ಸರ್ಕಾರಿ ಇ-ಮಾರುಕಟ್ಟೆ (ಜೆಮ್) ಕೇಂದ್ರ ಸರ್ಕಾರಕ್ಕೆ ವರದಾನವಾಗಿ ಪರಿಣಾಮಿಸಿದೆ. ಏಕೆಂದರೆ 2016ರಲ್ಲಿಇದು ಪ್ರಾರಂಭಗೊಂಡ ಬಳಿಕ ಇಲ್ಲಿಯ ತನಕ ಸರ್ಕಾರಕ್ಕೆ 45,000 ಕೋಟಿ ರೂ. ಉಳಿತಾಯವಾಗಿದೆ.
ನವದೆಹಲಿ (ಆ.12): ಸರ್ಕಾರಿ ಇ-ಮಾರುಕಟ್ಟೆಯನ್ನು (ಜೆಮ್) 2016ರಲ್ಲಿ ಪ್ರಾರಂಭಿಸಿದ ಬಳಿಕ ಅದರ ಮೂಲಕ ಮಾಡಿದ ಸರಕು ಹಾಗೂ ಸೇವಾ ಸಂಗ್ರಹಣೆಯಿಂದ ಸರ್ಕಾರಕ್ಕೆ 45,000 ಕೋಟಿ ರೂ. ಉಳಿತಾಯವಾಗಿದೆ ಎಂದು ವಾಣಿಜ್ಯ ಸಚಿವಾಲಯ ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಜೆಮ್ ಕೇಂದ್ರ ಸರ್ಕಾರದ ಸರಕು ಹಾಗೂ ಸೇವೆಗಳ ಸಂಗ್ರಹಣೆಗಾಗಿ ಇರುವ ಆನ್ ಲೈನ್ ವೇದಿಕೆಯಾಗಿದೆ. ಸರ್ಕಾರಿ ಇಲಾಖೆಗಳು, ಸಂಸ್ಥೆಗಳು ಹಾಗೂ ಪಿಎಸ್ ಯುಗಳಿಗೆ ಜೆಮ್ ಪಾರದರ್ಶಕ ಹಾಗೂ ದಕ್ಷ ಸಂಗ್ರಹಣೆಗೆ ಅವಕಾಶ ಕಲ್ಪಿಸಿದೆ. ಇನ್ನು ಈ ಪೋರ್ಟಲ್ ಸಾರ್ವಜನಿಕ ಸಂಗ್ರಹಣೆ ಪ್ಲಾಟ್ ಫಾರ್ಮ್ ಗಳ ಪೈಕಿ ಜನಪ್ರಿಯತೆ ಗಳಿಸಿರುವ ದಕ್ಷಿಣ ಕೊರಿಯಾದ ಕೊನೆಪ್ಸ್ ಹಾಗೂ ಸಿಂಗಾಪುರದ ಗೆಬಿಝು ಸಾಧನೆಗಳನ್ನು ಹಿಂದಿಕ್ಕಿದೆ ಎಂಬ ಮಾಹಿತಿಯನ್ನು ಕೂಡ ವಾಣಿಜ್ಯ ಸಚಿವಾಲಯ ನೀಡಿದೆ. ಸಿಪಿಎಸ್ ಇ ಹಾಗೂ ಮೈತ್ರಿ ಸಂಸ್ಥೆಗಳು ಸೇರಿದಂತೆ ಕೇಂದ್ರೀಯ ಖರೀದಿದಾರರು ಸರ್ಕಾರಿ ಇ-ಮಾರುಕಟ್ಟೆಯನ್ನು (ಜೆಮ್) ಮೂಲಕ 2022-23ನೇ ಸಾಲಿನಲ್ಲಿ 100 ಕೋಟಿ ರೂ.ಗೂ ಅಧಿಕ ಮೌಲ್ಯದ 70ಕ್ಕೂ ಅಧಿಕ ಬಿಡ್ ಗಳನ್ನು ನಡೆಸಿದ್ದಾರೆ. 2023ರ ಜುಲೈಗೆ ಅನ್ವಯವಾಗುವ ಮಾಹಿತಿ ಪ್ರಕಾರ ಜೆಮ್ ಪೋರ್ಟಲ್ ನಲ್ಲಿ ಸುಮಾರು 6.5 ಮಿಲಿಯನ್ ಮಾರಾಟಗಾರರು ಹಾಗೂ 70 ಸಾವಿರ ಸರ್ಕಾರಿ ಖರೀದಿದಾರರು ನೋಂದಣಿ ಮಾಡಿಸಿದ್ದಾರೆ.
ಸರ್ಕಾರಿ ಇ-ಮಾರುಕಟ್ಟೆ ಪ್ಲಾಟ್ ಫಾರ್ಮ್ ಒಟ್ಟು ಜಿಎಂವಿ (ನಿವ್ವಳ ವ್ಯಾಪಾರದ ಸರಕು ಮೌಲ್ಯ) 4.5 ಲಕ್ಷ ಕೋಟಿ ರೂ. ದಾಟಿರೋದು ಇದರ ಯಶಸ್ಸಿಗೆ ಸಾಕ್ಷಿಯಾಗಿದೆ. ಸರ್ಕಾರಿ ಖರೀದಿದಾರರಿಗೆ ಮುಕ್ತ ಹಾಗೂ ಪಾರದರ್ಶಕ ಸಂಗ್ರಹಣೆಗೆ ವೇದಿಕೆಯೊಂದರ ಅಗತ್ಯವನ್ನು ಮನಗಂಡ ಕೇಂದ್ರ ಸರ್ಕಾರ 2016ರ ಆಗಸ್ಟ್ 9ರಂದು ಇ-ಮಾರುಕಟ್ಟೆ ಪ್ಲಾಟ್ ಫಾರ್ಮ್(GeM) ಪ್ರಾರಂಭಿಸಿತು. ವಿಶೇಷವೆಂದ್ರೆ ಈ ಆನ್ ಲೈನ್ ವೇದಿಕೆಯನ್ನು ಕೇವಲ 5 ತಿಂಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಜೆಮ್ ಮೂಲಕ ಸರ್ಕಾರಿ ಬಳಕೆದಾರರಿಂದ ಖರೀದಿಗಳನ್ನು ಅಧಿಕೃತಗೊಳಿಸಲಾಗಿದೆ. ಒಟ್ಟಾರೆ ಜೆಮ್ ಸಂಪರ್ಕರಹಿತ, ಕಾಗದರಹಿತ ಹಾಗೂ ನಗದುರಹಿತ ಆನ್ ಲೈನ್ ಮಾರುಕಟ್ಟೆಯಾಗಿದೆ.
ಸ್ಟಾರ್ಟ್ ಅಪ್ ಗಳ ನೆರವಿಗೆ ಒಂದು ಸಾವಿರ ಕೋಟಿ ರೂ. ಮೀಸಲಿಟ್ಟ ಝೆರೋಧಾ; ರೈನ್ ಮ್ಯಾಟರ್ ಮೂಲಕ ಹೂಡಿಕೆ
ಸರ್ಕಾರಿ ಇ-ಮಾರುಕಟ್ಟೆ ಪೋರ್ಟಲ್ ಪ್ರಾರಂಭಿಕ ಆವೃತ್ತಿಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸರಬರಾಜು ಮತ್ತು ವಿಲೇವಾರಿಗಳ ಡೈರೆಕ್ಟರೇಟ್ ಜನರಲ್ ಸಂಸ್ಥೆಯ ರಾಷ್ಟ್ರೀಯ ಇ-ಆಡಳಿತ ವಿಭಾಗವು ಅಭಿವೃದ್ಧಿಪಡಿಸಿತ್ತು. ಈ ಸಂಸ್ಥೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಾಂತ್ರಿಕ ಬೆಂಬಲವನ್ನು ಕೂಡ ಒದಗಿಸಿತ್ತು. ಪ್ರಸ್ತುತ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸೇವಾ ಪೂರೈಕೆದಾರರರು (ಎಂಎಸ್ ಪಿ) ಇದರ ನಿರ್ವಹಣೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನು ವ್ಯಾಪಾರಕ್ಕೆ ಸಂಬಂಧಿಸಿದ ಪಾವತಿಗಳಿಗೆ ಸರ್ಕಾರಿ ಇ-ಮಾರುಕಟ್ಟೆ ಅನೇಕ ಬ್ಯಾಂಕ್ ಗಳ ಜೊತೆಗೆ ಸಂಪರ್ಕ ಹೊಂದಿದೆ.
ಇನ್ನು ಸರ್ಕಾರಿ ಇ-ಮಾರುಕಟ್ಟೆ ಪೋರ್ಟಲ್ ನಲ್ಲಿ ಎಲ್ಲರಿಗೂ ವ್ಯಾಪಾರ ನಡೆಸಲು ಮುಕ್ತ ಅವಕಾಶವಿದೆ. ಇದರಲ್ಲಿ ಸರಕು ಹಾಗೂ ಸೇವೆಗಳ ಸಂಗ್ರಹಣೆಗೆ ಅನೇಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ನೇರ ಖರೀದಿ, ಎಲೆಕ್ಟ್ರಾನಿಕ್ ಬಿಡ್ಡಿಂಗ್, ಎಲೆಕ್ಟ್ರಾನಿಕ್ ರಿವರ್ಸ್ ಹರಾಜು ಹಾಗೂ ನೇರ ಹಿಮ್ಮುಖ ಹರಾಜು ಸೇರಿದಂತೆ ಅನೇಕ ಸಂಗ್ರಹಣೆ ವಿಧಾನಗಳನ್ನು ಅನುಸರಿಸಲಾಗುತ್ತಿದೆ.
ಆಟಿಕೆ ರಫ್ತಿನಲ್ಲಿ ಶೇ.60ರಷ್ಟು ಹೆಚ್ಚಳ, ಆಮದು ಇಳಿಕೆಗೆ ಕೈಗೊಂಡ ಕ್ರಮಗಳೇ ಇದಕ್ಕೆ ಕಾರಣ: ಕೇಂದ್ರ ಸರ್ಕಾರ
ಇನ್ನು ವಿದೇಶಿ ಉತ್ಪನ್ನಗಳನ್ನು ಕೂಡ ಸರ್ಕಾರಿ ಇ-ಮಾರುಕಟ್ಟೆಯಲ್ಲಿ ನೋಂದಣಿ ಮಾಡಬಹುದು. ಆದರೆ, ನೋಂದಣಿ ಮಾಡುವ ಸಂದರ್ಭದಲ್ಲಿ ಮೂಲದೇಶದ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು.ಮಾರಾಟಗಾರರು ಅವರ ಉತ್ಪನ್ನವನ್ನು ಎಲ್ಲಿ ತಯಾರಿಸಲಾಗಿದೆ ಅಥವಾ ಎಲ್ಲಿಂದ ಆಮದು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡುವುದು ಅಗತ್ಯ. ಒಂದು ವೇಳೆ ಉತ್ಪನ್ನ ಮತ್ತು ಉತ್ಪನ್ನದ ಮೂಲದ ಬಗ್ಗೆ ಎಲ್ಲ ಮಾಹಿತಿಯನ್ನು ನೀಡದಿದ್ದರೆ, ಆ ಉತ್ಪನ್ನವನ್ನು ಜಿಇಎಂ ಪ್ಲಾಟ್ ಫಾರ್ಮ್‌ನಿಂದ ತೆಗೆದು ಹಾಕಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಈ ಹಿಂದೆಯೇ ಮಾಹಿತಿ ನೀಡಿದೆ.