
ಪ್ರೀತಿಸಿ ಮದುವೆಯಾದ ಪತಿಯಿಂದಲೇ ಖಾಸಗಿ ಫೋಟೋ ವೈರಲ್ ಆಗಿ ಬೀದಿಗೆ ಬಿದ್ದ ಮಹಿಳೆಯೊಬ್ಬಳ ನೋವಿನ ಕಥೆ ಮತ್ತು ಹಳೆಯ ಪ್ರೇಮಿಯ ಕಿರುಕುಳ, ಬ್ಲ್ಯಾಕ್‌ಮೇಲ್ ತಾಳಲಾರದೆ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಎರಡು ಪ್ರತ್ಯೇಕ ದುರಂತ ಘಟನೆಗಳು ರಾಜ್ಯದಲ್ಲಿ ನಡೆದಿವೆ.
ಪ್ರೀತಿ ಎನ್ನುವುದು ಜೀವ ತುಂಬುವ ಬದಲು ಜೀವ ಹಿಂಡುವ ಹಂತಕ್ಕೆ ತಲುಪಿದಾಗ ಬದುಕುಗಳು ಹೇಗೆ ನರಕವಾಗುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲಿ ಎರಡು ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ. ಒಂದೆಡೆ ಪ್ರೀತಿಸಿ ಮದುವೆಯಾದ ಗಂಡನಿಂದಲೇ ಬೀದಿಗೆ ಬಿದ್ದ ಅಸಹಾಯಕ ಹೆಣ್ಣುಮಗಳ ಕಣ್ಣೀರ ಕಥೆಯಾದರೆ, ಇನ್ನೊಂದೆಡೆ ಮದುವೆಯಾಗಿ ನೆಮ್ಮದಿಯಾಗಿದ್ದ ಗೃಹಿಣಿಯೊಬ್ಬಳು ಹಳೆಯ ‘ಪಾಗಲ್ ಪ್ರೇಮಿ’ಯ ಕಿರುಕುಳ ತಾಳಲಾರದೆ ಪ್ರಾಣ ಕಳೆದುಕೊಂಡ ದುರಂತ ನಡೆದಿದೆ.
ಪಕ್ಕದಂಗಡಿಯ ಪ್ರೇಮ.. ಹೆಂಡತಿಯ ಖಾಸಗಿ ಫೋಟೋ ವೈರಲ್ ಮಾಡಿ ಗಂಡ ನಾಪತ್ತೆ!
25 ವರ್ಷದ ಯುವತಿ ಅಮೃತಾಳ ಬದುಕು ಇಂದು ಕಣ್ಣೀರ ಕಡಲಾಗಿದೆ. 20ನೇ ಹರೆಯದಲ್ಲಿ ಪಕ್ಕದ ಅಂಗಡಿಯಲ್ಲಿದ್ದ ದರ್ಶನ್ ಎಂಬಾತನ ಮಾತು ನಂಬಿ, ಪ್ರೀತಿಸಿ ಆತನೊಂದಿಗೆ ಮನೆಬಿಟ್ಟು ಓಡಿಹೋಗಿದ್ದಳು. ಆರಂಭದಲ್ಲಿ ವಿರೋಧಿಸಿದ್ದ ಎರಡೂ ಕುಟುಂಬದವರು ನಂತರ ರಾಜಿ ಮಾಡಿಕೊಂಡು ಇಬ್ಬರಿಗೂ ವಿಧ್ಯುಕ್ತವಾಗಿ ಮದುವೆ ಮಾಡಿಸಿದ್ದರು.
ಎರಡು ಮಕ್ಕಳಾದ ಮೇಲೆ ಆರಂಭವಾಯ್ತು ನರಕ:
ದರ್ಶನ್ ಮತ್ತು ಅಮೃತಾ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಾದವು. ಸಂಸಾರ ಸುಸೂತ್ರವಾಗಿಯೇ ಸಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದರ್ಶನ್‌ನ ನಡವಳಿಕೆ ಸಂಪೂರ್ಣ ಬದಲಾಗಿತ್ತು. ಹೆಂಡತಿಯ ನಡತೆಯ ಬಗ್ಗೆ ಅನುಮಾನ ಪಡಲು ಶುರುಮಾಡಿದ ಆತ, ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾನೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ, ಕಳೆದ ಎರಡು ವರ್ಷಗಳಿಂದ ಹೆಂಡತಿ ಮತ್ತು ಹಸುಗೂಸುಗಳನ್ನು ಸಂಪೂರ್ಣವಾಗಿ ಅನಾಥ ಮಾಡಿ ನಾಪತ್ತೆಯಾಗಿದ್ದಾನೆ. ಇತ್ತ ತವರು ಮನೆಯ ಆಸರೆಯೂ ಇಲ್ಲದೆ, ಅತ್ತ ಗಂಡನ ಮನೆಯ ಬಾಗಿಲೂ ತೆರೆಯದೆ ಅಸಹಾಯಕ ಸ್ಥಿತಿಯಲ್ಲಿರುವ ಅಮೃತಾ, 'ನನ್ನ ಗಂಡ ನನಗೆ ಬೇಕು, ನನ್ನ ಮಕ್ಕಳನ್ನು ಅನಾಥ ಮಾಡಬೇಡಿ' ಎಂದು ಗಂಡನ ಮನೆಯೆದುರು ಕುಳಿತು ಧರಣಿ ನಡೆಸುತ್ತಿದ್ದಾಳೆ.
ಇಂದಿರಾನಗರದಲ್ಲಿ ಗೃಹಿಣಿ ಕವಿತಾ ಆತ್ಮಹ*ತ್ಯೆ; ‘ಪಾಗಲ್ ಪ್ರೇಮಿ’ ಕಿರಣ್ ಅರೆಸ್ಟ್!
ಬೆಂಗಳೂರಿನ ಪ್ರತಿಷ್ಠಿತ ಇಂದಿರಾನಗರದಲ್ಲಿ ಆಗಸ್ಟ್ 6ರಂದು ನಡೆದ ಗೃಹಿಣಿ ಕವಿತಾ ಆತ್ಮಹತ್ಯೆ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ.
ಕೇವಲ ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಕವಿತಾ, ಮುದ್ದಾದ ಒಂದು ಮಗುವಿನ ತಾಯಿಯಾಗಿದ್ದರು. ಪತಿ ಆಕೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು, ಗೃಹಿಣಿಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಆವತ್ತೊಂದು ದಿನ ಕವಿತಾ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾಗಿದ್ದರು. ಡೆತ್‌ನೋಟ್ ಸಿಗದ ಕಾರಣ ಸಾವಿನ ಸುತ್ತ ನಿಗೂಢತೆ ಆವರಿಸಿತ್ತು.
ಮೊಬೈಲ್ ಸಂದೇಶಗಳಲ್ಲಿ ಬಯಲಾಯ್ತು ರಹಸ್ಯ:
ಪೊಲೀಸರು ಕವಿತಾಳ ಮೊಬೈಲ್ ವಶಕ್ಕೆ ಪಡೆದು ತಾಂತ್ರಿಕ ಪರಿಶೀಲನೆ ನಡೆಸಿದಾಗ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಕವಿತಾಗೆ ಮದುವೆಯಾಗಿದ್ದರೂ ಹಳೆಯ ಪರಿಚಯಸ್ಥ ಕಿರಣ್ ಎಂಬ ಯುವಕ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. 'ನನ್ನ ಜೊತೆ ಬಾ, ಇಲ್ಲದಿದ್ದರೆ ನಿನ್ನ ಸಂಸಾರ ಹಾಳು ಮಾಡುತ್ತೇನೆ' ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೆಸೇಜ್‌ಗಳು ಪತ್ತೆಯಾಗಿವೆ. ಈ ಮಾನಸಿಕ ಹಿಂಸೆ ತಾಳಲಾರದೆ ಕವಿತಾ ಪ್ರಾಣ ಬಿಟ್ಟಿರುವುದು ದೃಢಪಟ್ಟಿದೆ. ಸದ್ಯ ಪೊಲೀಸರು ಆರೋಪಿ ಕಿರಣ್‌ನನ್ನು ಆತ್ಮಹ*ತ್ಯೆ ಪ್ರಚೋದನೆ ಆರೋಪದಡಿ ಬಂಧಿಸಿದ್ದಾರೆ.