ಬೆಂಗಳೂರು ಏರ್ಪೋರ್ಟ್ ರಸ್ತೆಯ ಜನರಿಗೆ ಮೆಟ್ರೋ ಕನಸು ನುಚ್ಚುನೂರು!

By Sathish Kumar KH  |  First Published Sep 17, 2024, 12:54 PM IST

ಬೆಂಗಳೂರು ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದಲ್ಲಿ ಎರಡು ನಿಲ್ದಾಣಗಳನ್ನು ಕೈಬಿಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಬೆಟ್ಟಹಲಸೂರು ಮತ್ತು ಚಿಕ್ಕಜಾಲ ನಿಲ್ದಾಣಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಕಾರಣ ಎನ್ನಲಾಗಿದೆ. ಈ ನಿಲ್ದಾಣಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ದೊರೆತಿಲ್ಲ ಮತ್ತು ರಾಜ್ಯ ಸರ್ಕಾರವು ಹಣ ನೀಡಲು ಸಾಧ್ಯವಾಗುತ್ತಿಲ್ಲ.


ಬೆಂಗಳೂರು (ಸೆ.17): ಬೆಂಗಳೂರು ನಗರದ ಕೇಂದ್ರ ಭಾಗದಿಂದ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದ್ದು, 2025ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಆದರೆ, ಇದೀಗ ಏರ್ಪೋರ್ಟ್ ರಸ್ತೆಯ ಜನರಿಗೆ ಮೆಟ್ರೋ ಸಂಸ್ಥೆಯಿಂದ ಬಿಗ್ ಶಾಕ್ ನೀಡಲಾಗಿದೆ.

ಹೌದು, ವಿಮಾನ ನಿಲ್ದಾಣದ ರಸ್ತೆಯಲ್ಲಿದ್ದ ಎಲ್ಲ ಹಳ್ಳಿಗಳ ಜನರು ನಮ್ಮೂರಿಗೂ ಮೆಟ್ರೋ ಬರುತ್ತದೆ. ನಾವೆಲ್ಲರೂ ಎಸಿ ಮೆಟ್ರೋದಲ್ಲಿ ಕುಳಿತು ಟ್ರಾಫಿಕ್ ರಹಿತವಾಗಿ ಬೆಂಗಳೂರು ನಗರವನ್ನು ಸುತ್ತಾಡಿಕೊಂಡು ಬರಬಹುದು. ನಮ್ಮ ಜಮೀನುಗಳಿಗೆ ಬಂಗಾರದ ಬೆಲೆ ಬರುತ್ತದೆ. ಇಲ್ಲಿನ ಮನೆಗಳಿಗೆ ಭಾರಿ ಬೇಡಿಕೆ ಬರಲಿದ್ದು, ಬಾಡಿಗೆ, ಜೀವನ ವೆಚ್ಚ ಎಲ್ಲವೂ ಶ್ರೀಮಂತವಾಗುತ್ತದೆ ಎಂದು ಏರ್ಪೋರ್ಟ್ ರಸ್ತೆಯ ಜನರು ಸಂತಸದಿಂದ ಇದ್ದರು. ಆದರೆ, ಇದೀಗ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಯಲ್ಲಿ ಸ್ವಲ್ಪ ಬದಲಾವಣೆ ಆಗಿದ್ದು, ಇದೀಗ ಜನರಿಗೆ ಬರಸಿಡಿಲು ಬಡಿದಂತಾಗಿದೆ.

Latest Videos

undefined

ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಏರ್ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಎರಡು ನಿಲ್ದಾಣಗಳನ್ನು ಕೈಬಿಡಲು ಮುಂದಾಗಿದೆ. ನೀಲಿ ಮಾರ್ಗದ ಬೆಟ್ಟಹಲಸೂರು, ಚಿಕ್ಕಜಾಲ ನಿಲ್ದಾಣ ನಿರ್ಮಿಸುವ ಯೋಜನೆ ಕೈಬಿಡುವ ಸಾಧ್ಯತೆಯಿದೆ. ಒಟ್ಟಾರೆ, 140 ಕೋಟಿ ರೂ. ವೆಚ್ಚದ ಬೆಟ್ಟಹಲಸೂರು ಮೆಟ್ರೋ ಸ್ಟೇಷನ್ ಹಾಗೂ 130 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಜಾಲ ನಿಲ್ದಾಣ ಮಾಡಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿತ್ತು. ಆದರೆ, ಇದೀಗ ಕಾಮಗಾರಿ ಮಾಡಲು ಅನುದಾನ ಸಮಸ್ಯೆ ಎದುರಾಗಿದೆ.

ನಮ್ಮ ಮೆಟ್ರೋದಲ್ಲಿ ಈಗ QR ಕೋಡ್ ಟಿಕೆಟ್ ಬುಕ್ ಮಾಡಿ ರಿಯಾಯಿತಿ ಪಡೆಯಿರಿ!

ನಮ್ಮ ಮೆಟ್ರೋ ರೂವಾರಿ ಬಿಎಂಆರ್‌ಸಿಎಲ್ ಸಂಸ್ಥೆಯಿಂದ ಬೆಂಗಳೂರು ಟು ವಿಮಾನ ನಿಲ್ದಾಣ ಮೆಟ್ರೋ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಕೆ ಮಾಡಿದಾಗ ಈ ಎರಡು ನಿಲ್ದಾಣಗಳ ಪ್ರಸ್ತಾಪ ಮಾಡಿರಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದಿಂದ ಈ ಎರಡು ಮೆಟ್ರೋ ನಿಲ್ದಾಣಗಳಿಗೆ ಅಗತ್ಯವಿರುವ 270 ಕೋಟಿ ರೂ. ಹಣ ನೀಡದಿರುವ ಕಾರಣ ಈ ಮೆಟ್ರೋ ನಿಲ್ದಾಣಗಳ ನಿರ್ಮಾಣ ಯೋಜನೆಯನ್ನು ಕೈಬಿಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇನ್ನು ಏರ್ಪೋರ್ಟ್ ಮಾರ್ಗದ ನಮ್ಮ ಮೆಟ್ರೋ 2ಬಿ ಹಂತವು ಒಟ್ಟು 36.44 ಕಿಮೀ ಉದ್ದವಿದ್ದು, ಈ ಎಲಿವೇಟೆಡ್ ಮಾರ್ಗದಲ್ಲಿ 17 ನಿಲ್ದಾಣಗಳು ಇರಲಿವೆ. ಆದರೆ, ಮೂಲ ಡಿಪಿಆರ್‌ನಲ್ಲಿ ಪ್ರಸ್ತಾಪ ಇಲ್ಲದ ಕಾರಣಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆ ಆಗಿಲ್ಲ. ಇನ್ನು ಈ ಮಾರ್ಗಕ್ಕೆ 2019ರಲ್ಲಿ ರಾಜ್ಯ ಸಚಿವ ಸಂಪುಟ ಹಲವು ಕಾರಣಗಳಿಂದ ಬೆಟ್ಟಹಲಸೂರು ಹಾಗೂ ಚಿಕ್ಕಜಾಲದಲ್ಲಿ ಮೆಟ್ರೋ ನಿಲ್ದಾಣ ಮಾಡಲು ಒಪ್ಪಿಗೆ ನೀಡಿತ್ತು. ಈ ಎರಡು ಮೆಟ್ರೋ ನಿಲ್ದಾಣಗಳಿಗೆ ರಾಜ್ಯ ಸರ್ಕಾರದಿಂದಲೇ ಅನುದಾನ ಹೊಂದಿಸುವುದಾಗಿ ಭರವಸೆಯನ್ನೂ ನೀಡಲಾಗಿತ್ತು.

ರೈಲು ಪ್ರಯಾಣಕ್ಕೆ ತತ್ಕಾಲ್ ಟಿಕೆಟ್ ಬುಕಿಂಗ್ ಕನ್ಫರ್ಮ್ ಆಗಬೇಕಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ಈ ಎರಡು ಮೆಟ್ರೋ ನಿಲ್ದಾಣಗಳಿಗೆ ಸಚಿವ ಸಂಪುಟದಿಂದ ಒಪ್ಪಿಗೆ ದೊರೆತರೂ, ಹಣವನ್ನು ಭರಿಸಬೇಕಾದ ಹೊರೆ ರಾಜ್ಯ ಸರ್ಕಾರದ ಮೇಲೆ ಬಿದ್ದಿದೆ. ಹೀಗಾಗಿ, ಯಾವುದಾದರೂ ಖಾಸಗಿ ಸಂಸ್ಥೆ ಸಹಭಾಗಿತ್ವ ತೋರಿಸುವುದಾದಲ್ಲಿ ಅನುಕೂಲ ಆಗಲಿದೆ ಎಂದು ಕೆಲವು ಖಾಸಗಿ ಸಂಸ್ಥೆಗಳಿಗೂ ಈ ವಿಚಾರವನ್ನು ತಿಳಿಸಿತ್ತು. ಆಗ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣಕ್ಕೆ ಎಂಬೆಸ್ಸಿ ಗ್ರೂಪ್ ಆಸಕ್ತಿ ತೋರಿಸಿದ್ದು, ಒಂದಷ್ಟು ಹಣವನ್ನೂ ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ, ಈಗ ಎಂಬೆಸ್ಸಿ ಸಹ ಹಣವನ್ನು ಒದಗಿಸಲು ಆಸಕ್ತಿ ತೋರುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರವೂ ಗ್ಯಾರಂಟಿ ಯೋಜನೆಗಳಿಗೆ ಸುಮಾರು 50 ಸಾವಿರ ಕೋಟಿಗೂ ಅಧಿಕ ಹಣ ವೆಚ್ಚ ಮಾಡುತ್ತಿದ್ದು, ಮೆಟ್ರೋ ನಿಲ್ದಾಣಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ನೀಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಂತಿದೆ. ಆದ್ದರಿಂದ ಬಿಎಂಆರ್‌ಸಿಎಲ್ ಚಿಕ್ಕಜಾಲ ಮತ್ತು ಬೆಟ್ಟಹಲಸೂರು ನಿಲ್ದಾಣಗಳನ್ನ ಕೈಬಿಡಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

click me!