Inspiring Story: ಅಂದು ಹೋಟೆಲ್ ಮಾಣಿ, ಇಂದು ಲಕ್ಷುರಿ ಕಾರ್‌ಗಳ ಧಣಿ

By Suvarna News  |  First Published Nov 29, 2021, 4:10 PM IST

ರಾಹುಲ್ ತನೇಜಾ 2011ರಲ್ಲಿ ತಮ್ಮ ಬಿಎಂಡಬ್ಲೂ ಕಾರಿಗೆ ವಿಐಪಿ ನಂಬರನ್ನು 10 ಲಕ್ಷ ರೂ. ಕೊಟ್ಟು ಸುದ್ದಿಯಾಗಿದ್ದರು. 2018ರಲ್ಲಿ 16 ಲಕ್ಷ ಕೊಟ್ಟು ಅಂದಿಗೆ ದೇಶದ ದುಬಾರಿ ನಂಬರ್ ಪ್ಲೇಟ್ ಒಡೆಯ ಎಂಬ ಹೆಗ್ಗಳಿಕೆ ಗಳಿಸಿದ್ದರು. ನಂ.1 ಆಗಿರಬೇಕೆಂಬ ತುಡಿತವೇ ಇವರಲ್ಲಿ ಸಂಖ್ಯೆ ಒಂದರ ಬಗ್ಗೆ ವಿಶೇಷ ಮೋಹ ಬೆಳೆಸಿದೆ. ಒಂದು ಕಾಲದಲ್ಲಿ ಹೋಟೆಲ್ ಮಾಣಿಯಾಗಿದ್ದ ರಾಹುಲ್ ತನೇಜಾ ಬದುಕು ಬಹಳಷ್ಟು ಯುವಕರಿಗೆ ಪ್ರೇರಣಾದಾಯಕವಾಗಿದೆ. 


ಬಹುತೇಕ ಸಾಮಾನ್ಯ ಹುಡುಗರಂತೆ ರಾಹುಲ್ ತನೇಜಾ(Rahul Taneja) ಎಂಬ ಹೆಸರು ಕೂಡಾ ಯಾರೂ ಕೇಳದೆಯೇ ಕಳೆದು ಹೋಗಬಹುದಿತ್ತು. ಆದರೆ, ಈ ಹುಡುಗನಿಗಿದ್ದ ಮಹತ್ವಾಕಾಂಕ್ಷೆ ಹಾಗಾಗಲು ಬಿಡಲಿಲ್ಲ. ಒಂದು ಕಾಲದಲ್ಲಿ ಮನೆ ಬಿಟ್ಟು ಹೋಗಿ ಹೋಟೆಲ್‌ನಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದ ರಾಹುಲ್ ತನೇಜಾ ಇಂದು ಹಲವು ಕಾರಣಕ್ಕಾಗಿ ಹೆಸರು ಮಾಡಿದ್ದಾರೆ. ಒಂದಿಷ್ಟು ಛಲ, ಬುದ್ಧಿವಂತಿಕೆ ಜೊತೆಗೆ ಕಷ್ಟಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ರಾಹುಲ್ ಬದುಕನ್ನು ನೋಡಿದಾಗ ತಿಳಿಯುತ್ತದೆ. ಇಂದಿನ ಹಲವು ಯುವಕರಿಗೆ ಸ್ಪೂರ್ತಿಯಾಗಬಲ್ಲ ರಾಹುಲ್ ಬದುಕಿನ ಹಾದಿಯನ್ನೊಮ್ಮೆ ಅವಲೋಕಿಸೋಣ  ಬನ್ನಿ. 
ದೇಶದ ಅತಿ ದುಬಾರಿ ನಂಬರ್ ಪ್ಲೇಟ(number plate)ನ್ನು ತಮ್ಮ ಒಂದೂವರೆ ಕೋಟಿ ಮೌಲ್ಯದ ಕಾರಿಗಾಗಿ 2018ರಲ್ಲಿ ಕೊಂಡಾಗ ರಾಹುಲ್ ತನೇಜಾ ಎಲ್ಲರ ಗಮನ ಸೆಳೆದರು. 16 ಲಕ್ಷ ರೂಪಾಯಿಗೆ ವಿಐಪಿ ನಂಬರ್(VIP number) ಖರೀದಿಸಿದ ರಾಹುಲ್ ತನೇಜಾ ಎಲ್ಲ ವಿಐಪಿಗಳೂ ಅವರ ಕಡೆ ತಿರುಗಿ ನೋಡುವಂತೆ ಮಾಡಿದರು. ಇದೇ ಕಾರಣಕ್ಕೆ ಅವರ ಸುದ್ದಿ ಮಾಧ್ಯಮ(media)ಗಳಲ್ಲಿ ಪ್ರಸಾರವಾಯಿತು. ಜೀರೋದಿಂದ ಹೀರೋ ಆದ  ರಾಹುಲ್ ಬದುಕಿನ ಹಾದಿ ಕೂಡಾ ಆಗಲೇ ಸುರುಳಿ ಬಿಚ್ಚಿಕೊಂಡಿತು. 

ಕನಸನ್ನು ಇಂಗಿಸದ ಬಡತನ
ರಾಹುಲ್ ತಂದೆ ಮಧ್ಯಪ್ರದೇಶದ ಪಟ್ಟಣವೊಂದರಲ್ಲಿ ಪಂಕ್ಚರ್ ಶಾಪ್(puncture shop) ನಡೆಸುತ್ತಿದ್ದರು. ಪುಟ್ಟ ಕಣ್ಗಳಲ್ಲಿ ದೊಡ್ಡ ದೊಡ್ಡ ಕನಸು ಕಾಣುತ್ತಿದ್ದ ರಾಹುಲ್, ಅದನ್ನು ಈಡೇರಿಸಿಕೊಳ್ಳಲೆಂದೇ ಮನೆ ಬಿಟ್ಟು ಮಧ್ಯಪ್ರದೇಶದಿಂದ ಜೈಪುರಕ್ಕೆ ಓಡಿ ಹೋಗಿದ್ದ. ಆಗ ಹೊಟ್ಟೆಪಾಡಿಗಾಗಿ ಅಲ್ಲಿದ್ದ ಡಾಬಾವೊಂದರಲ್ಲಿ ತಿಂಗಳಿಗೆ 150 ರುಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿದ. ಈ ಸಂದರ್ಭದಲ್ಲಿ ರಾಹುಲ್ ಮಾಡಿದ ಅತ್ಯುತ್ತಮ ಕೆಲಸವೆಂದರೆ ಶಾಲೆ ಬಿಡದೆ ಇದ್ದಿದ್ದು. ತನ್ನ ಡಾಬಾಗೆ ಹತ್ತಿರದಲ್ಲಿಯೇ ಇದ್ದ ಆದರ್ಶ ವಿದ್ಯಾಮಂದಿರಕ್ಕೆ ಸೇರಿದ ರಾಹುಲ್, ಕೆಲಸ ಮಾಡುತ್ತಲೇ ಗೆಳೆಯರ ಪುಸ್ತಕ ಎರವಲು ಪಡೆದು ಓದಿಕೊಳ್ಳುತ್ತಿದ್ದ. ಹಾಗೆ ಓದುತ್ತಾ ಎಸ್ಸೆಸ್ಸೆಲ್ಸಿಯಲ್ಲಿ ಶೇ.92ರಷ್ಟು ಅಂಕ ಪಡೆದ. ಸುಮಾರು ಎರಡು ವರ್ಷಗಳ ಕಾಲ ಡಾಬಾದಲ್ಲಿ ಕೆಲಸ ಮಾಡಿದ ರಾಹುಲ್ ಬಳಿಕ ರಂಗೋಲಿ ಪುಡಿ ಮಾರುವುದು, ಪೇಪರ್ ಹಾಕುವುದು, ಸಂಕ್ರಾಂತಿ ಸಮಯದಲ್ಲಿ ಗಾಳಿಪಟ ಮಾರುವುದು, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ, ರಕ್ಷಾಬಂಧನದ ಸಮಯದಲ್ಲಿ ರಾಖಿ ಮಾರಾಟ ಮಾಡಿ ಬದುಕು ನಡೆಸುತ್ತಿದ್ದ. ನಂತರ ಆಟೋ ಓಡಿಸಿ ಹೊಟ್ಟೆ ಹೊರೆಯಲಾರಂಭಿಸಿದ. 

Reliance Industries: ರಿಯಲ್ ಎಸ್ಟೇಟ್ ಉದ್ಯಮಿ ಮಗಳ ಜೊತೆ ಮುಕೇಶ್ ಅಂಬಾನಿ ಮೊಮ್ಮಗನ ನಿಶ್ಚಿತಾರ್ಥ!

Tap to resize

Latest Videos

ಈ ಸಂದರ್ಭದಲ್ಲಿ ಆರು ಅಡಿ ಬೆಳೆದಿದ್ದ ರಾಹುಲ್‌ನನ್ನು ನೋಡಿ ಗೆಳೆಯರು- ನೋಡೋಕೆ ಸಖತ್ತಾಗಿದೀಯಾ, ಮಾಡೆಲಿಂಗ್(modelling) ಮಾಡು ಅಂತ ಸಲಹೆ ನೀಡಿದರಂತೆ. ಅದನ್ನು ಗಂಭೀರವಾಗಿ ಪರಿಗಣಿಸಿದ ರಾಹುಲ್ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ. ಒಂಬತ್ತೇ ತಿಂಗಳಲ್ಲಿ ಮಿಸ್ಟರ್ ಜೈಪುರ್, ಮಿಸ್ಟರ್ ರಾಜಸ್ಥಾನ್, ಮೇಲ್ ಆಫ್ ದ ಇಯರ್ ಪಟ್ಟಗಳನ್ನು ತನ್ನದಾಗಿಸಿಕೊಂಡ. ಈ ಸಂದರ್ಭದಲ್ಲಿ ರ‍್ಯಾಂಪ್ ವಾಕ್(ramp walk) ಮಾಡುತ್ತಲೇ ಬ್ಯಾಕ್‌ಸ್ಟೇಜ್ ಕಾರ್ಯಗಳನ್ನು ಸಂಪೂರ್ಣ ಗಮನಿಸಿ ಕಲಿತುಕೊಂಡ. ಇದೇ ಕಲಿಕೆಯನ್ನು ಬೆನ್ನೆಲುಬಾಗಿಟ್ಟುಕೊಂಡು ತನ್ನದೇ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ(event management company) 'ಲೈವ್ ಕ್ರಿಯೇಶನ್ಸ್' ಆರಂಭ ಮಾಡಿದ ತನೇಜಾ ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. 

BH series Registration : ರಾಜ್ಯದಿಂದ ರಾಜ್ಯಕ್ಕೆ ವಾಹನ ವರ್ಗಾವಣೆ ಮಾಡಿದ್ರೂ  ನಂಬರ್ ಬದಲಾಗಲ್ಲ!

ನಂಬರ್ 1(number 1) ಮೋಹ
ಎಲ್ಲ ಕಷ್ಟಗಳ ನಡುವೆಯೂ ಬಾಲ್ಯದಿಂದಲೂ ನಂಬರ್ ಒನ್ ಆಗುವ ಆಸೆಯಲ್ಲೇ ಬೆಳೆದ ರಾಹುಲ್ ತನೇಜಾಗೆ ನಂಬರ್ 1 ಮೇಲೆ ಎಲ್ಲಿಲ್ಲದ ವ್ಯಾಮೋಹ. ಹಾಗಾಗಿಯೇ ಅವರು ತಮ್ಮ ವಾಹನಗಳು, ಫೋನ್ ನಂಬರ್ ಎಲ್ಲದರಲ್ಲೂ ನಂಬರ್ 1 ಇರುವಂತೆ ನೋಡಿಕೊಳ್ಳುತ್ತಾರೆ. ಈ ನಂಬರ್ 1 ಪಡೆಯುವ ಸಲುವಾಗಿಯೇ ಇದುವರೆಗೂ ಸುಮಾರು 40 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ತನೇಜಾ. 
ಮೊದಲೇ ಹೇಳಿದಂತೆ 2011ರಲ್ಲಿ 10 ಲಕ್ಷ ಕೊಟ್ಟು ತಮ್ಮ ಬಿಎಂಡಬ್ಲೂ(BMW) ಕಾರಿಗೆ ವಿಐಪಿ 0001 ನಂಬರ್ ಪಡೆದುಕೊಂಡಿದ್ದರು. 2018ರಲ್ಲಿ ಮತ್ತೊಂದು ಒಂದೂವರೆ ಕೋಟಿ ಮೌಲ್ಯದ ಬಿಎಂಡಬ್ಲೂ ಕಾರಿಗೆ 16 ಲಕ್ಷ ರೂಪಾಯಿ ಕೊಟ್ಟು ಆರ್‌ಜೆ45, ಸಿಜಿ 001 ನಂಬರ್ ಪಡೆದುಕೊಂಡು ಸುದ್ದಿಯಾದರು. ಅವರ ಎಲ್ಲ ಕಾರ್‌ಗಳ ನಂಬರ್ ಕೂಡಾ 1 ಆಗಿದೆ. ರಾಹುಲ್ ಸೆಲ್ ಫೋನ್ ನಂಬರ್ ಕೂಡಾ ಏಳು ಬಾರಿ ನಂಬರ್ ಒಂದನ್ನು ಹೊಂದಿದೆ ಎಂಬುದು ವಿಶೇಷ. 

ಮಹತ್ವಾಕಾಂಕ್ಷೆ ಇದ್ದರೆ, ಅದನ್ನು ಸಾಧಿಸುವ ಛಲವಿದ್ದರೆ ಯಾರೂ ಕೂಡಾ ಯಶಸ್ಸಿನ ಮುಖ  ನೋಡಬಹುದು ಎಂಬುದಕ್ಕೆ ರಾಹುಲ್ ತನೇಜಾ ಸ್ಟೋರಿ ಒಳ್ಳೆಯ ಉದಾಹರಣೆ. 

click me!