ಕೇಂದ್ರದಿಂದ ಗುಡ್‌ ನ್ಯೂಸ್: ಇಎಂಐ ವಿನಾಯ್ತಿ ಪಡೆದವರಿಗೆ ಚಕ್ರಬಡ್ಡಿ ಮನ್ನಾ!

Published : Oct 04, 2020, 07:45 AM ISTUpdated : Oct 04, 2020, 08:02 AM IST
ಕೇಂದ್ರದಿಂದ ಗುಡ್‌ ನ್ಯೂಸ್: ಇಎಂಐ ವಿನಾಯ್ತಿ ಪಡೆದವರಿಗೆ ಚಕ್ರಬಡ್ಡಿ ಮನ್ನಾ!

ಸಾರಾಂಶ

ಕೊರೋನಾ: ಇಎಂಐ ವಿನಾಯ್ತಿ ಪಡೆದವರಿಗೆ ಚಕ್ರಬಡ್ಡಿ ಮನ್ನಾ| 2 ಕೋಟಿ ರು.ವರೆಗಿನ ಸಾಲಕ್ಕೆ ಅನ್ವಯ| ಸುಪ್ರೀಂಕೋರ್ಟ್‌ಗೆ ಕೇಂದ್ರ ಅಫಿಡವಿಟ್‌| ಇಎಂಐ ವಿನಾಯಿತಿ ಪಡೆಯದವರಿಗೂ ಲಾಭ| ಎಲ್ಲ ಬಡ್ಡಿ ಮನ್ನಾಕ್ಕೆ 6 ಲಕ್ಷ ಕೋಟಿ ಬೇಕು

 ನವದೆಹಲಿ(ಅ.04): ಕೊರೋನಾ ಹಿನ್ನೆಲೆಯಲ್ಲಿ ಸಾಲ ಮರುಪಾವತಿಯಿಂದ ಆರು ತಿಂಗಳು ವಿನಾಯಿತಿ ಪಡೆದಿದ್ದ ವೈಯಕ್ತಿಕ ಸಾಲಗಾರರು ಹಾಗೂ ಸಣ್ಣ- ಮಧ್ಯಮ ಉದ್ದಿಮೆಗಳ 2 ಕೋಟಿ ರು.ವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿ (ಬಡ್ಡಿ ಮೇಲೆ ಬಡ್ಡಿ)ಯನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ.

ಮನ್ನಾ ಮಾಡಲಾಗುವ ಮೊತ್ತವನ್ನು ಬ್ಯಾಂಕುಗಳಿಗೆ ಒದಗಿಸಲು ಸಂಸತ್ತಿನ ಒಪ್ಪಿಗೆಯನ್ನು ಪಡೆಯಲಾಗುವುದು. ಈ ವೆಚ್ಚ ಸಣ್ಣ- ಮಧ್ಯಮ ಉದ್ದಿಮ (ಎಂಎಸ್‌ಎಂಇ) ವಲಯಕ್ಕೆ ಘೋಷಣೆ ಮಾಡಲಾಗಿದ್ದ 3.7 ಲಕ್ಷ ಕೋಟಿ ರು. ಹಾಗೂ ಗೃಹ ಸಾಲ ವಿಭಾಗದಲ್ಲಿ ನೀಡಲಾಗಿದ್ದ 70 ಸಾವಿರ ಕೋಟಿ ರು. ಹಾಗೂ ಗರೀಬ್‌ ಕಲ್ಯಾಣ, ಆತ್ಮನಿರ್ಭರ ಪ್ಯಾಕೇಜ್‌ಗಳಿಂದ ಹೊರತಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.

ಸಾಲ ಮರುಪಾವತಿಯಿಂದ ಆರು ತಿಂಗಳ ಕಾಲ ವಿನಾಯಿತಿ ಪಡೆದಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಮಾರಟೋರಿಯಂ ಅವಧಿಯಲ್ಲಿ ಎಲ್ಲರಿಗೂ ಚಕ್ರಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ. ಸಾಲ ಮರುಪಾವತಿಯಿಂದ ವಿನಾಯಿತಿ ಪಡೆಯದೆ, ಸಾಲವನ್ನೂ ಕಟ್ಟದೆ ಸಮಸ್ಯೆಗೆ ಸಿಲುಕಿರುವವರಿಗೆ ಸರ್ಕಾರ ನೆರವು ನೀಡುವ ಉದ್ದೇಶ ಹೊಂದಿರಬಹುದು ಎಂದು ಊಹಿಸಲಾಗುತ್ತಿದೆ.

ಯಾವ್ಯಾವ ಸಾಲಗಳಿಗೆ ಅನ್ವಯ?:

ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆ (ಎಂಎಸ್‌ಎಂಇ), ಶಿಕ್ಷಣ, ಗೃಹ, ಗೃಹ ಬಳಕೆಯ ವಸ್ತು, ಕ್ರೆಡಿಟ್‌ ಕಾರ್ಡ್‌ ಬಾಕಿ, ವಾಹನ, ವೈಯಕ್ತಿಕ ಹಾಗೂ ಇನ್ನಿತರೆ ವೆಚ್ಚ ಸಂಬಂಧಿ 8 ಬಗೆಯ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಸೌಲಭ್ಯ ಸಿಗಲಿದೆ. ಆದರೆ, ಯಾವುದೇ ವ್ಯಕ್ತಿ 2 ಕೋಟಿ ರು.ಗಿಂತ ಅಧಿಕ ಸಾಲ ಹೊಂದಿದ್ದರೆ ಅಂಥವರಿಗೆ ಚಕ್ರಬಡ್ಡಿ ಮನ್ನಾ ಆಗುವುದಿಲ್ಲ. ಎಲ್ಲ ಆಯ್ಕೆಗಳನ್ನು ಪರಿಶೀಲಿಸಿದ ತರುವಾಯ, ಸಣ್ಣ ಸಾಲಗಾರರನ್ನು ಕೈಹಿಡಿಯುವ ಸಂಪ್ರದಾಯವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಆರು ತಿಂಗಳ ಸಾಲ ಮರುಪಾವತಿ ವಿನಾಯಿತಿ ಅವಧಿಯಲ್ಲಿನ ಎಲ್ಲ ಬಗೆಯ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಿದರೆ ಅಂದಾಜು 6 ಲಕ್ಷ ಕೋಟಿ ರು. ಬೇಕಾಗುತ್ತದೆ. ಇದನ್ನು ಬ್ಯಾಂಕುಗಳೇ ಭರಿಸಬೇಕು ಎಂದಾದಲ್ಲಿ, ಅವುಗಳ ನಿವ್ವಳ ಬಂಡವಾಳವೇ ಖಾಲಿಯಾಗುತ್ತದೆ. ಅವುಗಳ ಅಸ್ತಿತ್ವಕ್ಕೆ ಸಂಚಕಾರ ಬರುತ್ತದೆ ಎಂದು ಸರ್ಕಾರ ತಿಳಿಸಿದೆ.

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇಎಂಇ ಪಾವತಿಯಿಂದ ಮೂರು ತಿಂಗಳ ಕಾಲ ವಿನಾಯಿತಿ ನೀಡಿ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಮಾ.27ರಂದು ಸುತ್ತೋಲೆ ಹೊರಡಿಸಿತ್ತು. 2020ರ ಮಾ.1ರಿಂದ ಮೇ 31ರವರೆಗಿನ ಅವಧಿಗೆ ಈ ವಿನಾಯಿತಿ ನೀಡಲಾಗಿತ್ತು. ಮತ್ತೆ ಇದನ್ನು ಮೂರು ತಿಂಗಳ ಕಾಲ ವಿಸ್ತರಿಸಿ ಆ.31ರವರೆಗೆ ವಿನಾಯಿತಿ ಕೊಡಲಾಗಿತ್ತು. ಈ ಅವಧಿಯಲ್ಲಿ ಬಡ್ಡಿಯ ಮೇಲೆ ಬಡ್ಡಿಯನ್ನು ವಿಧಿಸಲಾಗುತ್ತಿದೆ ಎಂದು ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.

ಇದಕ್ಕೂ ಮುನ್ನ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಮುಂದೂಡಿಕೆಯಾದ ಸಾಲ ಮರುಪಾವತಿಯ ಬಡ್ಡಿಯನ್ನು ಮನ್ನಾ ಮಾಡುವುದು ಬ್ಯಾಂಕಿಂಗ್‌ ಕ್ಷೇತ್ರದ ಮೂಲಸಿದ್ಧಾಂತಗಳಿಗೆ ವಿರುದ್ಧವಾದದು. ಇದರಿಂದ ಸಕಾಲಕ್ಕೆ ಸಾಲ ಮರುಪಾವತಿಸಿದವರಿಗೆ ಅನ್ಯಾಯವಾಗುತ್ತದೆ ಎಂದು ವಾದಿಸಿತ್ತು. ಪ್ರಕರಣ ಮತ್ತೆ ಸೋಮವಾರ ವಿಚಾರಣೆಗೆ ಬರಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!