ಮಾಜಿ ಮಿಸ್‌ ಇಂಡಿಯಾ ಆದಿತಿ ಆರ್ಯಾ ಜೊತೆ ಬಿಲಿಯನೇರ್‌ ಉದಯ್‌ ಕೋಟಕ್‌ ಪುತ್ರನ ನಿಶ್ಚಿತಾರ್ಥ!

By Santosh Naik  |  First Published May 26, 2023, 7:43 PM IST

ಕಳೆದ ವರ್ಷ ಜಯ್‌ ಕೋಟಕ್‌ ಹಾಗೂ ಆದಿತಿ ಆರ್ಯಾ ಪ್ಯಾರಿಸ್‌ನಲ್ಲಿ ಐಫೆಲ್‌ ಟವರ್‌ ಎದುರು ನಿಂತಿದ್ದ ಚಿತ್ರವನ್ನು ಪೋಸ್ಟ್‌ ಮಾಡಿದ್ದಾಗಲೇ ಇವರಿಬ್ಬರ ನಿಶ್ಚಿತಾರ್ಥ ಆಗಿರುವ ಬಗ್ಗೆ ಸುದ್ದಿಯಾಗಿತ್ತು. ಈಗ ಸ್ವತಃ ಜಯ್‌ ಕೋಟಕ್‌ ಖಚಿತಪಡಿಸಿದ್ದಾರೆ.
 


ಮುಂಬೈ (ಮೇ.26): ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕ ಹಾಗೂ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಉದಯ್‌ ಕೋಟಕ್‌ ಅವರ ಪುತ್ರ ಜಯ್‌ ಕೋಟಕ್‌, ಇತ್ತೀಚೆಗೆ ತಾವು 2015ರ ಫೆಮಿನಾ ಮಿಸ್‌ ಇಂಡಿಯಾ ಆದಿತಿ ಆರ್ಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ಜಯ್‌ ಕೋಟಕ್‌ ಇದನ್ನು ಖಚಿತಪಡಿಸಿದ್ದಾರೆ. ಅದರೊಂದಿಗೆ ಯಾಲೆ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರುವ ಆದಿತಿ ಆರ್ಯಾಗೂ ಅಭಿನಂದನೆ ಸಲ್ಲಿಸಿದ್ದಾರೆ. 'ನನ್ನ ನಿಶ್ಚಿತ ವಧು ಅದಿತಿ, ಇಂದು ಯಾಲೆ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪೂರೈಸಿದಿದ್ದಾರೆ. ನಿನ್ನ ಬಗ್ಗೆ ಅತೀವ ಹೆಮ್ಮೆ ಆಗುತ್ತಿದೆ' ಎಂದು ಪದವಿ ಪಡೆಯುವ ನಿಟ್ಟಿನಲ್ಲಿ ಕಪ್ಪು ಬಣ್ಣದ ನಿಲುವಂಗಿ ಹಾಗೂ ಹ್ಯಾಟ್‌ ಧರಿಸಿದ್ದ ಅದಿತಿ ಆರ್ಯಾ ಅವರ ಎರಡು ಚಿತ್ರಗಳನ್ನು ಜಯ್‌ ಕೋಟಕ್‌ ಪೋಸ್ಟ್‌ ಮಾಡಿದ್ದಾರೆ. ಜಯ್‌ ಕೋಟಕ್‌ ಇದನ್ನು ಪೋಸ್ಟ್‌ ಮಾಡಿದ ಬಳಿಕ ಅಂದಾಜು 7 ಸಾವಿರ ಲೈಕ್‌ಗಳು ಬಂದಿದ್ದು 9 ಲಕ್ಷ ವೀವ್ಸ್‌ಗಳು ಬಂದಿವೆ. ಉದ್ಯಮಿ ಹರ್ಷ್‌ ಗೋಯೆಂಕಾ ಸೇರಿದಂತೆ ಬಹಳಷ್ಟು ಜನರು ಈ ಜೋಡಿಗೆ ಶುಭ ಹಾರೈಸಿದ್ದು ಭವಿಷ್ಯ  ಉತ್ತಮವಾಗಿರಲಿ ಎಂದಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಆಗಿದೆ ಎನ್ನುವ ವಿಚಾರ ಕಳೆದ ವರ್ಷವೂ ಸುದ್ದಿಯಲ್ಲಿತ್ತು. 

ಇವರಿಬ್ಬರೂ ಪ್ಯಾರಿಸ್‌ನಲ್ಲಿ ಐಫೆಲ್‌ ಟವರ್‌ ಮುಂದೆ ಜೊತೆಯಾಗಿ ತೆಗೆದುಕೊಂಡ ಫೋಟೋ ಹಂಚಿಕೊಂಡಾಗ ಇಬ್ಬರ ನಿಶ್ಚಿತಾರ್ಥ ಆಗಿರುವ ಗುಸುಗುಸು ಎದ್ದಿತ್ತು. ಆದರೆ, ಜಯ್‌ ಕೋಟಕ್‌ ಆಗಲಿ ಅದಿತಿ ಆರ್ಯಾ ಆಗಲಿ ಇದನ್ನು ಖಚಿತಪಡಿಸಿರಲಿಲ್ಲ.

ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಜಯ್ ಕೋಟಕ್‌ ಪದವಿ ಪೂರೈಸಿದ್ದಾರೆ. ಅರ್ಥಶಾಸ್ತ್ರ ಹಾಗೂ ಇತಿಹಾಸ ವಿಷಯಗಳಲ್ಲಿ ಪದವಿ ಪೂರೈಸಿರುವ ಜಯ್‌ ಕೋಟಕ್‌, ಬಳಿಕ ಹಾರ್ವರ್ಡ್‌ ಬ್ಯುಸಿನೆಸ್‌ ಸ್ಕೂಲ್‌ನಿಂದ ಎಂಬಿಎ ಪದವಿಯನ್ನು ಪಡೆದಯಕೊಂಡಿದ್ದಾರೆ. ಪ್ರಸ್ತುತ ಜಯ್‌ ಕೋಟಕ್‌, ಕೋಟಕ್ 811 ನ ಉಪಾಧ್ಯಕ್ಷರಾಗಿದ್ದಾರೆ, ಇದು ಕೋಟಕ್ ಮಹೀಂದ್ರಾ ಬ್ಯಾಂಕ್‌ನಿಂದ ಪ್ರಾಯೋಜಿಸಲ್ಪಟ್ಟ ಡಿಜಿಟಲ್-ಮೊದಲ ಮೊಬೈಲ್ ಬ್ಯಾಂಕ್ ಆಗಿದೆ.

ಇನ್ನೊಂದೆಡೆ ಅದತಿ ಆರ್ಯಾ ದೆಹಲಿ ವಿಶ್ವವಿದ್ಯಾಲಯದ ಶಹೀದ್‌ ಸುಖ್‌ದೇವ್‌ ಕಾಲೇಜಿನಿಂದ ಪದವಿ ಪಡೆದುಕೊಂಡಿದ್ದಾರೆ. ಅದರೊಂದಿಗೆ ಅರ್ನ್ಸ್ಟ್ & ಯಂಗ್ನಲ್ಲಿ ಮಾಜಿ ಸಂಶೋಧನಾ ವಿಶ್ಲೇಷಕರಾಗಿ ಕಲಸ ಮಾಡಿದ್ದರು. 2015ರಲ್ಲಿ ಫೆಮಿನಾ ಮಿಸ್‌ ಇಂಡಿಯಾದ 52ನೇ ಆವೃತ್ತಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಪ್ರತಿಷ್ಠಿತ ಐವಿ ಲೀಗ್ ಶಾಲೆಯಾದ ಯೇಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಲು ಯುನೈಟೆಡ್ ಸ್ಟೇಟ್ಸ್‌ಗೆ ತೆರಳುವ ಮುನ್ನ ಅವರು ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಕನ್ನಡದಲ್ಲಿ ಮುನಿರತ್ನ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿದ್ದ ಈಕೆ 'ಉತ್ತರೆ'ಯ ಪಾತ್ರ ನಿಭಾಯಿಸಿದ್ದರು.

ಬರೀ 1.5 ಲಕ್ಷ ರೂಪಾಯಿ ಮೊಬೈಲ್‌ಗಾಗಿ ಡ್ಯಾಮ್‌ನ 21 ಲಕ್ಷ ಲೀಟರ್‌ ನೀರು ಖಾಲಿ ಮಾಡಿಸಿದ ಅಧಿಕಾರಿ!

ನವೆಂಬರ್ 2022 ರಲ್ಲಿ, ಭಾರತದ ಶ್ರೀಮಂತ ಬ್ಯಾಂಕರ್‌ನ ಮಗ ಕೋಟಕ್ ಮಹೀಂದ್ರಾ ಬ್ಯಾಂಕ್ ಅನ್ನು ಮುನ್ನಡೆಸುವ ರೇಸ್‌ನಲ್ಲಿಲ್ಲ ಎಂದು ವರದಿಯಾಗಿತ್ತು. ಕೇಂದ್ರ ಬ್ಯಾಂಕ್ ಮಾರ್ಗಸೂಚಿಗಳು ಭಾರತೀಯ ವ್ಯಾಪಾರ ಮುಖ್ಯಸ್ಥರ ಅಧಿಕಾರಾವಧಿಯನ್ನು ಮಿತಿಗೊಳಿಸಿದ ನಂತರ ಈ ಸುದ್ದಿ ಬಂದಿತ್ತು. ಉದಯ್ ಕೋಟಕ್‌ 2023ರ ಅಂತ್ಯದ ವೇಳೆಗೆ ತಮ್ಮ ಮುಖ್ಯ ಕಾರ್ಯನಿರ್ವಾಹಕ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

Latest Videos

ಸೆಂಗೋಲ್‌ ಅಲ್ಲ ಅದು 'ಬೋಗಸ್‌', ಕಾಂಗ್ರೆಸ್‌ ಮಾತಿಗೆ ಕಿಡಿಕಿಡಿಯಾದ ಬಿಜೆಪಿ!

click me!