Karnataka Budget 2023: ಬ್ರ್ಯಾಂಡ್‌ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ

By Kannadaprabha NewsFirst Published Jul 8, 2023, 6:03 AM IST
Highlights

ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ 12 ಹೈಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿ, 800 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ರಸ್ತೆಗಳ ನಿರ್ಮಾಣ, ನೆನೆಗುದಿಗೆ ಬಿದ್ದಿದ್ದ ಪೆರಫೆರಲ್‌ ರಸ್ತೆಗೆ ಮರು ಜೀವ, ಮೆಟ್ರೋ ಮೂರನೇ ಹಂತ ಜಾರಿಗೆ ಬದ್ಧತೆ, ಉಪ ನಗರ ರೈಲು ಯೋಜನೆಗೆ 1000 ಕೋಟಿ ವೈಜ್ಞಾನಿಕ ಕಸ ವಿಲೇವಾರಿಗೆ ವಿಶೇಷ ಅನುದಾನ ಸೇರಿದಂತೆ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬೆಂಗಳೂರು (ಜು.08): ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನೆಯಡಿ ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ 12 ಹೈಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿ, 800 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ರಸ್ತೆಗಳ ನಿರ್ಮಾಣ, ನೆನೆಗುದಿಗೆ ಬಿದ್ದಿದ್ದ ಪೆರಫೆರಲ್‌ ರಸ್ತೆಗೆ ಮರು ಜೀವ, ಮೆಟ್ರೋ ಮೂರನೇ ಹಂತ ಜಾರಿಗೆ ಬದ್ಧತೆ, ಉಪ ನಗರ ರೈಲು ಯೋಜನೆಗೆ 1000 ಕೋಟಿ ವೈಜ್ಞಾನಿಕ ಕಸ ವಿಲೇವಾರಿಗೆ ವಿಶೇಷ ಅನುದಾನ ಸೇರಿದಂತೆ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ನಿವಾಸಿಗಳ ಸುರಕ್ಷತೆ, ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಸಾರ್ವಜನಿಕರ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆ ಸೇರಿದಂತೆ ಒಟ್ಟು 9 ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಭಾಷಣದಲ್ಲಿ ಹೇಳುವ ಮೂಲಕ ಉದ್ಯಾನ ನಗರಿಗೆ ಹೆಚ್ಚಿನ ಆದ್ಯತೆ ನೀಡುವ ಸರ್ಕಾರದ ಬದ್ಧತೆ ಪ್ರದರ್ಶಿಸಿದ್ದಾರೆ.

Latest Videos

ನನ್ನ ಪುತ್ರನ ಭ್ರಷ್ಟಾಚಾರ ಎಚ್‌ಡಿಕೆ ಕಲ್ಪನಾ ವಿಲಾಸ: ಸಿಎಂ ಸಿದ್ದರಾಮಯ್ಯ

ಬಿಬಿಎಂಪಿಗೆ .4,093 ಕೋಟಿ: ನಿರೀಕ್ಷೆಯಂತೆ ಬಿಬಿಎಂಪಿಗೆ ಸಾಕಷ್ಟುಅನುದಾನ ಪ್ರಕಟಿಸಲಾಗಿದೆ. ಈ ಪೈಕಿ ನಗರದ ವಿಶೇಷ ಮೂಲಸೌಕರ್ಯ ಅಭಿವೃದ್ಧಿಗೆ .3 ಸಾವಿರ ಕೋಟಿ, ಉಳಿದಂತೆ ಯೋಜಿತ ಕಾಮಗಾರಿಗಳಿಗೆ .200 ಕೋಟಿ, ಯೋಜಿತವಲ್ಲದ ಕಾಮಗಾರಿಗಳಿಗೆ .149 ಕೋಟಿ, 15ನೇ ಹಣಕಾಸು ಆಯೋಗದಿಂದ .461 ಕೋಟಿ, ವಿದ್ಯುತ್‌ ಬಿಲ್‌ ಪಾವತಿಗೆ .283 ಕೋಟಿ ಮೀಸಲಿಡಲಾಗಿದೆ.

ಉಪನಗರ ರೈಲಿಗೆ ಸಾವಿರ ಕೋಟಿ: ಬೆಂಗಳೂರು ಉಪ ನಗರ ಯೋಜನೆಗೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ .1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಸುಮಾರು .15,767 ಕೋಟಿ ವೆಚ್ಚದ ಬೆಂಗಳೂರು ಉಪ ನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರವು .3,242 ಕೋಟಿ, ರಾಜ್ಯ ಸರ್ಕಾರವು .5,087 ಕೋಟಿ ಮತ್ತು ಸಾಲದ (ಬಾಹ್ಯ ಮೂಲಗಳಿಂದ) ಮೊತ್ತ .7,438 ಕೋಟಿ ಹೊಂದಿಸಬೇಕಿದೆ. ಈ ಯೋಜನೆಗೆ ಈವರೆಗೂ ಕೇಂದ್ರ ಸರ್ಕಾರವು .500 ಕೋಟಿ ಹಾಗೂ ರಾಜ್ಯ ಸರ್ಕಾರ .660 ಕೋಟಿ ಬಿಡುಗಡೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ .1 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಸರ್‌ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಫ್ಲೈಓವರ್‌ ನಿರ್ಮಾಣ: ನೈಋುತ್ಯ ರೈಲ್ವೆ ಇಲಾಖೆ ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ನಿರ್ಮಿಸಿರುವ ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಅನ್ನು ತಲುಪಲು ಸರಿಯಾದ ಮೆಟ್ರೋ ಮತ್ತು ರಸ್ತೆಗಳ ಸಂಪರ್ಕ ಇಲ್ಲದೇ ಇರುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಈ ಸಮಸ್ಯೆಯ ನಿವಾರಣೆಗಾಗಿ .263 ಕೋಟಿ ವೆಚ್ಚದಲ್ಲಿ ಒಂದು ಹೊಸ ಮೇಲ್ಸೇತುವೆಯನ್ನು ನಿರ್ಮಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಬೈಯ್ಯಪ್ಪನಹಳ್ಳಿ ಬಳಿ ಚೆನ್ನೈ-ಬೆಂಗಳೂರು ನಡುವಿನ ರೈಲು ಮಾರ್ಗ ಹಾದುಹೋಗಿದ್ದು, ರೈಲು ಮಾರ್ಗದ ಇನ್ನೊಂದು ಭಾಗದಲ್ಲಿ ನಿಲ್ದಾಣ ಇರುವುದರಿಂದ ಇಲ್ಲೊಂದು ಮೇಲ್ಸೇತುವೆ ಅಗತ್ಯವಾಗಿರುವುದರಿಂದ ಹೊಸದಾಗಿ ಮೇಲ್ಸೇತುವೆ ನಿರ್ಮಾಣಕ್ಕೆ .263 ಕೋಟಿ ಮೀಸಲಿಡಲಾಗಿದೆ.

100 ಕಿ.ಮೀ. ರಸ್ತೆಗೆ ವೈಟ್‌ಟಾಪಿಂಗ್‌: ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ಜಾರಿಗೊಳಿಸಿದ್ದ ವೈಟ್‌ಟಾಪಿಂಗ್‌ ರಸ್ತೆಗಳ ಇಂದಿಗೂ ಅತ್ಯುತ್ತಮ ಸ್ಥಿತಿಯಲ್ಲಿವೆ. ಆದರೆ, ಅನಂತರ ಬಂದ ಸರ್ಕಾರ ವೈಟ್‌ಟಾಪಿಂಗ್‌ ಯೋಜನೆ ನಿರ್ಲಕ್ಷಿಸಿತ್ತು. ಇದೀಗ ಮತ್ತೆ ರಸ್ತೆಗಳ ವೈಟ್‌ಟಾಪಿಂಗ್‌ ಯೋಜನೆಗೆ ಮರು ಚಾಲನೆ ನೀಡುತ್ತಿದ್ದು, ಸಾಲಿನಲ್ಲಿ .800 ಕೋಟಿ ವೆಚ್ಚದಲ್ಲಿ 100 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು ವೈಟ್‌ ಟಾಪ್‌ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಸುಗಮ ಸಂಚಾರಕ್ಕೆ ರಸ್ತೆ ಅಭಿವೃದ್ಧಿ: ಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ 192 ಕಿ.ಮೀ. ಉದ್ದದ ವಿವಿಧ 12 ಹೈ ಡೆನ್ಸಿಟಿ ಕಾರಿಡಾರ್‌ಗಳ ಪೈಕಿ 92 ಕಿ.ಮೀ. ಉದ್ದದ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 83 ಕಿ.ಮೀ. ಉದ್ದದ ರಸ್ತೆಗಳನ್ನು .273 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಪೆರಿಫೆರಲ್‌ ರಿಂಗ್‌ ರಸ್ತೆ ಯೋಜನೆ: ಬೆಂಗಳೂರು ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣ ಪ್ರಕ್ರಿಯೆಯು ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಎದುರಾದ ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಸರ್ವೋಚ್ಛ ನ್ಯಾಯಾಲಯದಿಂದ ಅನುಮತಿ ದೊರಕಿದೆ. ಇದೀಗ ಸರ್ಕಾರವು ಎಲ್ಲಾ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತ್ವರಿತವಾಗಿ ಯೋಜನೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ರಾಜಕಾಲುವೆ ಒತ್ತುವರಿ ತೆರವು: ಮಳೆ ನೀರು ಸರಾಗವಾಗಿ ಹರಿಯದಿರಲು ರಾಜಕಾಲುವೆಗಳ ಒತ್ತುವರಿ ಪ್ರಮುಖ ಕಾರಣವಾಗಿದೆ. ಇದರಿಂದ ನಗರದಲ್ಲಿ ಪ್ರವಾಹ ಸೃಷ್ಟಿಯಾಗುತ್ತಿದೆ. ಮಳೆ ಬಂದಾಗ ರಸ್ತೆಗಳಲ್ಲಿ ನೀರು ನಿಂತು, ಮನೆಗಳಿಗೆ ನೀರು ನುಗ್ಗಿ ಅನಾಹುತಗಳು ಸಂಭವಿಸುತ್ತಿವೆ. ಈ ಸಮಸ್ಯೆಯನ್ನು ನಿವಾರಿಸಲು ಕಂದಾಯ ಇಲಾಖೆ ಗುರುತಿಸಿರುವ ಒತ್ತುವರಿಗಳನ್ನು ಆದ್ಯತೆ ಮೇಲೆ ತೆರವುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ತ್ಯಾಜ್ಯ ಸುರಿದ ಜಾಗದಲ್ಲಿ ಉದ್ಯಾನವನ ನಿರ್ಮಾಣ: ಬೆಂಗಳೂರು ನಗರದ 97 ಲಕ್ಷ ಟನ್‌ನಷ್ಟುಹಳೆ ತ್ಯಾಜ್ಯವನ್ನು ಜೈವಿಕ ಗಣಿಗಾರಿಕೆ ಮತ್ತು ಜೈವಿಕ ಪರಿಹಾರದ ಮೂಲಕ ಸಂಸ್ಕರಿಸಲಾಗುವುದು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಇಂತಹ 256 ಎಕರೆ ಭೂಮಿಯನ್ನು ಉದ್ಯಾನವನಗಳಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಲಾಗಿದೆ.

ಮೂರು ವರ್ಷದಲ್ಲಿ 176 ಕಿ.ಮೀ. ಮೆಟ್ರೋ: ನಗರದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಿರುವ ಮೆಟ್ರೋ ರೈಲು ಸೇವೆಯನ್ನು ಮತ್ತಷ್ಟುವಿಸ್ತರಣೆ ಮಾಡಲು ಸರ್ಕಾರ ಉದ್ದೇಶಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಮೆಟ್ರೋ ಸಂಪರ್ಕ ಜಾಲವನ್ನು 176 ಕಿ.ಮೀ.ಗೆ ವಿಸ್ತರಿಸಲಾಗುವುದು. ಪ್ರಗತಿಯಲ್ಲಿರುವ ಏರ್‌ಪೋರ್ಚ್‌ ಲೈನ್‌ ಕಾಮಗಾರಿಯನ್ನು ಪೂರ್ಣಗೊಳಿಸಿ 2026ರಲ್ಲಿ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದಲ್ಲದೆ, ಮೆಟ್ರೋ 3ನೇ ಹಂತ ಯೋಜನೆಯನ್ನು ಸುಮಾರು .16,328 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. 

ಕೆಂಪಾಪುರದಿಂದ ಜೆ.ಪಿ.ನಗರ 4ನೇ ಹಂತದವರೆಗೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಪಶ್ಚಿಮ ಓಆರ್‌ಆರ್‌ ಮಾರ್ಗವನ್ನು ಒಳಗೊಳಗೊಂಡಿದೆ. ಒಟ್ಟು 45 ಕಿ.ಮೀ. ಉದ್ದದ ಮಾರ್ಗದ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದ್ದು, ಒಪ್ಪಿಗೆ ದೊರೆತ ಕೂಡಲೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಇದಲ್ಲದೆ, ಪ್ರಸಕ್ತ ವರ್ಷದಲ್ಲೇ .15 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಹೆಬ್ಬಾಳದಿಂದ ಸರ್ಜಾಪುರದವರೆಗಿನ 37 ಕಿ.ಮೀ. ಉದ್ದದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸುವುದಾಗಿ ತಿಳಿಸಲಾಗಿದೆ.

ತ್ಯಾಜ್ಯ ನೀರು ಸಂಸ್ಕೃರಣೆಗೆ ಹೊಸ ಪದ್ಧತಿ: ನಗರದಲ್ಲಿ ಉತ್ಪತ್ತಿಯಾಗಿ ಹರಿಯುವ ಕೊಳಕು ನೀರನ್ನು ಸಂಸ್ಕರಣೆ ಮಾಡಿ ಕೆರೆ ಹಾಗೂ ನದಿ ಮೂಲಗಳಿಗೆ ಹರಿಸಲು ಆಧುನಿಕ ಪದ್ಧತಿ ಅಳವಡಿಸಿಕೊಳ್ಳುವುದಾಗಿ ತಿಳಿಸಿದೆ. ಬೆಂಗಳೂರಿನ ಕಾಲುವೆಗಳಲ್ಲಿ ಹರಿಯುತ್ತಿರುವ ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ ಹಾಗೂ ಒಳಚರಂಡಿ ನೀರು ಸಂಸ್ಕರಿಸುವ ಆಧುನಿಕ ಪದ್ಧತಿಗಳನ್ನು ಅಳವಡಿಸುವ ಮೂಲಕ ನದಿಗಳು ಮತ್ತು ಕೆರೆಗಳಿಗೆ ಹರಿಯುವ ಮಾಲಿನ್ಯ ನಿಯಂತ್ರಿಸಲು .1,250 ಕೋಟಿ ವೆಚ್ಚ ಮಾಡುವುದಾಗಿ ಎಂದು ಬಜೆಟ್‌ನಲ್ಲಿ ಘೋಷಿಸಿದೆ.

ತ್ಯಾಜ್ಯ ನಿರ್ವಹಣಾ ಸಂಸ್ಥೆಗೆ 100 ಕೋಟಿ: ನಗರದ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆಗೆ ಸ್ಥಾಪಿಸಲಾದ ಬೆಂಗಳೂರು ಘನತಾಜ್ಯ ನಿರ್ವಹಣಾ ಸಂಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಗಾಗಿ .100 ಕೋಟಿ ಅನುದಾನ ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಹೊಸ ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟೀನ್‌: ಬಿಬಿಎಂಪಿ ವಾರ್ಡ್‌ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚಿಸಲಾದ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸುವುದಕ್ಕೆ ಮತ್ತು ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡುವುದಾಗಿ ತಿಳಿಸಿದೆ.

1 ಲಕ್ಷ ಮನೆ ಯೋಜನೆಗೆ ಮರು ಚಾಲನೆ: ಬೆಂಗಳೂರು ಮಹಾನಗರದಲ್ಲಿ ಬಡವರಿಗೆ ಸೂರು ನೀಡಲು 2017-18ರಲ್ಲಿ ಚಾಲನೆ ಪಡೆದಿದ್ದ ಒಂದು ಲಕ್ಷ ಮನೆ ನಿರ್ಮಾಣ ಯೋಜನೆ ಅಪೂರ್ಣವಾಗಿದ್ದು, ಸದರಿ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿ ಮರು ಚಾಲನೆ ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಹಿಂದಿನ ಸರ್ಕಾರ ಯೋಜನೆಯನ್ನು ಪೂರ್ಣಗೊಳಿಸಿಲ್ಲ. ಫಲಾನುಭವಿಗಳ ಆಯ್ಕೆ ಕೂಡ ನಡೆಸಿಲ್ಲ. ಎಲ್ಲ ಲೋಪದೋಷ ಸರಿಪಡಿಸಿ ಈ ಯೋಜನೆಯನ್ನು ಮರು ಜಾರಿಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಜಲಮಂಡಳಿಗೆ ಸಿಗದ ಅನುದಾನ: ಬಿಬಿಎಂಪಿ ವ್ಯಾಪ್ತಿಯಲ್ಲಿನ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು ಬೆಂಗಳೂರು ಜಲಮಂಡಳಿಯು ರಾಜ್ಯ ಸರ್ಕಾರಕ್ಕೆ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಮನವಿ ಮಾಡಿತ್ತು. ಆದರೆ, ಈ ಹಿಂದಿನ ಸರ್ಕಾರ ಅನುದಾನ ನೀಡದೇ ಸ್ವಂತ ಸಂಪನ್ಮೂಲದಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದೆ.

6 ತಿಂಗಳಲ್ಲಿ ಸರ್ಕಾರಕ್ಕೆ ಏನು ಮಾಡ್ತೇನೆ ನೋಡಿ: ಎಚ್‌ಡಿಕೆ ಸವಾಲು

42 ಸಾವಿರ ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ: ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಅಮೃತ್‌ ನಗರೋತ್ಥಾನ, ಹೈಡೆನ್ಸಿಟಿ ಕಾರಿಡಾರ್‌, ವೈಟ್‌ಟಾಪಿಂಗ್‌, ಕಸ ವಿಲೇವಾರಿ, ರಾಜಕಾಲುವೆ ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಸೇರಿದಂತೆ ಒಟ್ಟಾರೆ .12 ಸಾವಿರ ಕೋಟಿ ವ್ಯಯಿಸಲಾಗುತ್ತಿದೆ. ಇದಲ್ಲದೇ, ಮೆಟ್ರೋ ಮತ್ತು ಉಪನಗರ ಯೋಜನೆಗಳಿಗೆ ಸಂಬಂಧಿಸಿದಂತೆ .30 ಸಾವಿರ ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿವೆ. ಈ ಕಾಮಗಾರಿ ಮುಕ್ತಾಯಗೊಳ್ಳುವುದಕ್ಕೆ ಐದು ವರ್ಷ ಬೇಕಾಗಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್‌ ಸರ್ಕಾರ ಚುನಾವಣೆಯಿಂದ ಹೊರ ಬಂದಿಲ್ಲ. ಬೆಂಗಳೂರಿನ ಮೂಲಸೌಕರ್ಯಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ. ಕೆರೆಗಳ ಅಭಿವೃದ್ಧಿ, ಮಳೆ ನೀರು ಕೊಯ್ಲು ಮರೆತಿದೆ. ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಪೂರ್ಣವಾಗಿ ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ಪ್ರೇರಿತವಾಗಿ ಬಜೆಟ್‌ ಮಂಡಿಸಿದೆ. ಇದು ಬೆಂಗಳೂರಿನ ಬೆಳವಣಿಗೆಗೆ ಕುಂಠಿತವಾಗಲಿದೆ.
-ಸುರೇಶ್‌, ನಗರ ತಜ್ಞರು

click me!