ಸರಕು ಸಾಗಣೆ ವ್ಯವಸ್ಥೆಯ ಜೀವನಾಡಿಯಾಗಿರುವ ಲಾರಿಗಳ ಚಾಲಕರ ಪೈಕಿ ಶೇ.55ರಷ್ಟು ಜನರು ದೃಷ್ಟಿದೋಷದ ಸಮಸ್ಯೆ ಹೊಂದಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಐಐಟಿ ದೆಹಲಿ ಇಂಥದ್ದೊಂದು ವರದಿ ಬಿಡುಗಡೆ ಮಾಡಿದೆ.
ನವದೆಹಲಿ: ಸರಕು ಸಾಗಣೆ ವ್ಯವಸ್ಥೆಯ ಜೀವನಾಡಿಯಾಗಿರುವ ಲಾರಿಗಳ ಚಾಲಕರ ಪೈಕಿ ಶೇ.55ರಷ್ಟು ಜನರು ದೃಷ್ಟಿದೋಷದ ಸಮಸ್ಯೆ ಹೊಂದಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಐಐಟಿ ದೆಹಲಿ ಇಂಥದ್ದೊಂದು ವರದಿ ಬಿಡುಗಡೆ ಮಾಡಿದೆ.
ವರದಿಯಲ್ಲೇನಿದೆ?:
ವರದಿ ಅನ್ವಯ ಒಟ್ಟು ಚಾಲಕರ ಪೈಕಿ ಶೇ.55.1ರಷ್ಟು ಜನರು ದೃಷ್ಟಿದೋಷ ಹೊಂದಿದ್ದಾರೆ. ಈ ಪೈಕಿ ಶೇ.53.3 ಜನರಿಗೆ ಸಮೀಪದೃಷ್ಟಿ ದೋಷ ಮತ್ತು ಶೇ.46.7 ಜನರು ದೂರದೃಷ್ಟಿ ದೋಷವನ್ನು ಹೊಂದಿದ್ದಾರೆ.
ಇನ್ನು ಶೇ.44.3 ಚಾಲಕರು ಅಧಿಕ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಹೊಂದಿದ್ದು, ಶೇ.57.4ರಷ್ಟು ಜನ ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ. ಶೇ.18.4 ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಶೇ.33.9 ಚಾಲಕರು ಮಧ್ಯಮ ಒತ್ತಡ (ಸ್ಟ್ರೆಸ್) ಹೊಂದಿದ್ದು, ಶೇ.2.9 ಚಾಲಕರು ಅಧಿಕ ಒತ್ತಡ ಮಟ್ಟವನ್ನು ಹೊಂದಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.
ವರದಿ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ‘ಭಾರತದ ಸಾರಿಗೆ ವ್ಯವಸ್ಥೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. 100 ಟ್ರಕ್‌ಗಳಿಗೆ ಕೇವಲ 75 ಚಾಲಕರಿದ್ದಾರೆ. ಚಾಲಕರ ಯೋಗಕ್ಷೇಮದ ಕುರಿತು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನ ಒಟ್ಟು 50,000 ಟ್ರಕ್ ಚಾಲಕರನ್ನು ಫೋರ್‌ಸೈಟ್ ಫೌಂಡೇಶನ್‌ನ ಸಹಯೋಗದಲ್ಲಿ ಐಐಟಿ ದೆಹಲಿ ಪರೀಕ್ಷಿಸಿತ್ತು.