ಪತಂಜಲಿ ಅಂದ ತಕ್ಷಣ ಯೋಗ ಗುರು ಬಾಬಾ ರಾಮ್ ದೇವ್ ನೆನಪಿಗೆ ಬರುತ್ತಾರೆ. ಆದರೆ, ಈ ಸಂಸ್ಥೆಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಅವರೇ ಆಚಾರ್ಯ ಬಾಲಕೃಷ್ಣ. ಒಂದು ರೂಪಾಯಿ ವೇತನ ಪಡೆಯದೆ ಪತಂಜಲಿ ಸಂಸ್ಥೆಗಾಗಿ ದಿನಕ್ಕೆ 15 ಗಂಟೆಗಳ ಕಾಲ ದುಡಿಯುವ ಬಾಲಕೃಷ್ಣ ಅವರ ಪರಿಚಯ ಇಲ್ಲಿದೆ.
Business Desk: ಪತಂಜಲಿ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಸದ್ಯ ಭಾರತದಾದ್ಯಂತ ಮನೆ ಮಾತಾಗಿರುವ ಎಫ್ ಎಂಸಿಜೆ ಬ್ರ್ಯಾಂಡ್ ಇದು. ಬೃಹತ್ ಜಾಗತಿಕ ಬ್ರ್ಯಾಂಡ್ ಗಳಿಗೂ ಪೈಪೋಟಿ ನೀಡುವಷ್ಟು ಮಟ್ಟಕ್ಕೆ ಇಂದು ಪತಂಜಲಿ ಬೆಳೆದು ನಿಂತಿದೆ. ಪತಂಜಲಿ ಅಂದ ತಕ್ಷಣ ನಮಗೆಲ್ಲರಿಗೂ ಮೊದಲು ಕಣ್ಮುಂದೆ ಬರೋದು ಯೋಗ ಗುರು ಬಾಬಾ ರಾಮ್ ದೇವ್. ಆದರೆ, ಪತಂಜಲಿ ಹಿಂದೆ ಇನ್ನೊಬ್ಬ ವ್ಯಕ್ತಿಯಿದ್ದರೆ. ಯಾವುದೇ ವೇತನ ಪಡೆಯದೆ ದಿನಕ್ಕೆ 15 ಗಂಟೆಗಳ ಕಾಲ ದುಡಿಯುವ, ಸಂಸ್ಥೆಯನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಸರಿಯಾದ ಯೋಜನೆ ರೂಪಿಸಿರುವ ಈ ವ್ಯಕ್ತಿಯ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಅವರೇ ಆಚಾರ್ಯ ಬಾಲಕೃಷ್ಣ. ಇವರು ಪತಂಜಲಿ ಆಯುರ್ವೇದ ಕನ್ಸೂಮರ್ ಗೂಡ್ಸ್ ಕಂಪನಿಯ ಮುಖ್ಯಸ್ಥರು ಹಾಗೂ ಸಿಇಒ. ಇವರನ್ನು ಬಾಬಾ ರಾಮ್ ದೇವ್ ಅವರ ಬಲಗೈ ಬಂಟ ಎಂದೇ ಕರೆಯಲಾಗುತ್ತದೆ. ಇನ್ನು ಪತಂಜಲಿ ಯಶಸ್ಸಿನ ಹಿಂದಿನ ಮೂಲ ಕಾರಣ ಇವರೇ ಎಂದೇ ಹೇಳಲಾಗುತ್ತದೆ. ಹಾಗಾದ್ರೆ ಆಚಾರ್ಯ ಬಾಲಕೃಷ್ಣ ಯಾರು? ಅವರಿಗೂ ಬಾಬಾ ರಾಮ್ ದೇವ್ ಅವರಿಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ.
ಆಚಾರ್ಯ ಬಾಲಕೃಷ್ಣ ಯಾರು?
ಆಚಾರ್ಯ ಬಾಲಕೃಷ್ಣ ಹರಿದ್ವಾರದಲ್ಲಿ ಭಾರತಕ್ಕೆ ವಲಸೆ ಬಂದಿರುವ ನೇಪಾಳಿ ಕುಟುಂಬವೊಂದರಲ್ಲಿ 1972ರ ಆಗಸ್ಟ್ 4ರಂದು ಜನಿಸಿದರು. ಹರಿಯಾಣದ ಖಾನ್ ಪುರ ಗುರುಕುಲದಲ್ಲಿ ಬಾಬಾ ರಾಮ್ ದೇವ್ ಅವರನ್ನು ಭೇಟಿಯಾಗುತ್ತಾರೆ. ಬಾಬಾ ರಾಮ್ ದೇವ್ ಹಾಗೂ ಆಚಾರ್ಯ ಕರ್ಮವೀರ್ ಜೊತೆಗೆ ಆಚಾರ್ಯ ಬಾಲಕೃಷ್ಣ 1995ರಲ್ಲಿ ದಿವ್ಯ ಯೋಗ ಮಂದಿರ್ ಟ್ರಸ್ಟ್ ಸ್ಥಾಪಿಸುತ್ತಾರೆ. ಇದು ಹರಿದ್ವಾರದ ಕೃಪಾಲು ಬಾಗ್ ಆಶ್ರಮದಲ್ಲಿ ಸ್ಥಾಪಿತವಾಗಿದೆ. ಈ ಮೂವರ ಸಹಯೋಗ ಹೀಗೆ ಮುಂದುವರಿಯಿತು. ಆ ಬಳಿಕ ಈ ಮೂವರು ಜೊತೆಯಾಗಿ ಸೇರಿ 2006ರಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ಸ್ಥಾಪಿಸಿದರು. ಬಾಬಾ ರಾಮ್ ದೇವ್ ಅವರ ಭಕ್ತರು ಹಾಗೂ ಸಾಲದ ಮೂಲಕ ಪತಂಜಲಿ ಸಂಸ್ಥೆಗೆ ಹಣ ಹೊಂದಿಸಲಾಗಿತ್ತು. ಇನ್ನು ಬಾಬಾ ರಾಮ್ ದೇವ್ ಪತಂಜಲಿ ಬ್ರ್ಯಾಂಡ್ ನ ಮುಖವೇ ಆಗಿದ್ದರೂ ಸಂಸ್ಥೆಯಲ್ಲಿ ಅವರು ಯಾವುದೇ ಪಾಲು ಹೊಂದಿಲ್ಲ.
ಕೊರೋನಾ ಬಳಿಕ ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದ ಬಾಬಾ ರಾಮ್‌ದೇವ್!
ಸದಾ ಬಿಳಿ ಪಂಚೆ ಹಾಗೂ ಕುರ್ತದಲ್ಲಿ ಕಾಣಿಸಿಕೊಳ್ಳುವ ಆಚಾರ್ಯ ಬಾಲಕೃಷ್ಣ ಕಠಿಣ ಪರಿಶ್ರಮದಲ್ಲಿ ನಂಬಿಕೆ ಹೊಂದಿದ್ದಾರೆ. ಯಾವುದೇ ವೇತನವಿಲ್ಲದೆ ದಿನಕ್ಕೆ 15 ಗಂಟೆಗಳ ಕಾಲ ಅವರು ಕಾರ್ಯನಿರ್ವಹಿಸುತ್ತಾರೆ.
ಆಚಾರ್ಯ ಬಾಲಕೃಷ್ಣ ಅವರ ನಿವ್ವಳ ಸಂಪತ್ತು
ಬಾಲಕೃಷ್ಣ ಅವರು ಯಾವುದೇ ವೇತನ ಪಡೆಯೋದಿಲ್ಲ. ಅವರ ನಿವ್ವಳ ಸಂಪತ್ತು ಸುಮಾರು 3.6 ಬಿಲಿಯನ್ ಡಾಲರ್ ಇದೆ ಎಂದು ಫೋರ್ಬ್ಸ್ ವೆಲ್ತ್ ಟ್ರ್ಯಾಕರ್ ತಿಳಿಸಿದೆ. ಬಾಲಕೃಷ್ಣ ಅವರ ಸಂಪತ್ತು ಪತಂಜಲಿ ಆಯುರ್ವೇದದಿಂದಲೇ ಬಂದಿರೋದು. ಈ ಖಾಸಗಿ ಕಂಪನಿಯಲ್ಲಿ ಅವರು ದೊಡ್ಡ ಪಾಲು ಹೊಂದಿದ್ದಾರೆ.
ತಪ್ಪು ಮಾಹಿತಿಯ ಜಾಹೀರಾತು, ಉತ್ತರಖಂಡದಲ್ಲಿ ಪತಂಜಲಿಯ 5 ಔಷಧ ನಿಷೇಧ!
ಪತಂಜಲಿ ಯಶೋಗಾಥೆ
ಬಾಬಾ ರಾಮ್ ದೇವ್ ಅವರ ಜನಪ್ರಿಯತೆ ಹಾಗೂ ಅದರ ಅನೇಕ ವಿಧದ ಉತ್ಪನ್ನಗಳು ಅದನ್ನು ವೇಗವಾಗಿ ಜನಪ್ರಿಯ ಬ್ರ್ಯಾಂಡ್ ಆಗಿ ರೂಪಿಸಿದೆ. ಪತಂಜಲಿ ಭಾರತೀಯ ಸಂಸ್ಕೃತಿಯಲ್ಲಿ ತನ್ನ ಬೇರುಗಳನ್ನು ಹೊಂದಿರುವ ಜೊತೆಗೆ ಅಂತಾರಾಷ್ಟ್ರೀಯ ಕಂಪನಿಗಳ ಜೊತೆಗೆ ಕೂಡ ಸ್ಪರ್ಧಿಸುವಷ್ಟು ಸಾಮರ್ಥ್ಯ ಹೊಂದಿದೆ. ಹರ್ಬಲ್ ಟೂಥ್ ಪೇಸ್ಟ್ ನಿಂದ ಹಿಡಿದು ನೂಡಲ್ಸ್, ಜಾಮ್ ತನಕ ವಿವಿಧ ಉತ್ಪನ್ನಗಳನ್ನು ಪತಂಜಲಿ ಮಾರಾಟ ಮಾಡುತ್ತದೆ.
2012ರಲ್ಲಿ ಪತಂಜಲಿ ಸಂಸ್ಥೆ 56 ಮಿಲಿಯನ್ ಡಾಲ್ ಆದಾಯ ಸಂಗ್ರಹಿಸಿದೆ. 2015ರಲ್ಲಿ ಈ ಆದಾಯ 630 ಮಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು. ಆನ್ ಲೈನ್ ಮಾರಾಟ ಉತ್ತೇಜಿಸಲು ಪತಂಜಲಿ ಅನೇಕ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಇನ್ನು ಅಡುಗೆ ತೈಲ ಉತ್ಪಾದಿಸುವ ರುಚಿ ಸೋಯಾ ಅನ್ನು ಬಾಲಕೃಷ್ಣ 2019ರಲ್ಲಿ ಸ್ವಾಧಿನಪಡಿಸಿಕೊಂಡು ಅದಕ್ಕೆ ಪತಂಜಲಿ ಫುಡ್ಸ್ ಎಂದು ಮರುನಾಮಕರಣ ಮಾಡಿದ್ದಾರೆ.