ಬರೀ 9 ತಿಂಗಳಲ್ಲೇ 5 ಕೋಟಿಯ ಹೂಡಿಕೆಗೆ 27 ಕೋಟಿ ರಿಟರ್ನ್ಸ್ ಪಡೆದ ಸಚಿನ್‌ ತೆಂಡುಲ್ಕರ್!

By Santosh Naik  |  First Published Dec 28, 2023, 4:03 PM IST

ಸಚಿನ್‌ ತೆಂಡುಲ್ಕರ್‌ ಮಾತ್ರವಲ್ಲ, ಪಿವಿ ಸಿಂಧು, ಸೈನಾ ನೆಹ್ವಾಲ್‌ ಹಾಗೂ ವಿವಿಎಸ್‌ ಲಕ್ಷ್ಮಣ್‌ರಿಂದಲೂ ಹೂಡಿಕೆ ಪಡೆದುಕೊಂಡಿದ್ದ ಕಂಪನಿ ಗುರುವಾರ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಪಾದಾರ್ಪಣೆ ಮಾಡಿದೆ.


ಮುಂಬೈ (ಡಿ.28): ಕೇವಲ 9 ತಿಂಗಳ ಹಿಂದೆ ಸಚಿನ್‌ ತೆಂಡುಲ್ಕರ್‌ ಮಾಡಿದ್ದ 5 ಕೋಟಿಯ ಹೂಡಿಕೆ ಇಂದು ಶೇ. 531ರಷ್ಟು ರಿಟರ್ನ್ಸ್‌ ನೀಡಿದೆ. ಹೈದರಾಬಾದ್‌ ಮೂಲದ ಅಜಾದ್‌ ಇಂಜಿನಿಯರಿಂಗ್‌ ಕಂಪನಿ, ಗುರುವಾರ ಷೇರು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಪಾದಾರ್ಪಣೆ ಮಾಡಿದ್ದು, ಇನೀಶಿಷಯಲ್‌ ಪಬ್ಲಿಕ್‌ ಆಫರಿಂಗ್‌ನಲ್ಲಿ ನೀಡಿದ್ದ ಬೆಲೆಗಿಂತ ಶೇ.37ರಷ್ಟು ಹೆಚ್ಚಿನ ದರಕ್ಕೆ ಎನ್‌ಎಸ್‌ಇ ಹಾಗೂ ಬಿಎಸ್‌ಇನಲ್ಲಿ ಲಿಸ್ಟಿಂಗ್‌ ಆಗಿದೆ. ಇದೇ ಕಂಪನಿಯ ಮೇಲೆ ಸಚಿನ್‌ ತೆಂಡುಲ್ಕರ್‌ ಕಳೆದ ಮಾರ್ಚ್‌ನಲ್ಲಿ ಹೂಡಿಕೆ ಮಾಡಿ, 5 ಕೋಟಿ ರೂಪಾಯಿ ಬೆಲೆಯ ಷೇರುಗಳನ್ನು ಖರೀದಿ ಮಾಡಿದ್ದರು. ಆಜಾದ್‌ ಇಂಜಿನಿಯರಿಂಗ್‌ ಕಂಪನಿ,  ಏರೋಸ್ಪೇಸ್, ರಕ್ಷಣೆ ಮತ್ತು ತೈಲ ಮತ್ತು ಅನಿಲ ವಲಯಗಳ ಜಾಗತಿಕ ಒಇಎಂಗಳಿಗೆ (ಮೂಲ ಉಪಕರಣ ತಯಾರಕ ಕಂಪನಿಗಳ) ಸೂಕ್ತವಾದ ಕಾಂಪೋನೆಂಟ್ಸ್‌ಗಳನ್ನು ನೀಡುವ ಕಂಪನಿಯಾಗಿದೆ. ಐಪಿಓನಲ್ಲಿ ಪ್ರತಿ ಷೇರಿಗೆ 524 ರೂಪಾಗಿ ಬೆಲೆ ನಿಗದಿ ಮಾಡಲಾಗಿದ್ದರೆ, ಲಿಸ್ಟಿಂಗ್‌ ದಿನದಂದು ಎನ್‌ಎಸ್‌ಇಯಲ್ಲಿ ಶೇ.37.40ರ ಏರಿಕೆಯೊಂದಿಗೆ ಪ್ರತಿ ಷೇರಿಗೆ 720 ರೂಪಾಯಿ, ಬಿಎಸ್‌ಇನಲ್ಲಿ ಪ್ರತಿ ಷೇರಿಗೆ 710 ರೂಪಾಯಿಗೆ ಪಾದಾರ್ಪಣೆ ಮಾಡಿದೆ.

ಇದೇ ಲೆಕ್ಕಾಚಾರಕ್ಕೆ ಹೋಲಿಸಿದರೆ, 9 ತಿಂಗಳ ಹಿಂದೆ ಸಚಿನ್‌ ತೆಂಡುಲ್ಕರ್‌ ಖರೀದಿ ಮಾಡಿದ್ದ 5 ಕೋಟಿ ಮೌಲ್ಯದ ಷೇರುಗಳ ಬೆಲೆ ಶೇ. 531ರಷ್ಟು ಏರಿಕೆಯೊಂದಿಗೆ 27 ಕೋಟಿ ರೂಪಾಯಿ ಆಗುತ್ತದೆ. ಇದು ಐಪಿಎಲ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ಅವರ ಡೀಲ್‌ ಆದ 24.75 ಕೋಟಿ ರೂಪಾಯಿ ಮೊತ್ತವನ್ನು ಮೀರಿಸಿದೆ. ಐಪಿಎಲ್‌ ಹರಾಜಿನಲ್ಲಿ ಮಿಚೆಲ್‌ ಸ್ಟಾರ್ಕ್‌ ಅತ್ಯಂತ ದುಬಾರಿ ಆಟಗಾರ ಎನಿಸಿದ್ದರು. ಕಳೆದ ಮಾರ್ಚ್‌ನಲ್ಲಿ ಸ್ಟಾಕ್‌ ಸ್ಪ್ಲಿಟ್‌ ಹಾಗೂ ಬೋನಸ್‌ ಇಶ್ಯು ನೀಡಿದ್ದರಿಂದ ಸಚಿನ್‌ ತೆಂಡುಲ್ಕರ್‌ 114.1 ರೂಪಾಯಿಯಂತೆ ಆಜಾದ್ ಇಂಜಿನಿಯರಿಂಗ್‌ನ 438,210 ಷೇರುಗಳನ್ನು ಹೊಂದಿದ್ದರು. ಐಪಿಓ ವೇಳೆ ತಮ್ಮ ಹೂಡಿಕೆಯನ್ನು ಮಾರಾಟ ಮಾಡದೇ ಇರಲು ನಿರ್ಧಾರ ಮಾಡಿದ್ದು, ಸಚಿನ್‌ಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಆಜಾದ್‌ ಇಂಜಿನಿಯರಿಂಗ್‌ 740 ಕೋಟಿ ರೂಪಾಯಿ ಐಪಿಓ ಘೋಷಣೆ ಮಾಡಿತ್ತು. ಸಚಿನ್‌ ಅವರ 5 ಕೋಟಿಯ ಹೂಡಿಕೆ ಈ ಹಂತದಲ್ಲಿ 31.5 ಕೋಟಿ ರೂಪಾಯಿ ಆಗಿದೆ.

ಹಾಗಂತ ಆದಾಜ್‌ ಇಂಜಿನಿಯರಿಂಗ್‌ನ ಐಪಿಓ ಯಶಸ್ಸು ಸಚಿನ್‌ ತೆಂಡುಲ್ಕರ್‌ರನ್ನು ಮಾತ್ರವೇ ಮತ್ತಷ್ಟು ಶ್ರೀಮಂತರನ್ನಾಗಿ ಮಾಡಿಲ್ಲ. ಬ್ಯಾಡ್ಮಿಂಟನ್‌ ತಾರೆಯರಾದ ಪಿವಿ ಸಿಂಧು, ಸೈನಾ ನೆಹ್ವಾಲ್‌ ಹಾಗೂ ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಅವರನ್ನೂ ಶ್ರೀಮಂತರನ್ನಾಗಿ ಮಾಡಿದೆ. ಈ ಮೂವರು ಕಂಪನಿಯಲ್ಲಿ ತಲಾ 1 ಕೋಟಿ ಹೂಡಿಕೆ ಮಾಡಿದ್ದರು. ಆದರೆ, ಇವರು ಆಜಾದ್‌ ಇಂಜಿನಿಯರಿಂಗ್‌ನ ಷೇರುಗಳನ್ನು ಸಚಿನ್‌ ಅವರ ಹೂಡಕೆಗಿಂತ ದುಪ್ಪಟ್ಟು ಬೆಲೆಯಲ್ಲಿ ಅಂದರೆ, ಪ್ರತಿ ಷೇರಿಗೆ 228.17 ಯಂತೆ ಖರೀದಿ ಮಾಡಿದ್ದರು. ಇದು ಅವರಿಗೆ ಶೇ. 215ರಷ್ಟು ರಿಟರ್ನ್ಸ್‌ ತಂದುಕೊಟ್ಟಿದೆ. ಇವರು ಹೂಡಿಕೆ ಮಾಡಿದ್ದ 1 ಕೋಟಿ ರೂಪಾಯಿ ಈಗ 3.15 ಕೋಟಿ ಆಗಿದೆ.

ಆಜಾದ್‌ ಇಂಜಿನಿಯರಿಂಗ್ ಈ ಐಪಿಓನಲ್ಲಿ 240 ಕೋಟಿ ರೂಪಾಯಿ ಬೆಲೆಯ ಹೊಸ ಷೇರುಗಳನ್ನು ಮಾರಾಟಕ್ಕೆ ಇಟ್ಟಿದ್ದರೆ, ಆಫರ್‌ ಫಾರ್‌ ಸೇಲ್‌ ಅಂದರೆ ಓಎಫ್‌ಎಸ್‌ ಅಡಿಯಲ್ಲಿ 500 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಸಾರ್ವಜನಿಕರಿಗಾಗಿ ಮಾರಾಟಕ್ಕೆ ಇಟ್ಟಿತ್ತು. ಕಂಪನಿಯ ಪ್ರಮೋಟರ್‌ಗಳಾಗಿದ್ದ ರಾಕೇಶ್‌ ಚೋಪ್ದಾರ್‌, ಹೂಡಿಕೆದಾರರಾದ ಪಿರಾಮಲ್‌ ಸ್ಟ್ರಕ್ಚರ್ಡ್‌ ಫಂಡ್ ಮತ್ತು ಡಿಎಂಐ ಫೈನಾನ್ಸ್‌ ತಮ್ಮ ಪಾಲಿನ ಷೇರುಗಳನ್ನು ಓಎಫ್‌ಎಸ್‌ ಮೂಲಕ ಮಾರಾಟಕ್ಕೆ ಇಟ್ಟಿತ್ತು. ಐಪಿಓಗಳಲ್ಲಿ ಓಎಫ್‌ಎಸ್‌ ಎಂದರೆ, ಅದಾಗಲೇ ಕಂಪನಿಯಲ್ಲಿ ಷೇರುಗಳನ್ನು ಹೊಂದಿರುವ ವ್ಯಕ್ತಿಗಳು ಮಾರಾಟ ಮಾಡಲಿರುವ ಷೇರುಗಳು ಎಂದಾಗುತ್ತದೆ. ಈ ಮೊತ್ತ ಕಂಪನಿಗೆ ಸೇರುವುದಿಲ್ಲ. ಐಪಿಓನಲ್ಲಿ ಫ್ರೆಶ್‌ ಇಶ್ಯು ಎಂದಾದಲ್ಲಿ ಈ ಮೊತ್ತ ಕಂಪನಿಯ ಅಕೌಂಟ್‌ಗೆ ಸೇರುತ್ತದೆ.

Latest Videos

undefined

ಐಪಿಒ ಕಡೆ ಹೆಜ್ಜೆ ಇಟ್ಟ ಓಲಾ ಎಲೆಕ್ಟ್ರಿಕ್: 5,500 ಕೋಟಿ ರೂ. ಹಣ ಸಂಗ್ರಹಿಸಲಿರೋ ಭಾರತದ ಇವಿ ಕಂಪನಿ

ಆಜಾದ್‌ ಇಂಜಿನಿಯರಿಂಗ್‌ ಕಂಪನಿಗೆ ಮಾರುಕಟ್ಟೆಯಲ್ಲಿ ದೈತ್ಯರಾದ ಜನರಲ್‌ ಎಲೆಕ್ಟ್ರಿಕ್‌, ಹನಿವೆಲ್‌ ಇಂಟರ್‌ನ್ಯಾಷನಲ್‌ ಮತ್ತು ಸೀಮನ್ಸ್‌ ಎನರ್ಜಿ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಈ ಮೂರು ಕಂಪನಿಗಳು ಗ್ಯಾಸ್‌ ಟರ್ಬೈನ್‌ ಮಾರುಕಟ್ಟೆ ಷೇರಿನ ಶೇ.70ರಷ್ಟು ಹೊಂದಿವೆ.

ರಾಜಕೀಯ ಆಯ್ತು, ಐಟಿ ಇಂಡಸ್ಟ್ರೀಯಲ್ಲೂ ಕಿಡಿ ಹೊತ್ತಿಸಿದ 'ಆಪರೇಷನ್‌', ಇನ್ಫೋಸಿಸ್‌-ಕಾಗ್ನಿಜೆಂಟ್‌ ಫೈಟ್‌!

click me!