ಇಪಿಎಫ್ ಪಾಸ್ ಬುಕ್ ನಲ್ಲಿ ಇನ್ನೂ ಬಡ್ಡಿ ಅಪ್ಡೇಟ್ ಆಗದಿದ್ರೆ ಚಿಂತಿಸಬೇಡಿ, ಯಾವುದೇ ನಷ್ಟವಾಗದು: EPFO

By Suvarna NewsFirst Published May 31, 2023, 4:46 PM IST
Highlights

ಇಪಿಎಫ್ ಖಾತೆ ಹೊಂದಿರೋರ ಪಾಸ್ ಬುಕ್ ನಲ್ಲಿ ಬಡ್ಡಿದರದ ಮಾಹಿತಿ ಇನ್ನೂ ಅಪ್ಡೇಟ್ ಆಗದಿದ್ರೆ ಚಿಂತೆ ಮಡಬೇಕಾಗಿಲ್ಲ. ಇದರಿಂದ ಇಪಿಎಫ್ ಸದಸ್ಯರಿಗೆ ಸಿಗುವ ಮೊತ್ತದಲ್ಲಿ ಯಾವುದೇ ನಷ್ಟವಾಗುವುದಿಲ್ಲ ಎಂದು ಇಪಿಎಫ್ ಒ ತಿಳಿಸಿದೆ. ಬಡ್ಡಿ ಹಣವನ್ನು ವರ್ಷದ ಕ್ಲೋಸಿಂಗ್ ಬ್ಯಾಲೆನ್ಸ್ ನ್ಲಿ ಸೇರಿಸಲಾಗುತ್ತದೆ. ಹೀಗಾಗಿ ಪಾಸ್ ಬುಕ್ ಗೆ ನಮೂದಿಸುವಲ್ಲಿ ವಿಳಂಬವಾದರೆ ಚಿಂತಿಸಬೇಕಾದ ಅಗತ್ಯವಿಲ್ಲ ಎಂಬ ಸ್ಪಷ್ಟನೆಯನ್ನು ಇಪಿಎಫ್ ಒ ನೀಡಿದೆ. 
 

ನವದೆಹಲಿ (ಮೇ 31): ವೇತನ ಪಡೆಯುವ ಉದ್ಯೋಗಿ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (ಇಪಿಎಫ್) ಖಾತೆ ಹೊಂದಿರುತ್ತಾರೆ.ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಇಪಿಎಫ್  ಖಾತೆಗೆ ಜಮೆ ಮಾಡಲಾಗುತ್ತದೆ. ಹಾಗೆಯೇ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ಕೂಡ ನಿರ್ದಿಷ್ಟ ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ವರ್ಷ ಬಡ್ಡಿ ನೀಡಲಾಗುತ್ತದೆ. ಇಪಿಎಫ್ ನಿವೃತ್ತಿ ಬದುಕಿನ ಹೂಡಿಕೆ ಯೋಜನೆಯಾಗಿದ್ದು,  ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿರ್ವಹಿಸುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಬೆಂಬಲ ಕೂಡ ಇದೆ. ಪ್ರಸ್ತುತ ಇಪಿಎಫ್ ಖಾತೆಯಲ್ಲಿನ ಹೂಡಿಕೆಗೆ ಶೇ.8.1ರಷ್ಟು ಬಡ್ಡಿದರವಿದೆ. ಬ್ಯಾಂಕ್ ಖಾತೆಗೆ ಹೇಗೆ ಪಾಸ್ ಪುಸ್ತಕ ಸೌಲಭ್ಯವಿರುತ್ತದೋ ಹಾಗೆಯೇ ಇಪಿಎಫ್  ನಲ್ಲಿ ಕೂಡ ಪಾಸ್ ಪುಸ್ತಕ ಇರುತ್ತದೆ. ಇಪಿಎಫ್ ಒ ಪಾಸ್ ಪುಸ್ತಕದಲ್ಲಿ ನೀವು ನೀಡಿದ ಕೊಡುಗೆ, ಬಡ್ಡಿ ಗಳಿಕೆ ಹಾಗೂ ವಿತ್ ಡ್ರಾ ಮಾಹಿತಿಗಳು ಇರುತ್ತವೆ. ನಿಮ್ಮ ಇಪಿಎಫ್ ಖಾತೆಯನ್ನು ಟ್ರ್ಯಾಕ್ ಮಾಡಲು ಪಾಸ್ ಪುಸ್ತಕ ಅತೀಮುಖ್ಯ ದಾಖಲೆಯಾಗಿದೆ. ಇದು ಇಪಿಎಫ್ ಖಾತೆಗೆ ನೀವು ಸಮರ್ಪಕವಾಗಿ ಕೊಡುಗೆಗಳನ್ನು ನೀಡುತ್ತಿರುವ ಬಗ್ಗೆ ನಿಮಗೆ ಖಚಿತತೆ ನೀಡುತ್ತದೆ. ಹೀಗಿರುವಾಗ ಕೆಲವು ಸದಸ್ಯರ ಪಾಸ್ ಬುಕ್ ಗೆ ಬಡ್ಡಿದರ ಅಪ್ಡೇಟ್ ಮಾಡುವಲ್ಲಿ ವಿಳಂಬವಾಗಿದ್ದರೆ ಅದಕ್ಕೆ ಚಿಂತೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಇಪಿಎಫ್ ಒ ತಿಳಿಸಿದೆ.

ಇಪಿಎಫ್ ಒ ಪ್ರಕಾರ ಸದಸ್ಯರ ಪಾಸ್ ಪುಸ್ತಕಗಳಲ್ಲಿ ಖಾತೆಗೆ ಜಮೆಯಾದ ಬಡ್ಡಿದರವನ್ನು ಅಪ್ಡೇಟ್ ಮಾಡುವುದು ನಮೂದು ಪ್ರಕ್ರಿಯೆಯಾಗಿದೆ. ಪಾಸ್ ಪುಸ್ತಕದಲ್ಲಿ ಯಾವ ದಿನಾಂಕದಂದು ಬಡ್ಡಿದರ ನಮೂದು ಮಾಡಲಾಯಿತು ಎಂಬುದು ಆ ವ್ಯಕ್ತಿಯ ಇಪಿಎಫ್ ಮೊತ್ತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಸದಸ್ಯರ ತಿಂಗಳ ಇಪಿಎಫ್ ಖಾತೆ ಬ್ಯಾಲೆನ್ಸ್  ಆಧಾರದಲ್ಲಿ ವರ್ಷಕ್ಕೆ ಎಷ್ಟು ಬಡ್ಡಿದರ ಗಳಿಸಿದ್ದಾರೆ ಎಂಬುದನ್ನು ಲೆಕ್ಕ ಹಾಕಿ ಅದನ್ನು ಆ ವರ್ಷದ ಕ್ಲೋಸಿಂಗ್ ಬ್ಯಾಲೆನ್ಸ್ ಗೆ ಸೇರಿಸಲಾಗುತ್ತದೆ. ಹಾಗೆಯೇ ಅದನ್ನು ಮುಂದಿನ ವರ್ಷದ ಓಪನಿಂಗ್ ಬ್ಯಾಲೆನ್ಸ್ ಆಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಪಾಸ್ ಪುಸ್ತಕದಲ್ಲಿ ಬಡ್ಡಿ ಅಪ್ಡೇಟ್ ಮಾಡುವಾಗ ಯಾವುದೇ ವಿಳಂಬವಾದ್ರೆ ಆ ಸದಸ್ಯನಿಗೆ ಯಾವುದೇ ಹಣಕಾಸಿನ ನಷ್ಟವಾಗುವುದಿಲ್ಲ. ಹಾಗೆಯೇ ಪಾಸ್ ಪುಸ್ತಕದಲ್ಲಿ ಬಡ್ಡಿ ಅಪ್ಡೇಟ್ ಆಗುವ ಮುನ್ನ ಸದಸ್ಯ ಇಪಿಎಫ್ ಬಾಕಿಯನ್ನುವಿತ್ ಡ್ರಾ ಮಾಡಿದ್ದರೂ ಕ್ಲೇಮ್ ಸೆಟ್ಲಮೆಂಟ್ ಸಮಯದಲ್ಲಿ ಬಾಕಿಯ ಬಡ್ಡಿ ಲೆಕ್ಕ ಹಾಕಲಾಗುತ್ತದೆ ಹಾಗೂ ಬಾಕಿ ದಿನಾಂಕದಿಂದ ಅದನ್ನು ಪಾವತಿಸಲಾಗುತ್ತದೆ. 

Frequently asked question and it’s answer related to updation of member passbook with interest. pic.twitter.com/35zAVObhi2

— EPFO (@socialepfo)

ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಅಡಿಯಲ್ಲಿ ಇಪಿಎಫ್ ಒ ಕಾರ್ಯನಿರ್ವಹಿಸುತ್ತದೆ.  ಉದ್ಯೋಗಿಗಳ ಭವಿಷ್ಯ ನಿಧಿ, ಪಿಂಚಣಿ ಹಾಗೂ ವಿಮಾ ಯೋಜನೆಗಳನ್ನು ಇಪಿಎಫ್ ಒ ನಿರ್ವಹಣೆ ಮಾಡುತ್ತದೆ. ಇನ್ನು ಇಪಿಎಫ್ ಒ ತನ್ನ ಸದಸ್ಯರಿಗೆ ಆನ್ ಲೈನ್ ನೋಂದಣಿ, ಖಾತೆ ಬ್ಯಾಲೆನ್ಸ್ ಚೆಕ್ ಹಾಗೂ ಕ್ಲೇಮ್ ಸೆಟ್ಲಮೆಂಟ್ ಸೇರಿದಂತೆ ವಿವಿಧ ಆನ್ ಲೈನ್ ಸೇವೆಗಳನ್ನು ಒದಗಿಸುತ್ತದೆ. ಇದು ಆನ್ ಲೈನ್ ಪೋರ್ಟಲ್ ಹೊಂದಿದ್ದು, ಇದರ ಮೂಲಕ ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ತಮ್ಮ ಖಾತೆಗಳನ್ನು ಪರಿಶೀಲಿಸಬಹುದು. ಹಾಗೆಯೇ ವಿವಿಧ ಸೇವೆಗಳನ್ನು ಪಡೆಯಬಹುದು. 

ಇಪಿಎಫ್ಒ ಪಾಸ್ ಬುಕ್
ನೀವು ಇಪಿಎಫ್ ಒ ವೆಬ್ ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಇಪಿಎಫ್ ಒ ಪಾಸ್ ಬುಕ್ ಅನ್ನು ಆನ್ ಲೈನ್ ನಲ್ಲಿ ಪರಿಶೀಲಿಸಬಹುದು. ಆದರೆ, ಇದಕ್ಕೆ ನಿಮಗೆ ಯುನಿವರ್ಸಲ್ ಖಾತೆ ಸಂಖ್ಯೆ (UAN) ಹಾಗೂ ಪಾಸ್ ವರ್ಡ್ ತಿಳಿದಿರಬೇಕು. ಒಮ್ಮೆ ನೀವು ಲಾಗಿನ್ ಆದ್ರೆ ಸಾಕು, 'ಪಾಸ್ ಬುಕ್' ಟ್ಯಾಬ್ ಮೇಲೆ ಕ್ಲಿಕ್ ಮಾಡುವ ಮೂಲಕ ಪಾಸ್ ಪುಸ್ತಕವನ್ನು ನೋಡಬಹುದು. 

ಇಪಿಎಫ್ ಅಧಿಕ ಪಿಂಚಣಿ ಅರ್ಜಿಯಲ್ಲಿ ತಪ್ಪಿದ್ರೆ ಚಿಂತೆ ಬೇಡ ; EPFO ಪೋರ್ಟಲ್ ನಲ್ಲಿ ಈಗ ಡಿಲೀಟ್ ಬಟನ್ ಲಭ್ಯ

ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?
ಇಪಿಎಫ್ಒ (EPFO) ಪೋರ್ಟಲ್‌ನಲ್ಲೇ ನಿಮ್ಮ ಸಕ್ರಿಯ ಯುನಿವರ್ಸಲ್ ಅಕೌಂಟ್ ನಂಬರ್ (UAN) ಬಳಸಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಅಷ್ಟೇ ಅಲ್ಲ, ಇ-ಪಾಸ್ ಬುಕ್ ಡೌನ್ ಲೋಡ್ ಮಾಡಬಹುದು ಹಾಗೂ ಪ್ರಿಂಟ್ ಕೂಡ ತೆಗೆಯಬಹುದು. 
-ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಮೊದಲಿಗೆ ನೀವು www.epfindia.gov.in ಭೇಟಿ ನೀಡಿ. ‘Our Services’ಅಡಿಯಲ್ಲಿ ‘For Employees’ಆಯ್ಕೆ ಮೇಲೆ ಕ್ಲಿಕ್ ಮಾಡಿ.
-‘Services’ಆಯ್ಕೆ ಅಡಿಯಲ್ಲಿ ‘Member Passbook’ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ಯುಎಎನ್ ಸಂಖ್ಯೆ (UAN) ಹಾಗೂ ಪಾಸ್ ವರ್ಡ್ ನಮೂದಿಸಿದರೆ ನಿಮ್ಮ ಪಾಸ್ ಬುಕ್ ಕಾಣಿಸುತ್ತದೆ.
 

click me!