ಭಾರತೀಯ ಉದ್ಯಮಿ ಪಂಕಜ್ ಓಸ್ವಾಲ್ ಸ್ವಿಜರ್ಲ್ಯಾಂಡ್ ನಲ್ಲಿ 1,649 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಈ ಬಂಗಲೆ ವಿಶ್ವದ 10 ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದ್ದು, 40 ಸಾವಿರ ಚದರ ಅಡಿ ವಿಸ್ತೀರ್ಣಹೊಂದಿದೆ.
Business Desk:ಭಾರತ ಮೂಲದ ಓಸ್ವಾಲ್ ಕುಟುಂಬದ ಪಂಕಜ್ ಓಸ್ವಾಲ್ ಹಾಗೂ ಅವರ ಪತ್ನಿ ರಾಧಿಕಾ ಓಸ್ವಾಲ್ ಇತ್ತೀಚೆಗೆ ಸ್ವಿಜರ್ಲ್ಯಾಂಡ್ ನಲ್ಲಿ 200 ಮಿಲಿಯನ್ ಡಾಲರ್ (ಅಂದಾಜು 1,649 ಕೋಟಿ ರೂ.) ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಈ ಬಂಗಲೆ ವಿಶ್ವದ 10 ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಸ್ವಿಜರ್ಲ್ಯಾಂಡ್ ನ ಅತ್ಯಂತ ರಮಣೀಯ ಪ್ರದೇಶದಲ್ಲಿರುವ ಗಿಂಗಿನ್ಸ್ ಎಂಬ ಗ್ರಾಮದಲ್ಲಿ ವರಿ ವಿಲ್ಲಾ ಎಂಬ ಬಂಗಲೆಯನ್ನು ಓಸ್ವಾಲ್ ಖರೀದಿಸಿದ್ದಾರೆ. ಈ ಬಂಗಲೆಯು 40 ಸಾವಿರ ಚದರ ಅಡಿ ವಿಸ್ತೀರ್ಣಹೊಂದಿದೆ. ಈ ಬಂಗಲೆಯಿಂದ ವಿಶ್ವ ವಿಖ್ಯಾತ ಆಲ್ಪ್ಸ್ ಹಿಮ ಪರ್ವತಗಳ ಸಾಲುಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. ಈ ವರಿ ವಿಲ್ಲಾ ಈ ಮೊದಲು ಕ್ರಿಸ್ಟಿನಾ ಒನಾಸಿಸ್ ಎಂಬುವರ ಒಡೆತನದಲ್ಲಿತ್ತು. ಈಕೆ ಗ್ರೀಕ್ ದೇಶದ ಶಿಪ್ಪಿಂಗ್ ಉದ್ಯಮಿ ಅರಿಸ್ಟಾಟಲ್ ಒನಾಸ್ಸಿಸ್ ಅವರ ಪುತ್ರಿ. ಮುಂಬೈನಲ್ಲಿರುವ ಮುಖೇಶ್ ಅಂಬಾನಿ ಅವರ ಆಂಟಿಲಾ ಬಂಗಲೆ ವಿಶ್ವದ ಎರಡನೇ ಅತೀ ದುಬಾರಿ ಬಂಗಲೆ ಎಂದು ಗುರುತಿಸಿಕೊಂಡಿದೆ. ವಿಶ್ವದ ಇಂಥ ಟಾಪ್ 10 ದುಬಾರಿ ಬಂಗಲೆಗಳಲ್ಲಿ ಈಗ ಪಂಕಜ್ ಓಸ್ವಾಲ್ ಅವರ ವರಿ ವಿಲ್ಲಾ ಕೂಡ ಸೇರಿದೆ. ಈ ಮೂಲಕ ವಿಶ್ವದ ಟಾಪ್ 10 ದುಬಾರಿ ಬಂಗಲೆಗಳ ಮಾಲೀಕರ ಪಟ್ಟಿಗೆ ಈಗ ಮತ್ತೊಬ್ಬ ಭಾರತೀಯ ಮೂಲದ ಉದ್ಯಮಿಯ ಹೆಸರು ಸೇರ್ಪಡೆಗೊಂಡಿದೆ.
ಮನೆಯ ಒಳಾಂಗಣ ವಿನ್ಯಾಸ ಬದಲಾವಣೆ
ಪಂಕಜ್ ಓಸ್ವಾಲ್ ಹಾಗೂ ರಾಧಿಕಾ ಓಸ್ವಾಲ್ ವರಿ ವಿಲ್ಲಾ ಖರೀದಿಸಿದ ಬಳಿಕ ಅದರ ಒಳಾಂಗಣ ವಿನ್ಯಾಸವನ್ನು ನವೀಕರಿಸಿದ್ದಾರೆ. ಈ ನವೀಕರಣಕ್ಕೆ ಅವರು ಸಾಕಷ್ಟು ಹಣವನ್ನು ಕೂಡ ವ್ಯಯಿಸಿದ್ದಾರೆ. ಖ್ಯಾತ ಒಳಾಂಗಣ ವಿನ್ಯಾಸಗಾರ ಜೆಫ್ರಿ ವಿಲ್ಕೆಸ್ ಈ ಬಂಗಲೆಯ ವಿನ್ಯಾಸ ಬದಲಾಯಿಸಿದ್ದಾರೆ. ಇವರು ಒಬೆರಾಯ್ ರಾಜ್ ವಿಲಾಸ್, ಒಬೆರಾಯ್ ಉದಯ್ ವಿಲಾಸ್ ಹಾಗೂ ಲೀಲಾ ಹೋಟೆಲ್ ಗಳ ಒಳಾಂಗಣ ವಿನ್ಯಾಸ ಮಾಡುವ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಓಸ್ವಾಲ್ ಕುಟುಂಬ ಸದಸ್ಯರ ಆಸಕ್ತಿ, ಅಭಿರುಚಿ ಹಾಗೂ ಬೇಡಿಕೆಗೆ ತಕ್ಕಂತೆ ಜೆಫ್ರಿ ವಿಲ್ಕೆಸ್ ಬಂಗಲೆಯ ಒಳಾಂಗಣ ವಿನ್ಯಾಸ ರೂಪಿಸಿದ್ದಾರೆ.
ಅಬ್ಬಾ! ಬರೀ ಒಂದು ಕಾರು ಪೇಂಟ್ ಮಾಡಲು 1 ಕೋಟಿ ರೂ. ವ್ಯಯಿಸಿದ ಮುಖೇಶ್ ಅಂಬಾನಿ
ಬಂಗಲೆ ಹೆಸರು ಬದಲಾಯಿಸಿದ ಓಸ್ವಾಲ್ ಕುಟುಂಬ
ಪಂಕಜ್ ಓಸ್ವಾಲ್ ಹಾಗೂ ರಾಧಿಕಾ ಓಸ್ವಾಲ್ ತಾವು ಖರೀದಿಸಿರುವ ಬಂಗಲೆಯ ಒಳಾಂಗಣ ವಿನ್ಯಾಸವನ್ನು ಮಾತ್ರವಲ್ಲ, ಹೆಸರು ಕೂಡ ಬದಲಾಯಿಸಿದ್ದಾರೆ. ಪಂಕಜ್ ಹಾಗೂ ರಾಧಿಕಾ ಓಸ್ವಾಲ್ ಅವರ ಇಬ್ಬರು ಪುತ್ರಿಯರ ಹೆಸರು ವಸುಂಧರಾ ಹಾಗೂ ರಿದಿ. ಈ ಎರಡೂ ಹೆಸರುಗಳ ಮೊದಲ ಅಕ್ಷರಗಳನ್ನು ಜೋಡಿಸಿ ಬಂಗಲೆಗೆ 'ವರಿ' ಎಂದು ಹೆಸರಿಟ್ಟಿದ್ದಾರೆ.
ಭಾರತದಲ್ಲಿ ಅತ್ಯಂತ ದುಬಾರಿ ಕಾರಿನ ಮಾಲೀಕ ಅಂಬಾನಿ,ಅದಾನಿ ಅಲ್ಲ; ಈತ ಬೆಂಗಳೂರಿಗ!
ಯಾರು ಈ ಪಂಕಜ್ ಓಸ್ವಾಲ್?
ಪಂಕಜ್ ಓಸ್ವಾಲ್ ಉದ್ಯಮಿ ದಿ.ಅಭಯ್ ಕುಮಾರ್ ಓಸ್ವಾಲ್ ಅವರ ಪುತ್ರ. ಇವರು ರಾಧಿಕಾ ಓಸ್ವಾಲ್ ಅವರನ್ನು ವಿವಾಹವಾಗಿ 25 ವರ್ಷಗಳಾಗಿವೆ. ಓಸ್ವಾಲ್ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಪ್ರಥಮ ಪುತ್ರಿ ಹೆಸರು ವಸುಂಧರಾ (24) ಹಾಗೂ ದ್ವಿತೀಯ ಪುತ್ರಿ ಹೆಸರು ರಿದಿ (19). ಓಸ್ವಾಲ್ ಅವರ ನಿವ್ವಳ ಸಂಪತ್ತು 3 ಬಿಲಿಯನ್ ಡಾಲರ್ (ಅಂದಾಜು 2,47,000 ಕೋಟಿ ರೂ.). ಓಸ್ವಾಲ್ ಗ್ರೂಪ್ ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ ಹಾಗೂ ಗಣಿಗಾರಿಕೆ ಸೇರಿದಂತೆ ಆಫ್ರಿಕಾ, ಭಾರತ, ಆಸ್ಟ್ರೇಲಿಯಾ ಹಾಗೂಸ್ವಿಜರ್ಲ್ಯಾಂಡ್ ನಲ್ಲಿ ಉದ್ಯಮ ಹೊಂದಿದೆ. 2013ರಲ್ಲಿ ಓಸ್ವಾಲ್ ಕುಟುಂಬ ಆಸ್ಟ್ರೇಲಿಯಾದಿಂದ ಸ್ವಿಜರ್ಲ್ಯಾಂಡ್ ಗೆ ಸ್ಥಳಾಂತರಗೊಂಡಿತ್ತು. ಓಸ್ವಾಲ್ ದಂಪತಿ ಹಿರಿಯ ಪುತ್ರಿ ವಸುಂಧರಾ ಓಸ್ವಾಲ್ ಹಣಕಾಸು ವಿಷಯದಲ್ಲಿ ಸ್ವಿಜರ್ಲ್ಯಾಂಡ್ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ಆಕೆ ಪಿಆರ್ ಒ ಇಂಡಸ್ಟ್ರೀಸ್ ಪಿಟಿಇ ಲಿ. ನಿರ್ದೇಶಕಿ ಹಾಗೂ ಆಕ್ಸಿಸ್ ಮಿನರಲ್ಸ್ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.