2022-23ನೇ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕ. ತಿಂಗಳ ವೇತನ ಪಡೆಯುವ ಉದ್ಯೋಗಿಗಳಿಗೆ ಐಟಿಆರ್ ಸಲ್ಲಿಕೆಗೆ ಫಾರ್ಮ್-16 ಅಗತ್ಯ. ಹಾಗಾದ್ರೆ ಉದ್ಯೋಗದಾತ ಸಂಸ್ಥೆಗಳು ಈ ಫಾರ್ಮ್ -16 ಅನ್ನು ಯಾವಾಗ ನೀಡುತ್ತವೆ? ಅದರ ಮಹತ್ವವೇನು? ಇಲ್ಲಿದೆ ಮಾಹಿತಿ.
Business Desk: 2022-23ನೇ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕವಾಗಿದೆ. ಐಟಿಆರ್ ಸಲ್ಲಿಕ ಮಾಡಲು ಫಾರ್ಮ್ 16 ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ. ಅದರಲ್ಲೂ ವೇತನ ಪಡೆಯುವ ಉದ್ಯೋಗಿಗಳಿಗೆ ಈ ದಾಖಲೆ ಅತ್ಯಗತ್ಯ. ಫಾರ್ಮ್ 16 ಟಿಡಿಎಸ್ ಪ್ರಮಾಣಪತ್ರವಾಗಿದ್ದು, ಇದರಲ್ಲಿ ವೇತನ, ಭತ್ಯೆಗಳು ಹಾಗೂ ಒಬ್ಬ ಉದ್ಯೋಗಿಗೆ ಸಂಸ್ಥೆ ಆ ಆರ್ಥಿಕ ಸಾಲಿನಲ್ಲಿ ನೀಡಿರುವ ಇತರ ಪ್ರಯೋಜನಗಳ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಇನ್ನು ಫಾರ್ಮ್ 16ನಲ್ಲಿ ವೇತನದಿಂದ ಮಾಡಿರುವ ಕಡಿತಗಳು ಹಾಗೂ ಆ ಆರ್ಥಿಕ ಸಾಲಿನಲ್ಲಿ ಪಾವತಿಸಿದ ಇತರ ಪ್ರಯೋಜನಗಳ ಮಾಹಿತಿ ಕೂಡ ಇರುತ್ತದೆ. ವೇತನ ಆದಾಯದಿಂದ ತೆರಿಗೆ ಕಡಿತ ಮಾಡಿರುವ ಪ್ರತಿ ಉದ್ಯೋಗಿಗೆ ಫಾರ್ಮ್ 16 ನೀಡುವುದು ಕಡ್ಡಾಯ. ಆದಾಯ ತೆರಿಗೆ ಕಾಯ್ದೆಗಳ ಅನ್ವಯ ಉದ್ಯೋಗದಾತ ಸಂಸ್ಥೆ ಅಥವಾ ಕಂಪನಿ ಉದ್ಯೋಗಿಗೆ ಫಾರ್ಮ್ 16 ಅನ್ನು ಜೂನ್ 15ರೊಳಗೆ ವಿತರಿಸೋದು ಕಡ್ಡಾಯ. ಇನ್ನು ಈಗ ಕಂಪನಿ ಅಥವಾ ಸಂಸ್ಥೆ ಉದ್ಯೋಗಿಗೆ ನೀಡುವ ಫಾರ್ಮ್ 16 ಕಳೆದ ಅಂದರೆ 2022-23ನೇ ಆರ್ಥಿಕ ಸಾಲಿಗೆ (2023ರ ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷ) ಸಂಬಂಧಿಸಿದ್ದು ಆಗಿರುತ್ತದೆ.
ಫಾರ್ಮ್ -16 ಅಲ್ಲಿ ಏನಿರುತ್ತದೆ?
ಉದ್ಯೋಗದಾತ ಸಂಸ್ಥೆ ವಿತರಿಸುವ ಫಾರ್ಮ್ -16 ಅಲ್ಲಿ ಎರಡು ಭಾಗಗಳಿರುತ್ತವೆ-ಭಾಗ ಎ ಹಾಗೂ ಭಾಗ ಬಿ. TRACES ಪೋರ್ಟಲ್ ನಿಂದ ಈ ಎರಡೂ ಭಾಗಗಳನ್ನು ಡೌನ್ ಲೋಡ್ ಮಾಡಬೇಕು ಹಾಗೂ ಇದರಲ್ಲಿ TRACES ಲೋಗೋ ಇರಬೇಕು ಕೂಡ. ಇನ್ನು ಫಾರ್ಮ್ -16 ಭಾಗ-ಎಯಲ್ಲಿ ವೇತನದಿಂದ ಕಡಿತವಾದ ತೆರಿಗೆಗಳ (Taxes) ಮಾಹಿತಿಯಿರುತ್ತದೆ. ಇದರ ಜೊತೆಗೆ ಉದ್ಯೋಗಿಯ ಹೆಸರು ಹಾಗೂ ವಿಳಾಸ, ಪ್ಯಾನ್(PAN)ಹಾಗೂ ಟ್ಯಾನ್ (TAN) ಸೇರಿದಂತೆ ಹಲವು ಮಾಹಿತಿ ಇರುತ್ತದೆ. ಇನ್ನು ಭಾಗ-ಬಿ ಉದ್ಯೋಗಿಗಳಿಗೆ (Employees) ಅತ್ಯಂತ ಮಹತ್ವದಾಗಿದೆ. ಇದರಲ್ಲಿ ತೆರಿಗೆಯಿಂದ (Taxes) ಹಿಡಿದು ಮುಖ್ಯ ಕಡಿತಗಳ (Deduction) ಸಂಪೂರ್ಣ ಮಾಹಿತಿ ಇರುತ್ತದೆ. ಅಲ್ಲದೆ, ಉದ್ಯೋಗಿಯ ಒಟ್ಟು ವೇತನ, ಎಚ್ ಆರ್ ಎ, ವಿಶೇಷ ಭತ್ಯೆ ಸೇರಿದಂತೆ ವೇತನದ ವಿಸ್ತೃತ ಮಾಹಿತಿ ಇರುತ್ತದೆ.
ITR ಫೈಲ್ ಮಾಡಿದ ಬಳಿಕ ತೆರಿಗೆ ರೀಫಂಡ್ ಪಡೆಯಲು ಎಷ್ಟು ಸಮಯ ಬೇಕು? ಇಲ್ಲಿದೆ ಮಾಹಿತಿ
ವೇತನ ಆದಾಯಕ್ಕೆ ಟಿಡಿಎಸ್ ಲೆಕ್ಕಾಚಾರ ಹೇಗೆ?
ವೇತನ ಪಡೆಯುವ ಉದ್ಯೋಗಿಗಳಿಗೆ ಅವರ ಉದ್ಯೋಗದಾತ ಸಂಸ್ಥೆ ಪ್ರತಿ ತಿಂಗಳು ಅವರ ವೇತನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವ ಮುನ್ನ ತೆರಿಗೆ ಕಡಿತಗೊಳಿಸುತ್ತದೆ. ಈ ರೀತಿ ಕಡಿತಗೊಳಿಸಿದ ತೆರಿಗೆಯನ್ನು ಸರ್ಕಾರಕ್ಕೆ ಪ್ರತಿ ತ್ರೈಮಾಸಿಕದ ಆಧಾರದಲ್ಲಿ ಜಮೆ ಮಾಡಲಾಗುತ್ತದೆ. ಇನ್ನು ವೇತನ ಆದಾಯದ ಮೇಲೆ ಕಡಿತಗೊಳಿಸಿದ ತೆರಿಗೆಗಳಿಗೆ ಉದ್ಯೋಗದಾತ ಸಂಸ್ಥೆ ಕಡ್ಡಾಯವಾಗಿ ಟಿಡಿಎಸ್ ರಿಟರ್ನ್ ಸಲ್ಲಿಕೆ ಮಾಡಬೇಕು. ಇನ್ನು ಉದ್ಯೋಗದಾತ ಸಂಸ್ಥೆ ಟಿಡಿಎಸ್ ರಿಟರ್ನ್ ಫೈಲ್ ಮಾಡಿದ ಬಳಿಕವಷ್ಟೇ ಉದ್ಯೋಗಿಯ ಫಾರ್ಮ್ 16 ಸೃಷ್ಟಿಸಲು ಸಾಧ್ಯ.
ಇನ್ನು ವೇತನ ಆದಾಯದ ಮೇಲೆ ಟಿಡಿಎಸ್ ಕಡಿತವನ್ನು ಉದ್ಯೋಗಿಯ ಒಟ್ಟು ವೇತನಕ್ಕೆ ಅನ್ವಯಿಸುವ ಆದಾಯ ತೆರಿಗೆ ಸ್ಲ್ಯಾಬ್ ದರದ ಆಧಾರದಲ್ಲಿ ಮಾಡಲಾಗುತ್ತದೆ. ವೇತನದ ಮೇಲಿನ ಟಿಡಿಎಸ್ ಗೆ ಸಂಬಂಧಿಸಿ ಪ್ರತಿ ಆರ್ಥಿಕ ಸಾಲಿನ ಪ್ರಾರಂಭದಲ್ಲಿ ಉದ್ಯೋಗಿ ತಾನು ಆಯ್ಕೆ ಮಾಡಿರುವ ತೆರಿಗೆ ಪದ್ಧತಿ ಬಗ್ಗೆ ಉದ್ಯೋಗದಾತ ಸಂಸ್ಥೆಗೆ ಮಾಹಿತಿ ನೀಡಬೇಕು. ಒಬ್ಬ ಉದ್ಯೋಗಿ ಹಳೆಯ ತೆರಿಗೆ ವ್ಯವಸ್ಥೆ ಅಥವಾ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.
ITR ಫೈಲ್ ಮಾಡುವಾಗ ತಪ್ಪಾದ್ರೆ ಚಿಂತೆ ಬೇಡ, ಸರಿಪಡಿಸಲು ಅವಕಾಶವಿದೆ; ಅದು ಹೇಗೆ? ಇಲ್ಲಿದೆ ಮಾಹಿತಿ
ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದ್ದರೆ?
ಒಂದು ವೇಳೆ ನೀವು ಒಂದು ಆರ್ಥಿಕ ಸಾಲಿನಲ್ಲಿ ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರೆ ಆಗ ಎರಡು ಫಾರ್ಮ್ - 16 ಅಗತ್ಯವಿರುತ್ತದೆ. ಐಟಿಆರ್ ಫೈಲ್ ಮಾಡುವ ಸಮಯದಲ್ಲಿ ಈ ಎರಡೂ ಫಾರ್ಮ್ - 16 ಫೈಲ್ ಮಾಡಬೇಕು.