Asianet Suvarna News Asianet Suvarna News

ರಾಮನಗರ : 103.33 ಕೋಟಿ ಮೌಲ್ಯದ ಮಾವು ಬೆಳೆ ಹಾನಿ!

ರಣ ಬಿಸಿಲಿನ ತಾಪ ಹಾಗೂ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಶೇಕಡ 90ರಿಂದ 95ರಷ್ಟು ಮಾವು ಬೆಳೆ ಹಾನಿಯಾಗಿದ್ದು, ಇದರಿಂದ 103.33 ಕೋಟಿ ರುಪಾಯಿ ನಷ್ಟ ಉಂಟಾಗಿದೆ.

Ramanagara  Mango crop worth 103.33 crores damaged snr
Author
First Published May 7, 2024, 2:17 PM IST

-ಎಂ.ಅಫ್ರೋಜ್ ಖಾನ್

ರಾಮನಗರ :  ರಣ ಬಿಸಿಲಿನ ತಾಪ ಹಾಗೂ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಶೇಕಡ 90ರಿಂದ 95ರಷ್ಟು ಮಾವು ಬೆಳೆ ಹಾನಿಯಾಗಿದ್ದು, ಇದರಿಂದ 103.33 ಕೋಟಿ ರುಪಾಯಿ ನಷ್ಟ ಉಂಟಾಗಿದೆ.

ಜಿಲ್ಲಾಡಳಿತದ ಸೂಚನೆಯಂತೆ ತೋಟಗಾರಿಕೆ ಇಲಾಖೆ ತಾಲೂಕು ಮಟ್ಟದಲ್ಲಿ ಜಂಟಿ ಸಮೀಕ್ಷೆ ತಂಡವನ್ನು ರಚಿಸಿತ್ತು. ಆ ತಂಡದ ಸದಸ್ಯರು ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿ ಇಲಾಖೆಗೆ ವರದಿ ಸಲ್ಲಿಸಿದ್ದು, ಅದರಲ್ಲಿ ಈ ಬಾರಿ ಶೇಕಡ 10ರಿಂದ 12ರಷ್ಟು ಮಾವು ಫಸಲು ಬಂದಿರುವುದಾಗಿ ಉಲ್ಲೇಖಿಸಲಾಗಿದೆ.

ಪ್ರಕೃತಿ ವಿಕೋಪದಡಿ ಮಾವು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಎನ್ ಡಿಆರ್ ಎಫ್ ನಲ್ಲಿ ಪರಿಹಾರ ದೊರಕಿಸಿಕೊಟ್ಟು ರೈತರ ಹಿತ ಕಾಪಾಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಬೆಳೆ ಸಮೀಕ್ಷೆ ಪ್ರಕಾರ ಒಟ್ಟಾರೆ 30,066 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದ್ದು, ಪ್ರತಿ ವರ್ಷ ಸರಾಸರಿ 2.50 ಲಕ್ಷದಿಂದ 2.74 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಮಾವು ಬೆಳೆಯಲ್ಲಿ ಹೂವು ಬಿಡುವ ಹಾಗೂ ಕಾಯಿ ಕಚ್ಚುವ ಸಂದರ್ಭದಲ್ಲಿ ವಾಡಿಕೆಯಂತೆ ಮಳೆಯಾಗಲಿಲ್ಲ. ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿದ್ದರಿಂದ ಹಾಗೂ ಜೋನಿ ಹುಳುವಿನ ಬಾಧೆಯಿಂದ ಕಚ್ಚಿದ ಹೂವು ಹಾಗೂ ಕಾಯಿಗಳು ಅವಧಿ ಪೂರ್ವದಲ್ಲಿ ಉದುರಿ ಹೋಗಿವೆ. ಈ ಕಾರಣದಿಂದಾಗಿ ಪ್ರಸಕ್ತ ಹಂಗಾಮಿನಲ್ಲಿ ಮಾವು ಬೆಳೆಯ ಇಳುವರಿಯ ಸರಾಸರಿ ಪ್ರಮಾಣವು ಶೇಕಡ 10 - 12ರಷ್ಟು ಮಾತ್ರ ಅಂದಾಜಿಸಲಾಗಿದೆ. ತಾಪಮಾನ ಹೆಚ್ಚಾಗಿ ಮಳೆ ಬಾರದೇ ಇರುವುದರಿಂದ ಸಮಸ್ಯೆ ಉಲ್ಬಣಿಸಿ ಹೆಚ್ಚು ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಅಂದಾಜು 28 ಸಾವಿರ ಕುಟುಂಬಗಳು ಮಾವು ಬೆಳೆಯನ್ನು ನಂಬಿ ಜೀವನ ನಡೆಸುತ್ತಿವೆ. ಬಹುತೇಕ ಮಳೆಯಾಶ್ರಿತ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಮಾವು ಸಂಪೂರ್ಣ ನಷ್ಟವಾಗಿದೆ. ಜೀವನೋಪಾಯಕ್ಕಾಗಿ ಮಾವನ್ನು ಅವಲಂಬಿಸಿರುವ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸಿದ್ದಾರೆ.

ಪ್ರಕೃತಿ ವಿಕೋಪದಡಿ ಮಾವು ಇಳುವರಿ ಹಾನಿಯನ್ನು ಬೆಳೆ ಹಾನಿಯೆಂದು ಪರಿಗಣಿಸಿ ಎನ್ ಡಿಆರ್‌ಎಫ್‌ನಲ್ಲಿ ಪರಿಹಾರ ದೊರಕಿಸಿಕೊಟ್ಟು ರೈತರ ಹಿತ ಕಾಪಾಡುವಂತೆ ಜಿಲ್ಲಾಡಳಿತ ಮೂಲಕ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿ ಮನವಿ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್.ರಾಜು ''''ಕನ್ನಡಪ್ರಭ''''ಕ್ಕೆ ಪ್ರತಿಕ್ರಿಯೆ ನೀಡಿದರು.

ಬಾಕ್ಸ್ ........................

ವರದಿಯಲ್ಲಿ ಏನಿದೆ ?

-ಜಿಲ್ಲೆಯಲ್ಲಿ ಶೇಕಡ 90-95ರಷ್ಟು ಭಾಗ ಮಾವು ಬೆಳೆಯನ್ನು ಮಳೆಯಾಶ್ರಯದಲ್ಲಿ ಬೆಳೆಯಲಾಗುತ್ತಿದೆ. ಮುಂಗಾರಿನಲ್ಲಿ ಮಳೆಯ ಕೊರತೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿ ಕಚ್ಚಿದ ಹೂವುಗಳು ಹಾಗೂ ಕಾಯಿಗಳು ಉದುರಿವೆ.

-ಮಳೆಯ ಕೊರತೆಯಿಂದಾಗಿ ಜೋನಿ ಮತ್ತು ನುಸಿ ಹುಳುವಿನ ಬಾಧೆ ಹೆಚ್ಚಾಗಿರುವುದು ಕಂಡು ಬಂದಿದ್ದು, ಮಾವಿನ ಮರಗಳು ಅಲ್ಲಲ್ಲಿ ಒಣಗಿ ಹೋಗಿವೆ.

-ಹೆಚ್ಚಿನ ತಾಪಮಾನದಿಂದ ಬಾದಾಮಿ ತಳಿಯಲ್ಲಿ ಸ್ಪಾಂಜಿ ಟಿಸ್ಸ್ಯು ಎಂಬ ಶಾರೀಕ ಸಮಸ್ಯೆ ಹೆಚ್ಚಾಗಿದ್ದು, ಹಣ್ಣುಗಳ ಗುಣಮಟ್ಟ ಕುಸಿದಿದೆ.

ಬಾಕ್ಸ್ ..........ಪ್ರತಿಕೂಲ ಹವಾಮಾನ

ರಾಮನಗರ ಜಿಲ್ಲೆಯಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಒಟ್ಟಾರೆ ಕೇವಲ 39,851 ಮೆಟ್ರಿಕ್ ಟನ್ ಮಾವು ಇಳುವರಿಯನ್ನು ಮಾತ್ರ ನಿರೀಕ್ಷಿಸಲಾಗಿದ್ದು, ಅಂದಾಜು ಒಟ್ಟು 2,34,885 ಮೆಟ್ರಿಕ್ ಟನ್ ಇಳುವಳಿ ಪ್ರತಿಕೂಲ ಹವಾಮಾನದಿಂದ ನಷ್ಟವಾಗಿದ್ದು, ಒಟ್ಟು 103.33 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎನ್ ಡಿಆರ್ ಎಫ್ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್ ಗೆ 22,500 ರು.ನಂತೆ ಒಟ್ಟು ಒಟ್ಟು 57.67 ಕೋಟಿ ರು.ಗಳಲ್ಲಿ ಪರಿಹಾರದ ಮೊತ್ತ ರೈತರಿಗೆ ನೀಡಬೇಕಾಗಿದೆ.

ಕೋಟ್ .............

ತೀವ್ರ ಬರಗಾಲ ಹಾಗೂ ಅತಿಯಾದ ತಾಪಮಾನದಿಂದ ಮಾವು ಬೆಳೆ ನೆಲ ಕಚ್ಚಿದೆ. ಮಾವು ಬೆಳೆಗಾರರು ಶೇ.90ರಷ್ಟು ಪ್ರಮಾಣದಲ್ಲಿ ಫಸಲು ನಷ್ಟ ಮತ್ತು ಶೇ.15-20ರಷ್ಟು ಪ್ರಮಾಣದ ಮಾವಿನ ಮರಗಳನ್ನೇ ಕಳೆದುಕೊಂಡಿದ್ದಾರೆ. ಇದನ್ನು ರಾಷ್ಟ್ರೀಯ ವಿಪತ್ತು ಪರಿಹಾರ ದಡಿ ಪರಿಗಣಿಸಬೇಕು. ರಾಜ್ಯಸರ್ಕಾರ ಮಾವು ಬೆಳೆಗಾರರ ರಕ್ಷಣೆಗೆ ವಿಶೇಷ ಆರ್ಥಿಕ ನೆರವು ನೀಡಬೇಕು.

-ಸಿ.ಪುಟ್ಟಸ್ವಾಮಿ, ನಿರ್ದೇಶಕರು, ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ, ರಾಮನಗರ

6ಕೆಆರ್ ಎಂಎನ್ 1,2.ಜೆಪಿಜಿ

1.ತಾಲೂಕುವಾರು ಮಾವಿನಲ್ಲಿ ಇಳುವರಿ ಹಾನಿಯಾಗಿರುವ ವಿವರ.

2.ಮಾವು ಬೆಳೆ ಹಾನಿಯಾಗಿರುವ ಕುರಿತು ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಿತು.

Follow Us:
Download App:
  • android
  • ios