ಚೀನಾಗೆ ಕೋಲಾಹಲ, ಪಾಕ್ ಗೆ ವಿಲವಿಲ, ಭಾರತಕ್ಕೆ ‘ಜಿಂಗಾಲಾಲ’!

By Web DeskFirst Published Sep 3, 2018, 11:00 AM IST
Highlights

ಒನ್ ರೋಡ್ ,ಒನ್ ಬೆಲ್ಟ್ ಬೇಡ ಅಂತಿವೆ ಪಕ್ಕದ ರಾಷ್ಟ್ರಗಳು! ಭಾರತ ಹೇಳಿದ್ದೇ ಸತ್ಯ ಅಂತಾ ತಡವಾಗಿ ಗೊತ್ತಾಯ್ತು! ಚೀನಾ ಸಾಲದ ಸುಳಿಯಲ್ಲಿ ಸಿಕ್ಕು ಒದ್ದಾಡ್ತಿವೆ ಪುಟ್ಟ ರಾಷ್ಟ್ರಗಳು! ಚೀನಾದ ಮಹತ್ವಾಕಾಂಕ್ಷಿ ಯೋಜನೆಗೆ ಜಾಗತಿಕ ಹಿನ್ನಡೆ!  ಭಾರತದ ವಾದಕ್ಕೆ ಸಿಕ್ತು ಜಾಗತಿಕ ಮನ್ನಣೆ
 

ನವದೆಹಲಿ(ಸೆ.3): ಭಾರತದ ಗಡಿಗುಂಟ ರಸ್ತೆ ಜಾಲ ನಿರ್ಮಿಸಿ, ಅಕ್ಕಪಕ್ಕದ ಸಣ್ಣಪುಟ್ಟ ರಾಷ್ಟ್ರಗಳನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿ, ಭಾರತವನ್ನು ಹೆದರಿಸುವ ತಂತ್ರಕ್ಕೆ ಮುಂದಾಗಿದ್ದ ಚೀನಿ ಡ್ರ್ಯಾಗನ್ ಗೆ ಭಾರೀ ಹಿನ್ನಡೆಯಾಗಿದೆ.

ಚೀನಾದ ಮಹತ್ವಾಕಾಂಕ್ಷಿ ಒನ್ ರೋಡ್, ಒನ್ ಬೆಲ್ಟ್ ಯೋಜನೆ ಇದೀಗ ಸಾಲದ ಸುಳಿಯಲ್ಲಿ ಸಿಲುಕಿದೆ. ಭಾರತದ ಸುತ್ತ ರಸ್ತೆ, ರೈಲು, ಜಲ ಮಾರ್ಗಗಳನ್ನು ಸೃಷ್ಟಿಸಿ ಭಾರತವನ್ನುಕಟ್ಟಿ ಹಾಕುವ ಈ ಯೋಜನೆಗೆ ಚೀನಾ ಹೆಸರಿಸಿದ್ದು ನ್ಯೂ ಸಿಲ್ಕ್ ರೋಡ್ ಎಂದು. ಜಾಗತಿಕವಾಗಿ ಈ ಯೋಜನೆಗೆ ಮನ್ನಣೆ ಸಿಗುವಂತೆ ಮಾಡಲು, ವ್ಯಾಪಾರ ವೃದ್ಧಿ ಎಂಬ ಸೋಗನ್ನು ಹಾಕಿದ್ದ ಚೀನಾ, ಇದಕ್ಕೆ ಬಳಿಸಿಕೊಂಡಿದ್ದು, ಪಾಕಿಸ್ತಾನ, ಶ್ರೀಲಂಕಾ, ಮಲೇಶಿಯಾ, ಮಾಲ್ಡೀವ್ಸ್ ಮುಂತಾದ ಸಣ್ಣಪುಟ್ಟ ರಾಷ್ಟ್ರಗಳನ್ನು.

ತಮ್ಮ ದೇಶದಲ್ಲೂ ಅನೇಕ ಅಭಿವೃದ್ಧಿ ಕಾರ್ಯಗಳು ಜರುಗಲಿವೆ ಎಂಬ ಆಸೆಯಿಂದ ಮೊದಲಿಗೆ ಈ ಯೋಜನೆಯನ್ನು ಬೆಂಬಲಿಸಿದ್ದ ರಾಷ್ಟ್ರಗಳೆಲ್ಲಾ ಇದೀಗ ಚೀನಾದ ಅಸಲಿ ಚಹರೆ ನೋಡಿ ರೋಡೂ ಬೇಡ ಬೆಲ್ಟೂ ಬೇಡ ಎಂದು ಸಣ್ಣಗೆ ಧ್ವನಿ ಎತ್ತಿವೆ.

ಒನ್ ರೋಡ್ ಒನ್ ಬೆಲ್ಟ್ ಯೋಜನೆಗಾಗಿ ಚೀನಾ ಬಿಲಿಯನ್ ಗಟ್ಟಲೇ ಹಣವನ್ನು ಈ ರಾಷ್ಟ್ರಗಳಿಗೆ ಸಾಲ ನೀಡುತ್ತಿದೆ. ಮೊದಲಿಗೆ ತಮ್ಮ ದೇಶದಲ್ಲಿ ಇಷ್ಟೆಲ್ಲ ಅಭಿವೃದ್ಧಿ ಆಗುತ್ತದೆ ಎಂಬ ಆಸೆಯಿಂದ ಈ ಯೋಜನೆಗೆ ಸೈ ಎಂದಿದ್ದ ರಾಷ್ಟ್ರಗಳು, ಇದೀಗ ಚೀನಾ ಸಾಲವನ್ನು ತೀರಿಸುವುದಾದರೂ ಹೇಗೆ ಎಂಬ ಆತಂಕದಲ್ಲಿ ದಿನ ದೂಡುತ್ತಿವೆ.

ಅದರಂತೆ ಮಲೇಶಿಯಾ ಅಧ್ಯಕ್ಷ ಮಹಾತೀರ್ ಮೊಹ್ಮದ್ ತಮ್ಮ ಚೀನಾ ಭೇಟಿ ವೇಳೆ, ತಮ್ಮ ದೇಶದಲ್ಲಿ ಚೀನಾ ಕೈಗೆತ್ತಿಕೊಂಡಿರುವ ರೆಲ್ವೇ ಪ್ರಾಜೆಕ್ಟ್ ನ್ನು ಕೈಬಿಡುತ್ತಿರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಪಾಕಿಸ್ತಾನದ ಹೊಸ ಚುನಾಯಿತ ಸರ್ಕಾರ ಕೂಡ ಬೇಗ ಬೇಗ ಚೀನಾದ ಸಾಲ ತೀರಿಸಿ ಈ ಆರ್ಥಿಕ ಕಾರಿಡಾರ್ ನಿಂದ ದೂರ ಸರಿಯುವ ಇರಾದೆಯಲ್ಲಿದೆ.

ಇನ್ನು ಶ್ರೀಲಂಕಾ ಕೂಡ ಚೀನಾದ ಸಾಲದ ಭಾರ ಹೊರಲು ಸಾಧ್ಯವಾಗದೇ ಒನ್ ರೋಡ್, ಒನ್ ಬೆಲ್ಟ್ ತನಗೆ ಬೇಡ ಎಂದು ಕೂಗು ಹಾಕುತ್ತಿದೆ. ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹ್ಮದ್ ನಾಶೀದ್, ಹಿಂದೂ ಮಹಾಸಾಗರದಲ್ಲಿನ ಚೀನಾದ ಚಟುವಟಿಕೆಗಳು ತಮ್ಮನ್ನು ಆತಂಕಕ್ಕೆ ದೂಡಿದೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳಿಂದ ಒನ್ ರೋಡ್, ಒನ್ ಬೆಲ್ಟ್ ನ ನೈಜ ಇರಾದೆ ಕುರಿತು ಕಳವಳ ವ್ಯಕ್ತಪಡಿಸುತ್ತಿದ್ದ ಭಾರತಕ್ಕೆ ಮಧ್ಯಂತರ ಜಯ ಸಿಕ್ಕಂತಾಗಿದ್ದು, ಅಭಿವೃದ್ಧಿ ಆಸೆಯಿಂದ ಚೀನಾ ಮಡಿಲು ಸೇರಿದ್ದ ಈ ಎಲ್ಲಾ ರಾಷ್ಟ್ರಗಳು ಹೌದಣ್ಣ ನೀನ್ ಹೇಳಿದ್ದೇ ನಿಜ ಅಂತಾ ಮತ್ತೆ ಭಾರತದತ್ತ ನಗೆ ಬೀರುತ್ತಿವೆ.

click me!