ಐಟಿಆರ್ ಫೈಲ್ ಮಾಡಿರೋರು ಬಾಡಿಗೆ ಪಾವತಿ ಮೇಲೆ ಸುಳ್ಳು ಕಡಿತಗಳನ್ನು ಕ್ಲೇಮ್ ಮಾಡಿದ್ದರೆ ಆದಾಯ ತೆರಿಗೆ ಇಲಾಖೆ ದಂಡ ವಿಧಿಸುವ ಸಾಧ್ಯತೆಯಿದೆ. ಹೀಗಾಗಿ ಐಟಿಆರ್ ಸಲ್ಲಿಕೆ ಮಾಡುವಾಗ ತಪ್ಪು ಕಡಿತಗಳನ್ನು ಕ್ಲೇಮ್ ಮಾಡುವ ಮುನ್ನ ಎಚ್ಚರ ವಹಿಸಿ.
Business Desk:ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡುವಾಗ ತೆರಿಗೆ ವಿನಾಯ್ತಿಗಳು ಹಾಗೂ ಕಡಿತಗಳನ್ನು ಕ್ಲೇಮ್ ಮಾಡುವ ಸಮಯದಲ್ಲಿ ಪ್ರತಿಯೊಬ್ಬರೂ ಸಾಕಷ್ಟು ಎಚ್ಚರಿಕೆ ವಹಿಸೋದು ಅಗತ್ಯ. ಪ್ರಸಕ್ತ ಅಥವಾ ಈ ಹಿಂದಿನ ವರ್ಷಗಳಿಗೆ ಸಂಬಂಧಿಸಿ ಫೈಲ್ ಮಾಡಿದ ಐಟಿಆರ್ ಗಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಾಗ ಕಡಿತಗಳು ಹಾಗೂ ತೆರಿಗೆ ವಿನಾಯ್ತಿಗೆ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಕೋರುತ್ತದೆ. ಒಂದು ವೇಳೆ ತೆರಿಗೆದಾರರು ಸೂಕ್ತ ದಾಖಲೆಗಳನ್ನು ಒದಗಿಸಿದರೆ, ಕ್ಲೇಮ್ ಗಳ ಬಗ್ಗೆ ಅವರು ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ, ತೆರಿಗೆದಾರರು ದಾಖಲೆಗಳನ್ನು ಒದಗಿಸಲು ವಿಫಲರಾದರೆ ಅಥವಾ ನೀಡಿದ ದಾಖಲೆಗಳು ಆದಾಯ ತೆರಿಗೆ ಇಲಾಖೆಗೆ ಸೂಕ್ತವೆನಿಸದಿದ್ದರೆ ಕ್ಲೇಮ್ ಮಾಡಿದ ಕಡಿತಗಳು ಹಾಗೂ ತೆರಿಗೆ ವಿನಾಯ್ತಿಗಳನ್ನು ಆಧಾರರಹಿತ ಎಂದು ಪರಿಗಣಿಸಲಾಗುತ್ತದೆ. ಇಂಥ ಪ್ರಕರಣಗಳಲ್ಲಿ ಆದಾಯ ತೆರಿಗೆ ಇಲಾಖೆ ದಂಡ ವಿಧಿಸಬಹುದು. ತೆರಿಗೆ ತಜ್ಞರ ಪ್ರಕಾರ ಅಸಮರ್ಪಕ ಕಡಿತಗಳನ್ನು ಕ್ಲೇಮ್ ಮಾಡುವುದು ಆದಾಯವನ್ನು ಸಮರ್ಪಕವಾಗಿ ವರದಿ ಮಾಡಿಲ್ಲ ಎಂಬುದಕ್ಕೆ ಕಾರಣವಾಗಬಲ್ಲದು. ಹೀಗಾಗಿ ಐಟಿ ರಿಟರ್ನ್ ಸಲ್ಲಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸೋದು ಅಗತ್ಯ.
ಬ್ಯುಸಿನೆಸ್ ಕನ್ಸಲ್ಟಿಂಗ್ ಗ್ರೂಪ್ ಡಿವಿಎಸ್ ಅಡ್ವೈಸರ್ಸ್ ಸ್ಥಾಪಕ ಹಾಗೂ ಸಿಇಒ ದಿವಾಕರ್ ವಿಜಯಸಾರಥಿ ಈ ಬಗ್ಗೆ ಮಾತನಾಡಿದ್ದಾರೆ. 'ನಕಲಿ ಬಾಡಿಗೆ ಸ್ವೀಕೃತಿಗಳನ್ನು ಆಧರಿಸಿ ಅಧಿಕ ಎಚ್ ಆರ್ ಎ ವಿನಾಯ್ತಿಗಳನ್ನು ಕ್ಲೇಮ್ ಮಾಡೋದು ಅಥವಾ ಯಾವುದೇ ದಾಖಲೆಗಳ ಸಾಕ್ಷಿಗಳಿಲ್ಲದೆ ಚಾಪ್ಟರ್ VI-A ಅಡಿಯಲ್ಲಿ ಕಡಿತಗಳನ್ನು ಕ್ಲೇಮ್ ಮಾಡೋದು ಸಂಗತಿಗಳ ತಪ್ಪು ಗ್ರಹಿಕೆ ಅಥವಾ ಮಾಹಿತಿಗಳ ನಿಗ್ರಹಕ್ಕೆ ಕಾರಣವಾಗಬಲ್ಲದು. ಹಾಗೆಯೇ ಇದನ್ನು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಆದಾಯದ ತಪ್ಪು ವರದಿ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಐಟಿಆರ್ ಸಲ್ಲಿಕೆಯಾಯ್ತು, ರೀಫಂಡ್ ಯಾವಾಗ? ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ವೇತನ ಪಡೆಯುವ ಉದ್ಯೋಗಿಗಳಿಗೆ 2021-22ನೇ ಸಾಲಿನ ಐಟಿಆರ್ ಸಲ್ಲಿಕೆ ಮೇಲೆ ಕಡಿತಗಳನ್ನು ಕ್ಲೇಮ್ ಮಾಡಲು ನೋಟಿಸ್ ಕಳುಹಿಸಿತ್ತು. ಈ ಸಂಬಂಧ ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ತೆರಿಗೆದಾರರು ಆದಾಯವನ್ನು ಘೋಷಿಸದ ಅಥವಾ ಕಡಿಮೆ ವರದಿ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಒಂದು ಲಕ್ಷ ನೋಟಿಸ್ ಗಳನ್ನು ಕಳುಹಿಸಿದೆ. ಈ ಎಲ್ಲ ಪ್ರಕರಣಗಳು 4-6 ವರ್ಷಗಳ ಹಿಂದೆ ಸಲ್ಲಿಕೆಯಾದ ರಿಟರ್ನ್ ಗಳಿಗೆ ಸಂಬಂಧಿಸಿದ್ದಾಗಿವೆ' ಎಂಬ ಮಾಹಿತಿ ನೀಡಿದ್ದರು.
ಐಟಿಆರ್ ಫೈಲಿಂಗ್ ವೆಬ್ ಸೈಟ್ ಟ್ಯಾಕ್ಸ್ 2 ವಿನ್ ಸಿಇಒ ಅಭಿಷೇಕ್ ಸೋನಿ ಈ ಬಗ್ಗೆ ಮಾತನಾಡಿದ್ದು, 'ತೆರಿಗೆದಾರರು ಐಟಿಆರ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ತೆರಿಗೆ ರೀಫಂಡ್ ಪಡೆಯಲು ನಕಲಿ ಕಡಿತಗಳು ಹಾಗೂ ವಿನಾಯ್ತಿಗಳನ್ನು ಕ್ಲೇಮ್ ಮಾಡುತ್ತಿರೋದನ್ನು ಆದಾಯ ತೆರಿಗೆ ಇಲಾಖೆ ಗಮನಿಸಿದೆ. ಇಂಥ ನಕಲಿ ಕಡಿತಗಳನ್ನು ಆದಾಯ ತೆರಿಗೆ ಇಲಾಖೆ ಟ್ರ್ಯಾಕ್ ಮಾಡಬಹುದು. ಉದಾಹರಣೆಗೆ ಒಂದು ವೇಳೆ ಒಬ್ಬ ವ್ಯಕ್ತಿ ಹೆತ್ತವರಿಗೆ ಪಾವತಿಸಿರುವ ಬಾಡಿಗೆ ಮೇಲೆ ಎಚ್ ಆರ್ ಎ ಕಡಿತಗಳನ್ನು ಕ್ಲೇಮ್ ಮಾಡಿದರೆ ಹಾಗೂ ಹೆತ್ತವರು ಈ ಬಾಡಿಗೆ ಆದಾಯವನ್ನು ತಮ್ಮ ಐಟಿಆರ್ ನಲ್ಲಿ ನಮೂದಿಸದಿದ್ದರೆ, ಇಂಥ ಪ್ರಕರಣಗಳನ್ನು ಆದಾಯ ತೆರಿಗೆ ಇಲಾಖೆ ಗುರುತಿಸುತ್ತದೆ' ಎಂದು ತಿಳಿಸಿದ್ದಾರೆ.
ITR Filing:ಅಂತಿಮ ಗಡುವಿನೊಳಗೆ ಐಟಿಆರ್ ಸಲ್ಲಿಕೆ ಮಾಡಿಲ್ವಾ? ಹಾಗಾದ್ರೆ ನಿಮ್ಮ ಮುಂದಿರುವ ಆಯ್ಕೆಗಳೇನು?
ಆದಾಯದ ತಪ್ಪು ವರದಿಗೆ ದಂಡ
ಆದಾಯವನ್ನು ತಪ್ಪಾಗಿ ವರದಿ ಮಾಡೋರ ಮೇಲೆ ಆದಾಯ ತೆರಿಗೆ ಇಲಾಖೆ ದಂಡ ವಿಧಿಸಬಹುದು. ಹಾಗೆಯೇ ದಂಡದ ಮೇಲೆ ಬಡ್ಡಿ ಕೂಡ ವಿಧಿಸಲು ಅವಕಾಶವಿದೆ. ಇಂಥ ಆದಾಯದ ತಪ್ಪು ಮಾಹಿತಿಗಳನ್ನು ಒದಗಿಸೋದರ ಮೇಲೆ ಾದಾಯ ತೆರಿಗೆ ಕಾಯ್ದೆ ಸೆಕ್ಷನ್ 270A ಅಡಿಯಲ್ಲಿ ಶೇ.200ರಷ್ಟು ದಂಡ ವಿಧಿಸಲಾಗುತ್ತದೆ ಎಂದು ವಿಜಯಸಾರಥಿ ತಿಳಿಸಿದ್ದಾರೆ.