6 ತಿಂಗಳ ಇಎಂಐ ವಿನಾಯ್ತಿ ಪಡೆಯದವರಿಗೂ ಪರಿಹಾರ?| ಇಎಂಐ ಮೊತ್ತ ಕೊಂಚ ಇಳಿಕೆ ಸಾಧ್ಯತೆ| ‘ಚಕ್ರಬಡ್ಡಿ ಮನ್ನಾ’ ಬೆನ್ನಲ್ಲೇ ಚಿಂತನೆ
ಮುಂಬೈ(ಅ.05): ಕೊರೋನಾ ಸಂಕಷ್ಟದಿಂದಾಗಿ ಸಾಲದ ಕಂತು (ಇಎಂಐ) ಪಾವತಿಯನ್ನು ಆರು ತಿಂಗಳು ಮುಂದೂಡುವ ಸೌಲಭ್ಯ ಪಡೆದವರಿಗೆ ಚಕ್ರಬಡ್ಡಿ ವಿಧಿಸದಿರುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಕಾಲಕ್ಕೆ ಇಎಂಐ ಕಟ್ಟಿದವರಿಗೂ ಪರಿಹಾರ ನೀಡಲು ಮುಂದಾಗಿದೆ.
ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರ್ಕಾರ, 2 ಕೋಟಿ ರು.ಗಿಂತ ಕಡಿಮೆ ಸಾಲ ಪಡೆದವರು ಆರು ತಿಂಗಳು ಇಎಂಐ ಮುಂದೂಡಿಕೆ ಸೌಲಭ್ಯ ಪಡೆದಿದ್ದರೆ ಆ ಅವಧಿಗೆ ಚಕ್ರಬಡ್ಡಿ ವಿಧಿಸುವುದಿಲ್ಲ ಎಂದು ಹೇಳಿತ್ತು. ಈ ಪ್ರಸ್ತಾಪವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡರೆ, ಕಷ್ಟಪಟ್ಟು ಸಾಲದ ಕಂತು ಪಾವತಿಸಿದವರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಅವರಿಗೂ ಪರಿಹಾರ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಸಕಾಲಕ್ಕೆ ಇಎಂಐ ಪಾವತಿಸಿದವರಿಗೆ ಇನ್ನುಳಿದ ಸಾಲದ ಅವಧಿಗೆ ಪ್ರತಿ ತಿಂಗಳ ಇಎಂಐ ಮೊತ್ತವನ್ನೇ ಕೊಂಚ ಇಳಿಕೆ ಮಾಡುವ ಅಥವಾ ಒಟ್ಟಾರೆ ಇಎಂಐಗಳ ಸಂಖ್ಯೆಯನ್ನು ಕೊಂಚ ಕಡಿಮೆ ಮಾಡುವ ಸಾಧ್ಯತೆಯಿದೆ. ಹೀಗೆ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಹೆಚ್ಚೆಂದರೆ 5000ದಿಂದ 7000 ಕೋಟಿ ರು. ಹೊರೆ ಬೀಳಬಹುದು ಎನ್ನಲಾಗಿದೆ. ಆದರೆ, ಇಂತಹದ್ದೊಂದು ಕೊಡುಗೆಯನ್ನು ಸಾಲಗಾರರಿಗೆ ನೀಡಲು ಬ್ಯಾಂಕಿನ ಸಾಫ್ಟ್‌ವೇರ್‌ನಲ್ಲೇ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬ್ಯಾಂಕುಗಳು ಹೇಳಿವೆ.