ಕೆನರಾ ಬ್ಯಾಂಕ್ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸಿದೆ. ಈ ಸೌಲಭ್ಯವನ್ನು ಪರಿಚಯಿಸಿದ ಸಾರ್ವಜನಿಕ ವಲಯದ ಮೊದಲ ಬ್ಯಾಂಕ್ ಕೂಡ ಇದಾಗಿದೆ. ಈ ಸೌಲಭ್ಯವು ಗ್ರಾಹಕರಿಗೆ ಸುಲಭವಾಗಿ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ನಡೆಸಲು ಅನುವು ಮಾಡಿಕೊಡಲಿದೆ.
ನವದೆಹಲಿ (ಜೂ.29): ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಪಾವತಿ ಮಾಡುವ ಸೌಲಭ್ಯವನ್ನು ಕೆನರಾ ಬ್ಯಾಂಕ್ ಪರಿಚಯಿಸಿದೆ. ಈ ಸೌಲಭ್ಯವನ್ನು ಪರಿಚಯಿಸಿದ ಸಾರ್ವಜನಿಕ ವಲಯದ ಮೊದಲ ಬ್ಯಾಂಕ್ ಕೂಡ ಇದಾಗಿದೆ. ಕೆನರಾ ಬ್ಯಾಂಕಿನ 'ಕೆನರಾ ಎಐ1' ಬ್ಯಾಂಕಿಂಗ್ ಸೂಪರ್ ಅಪ್ಲಿಕೇಷನ್ ನಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಂಗಡಿಗಳಲ್ಲಿ ಶಾಪಿಂಗ್ ಮಾಡಿದ ಬಳಿಕ ಹಣ ಪಾವತಿಸಲು ಈ ಸೌಲಭ್ಯ ಬಳಸಿಕೊಳ್ಳಬಹುದು. ಇನ್ನು ಕೆನರಾ ಬ್ಯಾಂಕ್ ಗ್ರಾಹಕರು ತಮ್ಮ ರುಪೇ ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಯುಪಿಐ ಐಡಿಗೆ ಲಿಂಕ್ ಮಾಡಬಹುದು ಕೂಡ. ಈ ಸೌಲಭ್ಯವು ಸುರಕ್ಷಿತವಾಗಿದ್ದು, ಡಿಜಿಟಲ್ ಪಾವತಿ ವಿಧಾನ ಗ್ರಾಹಕರಿಗೆ ಸುಲಭವಾಗಿ ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ನಡೆಸಲು ಅನುವು ಮಾಡಿಕೊಡಲಿದೆ. ಇನ್ನು ನಿಮ್ಮ ಖಾತೆಯಲ್ಲಿ ಹಣ ಇಲ್ಲದೇ ಇರುವಾಗ ಕೂಡ ಕ್ರೆಡಿಟ್ ಕಾರ್ಡ್ ಬಳಸಿ ಈ ವಿಧಾನದ ಮೂಲಕ ನೀವು ಪಾವತಿ ಮಾಡಬಹುದಾಗಿದೆ. ಹಾಗೆಯೇ ಎಲ್ಲ ಕಡೆಗೂ ಕ್ರೆಡಿಟ್ ಕಾರ್ಡ್ ಕೊಂಡು ಹೋಗುವ ಅಗತ್ಯ ಕೂಡ ಇಲ್ಲ. ಮೊಬೈಲ್ ನಲ್ಲಿರುವ ಯುಪಿಐ ಪಾವತಿ ಅಪ್ಲಿಕೇಷನ್ ಮೂಲಕವೇ ಕ್ರೆಡಿಟ್ ಕಾರ್ಡ್ ಪಾವತಿ ಮಾಡಬಹುದು.
ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪಾವತಿಗೆ ಬಳಸುವಾಗ ಕೆಲವೊಂದು ನಿರ್ಬಂಧಗಳನ್ನು ಕೂಡ ವಿಧಿಸಲಾಗಿದೆ. ಇದನ್ನು ವ್ಯಾಪಾರಿಗಳಿಗೆ ಮಾತ್ರ ಪಾವತಿ ಮಾಡಬಹುದಾಗಿದೆ. ಅಂದರೆ ನೀವು ಶಾಪಿಂಗ್ ನಡೆಸಿದ ಬಳಿಕ ಅಂಗಡಿಗಳಲ್ಲಿ ಪಾವತಿ ಮಾಡಬಹುದು. ಆದರೆ, ವ್ಯಕ್ತಿಯಿಂದ ವ್ಯಕ್ತಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ.
ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಕ್ಕೆ ಟಿಸಿಎಸ್ ಇಲ್ಲ; ಹೊಸ ದರ ಜು.1ರ ಬದಲು ಅ.1ರಿಂದ ಜಾರಿ
'ರುಪೇ ಕ್ರೆಡಿಟ್ ಕಾರ್ಡ್ ಮೂಲಕ ವ್ಯಾಪಾರಿಗಳಿಗೆ ಯುಪಿಐ ಪಾವತಿ ಮಾಡುವ ಸೌಲಭ್ಯವನ್ನು ಕೆನರಾ ಬ್ಯಾಂಕ್ ಪರಿಚಯಿಸಿದೆ. 'ಜನಪ್ರಿಯ ಕೆನರಾ ಎಐ1' ಬ್ಯಾಂಕಿಂಗ್ ಸೂಪರ್ ಅಪ್ಲಿಕೇಷನ್ ನಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಎನ್ ಪಿಸಿಐ ಸಹಭಾಗಿತ್ವದಲ್ಲಿ ಈ ಸೌಲಭ್ಯ ಪರಿಚಯಿಸಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿದೆ' ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು ಕೂಡ ಖಾತೆ ಲಿಂಕ್ ಮಾಡುವ ಪ್ರಕ್ರಿಯೆಯನ್ನೇ ಅನುಸರಿಸಬೇಕು. ಖಾತೆ ಲಿಂಕ್ ಮಾಡುವ ಸಮಯದಲ್ಲಿ ಗ್ರಾಹಕರು ಅಕೌಂಟ್ ಲಿಸ್ಟಿಂಗ್ ನಲ್ಲಿ ಕೆನರಾ ಕ್ರೆಡಿಟ್ ಕಾರ್ಡ್ ಎಂದು ಆಯ್ಕೆ ಮಾಡಿದರಾಯ್ತು. ಇನ್ನು ಯುಪಿಐ ವಹಿವಾಟುಗಳಿಗೆ ಅನ್ವಯಿಸುವ ಮಿತಿಯೇ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ಯುಪಿಐ ಪಾವತಿಗಳಿಗೆ ಕೂಡ ಅನ್ವಯಿಸಲಿದೆ.
ಗೂಗಲ್ ಪೇ ಸಹಭಾಗಿತ್ವ
ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (ಎನ್ ಪಿಸಿಐ) ಪ್ರಾರಂಭದಲ್ಲಿ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಯುಪಿಐ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ಅವಕಾಶ ನೀಡಿತ್ತು. ಇತ್ತೀಚೆಗೆ ಇದು ಗೂಗಲ್ ಪೇ ಸಹಯೋಗದಲ್ಲಿ ಯುಪಿಐ ಜೊತೆಗೆ ರುಪೇ ಕ್ರೆಡಿಟ್ ಕಾರ್ಡ್ ಗಳನ್ನು ಸಮನ್ವಯಗೊಳಿಸಿದೆ. ಈ ಮೂಲಕ ವ್ಯಾಪಾರಿಗಳ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಗಳನ್ನು ಮಾಡಲು ಬಳಕೆದಾರರಿಗೆ ಅವಕಾಶ ನೀಡಿದೆ. ಅಲ್ಲದೆ, ಈ ಪಾವತಿಗಳಿಗೆ ಬಳಕೆದಾರರು ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಬೇಕಾದ ಅಗತ್ಯ ಕೂಡ ಇಲ್ಲ.
ಜುಲೈ 1ರಿಂದ ಈ ನಾಲ್ಕು ನಿಯಮಗಳಲ್ಲಿ ಬದಲಾವಣೆ; ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!
ಈ ಸೇವೆ ಯಾವೆಲ್ಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಗೆ ಲಭ್ಯ?
ಆಕ್ಸಿಸ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ), ಕೋಟಕ್ ಮಹೀಂದ್ರ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಂತಹ ಪ್ರಮುಖ ಬ್ಯಾಂಕ್ ಗಳ ಎಲ್ಲ ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ರುಪೇ ಮಾಹಿತಿ ನೀಡಿದೆ.