* ಹಣ ಭರ್ತಿ ಮಾಡದ ಬ್ಯಾಂಕ್‌ಗಳ ಮೇಲೆ ದಂಡ ವಿಧಿಸುವ ನಿಯಮ
* ಎಟಿಎಂನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್‌ಗೆ ದಂಡ ವಿಧಿಸುವ ಪ್ರಸ್ತಾವನೆ ಪರಿಶೀಲನೆ: ಆರ್‌ಬಿಐ
ಮುಂಬೈ(ಆ.09): ತಮ್ಮ ವ್ಯಾಪ್ತಿಯ ಎಟಿಎಂ ಮಿಷಿನ್‌ಗಳಿಗೆ(ATM Machine) ನಿರ್ದಿಷ್ಟಸಮಯದಲ್ಲಿ ಹಣ ಭರ್ತಿ ಮಾಡದ ಬ್ಯಾಂಕ್‌ಗಳ ಮೇಲೆ ದಂಡ ವಿಧಿಸುವ ಕುರಿತಾಗಿ ಭಾರತೀಯ ರಿಜರ್ವ್ ಬ್ಯಾಂಕ್(Reserve Bank Of India) ಪರಿಶೀಲನೆ ನಡೆಸುತ್ತಿದೆ.
ಈ ಬಗ್ಗೆ ಶುಕ್ರವಾರ ಮಾತನಾಡಿದ ಆರ್‌ಬಿಐನ ಉಪ ಗವರ್ನರ್ ಟಿ. ರವಿಶಂಕರ್, ‘ಗ್ರಾಮೀಣ ಮತ್ತು ಅರೆ ನಗರದ ಪ್ರದೇಶಗಳಲ್ಲಿರುವ ಎಟಿಎಂಗಳಲ್ಲಿ ಸದಾ ಕಾಲ ಎಟಿಎಂಗಳಲ್ಲಿ(ATM) ಹಣವಿರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಎಟಿಎಂಗಳನ್ನು ಡ್ರೈ ಆಗಿ ಬಿಡುವ ಬ್ಯಾಂಕ್‌ಗಳಿಗೆ ದಂಡ ವಿಧಿಸುವ ಪ್ರಸ್ತಾವನೆ ಮಾಡಲಾಗಿತ್ತು. ಈ ಪ್ರಸ್ತಾವನೆಗೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಅಲ್ಲದೆ ಕೆಲವರು ಕಳವಳವೂ ವ್ಯಕ್ತಪಡಿಸಿದ್ದು, ಎಲ್ಲರ ಅಭಿಪ್ರಾಯಗಳನ್ನು ಪಡೆದು ಉತ್ತಮವಾದದನ್ನು ಅನುಷ್ಠಾನಕ್ಕೆ ತರುತ್ತೇವೆ’ ಎಂದು ಹೇಳಿದರು. ಯಾವುದೇ ಎಟಿಎಂನಲ್ಲಿ ತಿಂಗಳಿಗೆ 10 ಗಂಟೆಗಳ ಕಾಲ ಹಣವಿಲ್ಲದೆ ಹೋದರೆ ಅದಕ್ಕೆ ಸಂಬಂಧಿಸಿದ ಬ್ಯಾಂಕ್‌ಗೆ 10 ಸಾವಿರ ರು. ದಂಡ ವಿಧಿಸುವುದಾಗಿ ಆರ್‌ಬಿಐ ಹೇಳಿತ್ತು.
ಬ್ಯಾಂಕ್‌ನ ಎಟಿಎಂ ಕೇಂದ್ರಗಳಲ್ಲಿ ಹಣವಿಲ್ಲದೆ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ನಿವಾರಿಸಲು ಆರ್‌ಬಿಐ, ಸರಿಯಾದ ಸಮಯಕ್ಕೆ ಎಟಿಎಂ ಕೇಂದ್ರಗಳಿಗೆ ಹಣ ಹಾಕದ ಬ್ಯಾಂಕ್‌ಗಳಿಗೆ ದಂಡ ವಿಧಿಸುವುದಾಗಿ ಆಗಸ್ಟ್‌ನಲ್ಲಿ ಘೋಷಣೆ ಮಾಡಿತ್ತು. ಈ ಕ್ರಮವು ಅ.1ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿತ್ತು.
ಐಎಂಪಿಎಸ್ ಮಿತಿ 2 ಲಕ್ಷ ರೂ.ದಿಂದ 5 ಲಕ್ಷಕ್ಕೇರಿಕೆ
ಇಮ್ಮಿಡಿಯೆಟ್ ಪೇಮೆಂಟ್ ಸವೀರ್‍ಸ್ (Immediate Payment Service) ಅಡಿ ಒಂದು ಸಲಕ್ಕೆ ವರ್ಗಾವಣೆ ಮಾಡಬಹುದಾದ ಹಣದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್(Reserve Bank Of India) 2 ಲಕ್ಷ ರು.ದಿಂದ 5 ಲಕ್ಷ ರು.ಗೆ ಏರಿಕೆ ಮಾಡಿದೆ. ಇಂಟರ್ನೆಟ್ ಬ್ಯಾಂಕಿಂಗ್(Internet Banking), ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳು(Mobile Banking Apps), ಬ್ಯಾಂಕ್ ಶಾಖೆಗಳು, ಎಟಿಎಂ, ಎಸ್‌ಎಂಎಸ್ ಮತ್ತು ಐವಿಆರ್‌ಎಸ್ ಮೂಲಕ ಗ್ರಾಹಕರು ತಮ್ಮ ಖಾತೆಯಿಂದ ಬೇರೊಂದು ಖಾತೆಗೆ ತಕ್ಷಣ ಹಣ ವರ್ಗಾವಣೆ ಮಾಡಲು ಈ ಸೇವೆ ಪಡೆಯಬಹುದು.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India) ಮೂಲಕ ಸರ್ಕಾರ ಒದಗಿಸುತ್ತಿರುವ ಈ ಸೇವೆಗೆ ಇಷ್ಟು ದಿನ ಒಂದು ವ್ಯವಹಾರಕ್ಕೆ 2 ಲಕ್ಷ ರು.ನ ಮಿತಿಯಿತ್ತು. ಅದನ್ನು ಆರ್‌ಬಿಐ(Reserve Bank Of India) ಶುಕ್ರವಾರ 5 ಲಕ್ಷ ರು.ಗೆ ಏರಿಸಿದೆ. ಹೀಗಾಗಿ ದೊಡ್ಡ ಮೊತ್ತದ ಹಣ ವರ್ಗಾವಣೆ ಕೂಡ ಇನ್ನುಮುಂದೆ ಸುಲಭ ಹಾಗೂ ತ್ವರಿತವಾಗಲಿದೆ.
ಬಡ್ಡಿ ದರ ಬದಲಿಲ್ಲ
ಆರ್‌ಬಿಐ ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, ಸತತ 8ನೇ ಬಾರಿಯೂ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಠೇವಣಿಗಳು ಹಾಗೂ ವಿವಿಧ ಸಾಲಗಳಿಗೆ ಈ ಹಿಂದಿನ ಬಡ್ಡಿ ದರಗಳೇ ಮುಂದುವರೆಯಲಿವೆ. ರೆಪೋ ದರ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ) ಶೇ.4ಕ್ಕೆ ಹಾಗೂ ರಿವರ್ಸ್ ರೆಪೋ ದರ (ಬ್ಯಾಂಕುಗಳಿಂದ ಆರ್‌ಬಿಐ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ) ಶೇ.3.35ಕ್ಕೆ ಸ್ಥಿರಗೊಳಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಕಟಿಸಲಾಗಿದ್ದ ಆರ್ಥಿಕ ಉತ್ತೇಜನಾ ಕ್ರಮಗಳನ್ನು ನಿಧಾನವಾಗಿ ಹಿಂಪಡೆಯುವ ಸುಳಿವನ್ನು ಹಣಕಾಸು ನೀತಿಯಲ್ಲಿ ನೀಡಲಾಗಿದೆ.