
ನವದೆಹಲಿ[ಜೂ.11]: ಬಿಟ್‌ಕಾಯಿನ್ ಹಾಗೂ ಇತರ ಕ್ರಿಪ್ಟೋ ಕರೆನ್ಸಿಗಳ ಸಂಗ್ರಹ, ಮಾರಾಟ ಮತ್ತು ವ್ಯವಹಾರ ಮಾಡಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಕ್ರಿಪ್ಟೋ ಕರೆನ್ಸಿ ನಿಷೇಧ ಹಾಗೂ ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2019ರ ಕರಡು ಪ್ರಸ್ತಾವನೆಯಲ್ಲಿ ಬಿಟ್ ಕಾಯಿನ್ ಬಳಕೆಗೆ ಜೈಲು ಶಿಕ್ಷೆ ವಿಧಿಸುವ ಅಂಶವಿದೆ. ಬಿಟ್ ಕಾಯಿನ್‌ಗಳನ್ನು ಸಂಪೂರ್ಣ ನಿಷೇಧಿಸುವುದರ ಜೊತೆಗೆ, ಕ್ರಿಪ್ಟೋ ಕರೆನ್ಸಿಯನ್ನು ಸಂಗ್ರಹಿಸುವುದು ಸಹ ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳಲಿದೆ.
ಶೀಘ್ರದಲ್ಲೇ ಈ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸಲಿದೆ. ಬಿಟ್ ಕಾಯಿನ್ ಎನ್ನುವುದು ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿ ಆಗಿದ್ದು, ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಪರಸ್ಪರ ಹೋಲಿಕೆಯೇ ಇಲ್ಲದ ಕಂಪ್ಯೂಟರ್ ನೆಟ್‌ವರ್ಕ್ ಮೂಲಕ ಇವುಗಳನ್ನು ವಿತರಿಸಲಾಗುತ್ತದೆ. ಇವುಗಳ ಮೇಲೆ ಸರ್ಕಾರದ ಯಾವುದೇ ನಿಯಂತ್ರಣ ಇರುವುದಿಲ್ಲ. ಹೀಗಾಗಿ ಇವು ದುರ್ಬಳಕೆಯಾಗುವ ಸಂದರ್ಭಗಳೇ ಅಧಿಕವಾಗಿವೆ.
ತೆರಿಗೆ ಇಲಾಖೆ, ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿಗಳು ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆರ್ಥಿಕ ವ್ಯವಹಾರಗಳ ಸಚಿವಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಕರಡು ಮಸೂದೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಈ ಪ್ರಕ್ರಿಯೆಯ ನೇತೃತ್ವ ವಹಿಸಿಕೊಂಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.