ದೃಷ್ಟಿಹೀನ ಉದ್ಯಮಿ ಸಾಧನೆಗೆ ಮನಸೋತ ಆನಂದ್ ಮಹೀಂದ್ರಾ; ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿ ಶ್ಲಾಘನೆ

Published : Aug 10, 2023, 01:05 PM IST
ದೃಷ್ಟಿಹೀನ ಉದ್ಯಮಿ ಸಾಧನೆಗೆ ಮನಸೋತ ಆನಂದ್ ಮಹೀಂದ್ರಾ; ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿ ಶ್ಲಾಘನೆ

ಸಾರಾಂಶ

ಸನ್ ರೈಸ್ ಕ್ಯಾಂಡಲ್ಸ್ ಸ್ಥಾಪಕರಾದ ಡಾ.ಭವಿಷ್ಯ ಭಾಟಿಯಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ದೃಷ್ಟಿಹೀನರಾಗಿರುವ ಭಾಟಿಯಾ ಸಾಧನೆಯನ್ನು ಕೊಂಡಾಡಿರುವ ಮಹೀಂದ್ರಾ, ಅವರ ತಾಯಿ ಹೇಳಿರುವ ಸಂದೇಶವೊಂದನ್ನು ಬಹಳ ಮೆಚ್ಚಿಕೊಂಡಿದ್ದಾರೆ.   

ಮುಂಬೈ (ಆ.10): ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಆಗಾಗ ತಮ್ಮ ಪೋಸ್ಟ್ ಗಳ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಬುಧವಾರ ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ 'ನಾನು ಈ ತನಕ ಕೇಳದ ಅತ್ಯಂತ ಸ್ಫೂರ್ತಿದಾಯಕವಾದ ಸಂದೇಶ ಇದು' ಎಂಬ ಬರಹದ ಜೊತೆಗೆ ವಿಡಿಯೋ ಕ್ಲಿಪ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸನ್ ರೈಸ್ ಕ್ಯಾಂಡಲ್ಸ್ ಸ್ಥಾಪಕರಾದ ಡಾ.ಭವಿಷ್ಯ ಭಾಟಿಯಾ ಅವರಿಗೆ ಸಂಬಂಧಿಸಿದ್ದಾಗಿದೆ. ಭವಿಷ್ಯ ಭಾಟಿಯಾ ದೃಷ್ಟಿಹೀನರಾಗಿದ್ದು, ಉದ್ಯಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಅನೇಕ ಪುರಸ್ಕಾರಗಳು ಕೂಡ ದೊರಕಿವೆ. ಮಹೀಂದ್ರಾ ಅವರು ಪೋಸ್ಟ್ ಮಾಡಿರುವ ವಿಡಿಯೋ ಕ್ಲಿಪ್ ನಲ್ಲಿ ಬ್ಯುಸಿನೆಸ್ ಕೋಚ್ ರಾಜೀವ್ ತಲ್ರೆಜಾ ಡಾ.ಭವಿಷ್ಯ ಭಾಟಿಯಾ ಅವರ ಕುರಿತು ಮಾತನಾಡಿದ್ದಾರೆ. ಭವಿಷ್ಯ ಭಾಟಿಯಾ 28 ವರ್ಷಗಳ ಹಿಂದೆ ಮಹಾಬಲೇಶ್ವರದಲ್ಲಿ ಪ್ರಾರಂಭಿಸಿದ ಕ್ಯಾಂಡಲ್ಸ್ ಉತ್ಪಾದನೆ ಉದ್ಯಮ ಇಂದು ವಾರ್ಷಿಕ 350 ಕೋಟಿ ರೂ. ವಹಿವಾಟು ನಡೆಸುವ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪೂರ್ಣ ಪ್ರಮಾಣದ ದೃಷ್ಟಿಹೀನತೆ ಹೊಂದಿರುವ ಭವಿಷ್ಯಗೆ ಜಗತ್ತನ್ನು ಕಾಣಲು ಸಾಧ್ಯವಾಗದಿದ್ದರೂ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸುವ ಅಂತರ ದೃಷ್ಟಿಯಿರೋದು ನಿಜಕ್ಕೂ ವಿಶೇಷ. ಇದು ಅವರ ಕಥೆಯನ್ನು ಸ್ಫೂರ್ತಿದಾಯಕ ಹಾಗೂ ವಿಶೇಷವಾಗಿಸಿದೆ' ಎಂದು ತಲ್ರೆಜಾ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ರಾಜೀವ್ ತಲ್ರೆಜಾ ಅವರು ಭವಿಷ್ಯ ಭಾಟಿಯಾ  9,700 ಮಂದಿ ದೃಷ್ಟಿಹೀನ ಪುರುಷ ಹಾಗೂ ಮಹಿಳೆಯರಿಗೆ ಉದ್ಯೋಗ ಕೂಡ ನೀಡಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇವೆಲ್ಲದರ ಹೊರತಾಗಿ ಭಾಟಿಯಾ ಅವರು ರಾಜೀವ್ ಜೊತೆಗೆ ಒಮ್ಮೆ ಹಂಚಿಕೊಂಡಿದ್ದ ಅದ್ಭುತ ಸಂದೇಶವೊಂದನ್ನು ಕೂಡ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ಸಾಲುಗಳೇ ಆನಂದ್ ಮಹೀಂದ್ರಾ ಅವರ ಮನಸ್ಸು ಕದ್ದಿರೋದು. 'ರಾಜೀವ್ ಜೀ ನನ್ನ ತಾಯಿ ಯಾವಾಗಲೂ ಹೇಳೋರು ನಿನಗೆ ಜಗತ್ತನ್ನು ಕಾಣಲು ಸಾಧ್ಯವಾಗದಿದ್ದರೆ ಏನಾಯಿತು, ಜಗತ್ತೇ ನಿನ್ನನ್ನು ನೋಡಬೇಕು ಆ ರೀತಿ ಏನಾದರೂ ಮಾಡು' ಎಂಬ ಸಾಲುಗಳನ್ನೇ ಮಹೀಂದ್ರಾ ತಾನು ಈ ತನಕ ಕೇಳದ ಅತ್ಯಂತ ಸ್ಫೂರ್ತಿದಾಯಕ ಸಂದೇಶ ಎಂದು ಮೆಚ್ಚುಗೆ ವ್ಯಕ್ತಪಡಿಸಿರೋದು.

ಇನ್ನು ಈ ವಿಡಿಯೋ ಹಂಚಿಕೊಳ್ಳುವ ಜೊತೆಗೆ ಆನಂದ್ ಮಹೀಂದ್ರಾ ಈ ರೀತಿ ಟ್ವೀಟ್ ಮಾಡಿದ್ದಾರೆ: 'ಈ ಕ್ಲಿಪ್ ನನ್ನ ಇನ್ ಬಾಕ್ಸ್ ಗೆ ಬಂದು ಬೀಳುವ ತನಕ ನಾನು ಭವಿಷ್ಯ ಬಗ್ಗೆ ತಿಳಿದುಕೊಂಡಿಲ್ಲ ಎಂಬುದು ನನಗೆ ಮುಜುಗರ ಉಂಟು ಮಾಡುತ್ತಿದೆ. ಅಸಂಖ್ಯಾತ ಯುನಿಕಾರ್ನ್ ಗಳಿಗಿಂತ ಹೆಚ್ಚು ಪ್ರಬಲವಾಗಿ ಉದ್ಯಮಿಗಳನ್ನು ಉತ್ತೇಜಿಸುವ ಶಕ್ತಿ ಇವರ ಸ್ಟಾರ್ಟ್ ಅಪ್ ಗೆ ಇದೆ. ಹೀಗೆಯೇ  ಎತ್ತರಕ್ಕೇರುತ್ತಇರಿ ಭವಿಷ್ಯ!' 

57ನೇ ವಯಸ್ಸಲ್ಲೂ ಶಾರುಖ್​ ಹ್ಯಾಂಡ್​ಸಮ್​ ಆಗಿರೋದ್ಯಾಕೆ? ಆನಂದ್​ ಮಹೀಂದ್ರಾ ಉತ್ತರ ಕೇಳಿ...

ಭವಿಷ್ಯ ಭಾಟಿಯಾ ಯಾರು?
ಭವಿಷ್ಯ ಭಾಟಿಯಾ ಹುಟ್ಟಿನಿಂದಲೇ ದೃಷ್ಟಿಹೀನತೆ ಹೊಂದಿದ್ದರು. ಆದರೆ, ಇದು ಅವರ ಸಾಧನೆಗೆ ಅಡ್ಡಿಯಾಗಲಿಲ್ಲ. 1994ರಲ್ಲಿ ಸನ್ ರೈಸ್ ಕ್ಯಾಂಡಲ್ಸ್ ಸಂಸ್ಥೆ ಸ್ಥಾಪಿಸುವ ಮೂಲಕ ಅವರು ತಮ್ಮ ಹಣೆಬರಹವನ್ನೆ ಬದಲಾಯಿಸಿಕೊಂಡರು. ಕೇವಲ ಒಂದೇ ಡೈ ಹಾಗೂ 5ಕೆಜಿ ಮೇಣದೊಂದಿಗೆ ಪ್ರಾರಂಭವಾದ ಸಂಸ್ಥೆ, ಇಂದು ವಾರ್ಷಿಕ 350 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಸುಮಾರು 10 ಸಾವಿರಕ್ಕೂ ಅಧಿಕ ದೃಷ್ಟಿಹೀನರು ಹಾಗೂ ವಿಶೇಷ ಚೇತನರಿಗೆ ಈ ಸಂಸ್ಥೆ ಮೂಲಕ ಉದ್ಯೋಗ ತರಬೇತಿ ನೀಡುವ ಜೊತೆಗೆ ಸ್ವ ಉದ್ಯೋಗ ಅವಕಾಶಗಳನ್ನು ಒದಗಿಸಲಾಗಿದೆ. ಭವಿಷ್ಯ ಭಾಟಿಯಾ ಅವರ ಸಾಧನೆಗೆ ಮೂರು ಅಂತಾರಾಷ್ಟ್ರೀಯ ಹಾಗೂ 18 ರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ. ಅಲ್ಲದೆ, 2014, 2016 ಹಾಗೂ 2019ರಲ್ಲಿ ಒಟ್ಟು ಮೂರು ಬಾರಿ ರಾಷ್ಟ್ರಪತಿ ಪುರಸ್ಕಾರವನ್ನು ಕೂಡ ಪಡೆದಿದ್ದಾರೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!