
ಹಾಂಕಾಂಗ್ (ಜುಲೈ 11): ತೀವ್ರ ಹಣಕಾಸು ನಷ್ಟದಲ್ಲಿರುವ ಬ್ಯಾಂಕ್‌ನಲ್ಲಿದ್ದ ತಮ್ಮ ಠೇವಣಿ ಹಣವನ್ನು ವಾಪಾಸ್ ನೀಡುವಂತೆ ನೂರಾರು ಠೇವಣಿದಾರರು ನಡೆಸಿದ ಪ್ರತಿಭಟನೆಯನ್ನು ಚೀನಾ ಸರ್ಕಾರ ಹಿಂಸಾತ್ಮಕವಾಗಿ ಹತ್ತಿಕ್ಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಠೇವಣಿದಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೂ, ಭಾನುವಾರ ಚೀನಾದ ಆಡಳಿತಾಧಿಕಾರಿಗಳು ಅವರನ್ನು ಹಿಂಸಾತ್ಮಕವಾಗಿ ಪ್ರತಿಭಟನಾಸ್ಥಳದಿಂದ ಚದುರಿಸಿದ್ದಾರೆ. ಏಪ್ರಿಲ್ ಆರಂಭದಿಂದ ಚೀನಾದ ಮಧ್ಯರಾಜ್ಯವಾದ ಹೆನಾನ್ ಪ್ರಾಂತ್ಯದ ನಾಲ್ಕು ಗ್ರಾಮೀಣ ಬ್ಯಾಂಕುಗಳು ಮಿಲಿಯನ್ ಡಾಲರ್ ಮೌಲ್ಯದ ಠೇವಣಿಗಳನ್ನು ಬ್ಲಾಕ್ ಮಾಡಿದೆ. ಈಗಾಗಲೇ ಕಠಿಣ ಕೋವಿಡ್ ಲಾಕ್‌ಡೌನ್‌ಗಳಿಂದ ಜರ್ಜರಿತವಾಗಿರುವ ಆರ್ಥಿಕತೆಯಲ್ಲಿ ಲಕ್ಷಾಂತರ ಗ್ರಾಹಕರ ಜೀವನೋಪಾಯಕ್ಕೆ ಇದು ಆತಂಕ ಉಂಟು ಮಾಡಿತ್ತು. ಆಕ್ರೋಶಗೊಂಡಿದ್ದ ಠೇವಣಿದಾರರು ಹೆನಾನ್‌ನ ಪ್ರಾಂತೀಯ ರಾಜಧಾನಿಯಾದ ಝೆಂಗ್‌ಝೌ ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ, ಅವರ ಎಲ್ಲಾ ಬೇಡಿಕೆಗಳನ್ನು ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಸರ್ಕಾರಿ ಪ್ರತಿನಿಧಿಗಳು ಕೇಳಿಯೂ ಕೇಳದಂತೆ ವರ್ತನೆ ತೋರಿದ್ದರು ಎಂದು ಸಿಎನ್ಎನ್ ವರದಿ ಮಾಡಿದೆ.
ಸೆಂಟ್ರಲ್ ಬ್ಯಾಂಕ್ ಹೊರಗಡೆ ಪ್ರತಿಭಟನೆ: ಭಾನುವಾರ, ಚೀನಾದಾದ್ಯಂತದ 1,000 ಕ್ಕೂ ಹೆಚ್ಚು ಠೇವಣಿದಾರರು (depositors ) ದೇಶದ ಸೆಂಟ್ರಲ್ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾದ (Peoples Bank of China) ಝೆಂಗ್‌ಝೌ (Zhengzhou Branch)ಶಾಖೆಯ ಹೊರಗೆ ತಮ್ಮ ಅತಿದೊಡ್ಡ ಪ್ರತಿಭಟನೆಯನ್ನು ಪ್ರಾರಂಭಿಸಲು ಜಮಾಯಿಸಿದ್ದಾಗಿ ಪ್ರತಿಭಟನಾಕಾರರು ತಿಳಿಸಿದ್ದರು. ಕೋವಿಡ್ ಕಾರಣದಿಂದಾಗಿ ದೇಶದಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಸೀಮಿತ ಅವಕಾಶವಿದ್ದ ನಡುವೆಯೂ, ಕೋವಿಡ್ ಸಾಂಕ್ರಾಮಿಕದ (Covid Pandemic) ಬಳಿಕ ಚೀನಾ ದೇಶವು ಕಂಡಂಥ ಅತಿದೊಡ್ಡ ಪ್ರತಿಭಟನೆ ಇದಾಗಿತ್ತು. ಕಳೆದ ತಿಂಗಳು, ಝೆಂಗ್‌ಝೌ ಅಧಿಕಾರಿಗಳು ಠೇವಣಿದಾರರ ಚಲನವಲನಗಳನ್ನು ನಿರ್ಬಂಧಿಸಲು ಮತ್ತು ಅವರ ಯೋಜಿತ ಪ್ರತಿಭಟನೆಯನ್ನು ತಡೆಯಲು ದೇಶದ ಡಿಜಿಟಲ್ ಕೋವಿಡ್ ಹೆಲ್ತ್-ಕೋಡ್ ವ್ಯವಸ್ಥೆಯನ್ನು ತಿದ್ದಲು ಸಹ ಬ್ಯಾಂಕ್‌ನ ಅಧಿಕಾರಿಗಳು ಪ್ರಯತ್ನಿಸಿದ್ದರು, ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೂ ಕಾರಣವಾಗಿತ್ತು.
ಮುಂಜಾನೆ 4 ಗಂಟೆಗೆ ಪ್ರತಿಭಟನಾಕಾರರ ಜಮಾವಣೆ: ಆದರೆ, ಈ ಬಾರಿ ಹೆಚ್ಚಿನ ಪ್ರತಿಭಟನಾಕಾರರು ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳವ ಸಲುವಾಗಿ ಬೆಳಗಿನ ಜಾವದಲ್ಲಿ ಅಂದರೆ ಅಂದಾಜು 4 ಗಂಟೆಯ ಸುಮಾರಿಗೆ ಬ್ಯಾಂಕಿನ ಹೊರಗಡೆ ಜಮಾಯಿಸಿದ್ದಾರೆ. ವೃದ್ಧರು ಮತ್ತು ಮಕ್ಕಳನ್ನು ಒಳಗೊಂಡ ಪ್ರತಿಭಟನಾಕಾರರ ಗುಂಪು ಬ್ಯಾಂಕ್‌ನ ಹೊರಗೆ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು, ಬ್ಯಾನರ್‌ಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುತ್ತಾ ಬ್ಯಾಂಕ್‌ನ ಮೇಲೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. "ಹೆನಾನ್ ಬ್ಯಾಂಕ್ಸ್, ರಿಟರ್ನ್ ಮೈ ಸೇವಿಂಗ್ಸ್' ಎಂದು ಚೀನೀ ಧ್ವಜಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರು ಘೋಷಣೆ ಕೂಗಿರುವ ವಿಡಿಯೋಗಳನ್ನೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಮುಂದಿನ ವರ್ಷ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ, ವಿಶ್ವಸಂಸ್ಥೆ ವರದಿ ಬಹಿರಂಗ
ದೇಶಭಕ್ತಿಯನ್ನು ಪ್ರದರ್ಶಿಸಲು ರಾಷ್ಟ್ರೀಯ ಧ್ವಜಗಳನ್ನು ಬಳಸುವುದು ಚೀನಾದಲ್ಲಿ ಪ್ರತಿಭಟನಾಕಾರರಿಗೆ ಸಾಮಾನ್ಯ ತಂತ್ರವಾಗಿದೆ. ಇಲ್ಲಿ ದೇಶವಿರೋಧಿತನವನ್ನು ಕಟ್ಟುನಿಟ್ಟಾಗಿ ನಿಗ್ರಹ ಮಾಡಲಾಗುತ್ತಿದೆ. ಅವರ ಭಿನ್ನಾಭಿಪ್ರಾಯ ಹಾಗೂ ದೂರುಗಳು ಏನಿದ್ದರೂ ಸ್ಥಳೀಯ ಸರ್ಕಾರಗಳ ವಿರುದ್ಧ ಮಾತ್ರ, ದೇಶದ ಬಗ್ಗೆಯಾಗಲಿ ದೇಶದ ಸರ್ಕಾರದ ಬಗ್ಗೆಯಾಗಲಿ ತಮಗೆ ಯಾವುದೇ ಕೋಪವಿಲ್ಲ. ದೇಶದ ಸರ್ಕಾರವೇ ನಮಗೆ ಬೆಂಬಲ ನೀಡಬೇಕು ಎನ್ನುವ ತಂತ್ರದ ಭಾಗವಾಗಿಯೂ ಚೀನಾ ಧ್ವಜಗಳೊಂದಿಗೆ ಪ್ರತಿಭಟನೆ ಮಾಡಿದ್ದಾರೆ. "ಹೆನಾನ್ ಸರ್ಕಾರದ ಭ್ರಷ್ಟಾಚಾರ ಮತ್ತು ಹಿಂಸೆಯ ವಿರುದ್ಧ" ಎಂದು ಇಂಗ್ಲಿಷ್‌ನಲ್ಲಿ ಬರೆಯಲಾದ ಬ್ಯಾನರ್ ಬರೆಯಲಾಗಿದೆ. ಚೀನಾದ ದಿವಂಗತ ನಾಯಕ ಮಾವೋ ಝೆಡಾಂಗ್ (Mao Zedong) ಅವರ ದೊಡ್ಡ ಭಾವಚಿತ್ರವನ್ನು ಬ್ಯಾಂಕಿನ ಪ್ರವೇಶದ್ವಾರದಲ್ಲಿ ಕಂಬದ ಮೇಲೆ ಅಂಟಿಸಲಾಗಿತ್ತು. ಪ್ರತಿಭಟನೆ ನಡೆಯುತ್ತಿದ್ದ ಬೆನ್ನಲ್ಲಿಯೇ ರಸ್ತೆಯುದ್ಧಕ್ಕೂ ನೂರಾರು ಪೊಲೀಸ್ ಸಿಬ್ಬಂದಿಗಳ ಪೈಕಿ ಕೆಲವರು ಸಮವಸ್ತ್ರದಲ್ಲಿ ಹಾಗೂ ಇನ್ನೂ ಕೆಲವರು ಸಾಮಾನ್ಯ ಬಟ್ಟೆಯಲ್ಲಿ ಬಂದು ನಿಂತಿದ್ದರು. ಪ್ರತಿಭಟನಾಕಾರರು ಇವರನ್ನು ದರೋಡೆಕೋರರು ಎಂದು ಕೂಗಿದರು.
ಇದನ್ನೂ ಓದಿ: ಭಾರತದ ಹೊಡೆತಕ್ಕೆ ಚೀನಾ ಟೆಕ್ಸ್‌ಟೈಲ್ ಉದ್ಯಮ ತತ್ತರ, ತೀವ್ರ ಆರ್ಥಿಕ ಸಂಕಷ್ಟ!
ಹಿಂಸಾತ್ಮಕ ಮುಖಾಮುಖಿ: ಪ್ರತಿಭಟನೆ ಆರಂಭವಾದ ಕೆಲವೇ ಹೊತ್ತಿನಲ್ಲಿ ಪೊಲೀಸರು ಇವರ ಮೇಲೆ ಬಲಪ್ರಯೋಗ ಮಾಡಿದ್ದಾರೆ. ಅಂದಾಜು ಮುಂಜಾನೆ 11 ಗಂಟೆಯವರೆಗೂ ಪ್ರತಿಭಟನಾಕಾರರು ಸ್ಥಳದಿಂದ ಹೊರಹಾಕುವ ಪ್ರಕ್ರಿಯೆ ನಡೆಸದಿದೆ. ಮೆಟ್ಟಿಲುಗಳ ಮೇಲೆ ಕುಳಿತಿದ್ದವರನ್ನು ಭದ್ರತಾ ಅಧಿಕಾರಿಗಳು ಹೊರಹಾಕಲು ಪ್ರಯತ್ನಿಸುವ ವೇಳೆ, ಪ್ರತಿಭಟನಾಕಾರರು ಸಣ್ಣ ಬಾಟಲಿಗಳು ಹಾಗೂ ಇತರ ವಸ್ತುಗಳನ್ನು ಅವರ ಮೇಲೆ ಎಸೆದಿದ್ದಾರೆ. ಸಾಕ್ಷಿಗಳು ಮತ್ತು ಸಾಮಾಜಿಕ ಮಾಧ್ಯಮದ ವೀಡಿಯೊಗಳ ಪ್ರಕಾರ, ಭದ್ರತಾ ಅಧಿಕಾರಿಗಳು ಪ್ರತಿಭಟನಾಕಾರರನ್ನು ಮೆಟ್ಟಿಲುಗಳಿಂದ ಎಳೆದುಕೊಂಡು ಹೊರಹಾಕಿದ್ದಾರೆ. ಮಹಿಳೆಯರು ಮಕ್ಕಳೆನ್ನದೆ ಎಲ್ಲರನ್ನೂ ಥಳಿಸಿರುವ ವಿಡಿಯೋ ಕೂಡ ಪ್ರಸಾರವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.