
ಬೆಂಗಳೂರು (ಜು.08): ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಮೂಲ ಮಂತ್ರವನ್ನು ಈ ಹಿಂದೆ ಎಲ್ಲ ಆಯವ್ಯಯಗಳಲ್ಲಿ ಪಠಿಸುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ 14ನೇ ಬಜೆಟ್‌ನಲ್ಲೂ ಸಮಾಜ ಪರಿವರ್ತಕರಾದ ಬಸವಣ್ಣ, ನಾರಾಯಣ ಗುರು, ಸರ್ವಜ್ಞ ಸೇರಿ ನಾಡಿನ ಅನೇಕ ಸಾಹಿತಿಗಳ ಕವನ, ಡಾ.ಬಿ.ಆರ್.ಅಂಬೇಡ್ಕರ್, ದಿವಂಗತ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೇಳಿಕೆಗಳನ್ನು ಉಲ್ಲೇಖಿಸುವ ಮೂಲಕ ಸರ್ಕಾರದ ಕನಸು, ಉದ್ದೇಶ, ಗುರಿಯನ್ನು ಹೇಳಿದ್ದಾರೆ.
‘ಯಾವ ಕಾಲದ ಶಾಸ್ತ್ರವನ್ನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು’ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವನ ಉಲ್ಲೇಖಿಸಿ ಈ ಬಾರಿ ರಾಜ್ಯದ ತಮ್ಮ ಮನದಿಂಗಿತನ್ನು ಗಟ್ಟಿಯಾಗಿ, ಸಂತೋಷದಿಂದ ಪ್ರಾಮಾಣಿಕವಾಗಿ ಹೇಳಿದ್ದಾರೆ. ಆ ಮೂಲಕ ಇಡೀ ದೇಶಕ್ಕೆ ಮಹತ್ವಪೂರ್ಣವಾದ ಸಂದೇಶ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಗಿರೀಶ್ ಕಾರ್ನಾಡರ ಯಯಾತಿ ನಾಟಕದಲ್ಲಿ ಬರುವ ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು. ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ?’ ಎಂದು ಹೇಳುತ್ತಾ, ಕನ್ನಡಿಗರ ಅಪಾರ ನಂಬಿಕೆ ಎತ್ತಿ ಹಿಡಿಯಲು, ಉಜ್ವಲ ಭವಿಷ್ಯ ನಿರ್ಮಿಸಲು, ಅಂಧಕಾರದಲ್ಲಿರುವ ಇಂದಿನ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಲಿದೆ ಎಂದು ನುಡಿದರು.
ಅಭಿಮಾನಿಗಳ ಜತೆ ರಿಷಬ್ ಶೆಟ್ಟಿ ಹುಟ್ಟುಹಬ್ಬ: ಹೊಸಕೆರೆಹಳ್ಳಿಯ ನಂದಿ ಮೈದಾನದಲ್ಲಿ ಬೃಹತ್ ಕಾರ‍್ಯಕ್ರಮ
ಐದು ಗ್ಯಾರಂಟಿಗಳ ಬಗ್ಗೆ ಟೀಕೆ,ಟಿಪ್ಪಣಿ, ಇಲ್ಲ ಸಲ್ಲದ ಸುಳ್ಳು ಸುದ್ದಿ ಹಬ್ಬಿಸುವುದು, ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿರುವ ವಿರೋಧ ಪಕ್ಷಗಳಿಗೆ ಸಾಹಿತಿ ಡಾ.ಸಿದ್ದಯ್ಯ ಪುರಾಣಿಕ ಅವರ ಕವನ ‘ನಡೆಯದ ಹಾದಿಯಲ್ಲಿ ಎಡವಿದೆನೆಂದರೆ ಒಪ್ಪುವುದೇ ಅಯ್ಯಾ?, ಕಾಣದ ಮುಖದ ಕುದನೆಣಿಸಿದರೆ ಒಪ್ಪುವುದೇ ಅಯ್ಯಾ?, ಉಣ್ಣದ ಅಡಿಗೆಯ ರುಚಿಯ ಟೀಕಿಸಿದರೆ ಒಪ್ಪುವುದೇ ಅಯ್ಯಾ?, ನೋಡದುದನ್ನು ನೋಡಿದಂತೆ ವರ್ಣಿಸಿದರೆ ಒಪ್ಪುವುದೇ ಅಯ್ಯಾ? ಎಂದು ಉಲ್ಲೇಖಿಸಿ ಸಿದ್ದರಾಮಯ್ಯ ತಿರುಗೇಟು ನೀಡಿರುವುದು ವಿಶೇಷ.
ಇಷ್ಟೇ ಅಲ್ಲದೆ ಗ್ಯಾರಂಟಿ ಯೋಜನೆಗಳನ್ನು ಯಾಕೆ ಜಾರಿಗೆ ತಂದಿದ್ದೇವೆ ಎಂಬುದನ್ನು ಸಮರ್ಥಿಸಿಕೊಳ್ಳಲು ಪೂರಕವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ‘ಭದ್ರತೆಯ ಖಾತರಿ ಕೊಡದ ಆರ್ಥಿಕ ಯೋಜನೆಯಿಂದ ಯಾವ ಉಪಯೋಗವೂ ಇಲ್ಲ, ಯೋಜನೆ ಒಪ್ಪಿತವಾಗಬೇಕಾದರೆ ಅದು ಮಿತವ್ಯಯದ್ದು ಮತ್ತು ಸುಭದ್ರವೂ ಆಗಿರಬೇಕು, ಅದು ಮಿತವ್ಯಯದ್ದು ಆಗಿರದಿದ್ದರೆ ಬಹುಶಃ ನಡೆದೀತು, ಆದರೆ ಸುಭದ್ರವಾಗಿಲ್ಲದಿದ್ದರೆ ಖಂಡಿತ ನಡೆಯುವುದಿಲ್ಲ’ ಎಂಬ ಮಾತು ಉಲ್ಲೇಖಿಸಿದ್ದಾರೆ. ಕೃಷಿ ಇಲಾಖೆಯ ಯೋಜನೆಗಳನ್ನು ಘೋಷಿಸುತ್ತಾ ‘ಎತ್ತೆಮ್ಮೆ ಹೂಡುವುದು, ಉತ್ತೊಮ್ಮೆ ಹರಗುವುದು, ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು, ಎತ್ತುಗೈಯುದ್ದ ಸರ್ವಜ್ಞ‘ ಎಂಬ ಸರ್ವಜ್ಞನ ತ್ರಿಪದಿಯನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು.
ನನ್ನ ಪುತ್ರನ ಭ್ರಷ್ಟಾಚಾರ ಎಚ್‌ಡಿಕೆ ಕಲ್ಪನಾ ವಿಲಾಸ: ಸಿಎಂ ಸಿದ್ದರಾಮಯ್ಯ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಪ್ರಕಟಿಸುವ ಮುನ್ನ ಸಾಹಿತಿ, ಪತ್ರಕರ್ತ ಪಿ.ಲಂಕೇಶ್ ಅವರ ಕವನ ‘ನನ್ನವ್ವ ಬದುಕಿದ್ದು, ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ; ಮೇಲೊಂದು ಸೂರು, ಅನ್ನ, ರೊಟ್ಟಿ, ಹಚ್ಚಡಕ್ಕೆ; ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ’ ಎಂದು ಹೇಳಿದರೆ, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟಪಂಗಡಗಳ ಕಲ್ಯಾಣ ಇಲಾಖೆಯ ಯೋಜನೆ ಪ್ರಕಟಿಸುವಾಗ ‘ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಭೇದ ಭಾವ ನೀಗಬೇಕು, ದುಡಿದು ಹಿರಿಮೆ ಗಳಿಸಬೇಕು, ಭಾರತೀಯರೆನಿಸುವೆಲ್ಲ ಜಾತಿ ಮತದ ಮಕ್ಕಳು’ ಎಂದು ಉಲ್ಲೇಖಿಸಿದರು. ಸಮಾಜ ಪರಿವರ್ತಕ ಶ್ರೀ ನಾರಾಯಣ ಗುರು ಅವರು ‘ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ’ ಎಂಬ ಮಾತನ್ನು ಉಲ್ಲೇಖಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಘೋಷಿಸಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.