*ತಾಳೆ ಎಣ್ಣೆ, ಸೂರ್ಯಕಾಂತಿ ಹಾಗೂ ಸೋಯಾಬಿನ್ ಎಣ್ಣೆ ಬೆಲೆ ಇಳಿಕೆ
*ತಾಳೆ ಎಣ್ಣೆ ಬೆಲೆ ಪ್ರತಿ ಲೀಟರ್ ಗೆ 7-8ರೂ. ಇಳಿಕೆ
*ಪ್ರತಿ ಲೀಟರ್ ಗೆ 10-15ರೂ. ತಗ್ಗಿದ ಸೂರ್ಯಕಾಂತಿ ಎಣ್ಣೆ
*ಸೋಯಾಬಿನ್ ಎಣ್ಣೆ ಬೆಲೆಯಲ್ಲಿ ಕೂಡ 5ರೂ. ಕಡಿತ
ನವದೆಹಲಿ (ಜೂ.16): ಬ್ರ್ಯಾಂಡೆಡ್ ತಾಳೆ ಎಣ್ಣೆ (Palm Oil),ಸೂರ್ಯಕಾಂತಿ (Sunflower) ಹಾಗೂ ಸೋಯಾಬಿನ್ ಎಣ್ಣೆ (Soybean Oil) ಬೆಲೆಯಲ್ಲಿ (Price) ಪ್ರತಿ ಲೀಟರ್ ಗೆ 15ರೂ. ಇಳಿಕೆಯಾಗಿದೆ. ತಾಳೆ ಎಣ್ಣೆ ಬೆಲೆ ಪ್ರತಿ ಲೀಟರ್ ಗೆ 7-8ರೂ. ತಗ್ಗಿದೆ. ಇನ್ನು ಸೂರ್ಯಕಾಂತಿ ಎಣ್ಣೆ ದರದಲ್ಲಿ ಕೂಡ ಪ್ರತಿ ಲೀಟರ್ ಗೆ 10-15ರೂ. ಇಳಿಕೆ ಕಂಡಿದೆ. ಇನ್ನು ಸೋಯಾಬಿನ್ ಎಣ್ಣೆ ಬೆಲೆಯಲ್ಲಿ ಕೂಡ 5ರೂ. ಕಡಿಮೆಯಾಗಿದೆ ಎಂದು ಮಾಧ್ಯಮ ವರದಿ ಹೇಳಿದೆ. ಜಾಗತಿಕ ಮಟ್ಟದಲ್ಲಿ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶದಲ್ಲಿ ಕೂಡ ತೈಲ ದರ ತಗ್ಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಾರತೀಯ ವನಸ್ಪತಿ ತೈಲ ಉತ್ಪಾದಕರ ಸಂಘಟನೆಗಳ ಅಧ್ಯಕ್ಷ ಸುಧಾಕರ್ ರಾವ್ ದೇಸಾಯಿ 'ತೈಲ ಬೆಲೆ ಇಳಿಕೆಯು ಹೆಚ್ಚಿನ ಪ್ರಮಾಣದಲ್ಲಿ ತೈಲ ಸಂಗ್ರಹ ಮಾಡಲು ವಿತರಕರಿಗೆ ಪ್ರಚೋದನೆ ನೀಡಿದ್ದು, ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಖಾದ್ಯ ತೈಲ ಬೆಲೆ ಇಳಿಕೆಯು ಆಹಾರ ಹಣದುಬ್ಬರದ ಮೇಲೆ ಕೂಡ ಪರಿಣಾಮ ಬೀರಲಿದೆ. ಆಹಾರ ಹಣದುಬ್ಬರ ಏರಿಕೆಯಲ್ಲಿ ಖಾದ್ಯ ತೈಲ ಬೆಲೆ ಬಹುಮುಖ್ಯ ಪಾತ್ರ ವಹಿಸಿದೆ. ಮೇನಲ್ಲಿ ಖಾದ್ಯ ತೈಲ ಹಾಗೂ ಕೊಬ್ಬು ವರ್ಗಗಳಡಿಯಲ್ಲಿ ಹಣದುಬ್ಬರ ಶೇ.13.26ರಷ್ಟು ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಖಾದ್ಯ ತೈಲ ಬೆಲೆಯಲ್ಲಿ ಏರಿಕೆಯಾಗಿರೋದೇ ಈ ಹೆಚ್ಚಳಕ್ಕೆ ಕಾರಣವಾಗಿದೆ' ಎಂದು ಹೇಳಿದ್ದಾರೆ.
Credit Card:ಆಫರ್ ಗೆ ಮರುಳಾಗಿ ಕ್ರೆಡಿಟ್ ಕಾರ್ಡ್ ಕೊಳ್ಳಬೇಡಿ; ಈ 5 ವಿಷಯಗಳನ್ನು ಮರೆಯದೆ ವಿಚಾರಿಸಿ
ಹೈದರಾಬಾದ್ (Hyderabad) ಮೂಲದ ಜೆಮಿನಿ ಖಾದ್ಯ ತೈಲ ಕಂಪನಿಯು (Gemini Edibles & Fats) ಫ್ರಿಡಂ ಸನ್ ಫ್ಲವರ್ ಎಣ್ಣೆ (Freedom Sunflower Oil) ಎಂಆರ್ ಪಿಯಲ್ಲಿ (MRP) 15ರೂ. ಕಡಿತಗೊಳಿಸಿದ್ದು, ಕಳೆದ ವಾರ ಒಂದು ಲೀಟರ್ ಪ್ಯಾಕೆಟ್ ಬೆಲೆ 220ರೂ. ತಲುಪಿತ್ತು. ಈ ವಾರ ಕೂಡ ಕಂಪನಿಯು ಬೆಲೆಯಲ್ಲಿ ಮತ್ತೆ 20ರೂ. ಇಳಿಕೆ ಮಾಡಿ ಲೀಟರ್ ಗೆ 200ರೂ. ಮಾಡುವ ಸಾಧ್ಯತೆಯಿದೆ.
ಈ ನಡುವೆ ಇಂಡೋನೇಷ್ಯಾ (Indonesia) ಖಾದ್ಯ ತೈಲಗಳ ರಫ್ತಿನ ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಭಾರತದ ತಾಳೆ ಎಣ್ಣೆ ಆಮದು ಏಪ್ರಿಲ್ ಗೆ ಹೋಲಿಸಿದ್ರೆ ಮೇನಲ್ಲಿ ಶೇ.10ರಷ್ಟು ಇಳಿಕೆ ಕಂಡಿತ್ತು. ಭಾರತ ಏಪ್ರಿಲ್ ನಲ್ಲಿ 5,72,508 ಟನ್ ಗಳಷ್ಟು ತಾಳೆ ಎಣ್ಣೆ ಆಮದು ಮಾಡಿಕೊಂಡಿದ್ದರೆ ಮೇನಲ್ಲಿ 5,14,022 ಟನ್ಸ್ ಅಷ್ಟೇ ಆಮದು ಮಾಡಿಕೊಂಡಿದೆ.
ಭಾರತವು ಜಗತ್ತಿನ ಅತೀದೊಡ್ಡ ತಾಳೆ ಎಣ್ಣೆ ಆಮದು ರಾಷ್ಟ್ರವಾಗಿದ್ದು, ಪೂರೈಕೆಗೆ ಇಂಡೋನೇಷ್ಯಾ ಹಾಗೂ ಮಲೇಷ್ಯಾವನ್ನು ಅವಲಂಬಿಸಿದೆ. ಪ್ರತಿ ವರ್ಷ ಭಾರತ 13.5 ಮಿಲಿಯನ್ ಟನ್ಸ್ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ 8-8.5 ಮಿಲಿಯನ್ ಟನ್ಸ್ (ಸುಮಾರು ಶೇ.63) ತಾಳೆ ಎಣ್ಣೆಯಾಗಿದೆ. ಈಗ ಶೇ.45ರಷ್ಟನ್ನು ಇಂಡೋನೇಷ್ಯಾ ಹಾಗೂ ಉಳಿದ ಭಾಗವನ್ನು ನೆರೆಯ ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತ ಪ್ರತಿ ವರ್ಷ ಸರಿಸುಮಾರು 4 ಮಿಲಿಯನ್ ಟನ್ ಗಳಷ್ಟು ತಾಳೆ ಎಣ್ಣೆಯನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ.
ಸುಲಭ ವ್ಯವಹಾರ ಶುರು ಮಾಡಿ ತಿಂಗಳಿಗೆ ಗಳಿಸಿ 80 ಸಾವಿರ ಗಳಿಸಿ
ಏಪ್ರಿಲ್ ನಲ್ಲಿ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತಿಗೆ ನಿರ್ಬಂಧ ವಿಧಿಸಿತ್ತು. ಕಚ್ಚಾ ತಾಳೆ ಎಣ್ಣೆ ರಫ್ತಿಗೆ ಈ ನಿರ್ಬಂಧ ಅನ್ವಯಿಸಿರಲಿಲ್ಲ. ಕೇವಲ ರಿಫೈನ್ಡ್, ಬ್ಲೀಚ್ಡ್ ತಾಳೆ ಎಣ್ಣೆಗೆ ಮಾತ್ರ ಇದು ಅನ್ವಯಿಸಿತ್ತು. ಸುಮಾರು ಒಂದು ತಿಂಗಳ ಬಳಿಕ ಅಂದ್ರೆ ಮೇ 23ರಂದು ಇಂಡೋನೇಷ್ಯಾ ನಿರ್ಬಂಧವನ್ನು ಹಿಂಪಡೆದಿತ್ತು. ಇದ್ರಿಂದ ಭಾರತಕ್ಕೆ ಖಾದ್ಯ ತೈಲ ಪೂರೈಕೆ ಸ್ಥಗಿತಗೊಂಡಿತ್ತು. ಪರಿಣಾಮ ಬೆಲೆಯಲ್ಲಿ ಏರಿಕೆಯಾಗಿತ್ತು. ಇದ್ರಿಂದ ತಾಳೆ ಎಣ್ಣೆಯನ್ನು ಬಳಕೆ ಮಾಡುವ ಆಹಾರ ಉತ್ಪನ್ನಗಳು, ಡಿಟರ್ಜೆಂಟ್ ಗಳು, ಕಾಸ್ಮೆಟಿಕ್ಸ್ ಹಾಗೂ ಜೈವಿಕ ಇಂಧನಗಳ ಬೆಲೆಯಲ್ಲಿ ಕೂಡ ಹೆಚ್ಚಳವಾಗಿತ್ತು. ಸೋಪು, ಶ್ಯಾಂಪು, ನೂಡಲ್ಸ್, ಬಿಸ್ಕೆಟ್ಸ್, ಚಾಕೋಲೇಟ್ಸ್ ಸೇರಿದಂತೆ ನಿತ್ಯ ಬಳಕೆ ಅನೇಕ ವಸ್ತುಗಳು ದುಬಾರಿಯಾಗಿದ್ದವು.