ಅಕ್ಷಯ ತೃತೀಯಾ: ಒಂದೇ ದಿನ ಸಾವಿರಾರು ಕೋಟಿ ರು. ವ್ಯಾಪಾರ!

By Web DeskFirst Published May 8, 2019, 7:28 AM IST
Highlights

ಅಕ್ಷಯ ತೃತೀಯಾದಂದು ಒಂದೇ ದಿನ ಸಾವಿವಾರು ಕೋಟಿ ರು. ಭರ್ಜರಿ ವ್ಯಾಪಾರ ನಡೆದಿದೆ. ರಾಜ್ಯದಲ್ಲೂ ಜನರು ಭಾರೀ ಸಂಖ್ಯೆಯಲ್ಲಿ ಚಿನ್ನ ಖರೀದಿಸಿದ್ದಾರೆ. ಹಾಗಾದ್ರೆ ನಿನ್ನೆ ಮಂಗಳವಾರ ನಡೆದ ವ್ಯವಹಾರವೆಷ್ಟು? ಇಲ್ಲಿದೆ ವಿವರ

ಬೆಂಗಳೂರು[ಮೇ.08]: ಅಕ್ಷಯ ತೃತೀಯ ಅಂಗವಾಗಿ ಮಂಗಳವಾರ ರಾಜ್ಯಾದ್ಯಂತ ಒಟ್ಟಾರೆ 1,480 ಕೆ.ಜಿ.ಗೂ ಅಧಿಕ ಚಿನ್ನ ಮಾರಾಟವಾಗಿದ್ದು, 1,500 ಕೆ.ಜಿ.ಗೂ ಅಧಿಕ ಬೆಳ್ಳಿ ಮಾರಾಟವಾಗಿದೆ. ಈ ಮೂಲಕ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಸುಮಾರು 3,900 ಕೋಟಿಗಿಂತ ಹೆಚ್ಚು ವಹಿವಾಟು ನಡೆದಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಅತಿ ಹೆಚ್ಚು ವಹಿವಾಟು ನಡೆದಿದೆ. ಕಳೆದ ಬಾರಿಗಿಂತ ಶೇ.30ರಷ್ಟುಹೆಚ್ಚು ವಹಿವಾಟು ನಡೆಯುತ್ತದೆ ಎಂದು ಆಭರಣ ವ್ಯಾಪಾರಿಗಳು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಮೀರಿ ದುಪ್ಪಟ್ಟು ವಹಿವಾಟು ನಡೆದಿದೆ. ಬೆಂಗಳೂರಿನ ಆಭರಣ ಮಳಿಗೆಗಳಲ್ಲಿ 560 ಕೆ.ಜಿ. ಚಿನ್ನ, 300 ಕೆ.ಜಿ.ಗೂ ಹೆಚ್ಚು ಬೆಳ್ಳಿ ಖರೀದಿಯಾಗಿದೆ.

ಧನ ಪ್ರಾಪ್ತಿಗೆ ಅಕ್ಷಯ ತೃತೀಯದಂದು ಹೀಗ್ ಮಾಡಿ...

ರಾಜ್ಯದಲ್ಲಿ ಅಕ್ಷಯ ತೃತೀಯ ದಿನವಾದ ಮಂಗಳವಾರ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ 1,480 ಕೆ.ಜಿ. ಚಿನ್ನ, 1500ಕ್ಕೂ ಹೆಚ್ಚು ಕೆ.ಜಿ. ಬೆಳ್ಳಿ ಮಾರಾಟವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆ 3900 ಕೋಟಿಗೂ ಹೆಚ್ಚು ವ್ಯಾಪಾರ ಜರುಗಿದೆ. ಆಭರಣ ಚಿನ್ನ (22 ಕ್ಯಾರೆಟ್‌) ಒಂದು ಗ್ರಾಂಗೆ .2,960, ಬೆಳ್ಳಿ ಒಂದು ಕೆ.ಜಿ.ಗೆ 37,500, ಬೆಳ್ಳಿ ಒಂದು ಗ್ರಾಂ 38 ರು. ಬೆಲೆಗೆ ಮಾರಾಟಗೊಂಡಿದೆ. 24 ಕ್ಯಾರೆಟ್‌ ಚಿನ್ನಕ್ಕೆ 32,300 (10 ಗ್ರಾಂ) ಬೆಲೆ ನಿಗದಿಯಾಗಿತ್ತು. 22 ಕ್ಯಾರೆಟ್‌ ಚಿನ್ನ ಕೆಲ ಅಂಗಡಿಗಳಲ್ಲಿ .2,960ಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ಕಳೆದ 15-20 ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆಯಾಗಿರುವುದರಿಂದಲೂ ಅಕ್ಷಯ ತೃತೀಯ ದಿನ ಮಾರಾಟ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಅಕ್ಷಯ ತೃತೀಯದಂದು ಆಭರಣ ಖರೀದಿ ಜಾಸ್ತಿ ಯಾಕೆ?

ಈ ಬಾರಿ ಮಂಗಳವಾರ ಅಕ್ಷಯ ತೃತೀಯ ಬಂದಿದ್ದರಿಂದ ಜನರು ಉತ್ಸಾಹದಿಂದಲೇ ಚಿನ್ನ, ಬೆಳ್ಳಿ, ವಜ್ರಾಭರಣ ಖರೀದಿಸಿದ್ದಾರೆ. ಕೆಲ ಮಳಿಗೆಗಳಲ್ಲಿ ತದಿಗೆ ಹಿನ್ನೆಲೆಯಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆದು ವಹಿವಾಟು ನಡೆಸಲಾಯಿತು. ಗ್ರಾಹಕರು ಮಳಿಗೆಗಳಿಗೆ ಮುಗಿಬಿದ್ದು ಚಿನ್ನ, ಬೆಳ್ಳಿ, ವಜ್ರ ಹೀಗೆ ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಆಭರಣಗಳನ್ನು ಖರೀದಿಸಿದರು. ಜತೆಗೆ ಮುಂಗಡ ಬುಕ್ಕಿಂಗ್‌ ಮಾಡಿದ್ದವರು ಒಡವೆಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು. ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ಹಲವು ರಿಯಾಯಿತಿ, ಕೊಡುಗೆಗಳನ್ನು ಘೋಷಿಸಲಾಗಿತ್ತು. ಮೇ 8ರ ಬುಧವಾರ ಮುಂಜಾನೆ 3 ಗಂಟೆ 5 ನಿಮಿಷಕ್ಕೆ ರೋಹಿಣಿ ನಕ್ಷತ್ರ ಪ್ರವೇಶವಾದ ನಂತರ ತದಿಗೆ ಮುಕ್ತಾಯಗೊಂಡಿತು. ಮಂಗಳವಾರ ರಾತ್ರಿ 11ರವರೆಗೂ ಕೆಲವೆಡೆ ಖರೀದಿಯಾಗಿದೆ.

ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆಯಾಗಿದ್ದರಿಂದ ವ್ಯಾಪಾರ ತುಂಬಾ ಚೆನ್ನಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.20ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ವ್ಯವಹಾರವಾಗಿದೆ.

- ಟಿ.ಎ. ಶರವಣ, ಅಧ್ಯಕ್ಷರು, ಕರ್ನಾಟಕ ಜ್ಯುವೆಲರ್ಸ್‌ ಅಸೋಸಿಯೇಶನ್‌

ಕಳೆದ ವರ್ಷಕ್ಕಿಂತ ದುಪ್ಪಟ್ಟು ಖರೀದಿಯಾಗಿದೆ. ದರವೂ ಕಡಿಮೆ ಇರುವುದು ಗ್ರಾಹಕರಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಸುಮಾರು .3900 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಬೆಂಗಳೂರಿನಲ್ಲಿ 1,000 ಕೋಟಿಗೂ ಹೆಚ್ಚು ಬೆಲೆಯ ಚಿನ್ನ, ಬೆಳ್ಳಿ ಖರೀದಿಯಾಗಿದೆ.

- ಡಾ| ಬಿ.ರಾಮಾಚಾರಿ, ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ

click me!