ಡೌನ್ ಜಿಡಿಪಿ: ಮೋದಿ ಊದ್ತಿದ್ದಾರಾ ಬರೀ ಪೀಪಿ?

By Web DeskFirst Published Aug 21, 2018, 2:38 PM IST
Highlights

ವಿಪಕ್ಷಗಳಿಗೆ ಆಹಾರವಾದ ಜಿಡಿಪಿ ದರ ವ್ಯತ್ಯಾಸ! ಮೋದಿ ಸರ್ಕಾರದ ಮೇಲೆ ಮುಗಿಬಿದ್ದ ವಿಪಕ್ಷಗಳು! ಜಿಡಿಪಿ ಬೆಳವಣಿಗೆಗೆ ಯುಪಿಎ ಸರ್ಕಾರ ಕೊಡುಗೆ ಜಾಸ್ತಿ! ಮೋದಿಗೆ ತಲೆಬಿಸಿ ತಂದಿಟ್ಟ ಹೊಸ ಜಿಡಿಪಿ ದರ ವರದಿ       

ನವದೆಹಲಿ(ಆ.21): ಜಿಡಿಪಿ ದರ ಕುರಿತು ವಿಶ್ವಸಂಸ್ಥೆ ಹೊಸ ಮಾನದಂಡಗಳನ್ನು ಸೂಚಿಸಿದೆ. ಅದರಂತೆ ಇದೀಗ ಬಿಡುಗಡೆಯಾಗಿರುವ ಜಿಡಿಪಿ ದರ ಪಟ್ಟಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು  ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ.

ಮೋದಿ ಸರ್ಕಾರ  ಜಿಡಿಪಿ ಬೆಳವಣಿಗೆಗೆ ಏನೂ ಕ್ರಮ ಕೈಗೊಂಡಿಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಪುಷ್ಠಿ ನೀಡುವಂತೆ ಹೊಸ ವರದಿ ಬಿಡುಗಡೆಯಾಗಿದೆ. ಅದರಂತೆ ಯುಪಿಎ ಅವಧಿಯಲ್ಲಿ ಆದ ಜಿಡಿಪಿ ಬೆಳವಣಿಗೆ ಗಮನಾರ್ಹ ಎಂದು  ವರದಿ ಉಲ್ಲೇಖಿಸಿದೆ. ಯುಪಿಎ ಸರ್ಕಾರ 10 ವರ್ಷದ ಅವಧಿಯಲ್ಲಿ ಶೇ.8 ರಷ್ಟು ಜಿಡಿಪಿ ಕಾಯ್ದುಕೊಳ್ಳುವಲ್ಲಿ ಸಫಲವಾಗಿತ್ತು ಎಂಬುದು ಈ ವರದಿಯಲ್ಲಿ ಉಲ್ಲೇಖವಾಗಿದೆ.

ಅದರಂತೆ ಮೋದಿ ಸರ್ಕಾರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ. 7.4 ರಷ್ಟಿದ್ದು, ಇದು ಏರುಪೇರಾಗುತ್ತಿದೆ. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಶೇ. 8 ರಷ್ಟು ಜಿಡಿಪಿ ಬೆಳವಣಿಗೆ ಅನುಮಾನ ಎಂದೂ ವರದಿ ಉಲ್ಲೇಖಿಸಿದೆ. ಹೊಸ ಜಿಡಿಪಿ ವರದಿ ಮೋದಿ ಮೇಲೆ ಮುಗಿ ಬೀಳಲು ವಿರೋಧ ಪಕ್ಷಗಳಿಗೆ ಅವಕಾಶ ನೀಡಿದ್ದು, ಮೋದಿ ಬರೀ ಬಣ್ಣಬಣ್ಣದ ಮಾತುಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದೇ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯ ಕೂಡ ಕುಸಿಯುತ್ತಿದ್ದು, ಮೋದಿ ಸರ್ಕಾರದ ವಿರುದ್ಧ ಹರಿಹಾಯಲು ವಿಪಕ್ಷಗಳಿಗೆ ಅವಕಾಶ ಒದಗಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ 80 ರ ಗಡಿ ದಾಟಿದರೂ ಅಚ್ಚರಿ ಇಲ್ಲ ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದ್ದು, ಇನ್ನುಳಿದಿರುವ ಒಂದು ವರ್ಷದ ಅವಧಿಯಲ್ಲಿ ಮೋದಿ ಏನು ಮ್ಯಾಜಿಕ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

click me!