
ಬ್ಯಾಂಕ್ ಉದ್ಯೋಗಿಗಳ ಸ್ಯಾಲರಿ ಹೇಗಿರಬಹುದು ಎಂಬ ಕುತೂಹಲ ಅನೇಕರಿಗಿರುತ್ತದೆ. ಪ್ರತಿವರ್ಷವೂ ಲಕ್ಷಾಂತರ ಜನ ಐಬಿಪಿಎಸ್ ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ ಸಾವಿರಾರು ಜನ ಪಾಸಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಭದ್ರಪಡಿಸಿಕೊಳ್ಳುತ್ತಾರೆ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟಿರಬಹುದು ಎಂಬ ಕುತೂಹಲ ಅನೇಕರದ್ದು, ಅಂತಹ ಅನೇಕರ ಕುತೂಹಲವನ್ನು ಬ್ಯಾಂಕಿಂಗ್ ಅಧಿಕಾರಿಯೊಬ್ಬರು ತಣಿಸಿದ್ದಾರೆ. ಹೌದು ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ಮಾಡುವ ಒಬ್ಬರು ತಮ್ಮ ಸ್ಯಾಲರಿ ಸ್ಲಿಪ್ ಅನ್ನು ರಿವೀಲ್ ಮಾಡಿದ್ದಾರೆ. ಸ್ಯಾಲರಿಯ ಜೊತೆಗೆ ಅವರಿಗೆ ಸಿಗುವ ಸವಲತ್ತುಗಳ ವಿವರವನ್ನು ಅವರು ನೀಡಿದ್ದು, ಇದು ಸಾರ್ವಜನಿಕ ವಲಯದ ಬ್ಯಾಂಕಿಂಗ್ ವೃತ್ತಿಜೀವನದ ಆರ್ಥಿಕ ಪ್ರಯೋಜನಗಳು ಮತ್ತು ಸ್ಥಿರತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ಮಾಡುವ ಪಂಕಜ್ ಕುಮಾರ್ ದಾಸ್ ಅವರು ಮೇ 2025 ರ ತಮ್ಮ ಮೊದಲ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಕಾಣುವಂತೆ ಅವರಿಗೆ ಕೈಗೆ ಸಿಗುವ ಹಣ 98,745 ರೂ. ಈ ಹಣವೂ 40 ದಿನದ ಕೆಲಸ ಮಾಡಿದ್ದಕ್ಕೆ ಸಿಕ್ಕಿರುವುದು ಎಂದು ಅವರು ಹೇಳಿಕೊಂಡಿದ್ದಾರೆ.
ಈ ಸ್ಯಾಲರಿ ಸ್ಲಿಪ್‌ನಲ್ಲಿ ಅವರ ಮೂಲವೇತನ (basic pay),ಮನೆ ಬಾಡಿಗೆ ಭತ್ಯೆ(HRA),ತುಟ್ಟಿ ಭತ್ಯೆ(DA) ಮುಂತಾದವುಗಳ ಸಂಪೂರ್ಣ ವಿವರವಿದೆ. ಸಂಬಳದ ಹೊರತಾಗಿ ಪಂಕಜ್‌ಕುಮಾರ್ ದಾಸ್ ಒಬ್ಬ ಪ್ರೊಬೇಷನರಿ ಅಧಿಕಾರಿಯಾಗಿ ತಮಗೆ ಲಭ್ಯವಿರುವ ಇತರ ಸೌಲಭ್ಯಗಳ ವಿವರ ನೀಡಿದ್ದಾರೆ. ಇದರಲ್ಲಿ ಗುತ್ತಿಗೆ ವಸತಿ, ಪೆಟ್ರೋಲ್ ಭತ್ಯೆ, ವೃತ್ತಪತ್ರಿಕೆ ಭತ್ಯೆ, ಮನರಂಜನಾ ಭತ್ಯೆ, ವೈದ್ಯಕೀಯ ಬೆಂಬಲ, ಉಪಹಾರ ಭತ್ಯೆ, ಮನೆ ನಿರ್ವಹಣೆ, ಮೊಬೈಲ್ ಮತ್ತು ರೀಚಾರ್ಜ್ ವೆಚ್ಚಗಳು ಮತ್ತು ಕಣ್ಣಿನ ತಪಾಸಣೆಯೂ ಸೇರಿವೆ. ಇದರ ಜೊತೆಗೆ ಹೆಚ್ಚುವರಿಯಾಗಿ ದೀರ್ಘಾವಧಿಯ ಸವಲತ್ತುಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
ಅದರಲ್ಲಿ ಬಳಕೆಯಾಗದ ಸವಲತ್ತು ರಜೆಗಳನ್ನು(privilege leaves)ವೇತನವಾಗಿಸಿಕೊಳ್ಳುವ ಸೌಲಭ್ಯ, ರಜಾ ದಿನಗಳಲ್ಲಿ ಬ್ಯಾಂಕ್ ಅತಿಥಿ ಗೃಹಗಳ ಬಳಸುವ ಸವಲತ್ತು. ರಜಾ ಗೃಹಗಳಿಗೆ ಪ್ರವೇಶದಂತಹ ಹೆಚ್ಚುವರಿ ದೀರ್ಘಕಾಲೀನ ಪ್ರಯೋಜನಗಳ ಬಗ್ಗೆ ಅವರು ಗಮನ ಸೆಳೆದರು. ಇದು ನನ್ನ 40 ದಿನದ ವೇತನದ ಚೀಟಿ ಎಂದು ಬರೆದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ಬರೀ ವೈರಲ್ ಆಗಿದೆ.
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS exam) ನಡೆಸಿದ ಪಿಒ ಪರೀಕ್ಷೆಯಲ್ಲಿ ಪಾಸಾದ ಪಂಕಜ್‌ಕುಮಾರ್ ದಾಸ್ ತಾವು ಆರ್‌ಆರ್‌ಬಿಯ ಸಿಎಸ್‌ಎ ಪರೀಕ್ಷೆಯಲ್ಲೂ ಪಾಸಾಗಿರೋದಾಗಿ ಹೇಳಿದ್ದಾರೆ. ಇವರ ವೀಡಿಯೋ ಈಗ ಸಾಕಷ್ಟು ಆನ್‌ಲೈನ್ ಚರ್ಚೆಗೆ ಕಾರಣವಾಗಿದೆ. ಖಾಸಗಿ ವಲಯದ ಉದ್ಯೋಗಗಳಿಗೆ ಹೋಲಿಸಿದರೆ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಉದ್ಯೋಗಗಳು ನೀಡುವ ಆರ್ಥಿಕ ಸ್ಥಿರತೆ ಮತ್ತು ಜೀವನಶೈಲಿಯ ಕುರಿತು ಈ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಒಳ್ಳೆ ಆರೋಗ್ಯಕ್ಕೆಂದು ವಾಕ್ ಹೋದವರು ಅಪಘಾತಕ್ಕೆ ಬಲಿಯಾದರು: ಕಾರು ಡಿಕ್ಕಿಯಾಗಿ ಇಬ್ಬರು ಪಾದಚಾರಿಗಳು ಸಾವು
ಇದಕ್ಕೂ ಮೊದಲು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಪ್ರೊಬೇಷನರಿ ಅಧಿಕಾರಿಯೊಬ್ಬರು ತಮ್ಮ ಮಾಸಿಕ ಸಂಬಳವನ್ನು ಹಂಚಿಕೊಂಡ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದರು. ವೀಡಿಯೊವೊಂದರಲ್ಲಿ, ಅವರು 2.5 ವರ್ಷಗಳ ಸೇವೆಯ ನಂತರ 5 ಬಾರಿ ವೇತನ ಹೆಚ್ಚಳ ಸೇರಿದಂತೆ ಸುಮಾರು 95,000 ರೂ.ಗಳನ್ನು ಗಳಿಸುತ್ತಾರೆ ಎಂದು ಬಹಿರಂಗಪಡಿಸಿದ್ದರು.
ಬ್ಯಾಂಕ್ ಪ್ರೊಬೇಷನರಿ ಆಫೀಸರ್ (ಪಿಒ) ಎಂಬುದು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಆರಂಭಿಕ ಹಂತದ ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್-1 ಹುದ್ದೆಯಾಗಿದೆ. ಇದು ಪದವೀಧರರಿಗೆ ಹೆಚ್ಚು ಬೇಡಿಕೆಯ ವೃತ್ತಿಯಾಗಿದ್ದು, 2 ವರ್ಷಗಳ ಪ್ರೊಬೇಷನರಿ ಅವಧಿಯಲ್ಲಿ ತೀವ್ರವಾದ ತರಬೇತಿ, ಉದ್ಯೋಗ ಪರಿಭ್ರಮಣ(job rotation), ಗ್ರಾಹಕ ಸೇವೆ ಮತ್ತು ಬ್ಯಾಂಕಿಂಗ್ ಕಾರ್ಯಾಚರಣೆಗಳ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಪ್ರಮುಖ ಪರೀಕ್ಷೆಗಳಲ್ಲಿ ಎಸ್‌ಬಿಐ ಪಿಒ, ಐಬಿಪಿಎಸ್ ಪಿಒ ಮತ್ತು ಆರ್‌ಬಿಐ ಗ್ರೇಡ್ ಬಿ ಸೇರಿವೆ, ಇದನ್ನು ಸಾಮಾನ್ಯವಾಗಿ 20 ರಿಂದ 30 ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ವಾರ್ಷಿಕವಾಗಿ ನಡೆಸಲಾಗುತ್ತದೆ.
ಇದನ್ನೂ ಓದಿ: ಬಿಸಿಲಿಗೆ ಬೆಂದ ಬೆಂಗಳೂರು ಜನರಿಗೆ ಸಿಹಿ ಸುದ್ದಿ: ಸಿಲಿಕಾನ್ ಸಿಟಿಯಲ್ಲಿ ತಂಪರೆಯಲಿರುವ ವರುಣ
ಪಿಒಗಳು ಗ್ರಾಹಕ ಸೇವೆಗಳು, ಸಾಲ ಸಂಸ್ಕರಣೆ, ನಗದು ನಿರ್ವಹಣೆ ಮತ್ತು ವ್ಯವಹಾರ ಅಭಿವೃದ್ಧಿ ಸೇರಿದಂತೆ ದೈನಂದಿನ ಬ್ಯಾಂಕ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.