ನಾವಲ್ಲಾ, ತೈಲ ಬೆಲೆ ಏರಿಕೆಗೆ ಅವ್ರೇ ಕಾರಣ: ಸಚಿವ!

By Web DeskFirst Published Sep 1, 2018, 6:39 PM IST
Highlights

ತೈಲ ಬೆಲೆ ಏರಿಕೆಗೆ ಅಮೆರಿಕದ ಏಕರೂಪದ ನೀತಿಯೇ ಕಾರಣ! ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್! ವಿಶ್ವದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಲು ಅಮೆರಿಕದ ಯತ್ನ! ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯ ನಿಯಂತ್ರಣಕ್ಕೆ ಯತ್ನ! ತೈಲ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಸಕಲ ಪ್ರಯತ್ನ

ಭುವನೇಶ್ವರ(ಸೆ.1): ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿರುವುದು ಒಂದೆಡೆಯಾದರೆ, ಇದರಿಂದ ಕೇಂದ್ರ ಸರ್ಕಾರಕ್ಕೂ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ.

ಹೀಗಾಗಿ ತೈಲ ಬೆಲೆ ಏರಿಕೆ ಮತ್ತು ಸರ್ಕಾರದ ನಡೆ ಸಮರ್ಥನೆಗೆ ಕೇಂದ್ರ ಪೆಟ್ರೋಲಿಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಮುಂದಾಗಿದ್ದಾರೆ. ತೈಲ ಬೆಲೆ ಏರಿಕೆಗೆ ಅಮೆರಿಕದ ಏಕರೂಪದ ನೀತಿಯೇ ಕಾರಣ ಎಂದಿರುವ ಸಚಿವರು, ವಿಶ್ವದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಅಮೆರಿಕದ ನೀತಿಯಿಂದಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. 

ಅಮೆರಿಕದ ನೀತಿಯನ್ನು ಕಟುವಾಗಿ ಟೀಕಿಸಿದ ಪ್ರಧಾನ್, ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಅಮೆರಿಕ ಯತ್ನಿಸುತ್ತಿದೆ. ಇದರಿಂದ ಡಾಲರ್ ಬೆಲೆ ಕೂಡ ಏರಿಕೆಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗುತ್ತಿದ್ದು, ತೈಲ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ ಎಂದು ಹರಿಹಾಯ್ದಿದ್ದಾರೆ. 

ಅಮೆರಿಕ ಜಾಗತಿಕ ಮಾರುಕಟ್ಟೆಯಲ್ಲಿ ನಿಯಂತ್ರಿತ ರೀತಿಯಲ್ಲಿ ವರ್ತಿಸುತ್ತಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ. ಬೆಲೆ ನಿಯಂತ್ರಣ ಮತ್ತು ತೈಲ ಬೆಲೆ ಇಳಿಕೆ ಕುರಿತು ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಪ್ರಧಾನ್ ಭರವಸೆ ನೀಡಿದರು.

ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯದ ಕುಸಿತ ಇವೆರಡೂ ದೇಶದ ಆರ್ಥಿಕತೆಗೆ ಸವಾಲೊಡ್ಡುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಸರ್ವ ಪ್ರಯತ್ನ ನಡೆಸಿದೆ ಎಂದು ಪ್ರಧಾನ್ ಮಾಹಿತಿ ನೀಡಿದರು.

click me!