ಮಾಹಿತಿ
5.ತೆರಿಗೆ ಪ್ರಯೋಜನದ ನಿವೃತ್ತಿ ಯೋಜನೆಗಳು
ಉದ್ಯೋಗಿಗಳ ಭವಿಷ್ಯ ನಿಧಿ (EPF),ಸಾರ್ವಜನಿಕ ಭವಿಷ್ಯ ನಿಧಿ (PPF) ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ ಮಾಡುವ ಮೂಲಕ ತೆರಿಗೆಗೊಳಪಡುವ ಆದಾಯವನ್ನು ತಗ್ಗಿಸಿಕೊಳ್ಳಬಹುದು.
6.ಬಂಡವಾಳ ಗಳಿಕೆಗೆ ಪ್ಲ್ಯಾನ್ ಮಾಡಿ
ಸ್ಟಾಕ್ಸ್, ರಿಯಲ್ ಎಸ್ಟೇಟ್ ಅಥವಾ ಚಿನ್ನದ ಮಾರಾಟದಿಂದ ಗಳಿಸಿದ ಬಂಡವಾಳದ ಮೇಲೆ ತೆರಿಗೆ ಬೀಳುತ್ತದೆ. ಆದರೆ, ಬಂಡವಾಳ ಗಳಿಕೆಗೆ ಇರುವ ಕೆಲವು ತೆರಿಗೆ ವಿನಾಯಿತಿಗಳನ್ನು ಬಳಸಿಕೊಳ್ಳುವ ಮೂಲಕ ನೀವು ತೆರಿಗೆ ಹೊರೆಯನ್ನು ತಗ್ಗಿಸಿಕೊಳ್ಳಹುದು.