Anubhava Mantapa: 12ನೇ ಶತಮಾನದಲ್ಲೇ ಭಾರತದಲ್ಲಿತ್ತು ಮಾದರಿ ಸಂಸತ್ತು!

Published : Jun 25, 2025, 10:07 PM IST
anubhava mantapa

ಸಾರಾಂಶ

12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಸಾಮಾಜಿಕ ಮತ್ತು ಧಾರ್ಮಿಕ ಸಂಸತ್ತಿನಂತೆ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿ ವಿವಿಧ ಜಾತಿ, ಧರ್ಮ, ವೃತ್ತಿಯ ಜನರು ಸೇರಿ ಸಮಸ್ಯೆಗಳನ್ನು ಚರ್ಚಿಸಿ, ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅಲ್ಲಮಪ್ರಭುಗಳು ಅದರ ಪ್ರಥಮ ಅಧ್ಯಕ್ಷರಾಗಿದ್ದರು.

ನಾವಿಂದು ಪ್ರಜಾಪ್ರಭುತ್ವ- ಡೆಮಾಕ್ರಸಿ ವ್ಯವಸ್ಥೆ ಅರ್ಥಾತ್‌ ಜನಪ್ರತಿನಿಧಿಗಳು ಸೇರಿ ಮಾತನಾಡಿ ನಡೆಸುವ ಆಡಳಿತ ಕ್ರಮವನ್ನು ಒಪ್ಪಿಕೊಂಡಿದ್ದೇವೆ. ಎಲ್ಲ ಜನಪ್ರತಿನಿಧಿಗಳು ಸೇರಿ ಚರ್ಚಿಸಿ ದೇಶಹಿತಕ್ಕಾಗಿ ಕಾಯಿದೆ ಕಾನೂನು ಮಾಡುವ ಸ್ಥಳವೇ ಸಂಸತ್‌ ಅಥವಾ ಪಾರ್ಲಿಮೆಂಟ್‌. ಈ ಸಂಸತ್ತಿನ ಕಲ್ಪನೆಯನ್ನು ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಬ್ರಿಟನ್‌, ಅಮೆರಿಕ ಮೊದಲಾದ ದೇಶಗಳ ಸಂವಿಧಾನಗಳಿಂದ ಪಡೆದಿದ್ದಾರೆ ಎನ್ನಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿಯೇ ಅತ್ಯಂತ ಪ್ರಾಚೀನವಾದ ಸಂಸತ್‌ ಕಲ್ಪನೆಯೊಂದಿತ್ತು ಎಂದರೆ ನೀವು ನಂಬಬೇಕು. 12ನೇ ಶತಮಾನದಷ್ಟು ಹಿಂದೆಯೇ ಇದರ ಕಲ್ಪನೆಯಿತ್ತು. ಅದೇ ಅನುಭವ ಮಂಟಪ.

ಅನುಭವ ಮಂಟಪ 12ನೇ ಶತಮಾನದಲ್ಲಿ ಎಲ್ಲಾ ಧರ್ಮದ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಸೇರುತ್ತಿದ್ದ ಒಂದು ಸಾಮಾಜಿಕ-ಧಾರ್ಮಿಕ ಸಂಸತ್ತು. ಆಗ ಕಲ್ಯಾಣಿ ಚಾಲುಕ್ಯರ ಅರಸನಾಗಿದ್ದ ಬಿಜ್ಜಳನ ಮಹಾಮಂತ್ರಿಯಾಗಿದ್ದ ಬಸವಣ್ಣನವರು ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದು 'ಅನುಭವ ಮಂಟಪ'ವನ್ನು ಸ್ಥಾಪಿಸಿದರು. ಇದರಲ್ಲಿ ಎಲ್ಲಾ ಜಾತಿಯ ಎಲ್ಲಾ ವೃತ್ತಿಯ ಸಾಮಾನ್ಯ ಜನರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು ಹಾಗೂ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಅನುಭವ ಮಂಟಪದ ಪ್ರಥಮ ಅಧ್ಯಕ್ಷರಾಗಿದ್ದವರು ಅಲ್ಲಮ ಪ್ರಭುಗಳು.

ಶರಣೆ ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ ಅಲ್ಲಮ ಪ್ರಭು ಅವಳ ಜೊತೆ ಸಂವಾದ ನಡೆಸಿದರು. ವಿವಿಧ ಜಾತಿ, ಕಾಯಕದವರು ಅನುಭವ ಮಂಟಪದ ಸದಸ್ಯರಾಗಿದ್ದರು. ದೇಶದ ಮೂಲೆ ಮೂಲೆಗಳಿಂದ ಇದರ ಕಕ್ಷೆಗೆ ಬಂದು ಸೇರಿದವರಿದ್ದರು. ಕಾಶ್ಮೀರದ ಅರಸ ತನ್ನ ಪತ್ನಿಯೊಡಗೂಡಿ ಅರಸೊತ್ತಿಗೆಯನ್ನು ತೊರೆದು ಕಲ್ಯಾಣಕ್ಕೆ ಬಂದ. ಕಟ್ಟಿಗೆ ಕಾಯಕದಲ್ಲಿ ತೊಡಗಿ ಜಂಗಮ ದಾಸೋಹಕ್ಕೆ ತೊಡಗಿದ. ಆ ದಂಪತಿಗಳು ಮೋಳಿಗೆ ಮಾರಯ್ಯ ಮಹದೇವಮ್ಮನೆಂದು ಹೆಸರಾಗಿದ್ದಾರೆ. ಸೌರಾಷ್ಟ್ರದ ವರ್ತಕ ಆದಯ್ಯ, ಆಂಧ್ರದಿಂದ ಮೈದುನ ರಾಮಯ್ಯ, ಕುಂತಳದಿಂದ ಏಕಾಂತದ ರಾಮಯ್ಯ, ಕಳಿಂಗದಿಂದ ಮರುಳಶಂಕರದೇವ ಹೀಗೆ ಈ ಪಟ್ಟಿ ಬೆಳೆಯುತ್ತದೆ.

ಇಲ್ಲಿ ನಡೆದ ಚರ್ಚೆಗಳಿಂದ ಒಬ್ಬರ ಪ್ರಶ್ನೆಗೆ ಮತ್ತೊಬ್ಬರ ಉತ್ತರವೆಂಬಂತೆ ಹಲವು ವಚನಗಳು ರಚನೆಗೊಂಡಿವೆ. ಪ್ರಶ್ನೆ ಉತ್ತರಗಳು ಮಹಾಜಿಜ್ಞಾಸೆಗಳಾಗಿ ʼಶೂನ್ಯಸಂಪಾದನೆಗಳುʼ ಎಂಬ ಗ್ರಂಥಗಳು ರೂಪುಗೊಂಡಿವೆ. ಅನುಭವ ಮಂಟಪದಿಂದಾಗಿಯೇ 12ನೇ ಶತಮಾನದಲ್ಲಿ ಜಾತಿಭೇದವನ್ನು ಮೀರಬೇಕು ಎಂಬ ಕಲ್ಪನೆ ಗಟ್ಟಿಯಾಯಿತು. ಸದೃಢ ಸಮಾಜಕ್ಕೆ ನಾಂದಿಯಾಯಿತು. ಇಂದು ನಾವು ಸಂವಿಧಾನದಲ್ಲಿ ಸೇರಿಸಿರುವ ʼಜಾತ್ಯತೀತʼ ಎಂಬ ಪರಿಕಲ್ಪನೆಯನ್ನು ಅಂದೇ ಅನುಭವ ಮಂಟಪ ಸಾಕಾರಗೊಳಿಸಿತ್ತು.

ಈ ಅನುಭವ ಮಂಟಪದಲ್ಲಿ ಎಲ್ಲ ವರ್ಗ ವರ್ಣ ಮೂಲದ ಶರಣರೂ ಕಲೆತು ಸರ್ವ ಭೇದಗಳನ್ನು ಕಿತ್ತೊಗೆದು ಶಿವಾನುಭವ ಸಹಪಂಕ್ತಿ ಭೋಜನ ನಡೆಸುತ್ತಿದ್ದರು. ಅನುಭವ ಮಂಟಪದ ಮಧ್ಯದಲ್ಲಿ ಶೂನ್ಯ ಸಿಂಹಾಸನವಿತ್ತು. ಇದು ಅಧ್ಯಕ್ಷರ ಗದ್ದುಗೆಯಾಗಿದ್ದು, ಈ ಸಿಂಹಾಸನವನ್ನೇರಲು ಆರು ಮೆಟ್ಟಿಲುಗಳಿದ್ದವು. ಅಲ್ಲಮಪ್ರಭುಗಳು ಶೂನ್ಯ ಸಿಂಹಾಸನದ ಮೊದಲ ಅಧ್ಯಕ್ಷರಾಗಿದ್ದರು. ಅವರು ಐಕ್ಯ ಸ್ಥಲದ ಅನುಭವವನ್ನು ಪಡೆದಿದ್ದ ಅನುಭಾವಿ. ಸಮಾನತೆಯ ಹೊಸ ದಾರಿಯಲ್ಲಿ ನಡೆಯುವುದು, ಇಷ್ಟಲಿಂಗ ಪೂಜೆ, ವಿಚಾರ ಸ್ವಾತಂತ್ರ್ಯ, ಆಚಾರಸ್ವಾತಂತ್ರ್ಯಗಳು, ಕಾಯಕ ಗೌರವ, ದಾಸೋಹ ಭಕ್ತಿ ಇವೆಲ್ಲವೂ ಅನುಭವ ಮಂಟಪದಿಂದ ಮೂಡಿಬಂದ ಪ್ರಗತಿಪರ ಕಾರ್ಯಗಳಾಗಿದ್ದವು.

ತಿರುಪತಿ ತಿಮ್ಮಪ್ಪನ ಏಳು ಬೆಟ್ಟಗಳಿಗೆ ಏಳು ದಾರಿಗಳು.. ನೀವು ಎಂದಾದರೂ ಈ ದಾರಿಗಳಲ್ಲಿ ಹೋಗಿದ್ದೀರಾ?

ಬಸವಣ್ಣನವರು ಈ ಎಲ್ಲ ಚಳವಳಿಯ ಮುಂಚೂಣಿಯಲ್ಲಿದ್ದವರು ಎಂಬುದನ್ನು ಒಪ್ಪಬೇಕು. 11ನೇ ಶತಮಾನದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಸವಣ್ಣ, ಯಜ್ಞೋಪವೀತವನ್ನು ತ್ಯಜಿಸಿ, ಹೊಸ ಬಗೆಯ ಭಕ್ತಿ ಚಳವಳಿಯನ್ನು ಮುನ್ನಡೆಸಿದರು. ವಚನಗಳನ್ನು ರಚಿಸಿದರು. ಚಾಳುಕ್ಯರ ಮಹಾಮಂತ್ರಿಯಾಗಿ ವಚನ ಚಳವಳಿಗೆ ರಾಜಕೀಯ ನೆಲೆಯನ್ನೂ ತಂದರು. ಎಲ್ಲ ಶರಣರು, ಜಂಗಮರು ಸೇರಿ ಲಿಂಗಾರ್ಚನೆ- ಶೈವ ತತ್ವವನ್ನು ಅಂಗೀಕರಿಸಿದರು. ಕಾಶ್ಮೀರಿ ಶೈವ ತತ್ವವನ್ನೂ ಉಪಾಸನೆಯಲ್ಲಿ ಅಂಗೀಕರಿಸಿದರು. ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪ ಗಟ್ಟಿಯಾಗಿ ಕಾರ್ಯಾಚರಿಸಿತು. ಅವರ ಕಾಲದ ನಂತರ ಲಿಂಗಾಯತರಲ್ಲಿ ಹಲವು ಜಾತಿಗಳು ಹುಟ್ಟಿಕೊಂಡವು.

Shurpanakha and Ravana: ತಂಗಿ ಶೂರ್ಪಣಕಿಯ ಶಾಪದಿಂದಲೇ ರಾವಣನ ವಿನಾಶವಾಯಿತೇ? ಇಲ್ಲಿದೆ ಸತ್ಯಾಸತ್ಯತೆ

 

 

PREV
Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ನಾಳೆ ಡಿಸೆಂಬರ್ 6 ರಂದು ದ್ವಿಪುಷ್ಕರ ಯೋಗ, 5 ರಾಶಿ ಜನರು ಅದೃಷ್ಟವಂತರು, ಲಾಭ ಡಬಲ್