
ನವದೆಹಲಿ (ಮಾ.7): ಹಿಂಡೆನ್ ಬರ್ಗ್ ವರದಿ ಬಳಿಕ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಷೇರುಗಳು ಭಾರೀ ನಷ್ಟ ಅನುಭವಿಸಿದ್ದವು. ಇದ್ರಿಂದ ಗೌತಮ್ ಅದಾನಿ ಸಂಪತ್ತಿನಲ್ಲಿ ಕೂಡ ಭಾರೀ ಇಳಿಕೆಯಾಗಿತ್ತು. ಆದರೆ, ಹಿಂಡೆನ್ ಬರ್ಗ್ ವರದಿ ಗೌತಮ್ ಅದಾನಿ ಆಸ್ಟ್ರೇಲಿಯಾದಲ್ಲಿ ಮಾಡಿರುವ ಹೂಡಿಕೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಲ್ಲಿ ಅವರ ಹೂಡಿಕೆ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಆಸ್ಟ್ರೇಲಿಯಾದ ರಾಯಭಾರಿ ಬಾರ್ರೆ ಓ ಫರ್ರೆಲ್ ಹೇಳಿದ್ದಾರೆ. ಅದಾನಿ ಅವರನ್ನು ಪ್ರಮುಖ ಹೂಡಿಕೆದಾರ ಎಂದು ಕರೆದಿರುವ ಅವರು, ಹಿಂಡೆನ್ ಬರ್ಗ್ ವರದಿಗೆ ಸಂಬಂಧಿಸಿ ಭಾರತದ ಷೇರು ಮಾರುಕಟ್ಟೆ ನಿಯಂತ್ರಕರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ, ನಾಳೆ (ಮಾ.8) ಭಾರತಕ್ಕೆ ಭೇಟಿ ನೀಡಲಿರುವ ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್ , ವ್ಯಾಪಾರ ವ್ಯವಹಾರಗಳ ಸಚಿವ ಡಾನ್ ಫರ್ರೆಲ್ ಹಾಗೂ ಸಂಪನ್ಮೂಲ ಸಚಿವ ಮಾಡೆಲಿನೆ ಕಿಂಗ್ ಹಾಗೂ 27 ಸಿಇಒಗಳ ಜೊತೆಗೆ ನಡೆಯಲಿರುವ ಸಭೆಯಲ್ಲಿ ಅದಾನಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಮಾತ್ರ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಆಸ್ಟ್ರೇಲಿಯಾ ಪ್ರಧಾನಿ ನಾಳೆ ಅಹ್ಮದಾಬಾದ್ ಗೆ ಬಂದಿಳಿಯಲಿದ್ದು, ಹೋಳಿ ಸಂಭ್ರಮಾಚರಣೆಯಲ್ಲಿಯೂ ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಿ ಮೋದಿ ಅವರೊಂದಿಗೆ ಭಾರತ- ಆಸ್ಟ್ರೇಲಿಯಾ ಕ್ರಿಕೆಟ್ ಟೆಸ್ಟ್ ಪಂದ್ಯವನ್ನೂ ವೀಕ್ಷಿಸಲಿದ್ದಾರೆ. ಆ ಬಳಿಕ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಭಾರತ ಹಾಗೂ ಆಸ್ಟ್ರೇಲಿಯಾದ ಉದ್ಯಮ ಗುಂಪುಗಳ ನಡುವೆ ಪ್ರಮುಖ ಮಾತುಕತೆ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ ಎಂದು ಆಸ್ಟ್ರೇಲಿಯಾದ ರಾಯಭಾರಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಗಳ ಬಗ್ಗೆ ಮಾತನಾಡಿದ ಡಾನ್ ಫರ್ರೆಲ್, 'ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇದಕ್ಕೆ ಕಾರಣವಾದವರನ್ನು ಶೀಘ್ರವೇ ಬಂಧಿಸಲಿದ್ದಾರೆ. ಖಾಲಿಸ್ತಾನ ಪರ ಅಭಿಪ್ರಾಯ ಸಂಗ್ರಹಣೆಗೆ ಯಾವುದೇ ಕಾನೂನುಬದ್ಧ ಮಾನ್ಯತೆಯಿಲ್ಲ. ಆಸ್ಟ್ರೇಲಿಯಾ ಬಹುಸಂಸ್ಕೃತಿಯನ್ನು ಗೌರವಿಸುತ್ತದೆ. ಹಾಗೆಯೇ ವಾಕ್ ಸ್ವಾತಂತ್ರ್ಯದಲ್ಲಿ ಕೂಡ ನಂಬಿಕೆ ಹೊಂದಿದೆ. ವೈಷಮ್ಯ ಬಿತ್ತುವ ಭಾಷಣಗಳನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂಡೆನ್‌ಬರ್ಗ್ ರಿಪೋರ್ಟ್‌ನಿಂದ ಆದ ನಷ್ಟ ಸರಿದೂಗಿಸಲು ಅದಾನಿ ಗ್ರೂಪ್ ಸಖತ್ ಪ್ಲ್ಯಾನ್!
ಆಸ್ಟ್ರೇಲಿಯಾ ಪಿಎಂ ಭಾರತ ಭೇಟಿ
ಆಸ್ಟ್ರೇಲಿಯಾದ ಪ್ರಧಾನಿ ಆಂಟೋನಿ ಆಲ್ಬನೀಸ್ ಅವರು ಅಹ್ಮದಾಬಾದ್, ಮುಂಬೈ ಮತ್ತು ನವ ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣ ಸಂಬಂಧವನ್ನು ಬಲಗೊಳಿಸುವುದು, ಎರಡು ದೇಶಗಳ ನಡುವೆ ಮಾಹಿತಿ ಹಂಚಿಕೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಆಸ್ಟ್ರೇಲಿಯಾ ಹಾಗೂ ಭಾರತ ಕ್ವಾಡ್ ಭಾಗವಾಗಿದ್ದು, ಜಪಾನ್ ಹಾಗೂ ಅಮೆರಿಕ ಕೂಡ ಇದರಲ್ಲಿವೆ. ಕ್ವಾಡ್ ಅನ್ನು ಇಂಡೋ-ಪೆಸಿಫಿಕ್ ನ್ಯಾಟೋ ಆಗಿ ಪರಿವರ್ತಿಸುವ ಯಾವುದೇ ಉದ್ದೇಶವಿಲ್ಲ. ಭಯೋತ್ಪಾದನೆ ಆಗಿರಲಿ ಅಥವಾ ಆರ್ಥಿಕ ಸಮಸ್ಯೆಗಳಾಗಿರಲಿ ಅವುಗಳ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ಡಾನ್ ಫರ್ರೆಲ್ ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಕ್ವಾಡ್ ಶೃಂಗಸಭೆ ನಡೆಯಲಿದೆ ಎಂಬ ಮಾಹಿತಿಯನ್ನು ಕೂಡ ಅವರು ನೀಡಿದ್ದಾರೆ.
ಅದಾನಿ ವಿರುದ್ಧದ ಹಿಂಡನ್‌ಬರ್ಗ್ ವರದಿಗೆ ಆಸೀಸ್ ಮಾಜಿ ಪ್ರಧಾನಿ ಕಿಡಿಕಿಡಿ
ಇನ್ನು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೂಡ ಎರಡು ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಡಲಿದೆ. ಡೀಕಿನ್ ಹಾಗೂ ವೂಲ್ಗೊಂಗ್ ಎಂಬ ಎರಡು ಆಸ್ಟ್ರೇಲಿಯನ್ ವಿಶ್ವವಿದ್ಯಾಲಯಗಳು ಭಾರತದಲ್ಲಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ. ಈ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಭಾರತದಲ್ಲಿ ನಿರ್ಮಾಣವಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಬದಲಾವಣೆಗಳಿಂದ ಈಗ ಭಾರತದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳು ತಮ್ಮ ಶಾಖೆ ತೆರೆಯಲು ಅವಕಾಶ ನೀಡಲಾಗಿದೆ. ಇನ್ನು ಭಾರತ ಕೋಕಿಂಗ್ ಕಲ್ಲಿದ್ದಲು ಹಾಗೂ ಅಪರೂಪದ ಖನಿಜಗಳಾದ ಲಿಥಿಯಂ ಹಾಗೂ ಕೋಬಾಲ್ಟ್ ಖರೀದಿ ಬಗ್ಗೆ ಕೂಡ ಆಸ್ಟ್ರೇಲಿಯಾದ ಜೊತೆಗೆ ಮಾತುಕತೆ ನಡೆಸಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.