ಡೀಸೆಲ್‌ ಶತಕ: ರಾಜ್ಯದಲ್ಲೂ 100 ರೂ. ದಾಟಿದ ದರ!

By Kannadaprabha NewsFirst Published Oct 10, 2021, 7:44 AM IST
Highlights

* ರಾಜ್ಯದಲ್ಲೂ100 ರೂ. ದಾಟಿದ ಡೀಸೆಲ್ ದರ

* ಉತ್ತರ ಕನ್ನಡ, ಬಳ್ಳಾರಿ, ವಿಜಯನಗರದಲ್ಲಿ 100

* 9 ದಿನದಲ್ಲಿ ಡೀಸೆಲ್‌ .3, ಪೆಟ್ರೋಲ್‌ 2.5 ರೂ. ಏರಿಕೆ

ನವದೆಹಲಿ(ಅ.10): ಇಂಧನ ಬೆಲೆ(Fuel Price) ಏರಿಕೆಯ ನಾಗಾಲೋಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌(Petrol) ಬಳಿಕ ಈಗಾಗಲೇ ದೇಶದ ಕೆಲಭಾಗಗಳಲ್ಲಿ 100 ರೂ. ರ ಗಡಿ ದಾಟಿರುವ ಡೀಸೆಲ್‌(Diesel) ಬೆಲೆ ಇದೀಗ ರಾಜ್ಯದ 3 ಜಿಲ್ಲೆಗಳಲ್ಲಿ ಶತಕ ಬಾರಿಸಿದೆ. ಉತ್ತರ ಕನ್ನಡದ ಶಿರಸಿಯಲ್ಲಿ(Sirsi) ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 100.12.ರೂ. ಕ್ಕೇರಿದ್ದರೆ, ಬಳ್ಳಾರಿ(Ballari) ಮತ್ತು ವಿಜಯನಗರ(Vijayanagara) ಜಿಲ್ಲೆಗಳಲ್ಲಿ 100.03 ರೂ. ಕ್ಕೇರಿದೆ.

ಸತತ 5ನೇ ದಿನ ದರ ಏರಿಕೆಯಾಗುವುದರೊಂದಿಗೆ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟತಲುಪಿದೆ. ದೇಶಾ​ದ್ಯಂತ ಪೆಟ್ರೋಲ್‌(Petrol)ಹಾಗೂ ಡೀಸೆಲ್‌(Diesel) ಬೆಲೆಯಲ್ಲಿ ಕ್ರಮವಾಗಿ ಪ್ರತೀ ಲೀ.ಗೆ 30 ಪೈಸೆ ಹಾಗೂ 35 ಪೈಸೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಕಳೆದ 9 ದಿನಗಳಲ್ಲಿ ಡೀಸೆಲ್‌ ಲೀಟರ್‌ಗೆ 3.09ರೂ. ಮತ್ತು ಪೆಟ್ರೋಲ್‌ಗೆ(Petrol) 2.54 ರೂ. ಹೆಚ್ಚಳವಾಗಿದೆ. ಲೀಟರ್‌ ಇದ​ರಿಂದಾಗಿ ಬೆಂಗ​ಳೂ​ರಿ​ನಲ್ಲಿ(Bengaluru) ಡೀಸೆಲ್‌ ಬೆಲೆ 98.15ರೂ. ಮತ್ತು ಪೆಟ್ರೋಲ್‌ ಬೆಲೆ 107.46ರೂ. ಗೆ ಹೆಚ್ಚ​ಳ​ವಾ​ಗಿ​ದೆ.

ರಾಜ್ಯದ 3 ಕಡೆ ಶತಕ: ಇಂಧನ ಬೆಲೆ ಏರಿಕೆಯಲ್ಲಿ ಶಿರಸಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದು ಶನಿವಾರ ಡೀಸೆಲ್‌ ದರ ಪ್ರತಿ ಲೀಟರ್‌ಗೆ 100.12ರೂ. ಕ್ಕೆ ತಲುಪಿದೆ. ಕಳೆದ ಕೆಲ ದಿನಗಳಿಂದ ಇಂಧನ ದರ ಒಂದೇ ಸಮನೆ ಏರಿಕೆ ಆಗುತ್ತಿದೆ. ಶುಕ್ರವಾರ ಶಿರಸಿಯಲ್ಲಿ 99.77ರೂ. ಇದ್ದ ಡೀಸೆಲ್‌ ದರ .35 ಪೈಸೆ ಏರಿಕೆಯಾಗಿ ಶತಕ ದಾಟಿದೆ. ಅದೇ ರೀತಿ ಪೆಟ್ರೋಲ್‌ ಬೆಲೆ 109.30ರೂ. ಕ್ಕೆ ತಲುಪಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಡೀಸೆಲ್‌ಗೆ 100.03 ಇದ್ದರೆ, ಪೆಟ್ರೋಲ್‌ಗೆ .109.49 ಆಗಿದೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ .99.68, ಚಿಕ್ಕಮಗಳೂರು .99.58, ಚಿತ್ರದುರ್ಗ .99.56, ಶಿವಮೊಗ್ಗ .99.38, ಕೊಪ್ಪಳ 99.28ರೂ. ಇದ್ದು ಇನ್ನು ಒಂದೆರಡು ದಿನದಲ್ಲಿ ಶತಕದ ಗಡಿ ದಾಟುವ ನಿರೀಕ್ಷೆ ಇದೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ 82 ಡಾಲರ್‌ಗಿಂತಲೂ ಹೆಚ್ಚಾಗಿದ್ದು, ಇಂಧನ ಬೆಲೆಯಲ್ಲಿ ಮತ್ತಷ್ಟುಏರಿಕೆಯಾಗುವ ಸಾಧ್ಯತೆ ಇದೆ. ತಿಂಗಳ ಹಿಂದೆ ಪ್ರತೀ ಬ್ಯಾರಲ್‌ ಬೆಲೆ 72 ಡಾಲರ್‌ ಆಗಿತ್ತು.

ಡೀಸೆಲ್‌ ನೂರರ ಗಡಿ ದಾಟಿದ ಮೊದಲ ಮೆಟ್ರೋಸಿಟಿ ಮುಂಬೈ

ಮುಂಬೈನಲ್ಲಿ ಡೀಸೆಲ್‌ ಬೆಲೆ ಮೊದಲ ಬಾರಿ .100 ದಾಟಿದ್ದು, ಶತಕ ಬಾರಿಸಿದ ದೇಶದ ಮೊದಲ ಮೆಟ್ರೋ ಸಿಟಿ ಆಗಿದೆ. ರಾಜ್ಯಸ್ಥಾನ ಮತ್ತು ಮಧ್ಯಪ್ರದೇಶಗಳ ಕೆಲವೆಡೆ ಈಗಾಗಲೇ 100 ರು. ಗಡಿ ದಾಟಿರುವ ಡೀಸೆಲ್‌ ಬೆಲೆ ಶನಿವಾರ ದೇಶದ ವಾಣಿಜ್ಯ ನಗರಿ ಮುಂಬೈನಲ್ಲೂ 100 ರು. ತಲುಪಿತು. ಮುಂಬೈನಲ್ಲಿ ಸದ್ಯ ಡೀಸೆಲ್‌ ಬೆಲೆ ಪ್ರತೀ ಲೀ.ಗೆ 100.29 ರು. ಆಗಿದ್ದು, ಪೆಟ್ರೋಲ್‌ ಬೆಲೆ 109.83 ಆಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ಈವರೆಗಿನ ಗರಿಷ್ಠ ಮಟ್ಟತಲುಪಿದ್ದು, ಪ್ರತೀ ಲೀ.ಗೆ 103.84 ರು. ಆಗಿದೆ. ಡೀಸೆಲ್‌ ಬೆಲೆ 92.47 ರು.ಗೆ ಏರಿಕೆ ಕಂಡಿದೆ.

ರಾಜ್ಯದಲ್ಲಿ ಶಿರಸಿಯಲ್ಲೇ ತೈಲ ಬೆಲೆ ಜಾಸ್ತಿ ಏಕೆ?

ಶಿರಸಿಯಲ್ಲಿ 7 ಪೆಟ್ರೋಲ್‌ ಬಂಕ್‌ಗಳಿದ್ದು ಮಂಗಳೂರು ಮತ್ತು ಹುಬ್ಬಳ್ಳಿಯಿಂದ ಇಂಧನ ಪೂರೈಕೆ ಆಗುತ್ತದೆ. ಒಂದೆರಡು ಬಂಕ್‌ಗಳಿಗೆ ಹುಬ್ಬಳ್ಳಿಯಿಂದ ಪೂರೈಕೆಯಾಗುತ್ತಿದೆ. ಆದರೆ, ಹೆಚ್ಚಿನ ಪೆಟ್ರೋಲ್‌ ಡೀಲರ್‌ಗಳು ಮಂಗಳೂರು ಪ್ಯುರಿಫೈ ಕೇಂದ್ರವನ್ನೇ ಆಶ್ರಯಿಸಿದ್ದಾರೆ. ಮಂಗಳೂರಿನಿಂದ 270 ಕಿ.ಮೀ. ದೂರ ಇಂಧನ ಹೊತ್ತ ಲಾರಿಗಳು ಬರಬೇಕಾದ ಹಿನ್ನೆಲೆಯಲ್ಲಿ ಸಾಗಾಣಿಕಾ ವೆಚ್ಚ ಉಳಿದೆಲ್ಲೆಡೆಗಳಿಗಿಂತ ಹೆಚ್ಚಾಗಿದೆ. ಪರಿಣಾಮ ತೈಲ ಬೆಲೆಯಲ್ಲೂ ಏರಿಕೆಯಾಗುತ್ತದೆ. ಈ ಹಿಂದೆ ಪೆಟ್ರೋಲ್‌ ದರವೂ ರಾಜ್ಯದಲ್ಲಿ ಮೊದಲ ಬಾರಿ ಶತಕದ ಗಡಿ ದಾಟಿದ್ದು ಶಿರಸಿಯಲ್ಲೇ ಎಂಬುದನ್ನು ನಾವು ನೆನಪಿಸಿಕೊಳ್ಳಬಹುದು.

click me!