
ಅಮ್ಮನಾಗುವ ಹಂಬಲ ಬಹುತೇಕ ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಕಾರಣಾಂತರಗಳಿಂದ ಒಮ್ಮೊಮ್ಮೆ ಒಬ್ಬೊಬ್ಬರಿಗೆ ಮಕ್ಕಳ ಭಾಗ್ಯವೇ ಇರುವುದಿಲ್ಲ. ಪತಿ-ಪತ್ನಿ ಇಬ್ಬರಲ್ಲಿಯೂ ಏನೂ ಸಮಸ್ಯೆ ಇಲ್ಲವೆಂದು ವೈದ್ಯರು ಹೇಳಿದರೂ ಮಕ್ಕಳು ಮಾತ್ರ ಹುಟ್ಟುವುದೇ ಇಲ್ಲ. ಕೆಲವೊಮ್ಮೆ ಮದುವೆಯಾದ ತಕ್ಷಣ ಮಗು ಬೇಡ ಎಂದುಕೊಂಡು ಮಾತ್ರೆ ತೆಗೆದುಕೊಳ್ಳುವುದು, ಇಲ್ಲದೇ ಹೋದರೆ ಕೆಲವೊಂದು ಆಪರೇಷನ್ ಮಾಡಿಸಿಕೊಳ್ಳುವುದು, ಅಕಸ್ಮಾತ್ ಗರ್ಭ ಧರಿಸಿಬಿಟ್ಟರೆ ಮಗುವನ್ನು ತೆಗೆಸಿಕೊಳ್ಳುವುದು, ಮಗು ಗರ್ಭದಲ್ಲಿಯೇ ಹೋಗಲು ಮಾತ್ರೆ ತಿನ್ನುವುದು, ಕರಿಯರ್ ದೃಷ್ಟಿಯಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ವಯಸ್ಸು ಮೀರಿದ ಮೇಲೆ ಮದುವೆಯಾಗುವುದು... ಹೀಗೆ ಮಗುವಾಗದೇ ಇರಲು ಕಾರಣಗಳು ನೂರಾರು ಇದ್ದರೂ ಇರಬಹುದು, ಒಮ್ಮೊಮ್ಮೆ ಏನೂ ಕಾರಣ ಇಲ್ಲದೇ ಇದ್ದರೂ ಮಕ್ಕಳನ್ನು ಪಡೆಯುವ ಭಾಗ್ಯ ಸಿಗದೇ ಹೋಗಬಹುದು.
ಯಾವುದೇ ಕಾರಣವಿದ್ದು, ಮಕ್ಕಳಾಗಿಲ್ಲ ಎಂದು ದೂಷಿಸುವುದು ಮಾತ್ರ ಮಹಿಳೆಯನ್ನೇ! ದರೆ ಅದರಲ್ಲಿಯೂ ಇಂಥ ದೂಷಣೆಗೆ, ಮೂದಲಿಕೆಗೆ, ಚುಚ್ಚು ಮಾತನಾಡಲು ಇನ್ನೊಬ್ಬ ಮಹಿಳೆಯೇ ಎನ್ನುವುದು ಅತ್ಯಂತ ವಿಷಾದದ ಸಂಗತಿಯೂ ಹೌದು. ಮಕ್ಕಳಾಗದ ಮಹಿಳೆಗೆ ಇನ್ನಿಲ್ಲದ ಹೆಸರನ್ನು ಇಟ್ಟು ಮೂದಲಿಸುವುದು ಎಂದರೆ ಮತ್ತೊಬ್ಬ ಮಹಿಳೆಯಾದವಳಿಗೆ ಅದೇನೋ ವಿಕೃತ ಖುಷಿ. ಇದೇ ಕಾರಣಕ್ಕೆ ಅದೆಷ್ಟೋ ಮಹಿಳೆಯರು ಪಡುವ ನೋವು ಅಷ್ಟಿಷ್ಟಲ್ಲ. ಇಂಥ ಮೂದಲಿಕೆಯ ಮಾತನ್ನು ಸಹಿಸಿಕೊಳ್ಳಲು ಆಗದೇ ಮನೆಯಿಂದ ಹೊರಕ್ಕೆ ಬರದವರೂ ಇದ್ದರೆ, ಮಗನದ್ದೇ ತಪ್ಪಿದ್ದರೂ ಸೊಸೆಯನ್ನು ತಿವಿಯುವ ಅತ್ತೆಯಿಂದಾಗಿ ಪ್ರಾಣವನ್ನೂ ಕಳೆದುಕೊಂಡಿರುವ ಉದಾಹರಣೆ ಇದೆ. ಇಂಥ ನೋವನ್ನು ಉಣ್ಣುತ್ತಿರುವ ಮಹಿಳೆಯರಿಗೆ ವರದಾನವಾಗಿದೆ ಕರ್ನಾಟಕದಲ್ಲಿಯೇ ಇರುವ ಈ ದೇಗುಲ.
ಇನ್ಸ್ಟಾಗ್ರಾಮ್ನಲ್ಲಿ ಈ ದೇಗುಲದ ಬಗ್ಗೆ ಮಾಹಿತಿ ನೀಡಲಾಗಿದ್ದು, ಈ ದೇಗುಲದಲ್ಲಿ ಪೂಜೆ ಸಲ್ಲಿಸಿರುವ ಕಾರಣ, ತಮಗೂ ಮಕ್ಕಳ ಭಾಗ್ಯ ಉಂಟಾಗಿದೆ ಎಂದು ಹಲವರು ಕಮೆಂಟ್ನಲ್ಲಿ ಬರೆದಿದ್ದಾರೆ. ಈ ಎಲ್ಲಾ ಕಮೆಂಟ್ಸ್ ನೋಡಿದರೆ ಇಲ್ಲಿರುವ ಮಾಹಿತಿ ನಿಜ ಎನ್ನುವುದು ತಿಳಿಯುತ್ತದೆ. ಅಂದಹಾಗೆ ಈ ದೇವಾಲಯ ಇರುವುದು ಕುಂದಾಪುರದ ಕೋಟಾದ ಬಳಿ. ಈ ದೇವಿಯನ್ನು ಹಲವು ಮಕ್ಕಳ ತಾಯಿ ಎಂದೇ ಕರೆಯಲಾಗುತ್ತದೆ. ಅಮೃತೇಶ್ವರಿ ದೇವಾಲಯ ಇದಾಗಿದೆ. ಇಲ್ಲಿ ಪೂಜೆ ಸಲ್ಲಿಸಿ ಇದರ ಕುಂಕುಮವನ್ನು 42 ದಿನಗಳವರೆಗೆ ತೆಗೆದುಕೊಂಡರೆ, ಒಂದು ವರ್ಷದಲ್ಲಿಯೇ ಮಗು ಆಗುತ್ತದೆ ಎನ್ನುವ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ. ಈ ಬಗ್ಗೆ ಹಲವು ಮಹಿಳೆಯರು ಕೂಡ ಕಮೆಂಟ್ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಹಿಳೆಯೊಬ್ಬರು, ಇದರ ಪವಾಡ ಇಷ್ಟೇ ಅಲ್ಲ. ದೇವಿಗೆ ವೀಳ್ಯದೆಲೆಯ ಮಾಲೆಯನ್ನು ಅರ್ಪಿಸಿ ಏನೇ ಬೇಡಿಕೊಂಡರೂ ಅದು ಪ್ರಸಾದವಾದರೆ 200% ನಿಮ್ಮ ಕೆಲಸ ಆದಂತೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಹಲವು ದೇಗುಲಗಳಲ್ಲಿ ಪವಾಡಗಳು ನಡೆಯುವುದು ಸುಳ್ಳಂತೂ ಅಲ್ಲ. ಇದನ್ನೇ ವ್ಯವಹಾರ ಮಾಡಿಕೊಂಡು ಕೆಲವರು ದುಡ್ಡು ಮಾಡುವ ಕಾಯಕದಲ್ಲಿ ತೊಡಗಿರುವುದು ದೊಡ್ಡ ದುರಂತ. ಆದರೆ ಕೆಲವು ದೇವಾಲಯಗಳ ಗರ್ಭಗುಡಿಯ ಸಮೀಪ ಹೋದಾಗ ಆಗುವ ಅನುಭವ, ಅಲ್ಲಿನ ಕಂಪನ ಹಾಗೂ ಕೆಲವೆಡೆ ಕೆಲವು ಕಾಮನೆಗಳು ಈಡೇರಿತು ಎಂದು ಜನರು ಹೇಳುವಾಗ, ಅದೊಂದು ಯಾವುದೇ ಶಕ್ತಿ ಇದೆ ಎನ್ನುವುದಂತೂ ನಿಜ ಎನ್ನಿಸದೇ ಇರಲಾರದು.