
ನವದೆಹಲಿ (ಜೂ.28): ಬೇಸಿಗೆಯ ಕಡುಬಿಸಿಲಿನ ಹೊರತಾಗಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದ ರಾಜಧಾನಿಯಲ್ಲಿ ಬಿಯರ್ ಮಾರಾಟದಲ್ಲಿ ಶೇ.52ರಷ್ಟು ಇಳಿಕೆಯಾಗಿದೆ. ವರದಿಗಳ ಪ್ರಕಾರ ಈ ವರ್ಷದ ಮೇನಲ್ಲಿ ನವದೆಹಲಿಯಲ್ಲಿ 8.3ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಅದೇ ಕಳೆದ ವರ್ಷದ ಮೇನಲ್ಲಿ 17.3 ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಯರ್ ಮಾರಾಟದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಇಳಿಕೆಯಾಗಿದೆ. ದೆಹಲಿಯಲ್ಲಿ ಬಿಯರ್ ಮಾರಾಟದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವೇನು ಎಂಬುದನ್ನು ದೆಹಲಿ ಸರ್ಕಾರದ ಅಬಕಾರಿ ಇಲಾಖೆ ವಿವರಿಸಿದ್ದು, ತಾಪಮಾನದಲ್ಲಿ ವಿಪರೀತ ಏರಿಕೆಯಾಗಿರುವ ಕಾರಣದಿಂದ ಜನರು ಬಿಯರ್ ಕುಡಿಯೋದನ್ನು ಕಡಿಮೆ ಮಾಡಿರುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಈ ವರ್ಷದ ಮೇ 31ರ ತನಕ ಒಟ್ಟು 16 ದಿನಗಳ ಕಾಲ ದೆಹಲಿಯಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.
ಇನ್ನು ಮದ್ಯ ಕೈಗಾರಿಕಾ ಸಂಸ್ಥೆಗಳ ಮೂಲಗಳ ಪ್ರಕಾರ ಬಿಯರ್ ಮಾರಾಟದಲ್ಲಿ ಇಳಿಕೆಯಾಗಲು ಅನೇಕ ಕಾರಣಗಳಿವೆ. ಬ್ರ್ಯಾಂಡ್ ಉತ್ತೇಜನೆಯ ಕೊರತೆ, ಹಾಗೆಯೇ ಕಡಿಮೆ ವಿಧದ ಬ್ರ್ಯಾಂಡ್ ಗಳು, ಶಾಪ್ ಗಳಲ್ಲಿ ತಣ್ಣನೆಯ ಬಿಯರ್ ಆಯ್ಕೆ ಇಲ್ಲದಿರೋದು, ಮಳಿಗೆಗಳಲ್ಲಿ ಸ್ಟಾಕ್ ಕಡಿಮೆಯಾಗಿರೋದು ಹಾಗೂ ಬಿಯರ್ ಕಂಪನಿಗಳು ಅಧಿಕ ಮಾರ್ಜಿನ್ ನಲ್ಲಿ ರಾಜ್ಯಕ್ಕೆ ಬಿಯರ್ ಪೂರೈಕೆ ಮಾಡುತ್ತಿರೋದೆ ಬಿಯರ್ ಮಾರಾಟದಲ್ಲಿ ಇಳಿಕೆಗೆ ಕಾರಣಗಳಾಗಿವೆ ಎಂದು ಹೇಳಿದೆ.
ಕಾಂಗ್ರೆಸ್ ಉಚಿತ ಯೋಜನೆಗೆ ಹೈರಾಣಾದ ಜನ, ನಿನ್ನೆಯಿಂದ ಬಿಯರ್ ಬೆಲೆ ಶೇ.20 ರಷ್ಟು ಹೆಚ್ಚಳ!
2023ನೇಸಾಲಿನ ಮೊದಲ ಐದು ತಿಂಗಳಲ್ಲಿ ದೆಹಲಿಯಲ್ಲಿ 3.11ಲಕ್ಷ ಲೀಟರ್ ಬಿಯರ್ ಮಾರಾಟವಾಗಿತ್ತು. ಈ ಪ್ರಮಾಣ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.43ರಷ್ಟು ಕಡಿಮೆ. 2022ನೇ ಸಾಲಿಗೆ ಹೋಲಿಸಿದರೆ ಬಿಯರ್ ಮಾರಾಟದಲ್ಲಿ ಈ ವರ್ಷ ಶೇ.40ರಷ್ಟು ಇಳಿಕೆಯಾಗಿದೆ. ದೆಹಲಿಯಲ್ಲಿ 574 ಮದ್ಯ ಮಾರಾಟ ಶಾಪ್ ಗಳು ಹಾಗೂ 900 ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಹಾಗೂ ಕ್ಲಬ್ ಗಳಿವೆ.
ದೆಹಲಿಯಲ್ಲಿ ಕಡುಬೇಸಿಗೆಯಲ್ಲಿ ಒಟ್ಟು ಮದ್ಯ ಮಾರಾಟದಲ್ಲಿ ಬಿಯರ್ 1/3ರಷ್ಟು ಪಾಲು ಹೊಂದಿದೆ. ಆದರೆ, ಮದ್ಯ ಮಾರಾಟಗಾರರ ಪ್ರಕಾರ ದೆಹಲಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಬಿಯರ್ ಮಾರಾಟಕ್ಕೆ ಅವಕಾಶಗಳಿವೆ. ಪ್ರತಿವರ್ಷ ಸರಿಸುಮಾರು ಆರು ತಿಂಗಳ ಕಾಲ ದೆಹಲಿಯಲ್ಲಿ ತುಂಬಾ ತಾಪಮಾನ ಹಾಗೂ ಆರ್ದ್ರತೆ ಇರುತ್ತದೆ. ಹೀಗಾಗಿ ಬಿಯರ್ ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, 2022ರ ಮಧ್ಯಭಾಗದಿಂದ ಮದ್ಯ ಮಾರಾಟಕ್ಕೆ ಸಂಬಂಧಿಸಿ ದೆಹಲಿ ಸರ್ಕಾರದ ನೀತಿಗಳಿಂದಾಗಿ ಬಿಯರ್ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಮದ್ಯ ಮಾರಾಟಗಾರರ ಸಂಘಟನೆಗಳು ಆರೋಪಿಸಿವೆ.
ಮಂಗಳೂರಲ್ಲಿ ಬಿಯರ್ ಉತ್ಪಾದನೆಗೆ ತಟ್ಟಿದ ನೀರಿನ ಕೊರತೆ!
ಇನ್ನು ದೆಹಲಿಯಲ್ಲಿ ಬಿಯರ್ ಸ್ಟಾಕ್ ಕಡಿಮೆಯಿರುವ ಕಾರಣ ಗಡಿಯ ಹರಿಯಾಣ ಹಾಗೂ ಉತ್ತರ ಪ್ರದೇಶದಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಖರೀದಿಸುತ್ತಿದ್ದಾರೆ. ಇದರಿಂದ ಆ ರಾಜ್ಯಗಳಲ್ಲಿ ಬಿಯರ್ ಮಾರಾಟದ ಪ್ರಮಾಣದಲ್ಲಿ ವಾರ್ಷಿಕ ಶೇ.15-20ರಷ್ಟು ಏರಿಕೆ ಕಂಡುಬಂದಿದೆ. ದೆಹಲಿಯಲ್ಲಿ ತಾಪಮಾನ ಹೆಚ್ಚಿರುವ ಕಾರಣ ಹಾಗೂ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗಿರಿಧಾಮಗಳು ಹಾಗೂ ಇತರ ತಂಪಾದ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಬಿಯರ್ ಗೆ ಬೇಡಿಕೆ ಕುಂದಿದೆ ಎಂದು ಮದ್ಯ ಕಂಪನಿಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ ಕೆಲವು ಮಳಿಗೆಗಳು ನಿರ್ದಿಷ್ಟ ಬ್ರ್ಯಾಂಡ್ ಗಳ ಮಾರಾಟವನ್ನು ಉತ್ತೇಜಿಸುತ್ತಿವೆ. ಹೀಗಾಗಿ ಬಿಯ್ ಮಾರಾಟದಲ್ಲಿ ನಿಧಾನವಾಗಿ ಏರಿಕೆ ಕಂಡುಬರಲಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.