
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಜಗತ್ತಿನ ಎರಡು ಬೃಹತ್ ಆರ್ಥಿಕತೆಗಳಾದ ಅಮೆರಿಕಾ ಮತ್ತು ಚೀನಾಗಳು ಈಗ ಗಂಭೀರ ಸುಂಕ ಸಮರಕ್ಕೆ ಇಳಿದಿದ್ದು, ಅವುಗಳ ನಡುವಿನ ಚಕಮಕಿ ಸಮಸ್ತ ಜಗತ್ತಿಗೇ ಆಘಾತ ತಂದೊಡ್ಡಿದೆ. ಚೀನಾ ಅಮೆರಿಕಾದ ಸುಂಕಕ್ಕೆ ಪ್ರತಿಯಾಗಿ, ಅಮೆರಿಕನ್ ಉತ್ಪನ್ನಗಳ ಮೇಲೆ 34% ಸುಂಕ ವಿಧಿಸಿದ ಬಳಿಕ, ಮಂಗಳವಾರ, ಎಪ್ರಿಲ್ 8ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಮೇಲೆ 104% ಭಾರೀ ಸುಂಕ ವಿಧಿಸಿದರು. ಚೀನಾ ಒಂದು ವೇಳೆ ಹೆಜ್ಜೆ ಹಿಂದಿಡದಿದ್ದರೆ, ತಾನು ಇನ್ನೂ ಹೆಚ್ಚಿನ ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದು, ಇದು ಒಂದು ರೀತಿ ನೇರ ವ್ಯಾಪಾರ ಸಮರದ ರೂಪ ಪಡೆದುಕೊಂಡಿದೆ. ಭಾರತ ಈಗ ಅಮೆರಿಕಾದ ನೇರ ದೃಷ್ಟಿಯಲ್ಲಿ ಇರದಿದ್ದರೂ, ಜಗತ್ತಿನ ಎರಡು ಬೃಹತ್ ಆರ್ಥಿಕತೆಗಳಾದ ಚೀನಾ ಮತ್ತು ಅಮೆರಿಕಾದ ನಡುವಿನ ಸ್ಪರ್ಧೆ ಭಾರತಕ್ಕೂ ತಲೆನೋವು ತಂದೊಡ್ಡಲಿದ್ದು, ಭಾರತಕ್ಕೆ ಅವಕಾಶಗಳು ಮತ್ತು ಸವಾಲುಗಳು ಎರಡನ್ನೂ ಮುಂದಿಡಲಿದೆ.
ವ್ಯಾಪಾರ ಸಮರದ ಬಿರುಗಾಳಿಗೆ ಸಿಲುಕೀತೇ ಭಾರತ?
ಭಾರತ ಸದ್ಯದ ಮಟ್ಟಿಗೆ ಯಾರ ಮೇಲೂ ಸುಂಕ ವಿಧಿಸುತ್ತಿಲ್ಲವಾದರೂ, ಭಾರತ ಸಮಸ್ಯೆಯ ಸುಳಿಯಿಂದ ಹೊರಗಾಗಿಲ್ಲ. ಅಮೆರಿಕಾ ಮತ್ತು ಚೀನಾಗ ಸೀನು ಬಂದರೆ, ಜಗತ್ತಿಗೇ ಶೀತವಾಗುತ್ತದೆ. ಇಂತಹ ಪರಿಸ್ಥಿತಿಯಿಂದ ಭಾರತವೂ ಏನೂ ಹೊರತಾಗಿಲ್ಲ. ಪ್ರಸ್ತುತ ವ್ಯಾಪಾರ ಸಮರ ಯಾಕೆ ಸಮಸ್ಯೆ ತಂದೊಡ್ಡೀತು? ವರದಿಗಳ ಪ್ರಕಾರ, ಅಮೆರಿಕಾ - ಚೀನಾ ವ್ಯಾಪಾರ ಸಮರ ಜಾಗತಿಕವಾಗಿ ಆರ್ಥಿಕ ಹಿಂಜರಿತದ ಭೀತಿ ತಂದೊಡ್ಡಿದೆ. ಇದರಿಂದಾಗಿ, ಭಾರತದ ರಫ್ತು ಆಧಾರಿತ ವಲಯಗಳು ಒತ್ತಡಕ್ಕೆ ಸಿಲುಕಿವೆ.
ರಫ್ತಿನ ಮೇಲೆ ಹೊಡೆತ: ಒಂದು ವೇಳೆ ಅಮೆರಿಕಾ ಮತ್ತು ಚೀನಾಗಳು ಹಿಂಜರಿತಕ್ಕೆ ಒಳಗಾದರೆ, ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಕಡಿಮೆಯಾದೀತು. ವಸ್ತ್ರಗಳು, ಆಭರಣಗಳು, ಮತ್ತು ಔಷಧಗಳಂತಹ ಭಾರತೀಯ ರಫ್ತು ಉತ್ಪನ್ನಗಳು ನೇರವಾಗಿ ಸುಂಕಕ್ಕೆ ಗುರಿಯಾಗದಿದ್ದರೂ, ಅವುಗಳಿಗೆ ಗ್ರಾಹಕರ ಕೊರತೆ ಉಂಟಾದೀತು.
ಷೇರು ಮಾರುಕಟ್ಟೆ ಏಳು ಬೀಳು: ದುಡ್ಡು ಅನಿಶ್ಚಿತತೆಯನ್ನು ಇಷ್ಟಪಡುವುದಿಲ್ಲ. ದೊಡ್ಡ ವ್ಯಾಪಾರ ಸಮರಗಳು ತಲೆದೋರಿದಾಗ, ಹೂಡಿಕೆದಾರರು ಆತಂಕಕ್ಕೆ ಒಳಗಾಗಿ, ಭಾರತೀಯ ಮಾರುಕಟ್ಟೆಯಂತಹ ಮಾರುಕಟ್ಟೆಗಳಿಂದ ತಮ್ಮ ಹೂಡಿಕೆಯನ್ನು ಹಿಂಪಡೆಯುತ್ತಾರೆ. ಸೋಮವಾರ ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಹತ್ತು ತಿಂಗಳ ಅವಧಿಯ ದಾಖಲೆಯ ಕುಸಿತ ಅನುಭವಿಸಿದಾಗ ಇದು ಸ್ಪಷ್ಟವಾಗಿತ್ತು. ಮಂಗಳವಾರದ ಮಾರುಕಟ್ಟೆ ಚೇತರಿಕೆ ಕೊಂಚ ಸಮಾಧಾನ ತಂದಿತ್ತಾದರೂ, ಮಾರುಕಟ್ಟೆ ಮತ್ತೆ ಪತನವಾಗದು ಎನ್ನಲು ಸಾಧ್ಯವಿಲ್ಲ.
ಚೀನಾದಿಂದ ದುಬಾರಿ ಆಮದು: ಭಾರತ ಚೀನಾದಿಂದ ಅಪಾರ ಪ್ರಮಾಣದ ಆಮದು ನಡೆಸುತ್ತದೆ. ಫೋನ್ ಬಿಡಿಭಾಗಗಳು, ಲ್ಯಾಪ್‌ಟಾಪ್ ಬಿಟ್‌ಗಳು, ಮತ್ತು ಔಷಧ ತಯಾರಿಕೆಯ ಕಚ್ಚಾ ವಸ್ತುಗಳನ್ನೂ ಭಾರತ ಆಮದು ಮಾಡುತ್ತದೆ. ಅಮೆರಿಕಾದ ಸುಂಕಗಳ ಪರಿಣಾಮವಾಗಿ ಬೆಲೆ ಏರಿಕೆ ಉಂಟಾಗಿ, ಪೂರೈಕೆ ವ್ಯತ್ಯಯ ಕಾಣಿಸಿಕೊಂಡರೆ, ಅದರಿಂದಾಗಿ ಭಾರತದ ಕಾರ್ಖಾನೆಗಳು ಹೆಚ್ಚಿನ ವೆಚ್ಚ ಅನುಭವಿಸಿ, ಭಾರತೀಯ ಉತ್ಪನ್ನಗಳು ಕಡಿಮೆ ಸ್ಪರ್ಧಾತ್ಮಕವಾಗುತ್ತವೆ.
ಅಪಾಯದಂಚಿನಲ್ಲಿ ಉದ್ಯೋಗಗಳು: ಹವಳ - ರತ್ನಗಳು, ಆಭರಣಗಳು, ಮತ್ತು ವಸ್ತ್ರೋದ್ಯಮಗಳು ಭಾರತದಲ್ಲಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿವೆ. ಸುದೀರ್ಘ ವ್ಯಾಪಾರ ಸಮರ ತಲೆದೋರಿದರೆ, ಉತ್ಪನ್ನಗಳಿಗೆ ಬೇಡಿಕೆ ಕುಸಿದು, ಜನಜೀವನಕ್ಕೆ ತೊಂದರೆ ಉಂಟಾದೀತು ಎಂದು ತಜ್ಞರು ಎಚ್ಚರಿಸಿದ್ದಾರೆ.
ಔಷಧ ಬಿಕ್ಕಟ್ಟು: ಭಾರತದ ಔಷಧ ಉದ್ಯಮಗಳ ಬಹುತೇಕ 70% ಕಚ್ಚಾವಸ್ತುಗಳು ಚೀನಾದಿಂದಲೇ ಆಮದಾಗುತ್ತವೆ. ಈ ಪೂರೈಕೆಯಲ್ಲಿ ಏನಾದರೂ ವ್ಯತ್ಯಯ ತಲೆದೋರಿದರೆ, ಔಷಧಗಳು ದುಬಾರಿಯಾಗಬಹುದು, ಅಥವಾ ಭಾರತದಲ್ಲಿ ಔಷಧಗಳ ಕೊರತೆ ಉಂಟಾಗಬಹುದು.
ಆಶಾ ಭಾವನೆ: ಭಾರತಕ್ಕೂ ಇವೆ ಅವಕಾಶಗಳು
ಸದ್ಯದ ಪರಿಸ್ಥಿತಿ ಕೇವಲ ನಿರಾಶಾದಾಯಕ ಮಾತ್ರವೇ ಅಲ್ಲ. ಭಾರತ ಏನಾದರೂ ಸರಿಯಾಗಿ ತನ್ನ ವ್ಯವಹಾರ ನಡೆಸಿದರೆ, ಅಮೆರಿಕಾ - ಚೀನಾಗಳ ನಡುವಿನ ವ್ಯಾಪಾರ ಕದನದಲ್ಲಿ ಭಾರತ ಲಾಭ ಮಾಡಿಕೊಳ್ಳಬಹುದು.
ನೂತನ ಮಾರುಕಟ್ಟೆಗಳಿಗೆ ಪ್ರವೇಶ: ಅಮೆರಿಕನ್ ಗ್ರಾಹಕರು ಸುಂಕವನ್ನು ತಪ್ಪಿಸುವ ಸಲುವಾಗಿ ಚೀನೀ ಉತ್ಪನ್ನಗಳ ಬದಲಿಗೆ ಭಾರತದತ್ತ ಮುಖ ಮಾಡಬಹುದು. ಅಮೆರಿಕಾಗೆ ಭಾರತದ ಇಲೆಕ್ಟ್ರಾನಿಕ್ಸ್, ವಸ್ತ್ರಗಳು, ಮತ್ತು ವಾಹನ ಬಿಡಿಭಾಗಗಳ ರಫ್ತು ಇನ್ನಷ್ಟು ಹೆಚ್ಚಾಗಬಹುದು.
ಭಾರತಕ್ಕೆ ಕಾರ್ಖಾನೆಗಳ ಆಗಮನ: ಚೀನಾದ ಸುಂಕ ಸವಾಲುಗಳಿಂದ ಸುಸ್ತಾಗಿರುವ ಕಂಪನಿಗಳು ತಮ್ಮ ಉತ್ಪಾದನೆಯನ್ನು ಭಾರತದತ್ತ ವರ್ಗಾಯಿಸಬಹುದು. ನಮ್ಮ ಬೃಹತ್ ಮಾರುಕಟ್ಟೆ, ಬೆಳೆಯುತ್ತಿರುವ ಆರ್ಥಿಕತೆ, ಮತ್ತು ಸುಲಭವಾದ ಉದ್ಯಮ ನಿಯಮಗಳು ವಿದೇಶೀ ಹಣ ಮತ್ತು ಉದ್ಯೋಗಗಳನ್ನು ಭಾರತದತ್ತ ಸೆಳೆಯಬಹುದು.
ಅಂತರಗಳ ತಗ್ಗಿಸುವಿಕೆ: ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉದಾಹರಣೆಯಾಗಿ ಪರಿಗಣಿಸೋಣ. ಒಂದು ವೇಳೆ ಅಮೆರಿಕಾದ ಸುಂಕ ಚೀನಾದ ಹಾಲಿನ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರಿದರೆ, ಭಾರತದ ಬೃಹತ್ ಡೈರಿ ಉದ್ಯಮ ಹೆಜ್ಜೆ ಇಟ್ಟು, ಅಮೆರಿಕಾ ಮತ್ತು ಇತರ ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ಪೂರೈಸಬಹುದು. ಯಾವುದೇ ಉತ್ಪನ್ನಗಳ ವಿಚಾರದಲ್ಲಾದರೂ ಇಂತಹ ಅವಕಾಶಗಳಿದ್ದರೆ, ಭಾರತ ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದು.
ಇದನ್ನೂ ಓದಿ: ಭಾರತದ ವಾಯು ರಕ್ಷಣಾ ಬಲ ವರ್ಧಿಸಿದ ಮೂರು ಆಧುನಿಕ ಕ್ಷಿಪಣಿ ವ್ಯವಸ್ಥೆಗಳು
ಭಾರತಕ್ಕೆ ಚೀನಾದ ಅನಿರೀಕ್ಷಿತ ಸ್ನೇಹ ಹಸ್ತ
ಚೀನಾದ ಅನಿರೀಕ್ಷಿತ ಸ್ನೇಹಮಯ ನಡವಳಿಕೆಯ ಹಿಂದೆ ಬೇರೆಯೇ ಕಾರಣಗಳಿವೆ. ಚೀನಾ ಈಗಾಗಲೇ ಅಮೆರಿಕಾದ ಸುಂಕದ ಪರಿಣಾಮವನ್ನು ಅನುಭವಿಸತೊಡಗಿದೆ. ಮಂಗಳವಾರ, ದೆಹಲಿಯಲ್ಲಿ ಚೀನಾದ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರು ಅಮೆರಿಕಾವನ್ನು ಖಂಡಿಸಿ, ಅದು 'ಬ್ಲಾಕ್‌ಮೇಲ್' ಮಾಡುತ್ತಿದೆ ಎಂದು ಆರೋಪಿಸಿದರು. ಅಮೆರಿಕಾ ಸೃಷ್ಟಿಸಿರುವ ಸಮಸ್ಯೆಯನ್ನು ಸರಿಪಡಿಸಲು ಎರಡು ಬೃಹತ್ ಅಭಿವೃದ್ಧಿ ಹೊಂದುತ್ತಿರುವ ಶಕ್ತಿಗಳಾದ ಭಾರತ ಮತ್ತು ಚೀನಾಗಳು ಜೊತೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬೀಜಿಂಗ್ ತಾನು ಭಾರತದಿಂದ ಹೆಚ್ಚಿನ ವಸ್ತುಗಳನ್ನು ಖರೀದಿಸುವ ಸುಳಿವು ನೀಡಿದ್ದು, ವ್ಯಾಪಾರ ಸಮತೋಲನ ಸಾಧಿಸುವ ಭರವಸೆ ನೀಡಿದೆ. ಹಾಗೆಂದು ಭಾರತ ಮತ್ತು ಚೀನಾಗಳ ನಡುವಿನದು ನೈಜ ಸ್ನೇಹವಲ್ಲ. ಇದು ಒಂದು ವಾಸ್ತವಿಕ ಮತ್ತು ಪ್ರಾಯೋಗಿಕವಾದ ನಡೆಯಾಗಿದ್ದು, ಅಮೆರಿಕಾದ ಹೊಡೆತದ ಪರಿಣಾಮವನ್ನು ತಗ್ಗಿಸಲು ನೆರವಾಗಬಹುದು. ಹಾಗಾದರೆ ಮುಂದಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವೆ ಹೆಚ್ಚಿನ ವಹಿವಾಟು ನಡೆಯಲಿದೆಯೇ? ಅದನ್ನು ನಾವು ಕಾದು ನೋಡಬೇಕು.
ಭಾರತಕ್ಕೆ ಮುಂದೇನಿದೆ?
ಅಮೆರಿಕಾ ಮತ್ತು ಚೀನಾ ವ್ಯಾಪಾರ ಸಮರ ಒಂದು ರೀತಿ ಪ್ರಕ್ಷುಬ್ಧ ಸಮುದ್ರದಂತಿದೆ. ಒಂದೆಡೆ ಅಪಾಯಕಾರಿ ಅಲೆಗಳು ಅಪ್ಪಳಿಸುತ್ತಿದ್ದರೆ, ಇನ್ನೊಂದೆಡೆ ಜಾಗರೂಕವಾಗಿ ಮುಂದಕ್ಕೆ ಸಾಗುವ ಅವಕಾಶವೂ ಇದೆ. ಷೇರು ಮಾರುಕಟ್ಟೆ ಕುಸಿತ ಮತ್ತು ಪೂರೈಕೆ ಸರಪಳಿ ವ್ಯತ್ಯಯಗಳು ನಿಜಕ್ಕೂ ಆತಂಕದ ವಿಚಾರವೇ ಹೌದು. ಆದರೆ, ಭಾರತ ಈಗ ರಫ್ತು ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡು, ಹೊಸ ಕಾರ್ಖಾನೆಗಳನ್ನು ತನ್ನತ್ತ ಸೆಳೆದರೆ, ಭಾರತ ಹೆಚ್ಚು ಸಮರ್ಥವಾಗಿ ಹೊರಹೊಮ್ಮಬಹುದು. ಸದ್ಯದ ಮಟ್ಟಿಗೆ ಪರಿಸ್ಥಿತಿ ಹಗ್ಗದ ಮೇಲಿನ ನಡಿಗೆಯಂತಿದೆ. ಈಗಿನ ಸನ್ನಿವೇಶದಲ್ಲಿ ಆರ್ಥಿಕತೆಯನ್ನು ಸ್ಥಿರವಾಗಿಟ್ಟುಕೊಂಡು, ಕೋಲಾಹಲದ ನಡುವೆ ಲಭಿಸಬಹುದಾದ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸಬೇಕು. ಒಂದು ವಿಚಾರವಂತೂ ಈಗ ಸ್ಪಷ್ಟವಾಗಿದೆ: ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದ್ದು, ಭಾರತ ಬಹಳಷ್ಟು ಜಾಗರೂಕವಾಗಿದ್ದು ಈ ಅಲೆಯನ್ನು ಜಾಗರೂಕವಾಗಿ ದಾಟಬೇಕಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಇದನ್ನೂ ಓದಿ: ದುಬಾರಿಯಾದ ಟ್ರಂಪ್ ಸುಂಕದ ಹೊಡೆತ: ಭಾರತದ ಚಾಲಾಕಿ ನಡೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.