'ಅನಿಲ್ ಅಂಬಾನಿ ಒಂದು ಕಾಲದ ಶ್ರೀಮಂತ ಉದ್ಯಮಿ ನಿಜ'| 'ಈಗ ಅನಿಲ್ ಅಂಬಾನಿ ಶ್ರೀಮಂತ ಉದ್ಯಮಿ ಅಲ್ಲ'| ಲಂಡನ್ ಕೋರ್ಟ್‌ಗೆ ಅನಿಲ್ ಪರ ವಕೀಲ ಹರೀಶ್ ಸಾಳ್ವೆ ಮಾಹಿತಿ| ಚೀನಾ ಮೂಲದ ಉನ್ನತ ಬ್ಯಾಂಕ್‌ಗಳಿಂದ ಅನಿಲ್ ವಿರುದ್ಧ ನ್ಯಾಯಾಲಯದಲ್ಲಿ ದಾವೆ| ಅನಿಲ್ ಪರ ವಕೀಲರ ವಾದ ಪ್ರಶ್ನಿಸಿದ ಚೀನಾ ಬ್ಯಾಂಕ್ ಪರ ವಕೀಲರು| ಅನಿಲ್ ದಿವಾಳಿಯಾಗಿದ್ದರೆ ಐಷಾರಾಮಿ ಜೀವನ ಹೇಗೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದ ವಕೀಲ| ಅನಿಲ್ ಅವರಿಂದ 680 ದಶಲಕ್ಷ ಡಾಲರ್ ಹಣ ಹಿಂಪಡೆಯಲು ಚೀನಾ ಬ್ಯಾಂಕ್‌ಗಳ ಪ್ರಯತ್ನ|
ಲಂಡನ್(ಫೆ.08): ಅದೊಂದು ಕಾಲವಿತ್ತು. ಅಂಬಾನಿ ಸಹೋದರರಲ್ಲಿ ಕಿರಿಯರಾದ ಅನಿಲ್ ಅಂಬಾನಿ ದೇಶದ ಪ್ರತಿಷ್ಠಿತ ಉದ್ಯಮಿಗಳ ಪಟ್ಟಿಯಲ್ಲಿ ರಾರಾಜಿಸುತ್ತಿದ್ದರು. ಆದರೀಗ ವ್ಯಾಪಾರ, ಅಂತಸ್ತು ಎಲ್ಲವನ್ನೂ ಕಳೆದುಕೊಂಡಿರುವ ಅನಿಲ್ ಅಂಬಾನಿ ಅಕ್ಚರಶ: ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯ.
ಹೌದು, ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಒಂದು ಕಾಲದಲ್ಲಿ ಶ್ರೀಮಂತ ಉದ್ಯಮಿಯಾಗಿದ್ದರು. ಆದರೆ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಬದಲಾವಣೆಗಳಿಂದ ಅವರು ಶ್ರೀಮಂತ ಉದ್ಯಮಿಯಾಗಿ ಉಳಿದಿಲ್ಲ ಎಂದು ಅನಿಲ್ ಪರ ವಕೀಲ ಹರೀಶ್ ಸಾಳ್ವೆ ಲಂಡನ್ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಚೀನಾ ಮೂಲದ ಉನ್ನತ ಬ್ಯಾಂಕ್‌ಗಳು ಅನಿಲ್ ಅಂಬಾನಿ ಅವರಿಂದ 680 ದಶಲಕ್ಷ ಡಾಲರ್ ಹಣ ಹಿಂಪಡೆಯಲು ಲಂಡನ್ ನ್ಯಾಯಾಲಯದಲ್ಲಿ ದಾವೆ ಹೂಡಿವೆ. ಈ ಕುರಿತಾದ ವಿಚಾರಣೆ ಸಂದರ್ಭದಲ್ಲಿ ಹರೀಶ್ ಸಾಳ್ವೆ ಅನಿಲ್ ಅಂಬಾನಿ ದಿವಾಳಿಯಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಎಲ್ಲ ಮುಗಿದ ಮೇಲೆ: ರಿಲಯನ್ಸ್ ಕಮ್ಯುನಿಕೇಷನ್ಸ್‌ಗೆ ಅಂಬಾನಿ ರಾಜೀನಾಮೆ!
2012ರ ನಂತರ ಅನಿಲ್ ಅಂಬಾನಿ ಅವರ ಹೂಡಿಕೆಗಳು ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿದ್ದು, ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಭಾರತ ಸರ್ಕಾರದ ನೀತಿ ಬದಲಾವಣೆಯ ನಿರ್ಧಾರದಿಂದ ಅನಿಲ್ ಅಂಬಾನಿ ಅವರ ಟೆಲಿಕಾಂ ಕಂಪನಿ ನಷ್ಟದಲ್ಲಿದೆ ಎಂದು ಸಾಳ್ವೆ ಮಾಹಿತಿ ನೀಡಿದ್ದಾರೆ.
2012ರಲ್ಲಿ 7 ಶತಕೋಟಿ ಡಾಲರ್ ಗೂ ಅಧಿಕ ಇದ್ದ ಅನಿಲ್ ಅಂಬಾನಿ ಹೂಡಿಕೆ ಮೌಲ್ಯ ಇಂದು 89 ದಶಲಕ್ಷ ಡಾಲರ್ ಗೆ ಇಳಿದಿದ್ದು, ಬಾಧ್ಯತೆಗಳ ಲೆಕ್ಕ ತೆಗೆದುಕೊಂಡರೆ ಅವರ ವ್ಯವಹಾರ ಜಾಲ ಮೌಲ್ಯ ಶೂನ್ಯವಾಗಿದೆ ಎಂದು ಸಳ್ವೆ ವಾದ ಮಂಡಿಸಿದರು.
ಆದರೆ ಸಾಳ್ವೆ ವಾದವನ್ನು ಪ್ರಶ್ನಿಸಿದ ಚೀನಾ ಬ್ಯಾಂಕ್ ಪರ ವಕೀಲರು, ಅನಿಲ್ ಎಲ್ಲವನ್ನೂ ಕಳೆದುಕೊಂಡಿದ್ದರೆ ಐಷಾರಾಮಿ ಜೀವನ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ನ್ಯಾಯಾಧೀಶ ಡೆವಿಡ್ ವ್ಯಾಕ್ಸ್, ಅನಿಲ್ ಅಂಬಾನಿ ಭಾರತದಲ್ಲಿ ದಿವಾಳಿತನದ ಅರ್ಜಿ ಸಲ್ಲಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಾಲ ತೀರಿಸಲು ಮುಂಬೈನ ಕೇಂದ್ರ ಕಚೇರಿಯನ್ನೇ ಮಾರಲು ಅನಿಲ್ ಅಂಬಾನಿ ನಿರ್ಧಾರ?
2012ರ ಫೆಬ್ರವರಿಯಲ್ಲಿ ತೆಗೆದುಕೊಂಡ ಸುಮಾರು 925 ದಶಲಕ್ಷ ಡಾಲರ್ ಮರು ಹಣಕಾಸು ಸಾಲದ ಮೇಲೆ ವೈಯಕ್ತಿಕ ಖಾತರಿಯನ್ನು ಅನಿಲ್ ಅಂಬಾನಿಯವರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚೀನಾದ ವಿವಿಧ ಬ್ಯಾಂಕ್‌ಗಳು ನ್ಯಾಯಾಲಯದಲ್ಲಿ ದಾವೆ ಹೂಡಿವೆ.