
ನವದೆಹಲಿ(ಫೆ.16): ಖಾಸಗೀಕರಣ ಪರ್ವ ಮುಂದುವರಿಸಿರುವ ಕೇಂದ್ರ ಸರ್ಕಾರ, ಬಜೆಟ್‌ನಲ್ಲಿ ಪ್ರಕಟಿಸಿದಂತೆ ಮಧ್ಯಮ ಗಾತ್ರದ 2 ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸಿದ್ಧತೆ ಆರಂಭಿಸಿದೆ.
ಇದಕ್ಕಾಗಿ ಸರ್ಕಾರ ಈಗ 4 ಬ್ಯಾಂಕ್‌ಗಳ ‘ಶಾರ್ಟ್‌ಲಿಸ್ಟ್’ ಸಿದ್ಧಪಡಿಸಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ- ಇವು ಶಾರ್ಟ್‌ಲಿಸ್ಟ್ ಸೇರಿರುವ ಬ್ಯಾಂಕ್‌ಗಳು. ಇವುಗಳಲ್ಲಿ 2 ಬ್ಯಾಂಕ್‌ಗಳನ್ನು ಏಪ್ರಿಲ್‌ನಲ್ಲಿ ಆರಂಭವಾಗುವ 2021-22ನೇ ಹಣಕಾಸು ವರ್ಷದಲ್ಲಿ ಆಯ್ಕೆ ಮಾಡಿಕೊಂಡು ಮಾರಾಟಕ್ಕೆ ಇಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಸರ್ಕಾರ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಮುಷ್ಕರ: ಯಾವಾಗ? ಇಲ್ಲಿದೆ ಮಾಹಿತಿ
ಈ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ 4 ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಚಿಂತನೆ ನಡೆಸಿತ್ತು. ಆದರೆ ಬ್ಯಾಂಕ್ ನೌಕರರ ಒಕ್ಕೂಟದ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣದಿಂದ ಇದನ್ನು 2ಕ್ಕೆ ಇಳಿಸಿತು ಎಂದು ಗೊತ್ತಾಗಿದೆ.
ಉದ್ದೇಶ ಏನು?
ಬ್ಯಾಂಕ್ ಸೇರಿದಂತೆ ತನ್ನ ಪಾಲು ಹೊಂದಿರುವ ವಿವಿಧ ಉದ್ಯಮಗಳಲ್ಲಿನ ಪಾಲು ಮಾರಾಟದ ಮಾಡುವ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ 1.72 ಲಕ್ಷ ಕೋಟಿ ರು. ಹಣ ಸಂಗ್ರಹದ ಉದ್ದೇಶವನ್ನು ಸರ್ಕಾರ ಇಟ್ಟುಕೊಂಡಿದೆ. ಜೊತೆಗೆ ಖಾಸಗಿ ಪಾಲುದಾರಿಕೆಯಿಂದ ಸ್ಪರ್ಧಾತ್ಮಕತೆ ಹೆಚ್ಚುತ್ತದೆ, ಕಾರ್ಯಕ್ಷಮತೆ ಹೆಚ್ಚುತ್ತದೆ ಎಂಬುದು ಸರ್ಕಾರದ ಚಿಂತನೆ.
ಕಲ್ಲಿದ್ದಲು ಸರ್ಕಾರಕ್ಕೆ ಹರಾಜಿಂದ 7000 ಕೋಟಿ ರು. ಆದಾಯ!
ಎಷ್ಟು ಉದ್ಯೋಗಿಗಳು
ಬ್ಯಾಂಕ್ ಆಫ್ ಇಂಡಿಯಾದಲ್ಲಿ 50 ಸಾವಿರ, ಸೆಂಟ್ರಲ್ ಬ್ಯಾಂಕ್‌ನಲ್ಲಿ 33 ಸಾವಿರ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 26 ಸಾವಿರ, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 13 ಸಾವಿರ ಉದ್ಯೋಗಿಗಳಿದ್ದಾರೆ.
ಸಂಭವನೀಯ ಬ್ಯಾಂಕ್‌ಗಳು
ಬ್ಯಾಂಕ್ ಆಫ್ ಮಹಾರಾಷ್ಟ್ರ
ಬ್ಯಾಂಕ್ ಆಫ್ ಇಂಡಿಯಾ
ಇಂಡಿಯನ್ ಓವರ್‌ಸೀಸ್ ಬ್ಯಾಂಕ್
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.