
ಎಳೆ ನೀರು ಇರಲಿ ಇಲ್ಲ ಜ್ಯೂಸ್ ಇರಲಿ, ನಾವು ಅಂಗಡಿಗೆ ಹೋದಾಗ ಹಾಗೆ ಕುಡಿಯೋದಿಲ್ಲ. ಸ್ಟ್ರಾ ಇದ್ಯಾ ಅಂತಾ ಕೇಳ್ತೇವೆ. ಹಿಂದೆ ನಮ್ಮಲ್ಲಿ ಪ್ಲಾಸ್ಟಿಕ್ ಸ್ಟ್ರಾಗಳ ಹಾವಳಿ ಹೆಚ್ಚಿತ್ತು. ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ಬಳಕೆ ನಮ್ಮ ಆರೋಗ್ಯದ ಮೇಲೂ ಸಾಕಷ್ಟು ಕೆಟ್ಟ ಪರಿಣಾಮ ಬೀರ್ತಿದೆ ಎನ್ನುವ ಕಾರಣಕ್ಕೆ ಕಳೆದ ಜುಲೈನಲ್ಲಿ ಪ್ಲಾಸ್ಟಿಕ್ ಸ್ಟ್ರಾ ಸೇರಿದಂತೆ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಈ ನಿಷೇದದ ನಂತ್ರ ಪೇಪರ್ ಸ್ಟ್ರಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದ್ರೆ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡುವ ಮೊದಲೇ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯ ಸಹ ಪ್ರಾಧ್ಯಾಪಕ ಸಾಜಿ ವರ್ಗೀಸ್ ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ಹೊಸ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ.
ಸಾಜಿ ವರ್ಗೀಸ್ (Saji Varghese), ತೆಂಗಿನ ಗರಿಗಳಿಂದ ಸ್ಟ್ರಾ (Straw) ಗಳನ್ನು ತಯಾರಿಸುತ್ತಿದ್ದಾರೆ. ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಹಲವಾರು ಒಣಗಿದ ತೆಂಗಿನ ಗರಿಗಳನ್ನು ನೋಡಿದ ಅವರು ಅದನ್ನು ಸದ್ಬಳಕೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ರು. ತೆಂಗಿನ ಗರಿಗಳಿಂದ ಸ್ಟ್ರಾಗಳನ್ನು ತಯಾರಿಸುವ ಆಲೋಚನೆ ಅವರಿಗೆ ಬಂತು.
ಆಸಕ್ತಿಕರವಾಗಿದೆ 107 ವರ್ಷದಿಂದ ಮಾರ್ಕೆಟ್‌ನಲ್ಲಿರುವ ಸೋಪ್ ಇತಿಹಾಸ
ಅಕ್ಟೋಬರ್ 3, 2017ರಂದು ಕ್ಯಾಂಪಸ್ ನಲ್ಲಿ ನಡೆದು ಹೋಗ್ತಿದ್ದಾಗ ಒಣಗಿದ ತೆಂಗಿನ ಗರಿಯನ್ನು ಕೈನಲ್ಲಿ ಹಿಡಿದ ಸಾಜಿ ವರ್ಗೀಸ್, ಇದು ಸ್ಟ್ರಾ ರೀತಿಯಲ್ಲೇ ಇದೆ ಎಂಬುದನ್ನು ಮನಗಂಡರು. ಪ್ರತಿ ವರ್ಷ ತೆಂಗಿನ ಮರವು ನೈಸರ್ಗಿಕವಾಗಿ ತನ್ನ ಆರು ಎಲೆಗಳನ್ನು ಕಳೆದುಕೊಳ್ಳುತ್ತದೆ. ಅವುಗಳನ್ನು ವಿಲೇವಾರಿ ಮಾಡುವುದು ಕಷ್ಟ. ಹಳ್ಳಿಗಳಲ್ಲಿ ಇವುಗಳ ಕಡ್ಡಿ ತೆಗೆದು ಪೊರಕೆ ಮಾಡ್ತಾರೆ. ಉಳಿದಿದ್ದನ್ನು ಬೆಂಕಿಗೆ ಹಾಕಿ ಸುಡುತ್ತಾರೆ ಎಂಬುದನ್ನು ತಿಳಿದಿದ್ದ ವರ್ಗೀಸ್, ಪರಿಸರ ಸ್ನೇಹಿ ಉತ್ಪನ್ನ ತಯಾರಿಸಲು ನಿರ್ಧರಿಸಿದ್ರು. ವರ್ಗೀಸ್, ಕೇವಲ ಎರಡು ವರ್ಷಗಳಲ್ಲಿ ವಿಶಿಷ್ಟ ತೆಂಗಿನ ಎಲೆಗಳ ಸ್ಟ್ರಾಗಳನ್ನು ಅಭಿವೃದ್ಧಿಪಡಿಸಿದರು. ಸಾಜಿ ವರ್ಗೀಸ್ ಅವರ ಪ್ರಕಾರ, ಬಿದ್ದ ತೆಂಗಿನಕಾಯಿಯ ಎಲೆಯಿಂದ ಸುಮಾರು 200 ಸ್ಟ್ರಾಗಳನ್ನು ತಯಾರಿಸಬಹುದು.
ವಿಶ್ವದ ಎರಡನೇ ಅತಿದೊಡ್ಡ ಕಂಪನಿ CEO ಭಾರತೀಯ, ಈ ಜಾಗತಿಕ ಐಕಾನ್‌ಗೂ ಕರ್ನಾಟಕಕ್ಕೂ ಇದೆ ನಂಟು!
ರಾಸಾಯನಿಕ ಮುಕ್ತ ಪ್ರಕ್ರಿಯೆಯನ್ನು ಬಳಸಿ ಸ್ಟ್ರಾ ತಯಾರಿಸಲಾಗುತ್ತಿದೆ. ಶೇಕಡಾ 100 ರಷ್ಟು ಜೈವಿಕ ವಿಘಟನೀಯವಾಗಿರುವ ಈ ಸ್ಟ್ರಾವನ್ನು ಮೂರು ಗಂಟೆಗಳವರೆಗೆ ಯಾವುದೇ ಪಾನೀಯದಲ್ಲಿ ಬಳಸಬಹುದು.
ಪೇಪರ್ ಸ್ಟ್ರಾ ಪರಿಸರ ಸ್ನೇಹಿಯಲ್ಲ. ಇನ್ನು ಬಿದಿರಿನ ಸ್ಟ್ರಾಗಳು ದುಬಾರಿ ಎನ್ನುತ್ತಾರೆ ಸಾಜಿ. ಬಿದುರಿನ ಸ್ಟ್ರಾ ತಯಾರಿಸಲು 30 ರೂಪಾಯಿಗಿಂತ ಹೆಚ್ಚು ವೆಚ್ಛವಾಗುತ್ತದೆ. ಅದೇ ಒಂದು ತೆಂಗಿನ ಸ್ಟ್ರಾ ತಯಾರಿಸಲು 1.2 ರಿಂದ 2 ರೂಪಾಯಿ ವೆಚ್ಚವಾಗುತ್ತದೆ.
ಹಿಂದೆ ಇವರು 45 ಸೆಕೆಂಡ್ ನಲ್ಲಿ ಒಂದು ಸ್ಟ್ರಾ ತಯಾರಿ ಮಾಡ್ತಿದ್ದರಂತೆ. ಆದ್ರೀಗ ಒಂದು ನಿಮಿಷದಲ್ಲಿ 60 ಸ್ಟ್ರಾ ತಯಾರಿಸ್ತಾರಂತೆ. ಅವರು ಹಳ್ಳಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡಿ, ಸ್ಟ್ರಾ ತಯಾರಿಸಿ, ಮಹಿಳೆಯರಿಗೆ ಉದ್ಯೋಗ ನೀಡ್ತಿದ್ದಾರೆ. ಹಳ್ಳಿಗಳಲ್ಲಿ ತೆಂಗಿನ ಎಲೆಗಳು ಸುಲಭವಾಗಿ ಸಿಗುತ್ತದೆ. ಅದನ್ನು ಸಂಗ್ರಹಿಸಿ ಕೆಲ ಮಶಿನ್ ಬಳಸಿ ಸ್ಟ್ರಾ ತಯಾರಿಸಲಾಗುತ್ತದೆ. ಸ್ಟ್ರಾಗಳನ್ನು ತಯಾರಿಸಲು ಕೇರಳ, ತಮಿಳುನಾಡು ಮತ್ತು ಕರ್ನಾಟಕದ 100 ಗ್ರಾಮೀಣ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ವರ್ಗೀಸ್ ಅವರ ಸ್ಟ್ರಾಗಳು ಸನ್ ಬರ್ಡ್ ಸ್ಟ್ರಾ ಹೆಸರಿನಲ್ಲಿ ಮಾರಾಟವಾಗ್ತಿವೆ.
ಪರಿಸರ ಸ್ನೇಹಿ ಈ ಸ್ಟ್ರಾಗಳು ಈಗಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿವೆ. ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ 25 ಕ್ಕೂ ಹೆಚ್ಚು ದೇಶಗಳಿಂದ ತೆಂಗಿನ ಎಲೆ ಸ್ಟ್ರಾಗಳಿಗೆ ಆರ್ಡರ್ ಬಂದಿದೆ. ಐಐಟಿ ದೆಹಲಿಯಿಂದ ಸಾಜಿ, 2018ರಲ್ಲಿ ಸ್ವದೇಶಿ ಸ್ಟಾರ್ಟ್ ಅಪ್ ಅವಾರ್ಡನ್ನು ಪಡೆದಿದ್ದಾರೆ. ಸನ್ ಬರ್ಡ್ ಸ್ಟ್ರಾ ನಿಮಗೆ ಆನ್ಲೈನ್ ನಲ್ಲೂ ಲಭ್ಯವಿದೆ. ಬೇರೆ ಬೇರೆ ಅಳತೆಯ ಸ್ಟ್ರಾ ಬೆಲೆ ಬೇರೆ ಬೇರೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.