ಚೀನಾ ಆರ್ಥಿಕತೆ ಗಡಗಡ: ವಿಶ್ವಕ್ಕೇ ಆತಂಕ: ಕೋಟ್ಯಂತರ ಹೂಡಿಕೆದಾರರಿಗೆ ಆತಂಕ!

By Suvarna NewsFirst Published Oct 10, 2021, 7:55 AM IST
Highlights

* ಕೊರೋನಾ ಬಳಿಕ ಪ್ರಪಂಚಕ್ಕೆ ಮತ್ತೊಂದು ಭಾರೀ ಆಘಾತ ನೀಡುತ್ತಾ ಕಮ್ಯುನಿಸ್ಟ್‌ ದೇಶ?

* ಚೀನಾದ ಎರಡನೇ ಅತಿದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿ ಎವರ್‌ಗ್ರಾಂಡೆ ದಿವಾಳಿಯ ಅಂಚಿನತ್ತ

* ನೂರಾರು ಬ್ಯಾಂಕಿಂದ ಸಾಲ ಪಡೆದ ಕಂಪನಿ

* ಕೋಟ್ಯಂತರ ಹೂಡಿಕೆದಾರರಿಗೆ ಆತಂಕ, ಪ್ರತಿಭಟನೆ

ಬೀಜಿಂಗ್‌(ಅ.10): ಕೊರೋನಾ ವೈರಸ್‌(Coronavirus) ಸೃಷ್ಟಿಸಿ ಇಡೀ ಜಗತ್ತನ್ನು ಕಂಡುಕೇಳರಿಯದ ವಿನಾಶಕ್ಕೆ ನೂಕಿದ ಕಮ್ಯುನಿಸ್ಟ್‌ ರಾಷ್ಟ್ರ ಚೀನಾ(China), ಇದೀಗ ಮತ್ತೊಂದು ಆಪತ್ತಿನ ಮೂಲಕ ಜಾಗತಿಕ ಆರ್ಥಿಕತೆಯನ್ನು(Economy) ಆಪೋಶನ ತೆಗೆದುಕೊಳ್ಳುವ ಭೀತಿ ಎದುರಾಗಿದೆ. ಕಳೆದೊಂದು ದಶಕದಿಂದ ಚೀನಾದ ಆರ್ಥಿಕತೆ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಯಲ್‌ ಎಸ್ಟೇಟ್‌(Real Estate) ಕ್ಷೇತ್ರ ಇದೀಗ ಪತನದ ಹಾದಿಯಲ್ಲಿದೆ. ವಿಶ್ವದ ಅತಿದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿಗಳಲ್ಲಿ ಒಂದಾದ ‘ಎವರ್‌ಗ್ರಾಂಡೆ’(Evergrand) ದಿವಾಳಿಯತ್ತ ಹೆಜ್ಜೆ ಇಟ್ಟಿದೆ. ಇದು ಚೀನಾವನ್ನು ಮಾತ್ರವಲ್ಲ ಇಡೀ ಜಾಗತಿಕ ಆರ್ಥಿಕತೆಯಲ್ಲಿ(Global Economy) ತಲ್ಲಣ ಸೃಷ್ಟಿಸಿದೆ.

ದುರಂತವೆಂದರೆ ಕೊರೋನಾವನ್ನು ಮುಚ್ಚಿಹಾಕಲು ಕ್ಸಿ ಜಿನ್‌ಪಿಂಗ್‌(Xi Jinping) ನೇತೃತ್ವದ ಸರ್ಕಾರ ಏನೆಲ್ಲಾ ಜನವಿರೋಧಿ, ಮಾನವೀಯತೆಯ ವಿರೋಧಿ ನೀತಿಗಳನ್ನು ಅನುಸರಿಸಿತ್ತೋ ಈಗಲೂ ಅದೇ ತಂತ್ರಗಳ ಮೂಲಕ ಏನೂ ಆಗಿಲ್ಲವೆಂದು ತನ್ನ ನಾಗರಿಕರು ಮತ್ತು ಜಗತ್ತಿನ ಕಣ್ಣಿಗೆ ಮಂಕುಬೂದಿ ಎರಚುವ ಯತ್ನ ನಡೆಸಿದೆ ಎಂದು ವರ​ದಿ​ಗಳು ಹೇಳಿ​ವೆ.

ಎವರ್‌ಗ್ರಾಂಡೆ(Evergrand) ರೀತಿಯಲ್ಲೇ ಚೀನಾದ ಕನಿಷ್ಠ 10-12 ಕಂಪನಿಗಳು ಶೀಘ್ರವೇ ದಿವಾಳಿ ಘೋಷಿಸುವ ಸಾಧ್ಯತೆ ಇದೆ. ಇದು, 2008ರಲ್ಲಿ ಅಮೆರಿಕದ ಲೀಮನ್ಸ್‌ ಬ್ರದ​ರ್‍ಸ್ ಕಂಪನಿಯ ವಿನಾಶ ಹೇಗೆ ವಿಶ್ವದಾದ್ಯಂತ ಹೇಗೆ ಆರ್ಥಿಕ ಪñನಕ್ಕೆ ಕಾರಣವಾಗಿತ್ತೋ, ಹಾಗೆಯೇ ಮತ್ತೊಮ್ಮೆ ಜಾಗತಿಕ ಆರ್ಥಿಕ ಕುಸಿತಕ್ಕೆ ಕಾರಣವಾಗಬಲ್ಲದು ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದಾರೆ.

ಎವರ್‌ಗ್ರಾಂಡೆ ಪತನ:

25 ವರ್ಷಗಳ ಹಿಂದೆ ಸ್ಥಾಪನೆಯಾಗಿ ಹಲವು ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿರುವ ಎವರ್‌ಗ್ರಾಂಡೆ, ಚೀನಾದ 2ನೇ ಅತಿದೊಡ್ಡ ಮತ್ತು ವಿಶ್ವದ ಅತ್ಯಂತ ಮೌಲ್ಯಯುತ ರಿಯಲ್‌ ಎಸ್ಟೇಟ್‌ ಕಂಪನಿ. ಇದು ಚೀನಾದ 22 ನಗರಗಳಲ್ಲಿ 56.5 ಕೋಟಿ ಚದರ್‌ ಮೀಟರ್‌ಗಳಷ್ಟುವಿಸ್ತೀರ್ಣದ ರಿಯಲ್‌ ಎಸ್ಟೇಟ್‌ ಆಸ್ತಿ ಹೊಂದಿದೆ. 1.23 ಲಕ್ಷ ಸಿಬ್ಬಂದಿ ಹೊಂದಿರುವ ಕಂಪನಿಯ 2020ರಲ್ಲಿ 5.80 ಲಕ್ಷ ಕೋಟಿ ರು. ಆದಾಯಗಳಿಸಿದ್ದು, ಒಟ್ಟಾರೆ 23 ಲಕ್ಷ ಕೋಟಿ ರು. ಆಸ್ತಿ ಹೊಂದಿದೆ.

ಆದರೆ ಕೊರೋನಾ ಬಿಕ್ಕಟ್ಟು ಮತ್ತು ಇತ್ಯಾದಿ ಕಾರಣಗಳಿಂದಾಗಿ ಕಂಪನಿ ನಿರ್ಮಿಸಿದ್ದ ಲಕ್ಷಾಂತರ ಫ್ಲ್ಯಾಟ್‌ಗಳು ಮಾರಾಟವಾಗದೇ ಹಾಗೆಯೇ ಖಾಲಿ ಉಳಿದಿವೆ. ಮತ್ತೊಂದೆಡೆ ಚೀನಾ ಸರ್ಕಾರ, ರಿಯಲ್‌ ಎಸ್ಟೇಟ್‌ ಕಂಪನಿಗಳು ಹೊಂದಿರಬಹುದಾದ ಸಾಲಕ್ಕೆ ಮಿತಿ ಹೇರಿದೆ. ಇದು ಸಂಕಷ್ಟದಲ್ಲಿದ್ದ ರಿಯಲ್‌ ಎಸ್ಟೇಟ್‌ ಕಂಪನಿಗಳ ಸಮಸ್ಯೆಯನ್ನು ಮತ್ತಷ್ಟುವಿಸ್ತರಿಸಿದೆ. ಎವರ್‌ಗ್ರಾಂಡೆ ಕಂಪನಿಯೊಂದೇ ಇದೀಗ 22 ಲಕ್ಷ ಕೋಟಿ ರು. ಸಾಲ ಹೊಂದಿದ್ದು, ಕಾಲಕಾಲಕ್ಕೆ ಬಡ್ಡಿ ಪಾವತಿ ಮಾಡಲಾರದ ಸ್ಥಿತಿ ತಲುಪಿ, ಇದೀಗ ದಿವಾಳಿ ಅಂಚಿಗೆ ಬಂದು ನಿಂತಿದೆ.

ಈ ವಿದ್ಯ​ಮಾ​ನ​ದಿಂದ ಅಪಾಯ ಏನು?:

ಚೀನಾದ ಬಹುತೇಕ ರಿಯಲ್‌ ಎಸ್ಟೇಟ್‌ ಕಂಪನಿಗಳು ಜನಸಾಮಾನ್ಯರು, ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳಿಂದ ಸಾಲ ಪಡೆದು ರಿಯಲ್‌ ಎಸ್ಟೇಟ್‌ ಉದ್ಯಮ ನಿರ್ವಹಿಸುತ್ತಿವೆ. ತಾವು ಪಡೆದ ಸಾಲಕ್ಕೆ ಕಂಪನಿಗಳು ಬಾಂಡ್‌ ವಿತರಿಸಿವೆ. ಒಂದು ವೇಳೆ ಈ ರಿಯಲ್‌ ಎಸ್ಟೇಟ್‌ ಕಂಪನಿಗಳು ಬಾಗಿಲು ಹಾಕಿದರೆ ಕೋಟ್ಯಂತರ ಜನರು ತಮ್ಮ ಜೀವಮಾನವಿಡೀ ಉಳಿಸಿದ್ದ ಉಳಿತಾಯದ ಹಣ ನೋಡನೋಡುತ್ತಿದ್ದಂತೆ ಮಾಯವಾಗಲಿದೆ. ಎವರ್‌ಗ್ರಾಂಡೆ ಕಂಪನಿಯೊಂದೇ ಕನಿಷ್ಠ 171 ಸ್ಥಳೀಯ ಬ್ಯಾಂಕ್‌ಗಳು ಮತ್ತು 121 ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿದ್ದು ಅವುಗಳೆಲ್ಲಾ ಪತನವಾಗಲಿವೆ. ಇಂಥ ಯಾವುದೇ ಬೆಳವಣಿಗೆ ಚೀನಾ ಜೊತೆಗೆ ಜಾಗತಿಕ ಆರ್ಥಿಕತೆಯನ್ನೂ ನುಂಗಿ ಹಾಕುವ ಭೀತಿ ಎದುರಾಗಿದೆ.

ಏನಿದು ಸಂಕಷ್ಟ?

1. ಚೀನಾದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಯಲ್‌ ಎಸ್ಟೇಟ್‌ ಕ್ಷೇತ್ರ ಕೊರೋನಾದಿಂದ ಉಂಟಾದ ಆರ್ಥಿಕ ಮುಗ್ಗಟ್ಟಿನಿಂದಾಗಿ ಸಂಕಷ್ಟಕ್ಕೆ

2. 171 ಬ್ಯಾಂಕ್‌, ಕೋಟಿಗಟ್ಟಲೆ ಚೀನಾ ಪ್ರಜೆಗಳಿಂದ ಹೂಡಿಕೆ ಹೊಂದಿರುವ 2ನೇ ಅತಿದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿ ಎವರ್‌ಗ್ರಾಂಡೆ ದಿವಾಳಿ ಅಂಚಿಗೆ

3. 22 ಲಕ್ಷ ಕೋಟಿ ರು. ಸಾಲ ಮಾಡಿರುವ ಎವರ್‌ಗ್ರಾಂಡೆ. ಇದೀಗ ಬಡ್ಡಿ ಕಟ್ಟಲೂ ಆಗದೆ ಪರದಾಟ. ಹೂಡಿದ ಹಣ ವಾಪಸ್‌ ಬರದೆ ಚೀನಾ ಜನತೆ ಆಕ್ರೋಶ

4. ಎವರ್‌ಗ್ರಾಂಡೆ ಜೊತೆಗೆ 10ಕ್ಕೂ ಹೆಚ್ಚು ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ನಷ್ಟ. ಅವುಗಳಿಗೆ ಸಾಲ ಕೊಟ್ಟ300ಕ್ಕೂ ಹೆಚ್ಚು ಜಾಗತಿಕ ಬ್ಯಾಂಕ್‌ಗಳಿಗೆ ದಿವಾಳಿ ಭೀತಿ

5. ಪರಿಸ್ಥಿತಿ ಸುಧಾರಿಸದಿದ್ದರೆ 2008ರ ಲೀಮನ್‌ ಬ್ರದರ್ಸ್‌ ದಿವಾಳಿ ನಂತರ ಉಂಟಾದ ಜಾಗತಿಕ ಆರ್ಥಿಕ ಮಹಾಪತನ ರೀತಿ ಈಗಲೂ ಆಗುವ ಅಪಾಯ

5 ಕೋಟಿ ಮನೆ ಮಾರಾ​ಟ​ ಆಗಿಲ್ಲ!

ಎವರ್‌ಗ್ರಾಂಡೆ ರೀತಿಯಲ್ಲೇ ಇನ್ನೂ ಕನಿಷ್ಠ 10 ಬೃಹತ್‌ ರಿಯಲ್‌ ಎಸ್ಟೇಟ್‌ ಕಂಪನಿಗಳು ಶೀಘ್ರ ದಿವಾಳಿಯ ಅಂಚಿನಲ್ಲಿವೆ. ದೇಶದಲ್ಲಿ ಅಂದಾಜು 5 ಕೋಟಿ ಮನೆಗಳು ಖಾಲಿಯಾಗದೇ ಬಾಕಿ ಉಳಿದಿದೆ. ಇದು ಚೀನಾದ ರಿಯಲ್‌ ಎಸ್ಟೇಟ್‌ ಬಬಲ್‌ ಪತನದ ಸುಳಿವು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

click me!