
ನವದೆಹಲಿ (ಏ.10): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ಏಟನ್ನು ಮೀರಿಸುವ ಪ್ರಯತ್ನವಾಗಿ ತಂತ್ರಜ್ಞಾನ ದೈತ್ಯ ಆಪಲ್ ಭಾರತದಲ್ಲಿ ತನ್ನ ಉತ್ಪಾದನೆಯನ್ನು ದಾಖಲೆಯ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಈಗ ಆಪಲ್ ಕಂಪನಿ ಚಾರ್ಟರ್ಡ್ ಕಾರ್ಗೋ ವಿಮಾನಗಳ ಮೂಲಕ 600 ಟನ್ ಅಥವಾ 1.5 ಮಿಲಿಯನ್ ಐಫೋನ್‌ಗಳನ್ನು ಭಾರತದಿಂದ ಅಮೆರಿಕಕ್ಕೆ ಏರ್‌ಲಿಫ್ಟ್ ಮಾಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಟ್ರಂಪ್ ತೆರಿಗೆ ಏಟಿನಿಂದ ಬಚಾವ್ ಆಗುವ ನಿಟ್ಟಿನಲ್ಲಿ ತನ್ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಅಮೆರಿಕದಲ್ಲಿ ತನ್ನ ಜನಪ್ರಿಯ ಐಫೋನ್‌ಗಳ ದಾಸ್ತಾನು ಸಂಗ್ರಹಿಸಲು ಅಮೆರಿಕದ ಸ್ಮಾರ್ಟ್‌ಫೋನ್ ಕಂಪನಿಯ ಖಾಸಗಿ ತಂತ್ರದ ಭಾಗವಾಗಿ 600 ಟನ್ ಫೋನ್‌ಗಳನ್ನು ಏರ್‌ಲಿಫ್ಟ್ ಮಾಡಲಾಗಿದೆ.
ಟ್ರಂಪ್ ವಿಧಿಸಿರುವ ಅತ್ಯಧಿಕ 125% ಸುಂಕ ದರಕ್ಕೆ ಒಳಪಟ್ಟಿರುವ ಚೀನಾದ ಆಮದಿನ ಮೇಲೆ ಆಪಲ್ ಹೆಚ್ಚಿನ ಅವಲಂಬನೆಯನ್ನು ಹೊಂದಿರುವ ಕಾರಣ, ಅಮೆರಿಕದ ಐಫೋನ್‌ಗಳ ಬೆಲೆಗಳು ಏರಿಕೆಯಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಆ ಅಂಕಿ ಅಂಶವು ಭಾರತದಿಂದ ಆಮದು ಮಾಡಿಕೊಳ್ಳುವ ಮೇಲಿನ 26 ಪ್ರತಿಶತದಷ್ಟು ಸುಂಕಕ್ಕಿಂತ ಬಹಳ ಹೆಚ್ಚಾಗಿದೆ, ಆದರೆ ಟ್ರಂಪ್ ಈ ವಾರ ಚೀನಾವನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮವನ್ನು ನೀಡಿದ್ದಾರೆ. ಆಪಲ್ "ಸುಂಕವನ್ನು ಮೀರಿಸಲು ಬಯಸಿದೆ" ಎಂದು ಯೋಜನೆಯ ಬಗ್ಗೆ ತಿಳಿದಿರುವ ಮೂಲಗಳಲ್ಲಿ ಒಬ್ಬರು ಹೇಳಿದರು.
ಏರ್‌ಪೋರ್ಟ್ ಅಧಿಕಾರಿಗಳಿಗೆ ಲಾಬಿ: ದಕ್ಷಿಣ ರಾಜ್ಯವಾದ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತೆರವುಗೊಳಿಸಲು ಬೇಕಾದ ಸಮಯವನ್ನು 30 ಗಂಟೆಗಳಿಂದ ಆರು ಗಂಟೆಗಳಿಗೆ ಇಳಿಸುವಂತೆ ಕಂಪನಿಯು ಭಾರತೀಯ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಒತ್ತಾಯಿಸಿತು ಎಂದು ಮೂಲಗಳು ತಿಳಿಸಿವೆ. ಭಾರತದ ಉತ್ಪಾದನಾ ಕೇಂದ್ರದಲ್ಲಿರುವ ವಿಮಾನ ನಿಲ್ದಾಣದಲ್ಲಿ "ಗ್ರೀನ್ ಕಾರಿಡಾರ್' ಮೂಲಕ ಚೀನಾದಲ್ಲಿ ನಿರ್ಮಾಣವಾಗುತ್ತಿರುವ ರೀತಿಯ ಐಫೋನ್ ಮಾದರಿಯನ್ನು ಅಮೆರಿಕಕ್ಕೆ ಏರ್‌ಲಿಫ್ಟ್ ಮಾಡಿಕೊಂಡಿದೆ.
ಮಾರ್ಚ್‌ನಿಂದ ತಲಾ 100 ಟನ್ ಸಾಮರ್ಥ್ಯದ ಸುಮಾರು ಆರು ಸರಕು ವಿಮಾನಗಳು ಹಾರಾಟ ನಡೆಸಿವೆ, ಅವುಗಳಲ್ಲಿ ಒಂದು ಈ ವಾರ ಹೊಸ ಸುಂಕಗಳು ಜಾರಿಗೆ ಬಂದ ದಿನದಂದೇ ಹಾರಾಟ ನಡೆಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಫೋನ್ 14 ಮತ್ತು ಅದರ ಚಾರ್ಜಿಂಗ್ ಕೇಬಲ್‌ನ ಪ್ಯಾಕ್ ಮಾಡಲಾದ ತೂಕ ಸುಮಾರು 350 ಗ್ರಾಂ ಎಂದು ಮಾಪನಗಳು ತೋರಿಸಿವೆ, ಇದು 600 ಟನ್‌ಗಳ ಒಟ್ಟು ಸರಕು ಸುಮಾರು 1.5 ಮಿಲಿಯನ್ ಐಫೋನ್‌ಗಳನ್ನು ಒಳಗೊಂಡಿತ್ತು ಎನ್ನಲಾಗಿದೆ.
ಆಪಲ್ ಮತ್ತು ಭಾರತದ ವಿಮಾನಯಾನ ಸಚಿವಾಲಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ತಂತ್ರ ಮತ್ತು ಚರ್ಚೆಗಳು ಖಾಸಗಿಯಾಗಿರುವುದರಿಂದ ಎಲ್ಲಾ ಮೂಲಗಳು ಅನಾಮಧೇಯತೆಯನ್ನು ಬಯಸಿವೆ.
ಆಪಲ್ ವಿಶ್ವಾದ್ಯಂತ ವರ್ಷಕ್ಕೆ 220 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ಮಾರಾಟ ಮಾಡುತ್ತದೆ, ಕೌಂಟರ್‌ಪಾಯಿಂಟ್ ರಿಸರ್ಚ್ ಅಂದಾಜಿನ ಪ್ರಕಾರ ಈಗ ಯುನೈಟೆಡ್ ಸ್ಟೇಟ್ಸ್‌ಗೆ ಒಟ್ಟು ಐಫೋನ್ ಆಮದುಗಳಲ್ಲಿ ಐದನೇ ಒಂದು ಭಾಗ ಭಾರತದಿಂದ ಮತ್ತು ಉಳಿದವು ಚೀನಾದಿಂದ ಬರುತ್ತವೆ. ಟ್ರಂಪ್ ನಿರಂತರವಾಗಿ ಚೀನಾದ ಮೇಲಿನ ಅಮೆರಿಕದ ಸುಂಕವನ್ನು ಹೆಚ್ಚಿಸುತ್ತಾ ಬಂದಿದ್ದು, ಬುಧವಾರದ ವೇಳೆಗೆ ಇದು 125 ಪ್ರತಿಶತಕ್ಕೆ ತಲುಪಿತು,ಇದಕ್ಕೂ ಮುನ್ನ ಶೇ. 35ರಷ್ಟು ಸುಂಕ ವಿಧಿಸಲಾಗಿತ್ತು.
ರೋಸೆನ್‌ಬ್ಲಾಟ್ ಸೆಕ್ಯುರಿಟೀಸ್‌ನ ಅಂದಾಜಿನ ಪ್ರಕಾರ, 54% ಸುಂಕ ದರದಲ್ಲಿ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟಾಪ್-ಎಂಡ್ ಐಫೋನ್ 16 ಪ್ರೊ ಮ್ಯಾಕ್ಸ್‌ನ $1,599 ಬೆಲೆ $2,300 ಕ್ಕೆ ಏರಲಿದೆ ಎನ್ನಲಾಗಿದೆ.
ಭಾನುವಾರದ ಶಿಫ್ಟ್‌ನಲ್ಲೂ ಕೆಲಸ: ಭಾರತದಲ್ಲಿ ಐಫೋನ್ ಉತ್ಪಾದನೆಗಿಂತ ಶೇ.20ರಷ್ಟು ಹೆಚ್ಚಿನ ಉತ್ಪಾದನೆ ಮಾಡಲು ಆಪಲ್ ಸೂಚನೆ ನೀಡಿತ್ತು.ಅದಕ್ಕಾಗಿ ಏರ್‌ಶಿಪ್‌ಮೆಂಟ್‌ಅನ್ನೂ ಆರಂಭ ಮಾಡಿತ್ತು. ಅದರೊಂದಿಗೆ ಹೆಚ್ಚಿನ ಕಾರ್ಮಿಕರನ್ನು ಫಾಕ್ಸ್‌ಕಾನ್ ಫ್ಯಾಕ್ಟರಿಯಲ್ಲಿ ಸೇರಿಸಲಾಗಿತ್ತು. ಭಾನುವಾರದ ಶಿಫ್ಟ್‌ನಲ್ಲೂ ಕೂಡ ಕೆಲಸ ಮಾಡಲಾಗಿದೆ. ಚೆನ್ನೈನಲ್ಲಿರುವ ಫಾಕ್ಸ್‌ಕಾನ್ ಪ್ಲ್ಯಾಂಟ್ ಈಗ ಭಾನುವಾರದಂದು ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿಯ ಮೂಲ ತಿಳಿಸಿದೆ, ಇದು ಸಾಮಾನ್ಯವಾಗಿ ರಜಾದಿನವಾಗಿದೆ. ಕಳೆದ ವರ್ಷ ಈ ಸ್ಥಾವರವು 20 ಮಿಲಿಯನ್ ಐಫೋನ್‌ಗಳನ್ನು ಉತ್ಪಾದಿಸಿತು, ಇದರಲ್ಲಿ ಇತ್ತೀಚಿನ ಐಫೋನ್ 15 ಮತ್ತು 16 ಮಾದರಿಗಳು ಸೇರಿವೆ.
ಟ್ರಂಪ್ ನೀತಿಯಿಂದ ಐಫೋನ್ ಖರೀದಿ ಇನ್ನು ಸುಲಭವಲ್ಲ, ಬಲು ದುಬಾರಿ
ಆಪಲ್ ತನ್ನ ಉತ್ಪಾದನೆಯನ್ನು ಚೀನಾವನ್ನು ಮೀರಿ ವೈವಿಧ್ಯಗೊಳಿಸುತ್ತಿದ್ದಂತೆ, ಭಾರತವು ನಿರ್ಣಾಯಕ ಪಾತ್ರಕ್ಕಾಗಿ ಸ್ಥಾನ ಪಡೆದಿದೆ. ಅಲ್ಲಿ ಅದರ ಎರಡು ಪ್ರಮುಖ ಪೂರೈಕೆದಾರರಾದ ಫಾಕ್ಸ್‌ಕಾನ್ ಮತ್ತು ಟಾಟಾ ಒಟ್ಟು ಮೂರು ಕಾರ್ಖಾನೆಗಳನ್ನು ಹೊಂದಿದ್ದು, ಇನ್ನೂ ಎರಡು ನಿರ್ಮಾಣ ಹಂತದಲ್ಲಿವೆ.
Trump tarrif: ಭಾರತದಿಂದ ಅಮೆರಿಕಕ್ಕೆ ಐದು ವಿಮಾನ ಭರ್ತಿ ಐಫೋನ್ ರಫ್ತು!
ಚೆನ್ನೈನಲ್ಲಿ ತ್ವರಿತ ಕಸ್ಟಮ್ಸ್ ಕ್ಲಿಯರೆನ್ಸ್ ಅನ್ನು ಯೋಜಿಸಲು ಆಪಲ್ ಸುಮಾರು ಎಂಟು ತಿಂಗಳುಗಳನ್ನು ಕಳೆದಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಆಪಲ್ ಅನ್ನು ಬೆಂಬಲಿಸುವಂತೆ ಅಧಿಕಾರಿಗಳನ್ನು ಕೇಳಿದೆ ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.