ಇಂದು ಬ್ಯಾಂಕ್ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರು ಕೆವೈಸಿ ಮಾಡಿಸೋದು ಅಗತ್ಯ. ಈಗ ಯುಐಡಿಎಐ mAadhaar app ನಲ್ಲಿ ಕಾಗದರಹಿತ ಆಪ್ ಲೈನ್ ಇ-ಕೆವೈಸಿ ಸೌಲಭ್ಯವನ್ನು ಒದಗಿಸಿದೆ.
ನವದೆಹಲಿ (ಡಿ.28): ಆಧಾರ್ ಕಾರ್ಡ್ ಭಾರತದ ಅತ್ಯಂತ ಪ್ರಮುಖ ಗುರತು ದಾಖಲೆ. ಪ್ರತಿಯೊಂದು ಕೆಲಸಕ್ಕೂ ಇಂದು ಆಧಾರ್ ಅತ್ಯಗತ್ಯ. ಇನ್ನು ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಯಿಂದ ಹಿಡಿದು ಪ್ರತಿಯೊಂದು ಹಣಕಾಸಿನ ಕೆಲಸಗಳಿಗೆ ಕೆವೈಸಿ ಬೇಕೇಬೇಕು. ಹೀಗಿರುವಾಗ ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ವಿತರಿಸುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) 'ಕಾಗದರಹಿತ ಆಪ್ ಲೈನ್ -ಇ-ಕೆವೈಸಿ' ಸೌಲಭ್ಯ ಕಲ್ಪಿಸಿದೆ. mAadhaar app ನಲ್ಲಿ ಈ ಅವಕಾಶವನ್ನು ಯುಐಡಿಎಐ ಅಳವಡಿಸಿದೆ. ಅಪ್ಲಿಕೇಷನ್ ಒಳಗೆ ಪರಿಚಯಿಸಿರುವ ಈ ಹೊಸ ಸೌಲಭ್ಯ ಇ-ಕೆವೈಸಿ (ನೋ ಯುವರ್ ಕಸ್ಟಮರ್) ಪ್ರಕ್ರಿಯೆಯನ್ನು ಗ್ರಾಹಕರಿಗೆ ಸರಳಗೊಳಿಸಲಿದೆ. ಒಂದೇ ವೇದಿಕೆಯಲ್ಲಿ ಆಧಾರ್ ಸಂಬಂಧಿ ವಿವಿಧ ಕಾರ್ಯಗಳನ್ನು ಒಗ್ಗೂಡಿಸಲಿದೆ.
ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿ ಪ್ರಮುಖ ಕೆಲಸಗಳಿಗೆ ಕೆವೈಸಿ ಅಗತ್ಯ. ಈ ಕೆವೈಸಿ ಪ್ರಕ್ರಿಯೆಗೆ ಆಧಾರ್ ಕಾರ್ಡ್, ಪ್ಯಾನ್ ಸೇರಿದಂತೆ ಅಗತ್ಯ ಗುರುತು ದೃಢೀಕರಣ ದಾಖಲೆಗಳನ್ನು ನೀಡುವುದು ಅಗತ್ಯ. ಈ ಪ್ರಕ್ರಿಯೆಯಲ್ಲಿ ಯಾವುದೇ ಸೇವೆ ಅಥವಾ ವ್ಯವಸ್ಥೆಯ ಪ್ರಯೋಜನ ಪಡೆಯಲು ಆ ವ್ಯಕ್ತಿ ಮೊದಲು ತನ್ನ ಗುರುತು ದೃಢೀಕರಿಸೋದು ಅಗತ್ಯ. ಇದಕ್ಕಾಗಿ ಆತ ಅನೇಕ ದಾಖಲೆಗಳನ್ನು ಒದಗಿಸೋದು ಅಗತ್ಯ. ಆದರೆ, mAadhaar appನಲ್ಲಿನ ಈ ಹೊಸ ವ್ಯವಸ್ಥೆ ಈ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದೆ. ಆಪ್ ಲೈನ್ ಕಾಗದರಹಿತ ಇ-ಕೆವೈಸಿ ಸೌಲಭ್ಯ ಬಳಕೆದಾರರಿಗೆ ಅಪ್ಲಿಕೇಷನ್ ನಲ್ಲೇ ಶೇರ್ ಮಾಡುವಂತಹ ದಾಖಲೆಗಳನ್ನು ಸೃಷ್ಟಿಸಲು ನೆರವು ನೀಡುತ್ತದೆ.
ಕೆವೈಸಿ ಪ್ರಕ್ರಿಯೆಯನ್ನುಇನ್ನಷ್ಟು ಸರಳಗೊಳಿಸಿದ ಹೊಸ ಡಿಜಿಲಾಕರ್, ಹೇಗೆ? ಇಲ್ಲಿದೆ ಮಾಹಿತಿ
ಈ ದಾಖಲೆಗಳನ್ನು ಆಪ್ ಲೈನ್ ನಲ್ಲಿ ಕೂಡ ಸುರಕ್ಷಿತ ದೃಢೀಕರಣಕ್ಕೆ ಬಳಸಬಹುದು. 'ಒಂದು ಸುರಕ್ಷಿತ ಹಂಚಿಕೊಳ್ಳಬಹುದಾದ ದಾಖಲೆಯಾಗಿದ್ದು, ಇದನ್ನು ಯಾವುದೇ ಆಧಾರ್ ಬಳಕೆದಾರರು ಆಪ್ ಲೈನ್ ಗುರುತು ದೃಢೀಕರಣಕ್ಕೆ ಬಳಸಬಹುದು.'
ಕಾಗದರಹಿತ ಆಪ್ ಲೈನ್ ಇ-ಕೆವೈಸಿ ಪಡೆಯೋದು ಹೇಗೆ?
ಈ ಸೌಲಭ್ಯ ಪಡೆಯಲು ಬಳಕೆದಾರರು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
1.ಡೌನ್ಲೋಡ್ ಅಥವಾ ಅಪ್ಡೇಟ್ : ಪ್ಲೇ ಸ್ಟೋರ್ ಅಥವಾ ಆಪಲ್ ಅಪ್ಲಿಕೇಷನ್ ಸ್ಟೋರ್ ನಿಂದ mAadhaar app ಹೊಸ ವರ್ಷನ್ ಅನ್ನು ಡೌನ್ಲೋಡ್ ಅಥವಾ ಅಪ್ಡೇಟ್ ಮಾಡಿಕೊಳ್ಳಿ.
2.ಲಾಗಿನ್ ಹಾಗೂ ನ್ಯಾವಿಗೇಟ್ : ನಿಮ್ಮ ನೋಂದಾಯಿತ ಫೋನ್ ನಂಬರ್ ಹಾಗೂ ಒಟಿಪಿ ಬಳಸಿಕೊಂಡು ಲಾಗಿನ್ ಆಗಿ. ಆ ಬಳಿಕ ಅಪ್ಲಿಕೇಷನ್ ಬಾಟಂ ಬಾರ್ ನಲ್ಲಿರುವ ಸರ್ವೀಸ್ ಟ್ಯಾಬ್ ಗೆ ತೆರಳಿ.
3.ಹೊಸ ವ್ಯವಸ್ಥೆಗೆ ತೆರಳಿ: 'Aadhaar Services' ಅಡಿಯಲ್ಲಿ 'Paperless Offline e-KYC' ಮೇಲೆ ಕ್ಲಿಕ್ ಮಾಡಿ.
4.ಮಾಹಿತಿ ದಾಖಲೀಕರಣ ಹಾಗೂ ಒಟಿಪಿ ಮನವಿ: ನಿಮ್ಮ ಆಧಾರ್ ಸಂಖ್ಯೆ, ಶೇರ್ ಕೋಡ್ ಹಾಗೂ ಸೆಕ್ಯುರಿಟಿ ಕ್ಯಾಪ್ಚ್ ನಮೂದಿಸಿ. 'Request OTP'ಮೇಲೆ ಕ್ಲಿಕ್ ಮಾಡುವ ಮೂಲಕ ಮುಂದುವರಿಯಿರಿ.
5. ದೃಢೀಕರಣ ಪ್ರಕ್ರಿಯೆ: ನಿಮಗೆ ಬಂದಿರುವ ಒಟಿಪಿ ನಮೂದಿಸಿ ಹಾಗೂ ನಿಮ್ಮ ಮಾಹಿತಿಗಳನ್ನು ಪರಿಶೀಲಿಸಿ.
6.ಇ-ಕೆವೈಸಿ ದಾಖಲೆ ಶೇರ್ ಮಾಡಿ: ಪರಿಶೀಲನೆ ಬಳಿಕ 'Share eKYC' ಬಟನ್ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ನೀವು ಯಾವ ಆಪ್ ಮೂಲಕ ಇ-ಕೆವೈಸಿ ದಾಖಲೆಗಳನ್ನು ಹಂಚಿಕೊಳ್ಳಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿ.
ಏನಿದು ಕೆವೈಸಿ ವಂಚನೆ? ಇದರಿಂದ ಬಚಾವಾಗಲು ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ
ಆಪ್ ಲೈನ್ ದೃಢೀಕರಣ ಹೇಗೆ?
ಇ-ಕೆವೈಸಿ ದಾಖಲೆಗಳನ್ನು ಹೊಂದಿರುವ ಝಿಪ್ ಫೈಲ್ ಅನ್ನು ಸಂಬಂಧಪಟ್ಟ ಸಂಸ್ಥೆ ಅಥವಾ ಸೇವಾ ಪೂರೈಕೆದಾರರ ಜೊತೆಗೆ ಹಂಚಿಕೊಳ್ಳಬಹುದು. ತಡೆರಹಿತ ಆಪ್ ಲೈನ್ ದೃಢೀಕರಣಕ್ಕೆ ಝಿಪ್ ಫೈಲ್ ಜೊತೆಗೆ 'ಶೇರ್ ಕೋಡ್' ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯ ಎಂದು mAadhaar ಅಪ್ಲಿಕೇಷನ್ ತಿಳಿಸಿದೆ.