
ನವದೆಹಲಿ [ಫೆ.09]: ಸುಮಾರು 5 ಲಕ್ಷ ಭಾರತೀಯರ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ವಿವರಗಳು ಸೋರಿಕೆಯಾಗಿದ್ದು, ಇವನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿರುವ ಅತ್ಯಂತ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ಕಾರ್ಡುಗಳ ಅವಧಿ ಮುಕ್ತಾಯ ದಿನಾಂಕ, ಸಿವಿವಿ/ಸಿವಿಸಿ ಕೋಡ್‌ಗಳು, ಕಾರ್ಡುದಾರರ ಹೆಸರು, ಕೆಲವೊಂದು ಪ್ರಕರಣಗಳಲ್ಲಿ ಇ-ಮೇಲ್, ಕಾರ್ಡ್‌ಗಳ ಮೇಲಿರುವ 14ರಿಂದ 16 ಸಂಖ್ಯೆಗಳು ಸೋರಿಕೆಯಾಗಿವೆ. ಹಣಕಾಸು ವಂಚನೆ ಕುಖ್ಯಾತಿಗೀಡಾಗಿರುವ ಡಾರ್ಕ್ನೆಟ್‌ನಲ್ಲಿ ಈ ವಿವರಗಳು ಮಾರಾಟಕ್ಕಿವೆ ಎಂದು ಸಿಂಗಾಪುರ ಮೂಲದ ಸೈಬರ್ ಭದ್ರತಾ ಸಂಸ್ಥೆ ಗ್ರೂಪ್ ಐಬಿ ಎಚ್ಚರಿಕೆ ಗಂಟೆ ಬಾರಿಸಿದೆ. ಇಷ್ಟೆಲ್ಲಾ ಮಾಹಿತಿಗಳನ್ನು ಬಳಸಿಕೊಂಡು ಬೇರಾವುದೇ ದೃಢೀಕರಣದ ಅಗತ್ಯವಿಲ್ಲದೆ ಹಣಕಾಸು ವ್ಯವಹಾರವನ್ನು ನಡೆಸಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಒಟ್ಟು 4,61,976 ಕಾರ್ಡುದಾರರ ಮಾಹಿತಿ ಸೋರಿಕೆಯಾಗಿದೆ. ಪ್ರತಿ ಕಾರ್ಡಿಗೆ 650 ರು.ನಂತೆ ವಿವರಗಳನ್ನು ಮಾರಾಟಕ್ಕಿಡಲಾಗಿದೆ. ಎಲ್ಲ ಕಾರ್ಡುಗಳ ವಿವರ ಮಾರಾಟದಿಂದ ಆನ್‌ಲೈನ್ ಕಳ್ಳರು 30 ಕೋಟಿ ರು. ಸಂಪಾದಿಸಬಹುದಾಗಿದೆ ಎಂದು ಸಿಂಗಾಪುರ ಸಂಸ್ಥೆ ತಿಳಿಸಿದೆ.
ಬ್ಯಾಂಕ್‌ಗಳು, ಆರ್‌ಬಿಐಗೆ ಎಚ್ಚರಿಕೆ:
ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕಿರುವ ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಕುರಿತಾಗಿ ಭಾರತೀಯ ರಿಸವ್‌ರ್ ಬ್ಯಾಂಕ್ ಹಾಗೂ ಭಾರತದ ಎಲ್ಲ ಬ್ಯಾಂಕ್‌ಗಳಿಗೆ ಭಾರತೀಯ ಸೈಬರ್ ಭದ್ರತೆ ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ, ಈಗಾಗಲೇ ಬಿಕರಿಯಾಗಿರುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಪೈಕಿ ಅದೆಷ್ಟುಕಾರ್ಡುಗಳು ಸಕ್ರಿಯವಾಗಿವೆ ಎಂಬ ನಿಖರ ಮಾಹಿತಿಯಿಲ್ಲ. ಇವುಗಳಲ್ಲಿ ಬಹುತೇಕ ಕಾರ್ಡುಗಳು ಹಳೆಯವಾಗಿರಬಹದು ಮತ್ತು ನಿಷ್ಕ್ರೀಯವಾಗಿರಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೋರಿಕೆ ಹೇಗಾಯ್ತು?
ಈ ಬಗ್ಗೆ ತಕ್ಷಣಕ್ಕೆ ಮಾಹಿತಿ ಇಲ್ಲ. ಫಿಶಿಂಗ್, ಮಾಲ್‌ವೇರ್ ಅಳವಡಿಕೆ, ಇ- ಕಾಮರ್ಸ್ ವೆಬ್‌ಸೈಟ್ ಹ್ಯಾಕ್ ಮೂಲಕ ಗ್ರಾಹಕರ ವಿವರವನ್ನು ಸೈಬರ್ ಕಳ್ಳರು ಎಗರಿಸಿರಬಹುದು ಎಂಬ ಶಂಕೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.