ಮಹಿಳೆಯೊಬ್ಬಳು ತನ್ನ ಬಾಸ್‌ಗೆ ಕಿಡ್ನಿ ದಾನ ಮಾಡಿದ ನಂತರ ಕೆಲಸ ಕಳೆದುಕೊಂಡ ಘಟನೆ ನಡೆದಿದ್ದು, ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವರು ಹಣಕ್ಕಾಗಿ ಕಿಡ್ನಿದಾನ ಮಾಡಿದರೆ, ಹೆಚ್ಚಾಗಿ ಕಿಡ್ನಿ ದಾನವನ್ನು ಬಹಳ ಆತ್ಮೀಯರೆನಿಸಿದವರಿಗೆ ತಮ್ಮ ಪ್ರೀತಿ ಪಾತ್ರರಿಗೆ ದಾನಿಗಳು ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬಳು ತನ್ನ ಬಾಸ್‌ಗೆ ಕಿಡ್ನಿ ನೀಡಿದ್ದಾಳೆ. ಆದರೆ ಈಗ ಅವಳು ಕಿಡ್ನಿ ನೀಡಿದ ಕಾರಣಕ್ಕೆ ಸುದ್ದಿಯಾಗಿಲ್ಲ, ಬದಲಾಗಿ ಹೀಗೆ ಕಿಡ್ನಿ ಕೊಟ್ಟ ಮಹಿಳೆಯನ್ನೇ ಆಕೆಯ ಬಾಸ್ ಕೆಲಸದಿಂದ ತೆಗೆದು ಹಾಕಿದ್ದು, ಈ ವಿಚಾರವೀಗ ಭಾರಿ ಸುದ್ದಿಯಾಗಿದೆ. ಅಂದಹಾಗೆ 2012ರಲ್ಲಿ ನಡೆದ ಘಟನೆ ಇದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಮತ್ತೆ ವೈರಲ್ ಆಗುತ್ತಿದೆ.
ನೀವು ನಿಮ್ಮ ಬಾಸ್‌ಗೆ ಕಿಡ್ನಿ ನೀಡಿದ್ದೀರಿ ಆದರೆ ಬಾಸ್ ಅದಕ್ಕೆ ಪ್ರತಿಯಾಗಿ ನಿಮ್ಮನ್ನು ಕೆಲಸದಿಂದಲೇ ತೆಗೆದು ಹಾಕಿದರೆ ನಿಮ್ಮ ಪರಿಸ್ಥಿತಿ ಹೇಗಿರಬಹುದು ಊಹಿಸಿಕೊಳ್ಳಿ. ಕೇಳುವುದಕ್ಕೆ ಇದು ಒಂತರ ಹಿಂಸೆ ಅನಿಸುತ್ತಿದೆ ಅಲ್ಲವೇ ಹಾಗಿದ್ದರೆ ಈ ಪರಿಸ್ಥಿತಿಯನ್ನು ನಿಜವಾಗಿಯೂ ಎದುರಿಸಿದ ಮಹಿಳೆಯ ಸ್ಥಿತಿ ಹೇಗಿರಬಹುದು ಎಂದು ನೀವೇ ಯೋಚನೆ ಮಾಡಿ.
ಹೌದು ಅಮೆರಿಕಾದ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನ 47 ವರ್ಷದ ಮಹಿಳೆಯೇ ಇಂತಹ ಪರಿಸ್ಥಿತಿ ಎದುರಿಸಿದವರು. ಎರಡು ಮಕ್ಕಳ ತಾಯಿ ಹಾಗೂ ವಿಚ್ಚೇದಿತೆಯಾಗಿದ್ದ 47 ವರ್ಷದ ಡೆಬ್ಬಿ ಸ್ಟೀವನ್ ಎಂಬ ಮಹಿಳೆ ತನ್ನ ಬಾಸ್‌ನ ಅನಾರೋಗ್ಯ ಅರಿತು ಮಾನವೀಯ ನೆಲೆಯಲ್ಲಿ ತನ್ನ ಬಾಸ್ ಜಾಕಿ ಬ್ರೂಸಿ ಎಂಬಾಕೆಗೆ ಕಿಡ್ನಿ ನೀಡಿದ್ದರು. ಆದರೆ ಈ ಬಾಸ್ ಆಕೆಯ ಕೆಲಸಕ್ಕೆ ಕೃತಜ್ಞತೆ ಸಲ್ಲಿಸುವ ಬದಲು ಆಕೆಯನ್ನೇ ಕೆಲಸದಿಂದ ತೆಗೆದು ಹಾಕಿದ್ದಾಳೆ.
ಇದರಿಂದ ಆಕ್ರೋಶಗೊಂಡ ಮಹಿಳೆ ನಂತರ ನ್ಯೂಯಾರ್ಕ್‌ನ ಮಾನವ ಹಕ್ಕುಗಳ ಆಯೋಗದ ಮುಂದೆ ಕೇಸ್ ದಾಖಲಿಸಿದ್ದರು. ತನ್ನ ಬಾಸ್ ತನಗೆ ಅಗತ್ಯವಿದ್ದ ಅಂಗಾಂಗಕ್ಕಾಗಿ ತನ್ನನ್ನು ಬಳಸಿಕೊಂಡರು ಮತ್ತು ಅದು ಸಿಕ್ಕ ನಂತರ ತನ್ನನ್ನು ಕೆಲಸದಿಂದ ತೆಗೆದು ಹಾಕಿದರು ಎಂದು ಮಹಿಳೆ ಆರೋಪಿಸಿದ್ದರು. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಯಾರನ್ನೂ ನಂಬಿದ್ರೂ ಬಾಸ್‌ನ ನಂಬಬೇಡಿ ಎಂದು ಜನ ಕಾಮೆಂಟ್ ಮಾಡ್ತಿದ್ದಾರೆ. ನಿಮ್ಮ ಬಾಸ್‌ನ ನಿಮ್ಮ ಫ್ರೆಂಡ್ ಅಂತ ಭಾವಿಸ್ಬೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ವ್ಯಕ್ತಿಗಳಿಗೆ ನರಕದಲ್ಲಿ ವಿಶೇಷ ಸ್ಥಾನವಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಘಟನೆಯ ಹಿನ್ನೆಲೆ ಹೀಗಿದೆ.
ಡೆಬ್ಬಿ ಸ್ಟೀವನ್ಸ್ 2009 ರಲ್ಲಿ ಹಲವಾರು ಹೊಸ ಕಾರು ಡೀಲರ್‌ಶಿಪ್‌ಗಳನ್ನು ನಿರ್ವಹಿಸುವ ಶತಕೋಟಿ ಡಾಲರ್ ಕಂಪನಿಯಾದ ಅಟ್ಲಾಂಟಿಕ್ ಆಟೋಮೋಟಿವ್ ಗ್ರೂಪ್‌ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದರು. ಈ ಅಟ್ಲಾಂಟಿಕ್ ಆಟೋಮೋಟಿವ್ ಗ್ರೂಪ್‌ನ ವೆಸ್ಟ್ ಇಸ್ಲಿಪ್ ಕಂಪನಿಯ ನಿಯಂತ್ರಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿದ್ದ ಈಕೆಯ ಬಾಸ್ ಜಾಕಿ ಬ್ರೂಸಿಯಾ ಈಕೆಯನ್ನು ಮಾತನಾಡುತ್ತಾ ಪರಿಚಯ ಮಾಡಿಕೊಂಡಿದ್ದರು.
ಇದಾದ ನಂತರ ಸ್ಟೀವನ್ 2010ರಲ್ಲಿ ಸಂಸ್ಥೆಯನ್ನು ತೊರೆದು ಫ್ಲೋರಿಡಾಗೆ ಹೋಗಿದ್ದರು. ಇದಾದ ನಂತರವೂ ಇವರ ಮಧ್ಯೆ ಪರಿಚಯ ಮುಂದುವರೆದಿತ್ತು. ಇಬ್ಬರು ತಮ್ಮ ಕಷ್ಟಸುಖಗಳ ಬಗ್ಗೆ ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಿದ್ದಾಗಲೇ ಈಕೆಯ ಬಾಸ್ ಜಾಕಿ ಬ್ರೂಸಿಯಾ ತನಗಿರುವ ಕಿಡ್ನಿ ಸಮಸ್ಯೆಯ ಬಗ್ಗೆ ಆಕೆಯ ಜೊತೆ ಹೇಳಿಕೊಂಡಿದ್ದರು. ಹಾಗೂ ತನಗೆ ಕಿಡ್ನಿ ಕಸಿಯ ಅಗತ್ಯವಿದೆ ಎಂದು ಅವರು ಹೇಳಿಕೊಂಡಿದ್ದರು.
ಹಾಗೆಯೇ ಮುಂದೆ ತನಗೆ ಕುಟುಂಬದ ಸ್ನೇಹಿತರೊಬ್ಬರು ಕಿಡ್ನಿ ನೀಡುವುದಾಗಿ ಹೇಳಿಕೊಂಡಿದ್ದರು. ಇದೇ ವೇಳೆ ಸ್ಟೀವನ್ ಅವರು ನೀವು ಒಳ್ಳೆಯ ವ್ಯಕ್ತಿಯಾಗಿರುವುದರಿಂದ ನಾನು ಬೇಕಾದರೂ ಕಿಡ್ನಿ ನೀಡಲು ಸಿದ್ಧಳಿದ್ದೇನೆ ಎಂದು ಹೇಳಿದರು. ಸ್ಟೀವನ್ಸ್ ಈ ಮಾತು ಹೇಳಿದಾಗ ಜಾಕಿ ಬ್ರೂಸಿಯಾ ನಿಮ್ಮ ಈ ಪ್ರಸ್ತಾವನೆಯನ್ನು ಮುಂದೊಂದು ದಿನ ನಾನು ಸ್ವೀಕರಿಸಬಹುದು ಎಂದು ಹೇಳಿದ್ದಾರೆ.
ಈ ಮಾತುಕತೆಯ ನಂತರ ಶೀಘ್ರದಲ್ಲೇ, ಸ್ಟೀವನ್ಸ್, ಲಾಂಗ್ ಐಲ್ಯಾಂಡ್‌ಗೆ ಹಿಂತಿರುಗಲು ನಿರ್ಧರಿಸಿದರು ಮತ್ತು ಬ್ರೂಸಿಯಾ ಅವರ ಬಳಿ ತಮ್ಮ ಸಂಸ್ಥೆಯಲ್ಲಿ ಕೆಲಸಕ್ಕೆ ಮರಳಬಹುದೇ ಎಂದು ಕೇಳಿದರು. ನಂತರ ಬ್ರೂಸಿಯಾ ಸ್ಟೀವನ್ಸ್ ಅವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಂಡರು. ಇದಾದ ನಂತರ ಇತ್ತ ಕಿಡ್ನಿಗಾಗಿ ಬ್ರೂಸಿಯಾ ಸ್ಟೀವನ್ಸ್ ಬಳಿ ಬಂದಿದ್ದರು. ಆದರೆ ಅವರ ಕಿಡ್ನಿ ಪರಸ್ಪರ ಹೊಂದಿಕೆಯಾಗುತ್ತಿರಲಿಲ್ಲ.
ಹಾಗಿದ್ದು ಬ್ರೂಸಿಯಾಗೆ ಬೇರೆಯವರಿಂದ ಬೇಗ ಕಿಡ್ನಿ ಸಿಗಲಿ ಎಂಬ ಉದ್ದೇಶದಿಂದ ಸ್ಟೀವನ್ಸ್ ತನ್ನ ಎಡ ಮೂತ್ರಪಿಂಡವನ್ನು ಬೇರೆಯವರಿಗೆ ದಾನ ಮಾಡಿದರು. ಹೀಗಾಗಿ ಇದು ಕಿಡ್ನಿಗಾಗಿ ಕಾಯುವವರ ಪಟ್ಟಿಯಲ್ಲಿ ಬ್ರೂಸಿಯಾ ಅವರ ಹೆಸರನ್ನು ಮೊದಲಿಗಿಟ್ಟಿತ್ತು. ಹಾಗೂ ಆದಷ್ಟು ಬೇಗ ಬ್ರೂಸಿಯಾ ಕಿಡ್ನಿಯನ್ನು ಬೇರೊಬ್ಬರಿಂದ ದಾನ ಪಡೆದರು.
ಆದರೆ ಸರ್ಜರಿಯ ನಂತರ ಸ್ಟೀವನ್‌ಗೆ ಬಹಳ ಆರೋಗ್ಯ ಸಮಸ್ಯೆ ಕಾಡಿತ್ತು. ಹಾಗೂ ಆಕೆಯ ಕಾಲುಗಳು ಆರಾಮವಾಗಿಲ್ಲ ಎಂದು ಅನಿಸಲು ಶುರು ಆಗಿತ್ತು. ಇದರ ನಡುವೆ ಕಿಡ್ನಿ ದಾನದ ನಂತರ ಚೇತರಿಸಿಕೊಂಡ ಸ್ಟೀವನ್ ಸೆಪ್ಟೆಂಬರ್ ನಲ್ಲಿ ಕೆಲಸಕ್ಕೆ ಮರಳಿದ್ದರು. ಆದರೆ ಅಸೌಖ್ಯದ ಕಾರಣಕ್ಕೆ ಕೆಲಸದಿಂದ ಅರ್ಧಕ್ಕೆ ಹೋಗಿದ್ದರು. ಆದರೆ ಈ ಸಮಯದಲ್ಲಿ ಆಕೆಯ ಬಾಸ್ ಆಕ್ರೋಶಗೊಂಡಿದ್ದು, ಕೆಲಸದಿಂದ ಬೇಗ ಹೋಗಿದ್ದಕ್ಕೆ ಬೆದರಿಸಿದ್ದಾರೆ. ನಿಮಗೆ ಬೇಕಾದಂತೆ ಹೋಗುವಂತಿಲ್ಲ ಎಂದು ಬೈದಿದ್ದಾರೆ ಎಂದು ಸ್ಟೀವನ್ ದೂರಿದ್ದಾರೆ.
ನಂತರ ಮರುದಿನ ಕೆಲಸಕ್ಕೆ ಮರಳಿದ ನಂತರವೂ ಕಿರುಕುಳ ಮುಂದುವರೆದಿದೆ. ತನ್ನ ಬಾಸ್ ಸಹೋದ್ಯೋಗಿಗಳ ಮುಂದೆ ತನ್ನ ಮೇಲೆ ಕೂಗುತ್ತಿದ್ದಳು ಎಂದು ಸ್ಟೀವನ್ಸ್ ದೂರಿದ್ದಾರೆ. ಅಂತಿಮವಾಗಿ ಆಕೆಯನ್ನು ಆಕೆಯ ಮನೆಯಿಂದ 50 ಮೈಲುಗಳಷ್ಟು ದೂರದಲ್ಲಿರುವ ಸಂಸ್ಥೆಯ ಕಚೇರಿಗೆ ವರ್ಗಾವಣೆ ಮಾಡಲಾಯ್ತು. ಇದರಿಂದ ಮಾನಸಿಕ ಕಿರುಕುಳಕ್ಕೊಳಗಾದ ಆಕೆ ಮಾನಸಿಕ ತಜ್ಞರನ್ನು ಸಂಪರ್ಕಿಸಿದ್ದಳು. ಅಲ್ಲದೇ ವಕೀಲರನ್ನು ಸಂಪರ್ಕಿಸಿದ್ದಾರೆ. ವಕೀಲರು ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಪತ್ರ ಬರೆದ ನಂತರ ಆಕೆಯನ್ನು ಕಳಪೆ ಪ್ರದರ್ಶನದ ಕೆಲಸದಿಂದಲೇ ತೆಗೆದು ಹಾಕಲಾಯ್ತು ಎಂದು ಮಹಿಳೆ ದೂರು ನೀಡಿದ್ದಾರೆ.