ನವದೆಹಲಿ(ಜೂ.24): ಭಾರತೀಯ ಬ್ಯಾಂಕ್‌ಗಳಿಗೆ 22585 ಕೋಟಿ ರು. ವಂಚಿಸಿ ವಿದೇಶಗಳಿಗೆ ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೇಹುಲ್ ಚೋಕ್ಸಿಯಿಂದ ಈವರೆಗೆ 9000 ಕೋಟಿ ರು.ಗಳನ್ನು ವಸೂಲಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ಮಲ್ಯ ಮಾಡಿರುವ 9000 ಕೋಟಿ ರು.ಸಾಲ ವಸೂಲಿ ಸಂಬಂಧ ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯವು, ಯುಬಿಎಲ್ ಗ್ರೂಪ್‌ನಲ್ಲಿ ಮಲ್ಯ ಹೊಂದಿದ್ದ 6624 ರು. ಮೌಲ್ಯದ ಷೇರುಗಳನ್ನು ಜಪ್ತಿ ಮಾಡಿತ್ತು. ಆ ಪೈಕಿ ಇದೀಗ 5800 ಕೋಟಿ ರು. ಮೌಲ್ಯದ ಷೇರು ಮಾರಾಟ ಮಾಡಲಾಗಿದೆ.
7.5 ಲಕ್ಷ ಕೋಟಿ ರು ದಾನ: ಜೆಮ್‌ಶೆಡ್ ಜೀ ವಿಶ್ವ ನಂ.1
ಈ ಮೂಲಕ ಮಲ್ಯ, ನೀಮೋ ಮತ್ತು ಚೋಕ್ಸಿಯಿಂದ ಈವರೆಗೆ ವಸೂಲಾದ ಸಾಲದ ಮೊತ್ತ 9041ಕೋಟಿ ರು.ಗೆ ತಲುಪಿದೆ. ಅಂದರೆ ಒಟ್ಟು ಸಾಲದಲ್ಲಿ ಶೇ.40ರಷ್ಟನ್ನು ವಸೂಲು ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಮಲ್ಯಗೆ ಸೇರಿದ ಬಾಕಿ 800 ಕೋಟಿ ರು. ಮೌಲ್ಯದ ಷೇರುಗಳನ್ನು ಜೂ.25ರಂದು ಮಾರಾಟ ಮಾಡುವ ಸಾಧ್ಯತೆ ಇದೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಪ್ರಕರಣದಲ್ಲಿ ಮಲ್ಯ, ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳಿಗೆ ಅಂದಾಜು 9000 ಕೋಟಿ ರು.ವಂಚಿಸಿದ್ದರೆ, ಪಿಎನ್‌ಬಿ ಪ್ರಕರಣದಲ್ಲಿ ನೀರವ್ ಮೋದಿ ಮತ್ತು ಮೇಹುಲ್ ಚೋಕ್ಸಿ 13000 ಕೋಟಿ ವಂಚನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ತನಿಖಾ ಸಂಸ್ಥೆಗಳು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಮೂವರಿಗೆ ಸೇರಿದ 18170 ಕೋಟಿ ರು.ಮೌಲ್ಯದ ಷೇರು, ಸ್ಥಿರ, ಚರಾಸ್ತಿಗಳನ್ನು ವಶಪಡಿಸಿಕೊಂಡಿವೆ. ಹೀಗೆ ವಶಪಡಿಸಿಕೊಂಡ ಆಸ್ತಿಯ ಮೌಲ್ಯವು ಒಟ್ಟು ಸಾಲದಲ್ಲಿ ಶೇ.80.45ರಷ್ಟಯ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಸದ್ಯ ಮಲ್ಯ ಬ್ರಿಟನ್‌ನಲ್ಲಿ, ನೀರವ್ ಮೋದಿ ಲಂಡನ್ ಜೈಲಿನಲ್ಲಿ ಮತ್ತು ಮೇಹುಲ್ ಚೋಕ್ಸಿ ಆ್ಯಂಟಿಗುವಾದಿಂದ ಪರಾರಿಯಾಗಿ ಡೊಮಿನಿಕ್ ದೇಶದ ಪೊಲೀಸರ ವಶದಲ್ಲಿದ್ದಾನೆ.
ಆನ್‌ಲೈನ್‌ನಲ್ಲೇ ಪರ್ಸನಲ್ ಲೋನ್ ಸೌಲಭ್ಯ; ಯಾವೆಲ್ಲ ದಾಖಲೆಗಳು ಅಗತ್ಯ?
ಈ ನಡುವೆ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ದೇಶಭ್ರಷ್ಟರು ಮತ್ತು ಆರ್ಥಿಕ ಅಪರಾಧಿಗಳ ವಿರುದ್ಧ ಎಲ್ಲಾ ಕ್ರಮ ಕೈಗೊಳ್ಳಲಾಗುವುದು, ಅವರ ಆಸ್ತಿಯನ್ನು ಜಪ್ತಿ ಮಾಡಿಕೊಂಡು ಬಾಕಿ ವಸೂಲಿ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.