ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಮುಟ್ಟಿನ ತಪಾಸಣೆ ಹೆಸರಿನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮುಂಬೈ: ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರುವ ಅಮಾನವೀಯ ಘಟನೆ ಮುಂಬೈನ ಥಾಣೆಯ ಖಾಸಗಿ ಶಾಲೆಯಲ್ಲಿ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಶಾಲೆ ಮುಂದೆ ಜಮಾಯಿಸಿದ ಪೋಷಕರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಥಾಣೆ ಜಿಲ್ಲೆಯ ಶಹಪುರ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ ಮುಟ್ಟಿನ ತಪಾಸಣೆ ಹೆಸರಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, 5 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆಯನ್ನು ಬಿಚ್ಚಿಸಲಾಗಿದೆ. ಈ ಘಟನೆ ಸಂಬಂಧ ಶಾಲೆಯ ಮುಖ್ಯೋಪಾದ್ಯಯ, ನಾಲ್ವರು ಶಿಕ್ಷಕರು, ಓರ್ವ ಮಹಿಳಾ ಸಹಾಯಕಿ ಮತ್ತು ಇಬ್ಬರು ಟ್ರಸ್ಟಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಏನಿದು ಪ್ರಕರಣ?

ಜುಲೈ 8ರಂದು ಈ ಘಟನೆ ನಡೆದಿದೆ. ಮಂಗಳವಾರ ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಾಣಿಸಿವೆ. ಪೊಲೀಸರ ಪ್ರಕಾರ, ರಕ್ತದ ಕಲೆಗಳು ಕಂಡ ಕೂಡಲೇ ಶಾಲಾ ಆಡಳಿತ ಮಂಡಳಿ ಎಲ್ಲಾ ವಿದ್ಯಾರ್ಥಿನಿಯರನ್ನು ಸಭಾಭವನಕ್ಕೆ ಬರುವಂತೆ ಹೇಳಿದ್ದಾರೆ. ಅಲ್ಲಿ ಪ್ರೊಜೆಕ್ಟರ್ ಮೂಲಕ ಶೌಚಾಲಯದಲ್ಲಿನ ರಕ್ತದ ಕಲೆಯ ಫೋಟೋಗಳನ್ನು ಎಲ್ಲರಿಗೂ ತೋರಿಸಿದ್ದಾರೆ. ನಂತರ ಯಾರಾದ್ರೂ ಮುಟ್ಟು ಆಗಿದ್ದೀರಾ ಎಂದ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಕೆಲವರು ಮುಟ್ಟಾಗಿರೋದನ್ನು ಒಪ್ಪಿಕೊಂಡಿದ್ದಾರೆ. ಇನ್ನುಳಿದ ಮಕ್ಕಳು ಮುಟ್ಟಾಗಿಲ್ಲ ಎಂದು ಹೇಳಿದ್ದರು. ಆ ಬಳಿಕ ಎಲ್ಲಾ ವಿದ್ಯಾರ್ಥಿನಿಯರನ್ನು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ.

ಮುಟ್ಟಾಗಿಲ್ಲ ಎಂದ ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಲಾಗಿದೆ. ನಂತರ ಅಲ್ಲಿ ವಿದ್ಯಾರ್ಥಿನಿಯರ ಬಟ್ಟೆ ಕಳಚಿ, ಅವರ ಗುಪ್ತಾಂಗವನ್ನು ಪರಿಶೀಲಿಸಿದ್ದಾರೆ. ಶಾಲಾ ಅಡಳಿತ ಮಂಡಳಿಯ ಈ ನಿರ್ಧಾರ ಮಕ್ಕಳಿಗೆ ಮಾನಸಿಕ ನೋವುಂಟು ಮಾಡಿದೆ. ಮತ್ತೊಂದೆಡೆ ಪೋಷಕರು ಶಾಲೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಯಾರ ಬಂಧನವೂ ಇಲ್ಲ!

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧೀಕ್ಷಕ ರಾಹುಲ್ ಜಾಲ್ಟೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಎಂಟು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ, ತನಿಖೆ ಮುಂದುವರಿದಿದೆ. ಶೀಘ್ರದಲ್ಲೇ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಹಪುರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಮುಖೇಶ್ ಧಾಗೆ ತಿಳಿಸಿದ್ದಾರೆ.

ಉತ್ತಮ ಅಂಕ ಕೊಡಿಸೋದಾಗಿ ಕಿರುಕುಳ

ಎಸ್‌ಎಸ್ಎಲ್‌ಸಿಯಲ್ಲಿ ಉತ್ತಮ ಅಂಕ ಕೊಡಿಸೋದಾಗಿ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣವೊಂದು 2024ರಲ್ಲಿ ಬೆಳಕಿಗೆ ಬಂದಿತ್ತು. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹಣಮೇಗೌಡ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿತ್ತು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯದರ್ಶಿ ಗರೀಮಾ ಪನ್ವಾರ್‌ ಅನುಚಿತ ವರ್ತನೆ ಆರೋಪದಡಿ ಅಮಾನತುಗೊಳಿಸಿ, ಆದೇಶಿಸಿದ್ದರು.ಈ ಸಂಬಂಧ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳ ಪಡೆದು ಪಾಸಾಗಲು ಮಕ್ಕಳಿಗೆ ವಿಶೇಷ ಕ್ಲಾಸ್‌ಗಳ ನೆಪದಲ್ಲಿ ಕೋಣೆಗೆ ಕರೆಯಿಸಿಕೊಂಡು, ದೌರ್ಜನ್ಯವೆಸಗುತ್ತಿದ್ದ ಹಣಮೇಗೌಡ, ಇದಕ್ಕೆ ಪ್ರತಿರೋಧಿಸಿದರೆ ಫೇಲ್‌ ಮಾಡಿಸುವ ಬೆದರಿಕೆ ಕೂಡ ಹಾಕುತ್ತಿದ್ದನಂತೆ! ಈತನ ಕಿರುಕುಳ ತಾಳದೆ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದ್ದರೆ, ದೂರು ಕೊಡಲು ಮುಂದಾಗುತ್ತಿದ್ದ ಪಾಲಕರಿಗೆ ಸ್ಥಳೀಯ ಗ್ರಾಮ ಪ್ರಮುಖರ ಮುಖೇನ ಬೆದರಿಕೆ ಹಾಕಿಸುತ್ತಿದ್ದ. ಕಳೆದ 2-3 ವರ್ಷಗಳಿಂದಲೂ ಹಣಮೇಗೌಡ ಬಾಲಕಿಯರ ಮೇಲೆ ಇಂತಹ ದೌರ್ಜನ್ಯ ಎಸಗುತ್ತಿದ್ದ. ಅಲ್ಲಿನ ಒಂದಿಬ್ಬರು ಸಿಬ್ಬಂದಿ ಇದಕ್ಕೆ ಪರೋಕ್ಷವಾಗಿ ಸಹಕರಿಸುತ್ತಿದ್ದರು. ಕೆಲವೊಮ್ಮೆ ದೃಶ್ಯಗಳ ಚಿತ್ರೀಕರಿಸಿಕೊಂಡು, ಬ್ಲಾಕ್‌ಮೇಲ್‌ ಮಾಡಲಾಗುತ್ತಿತ್ತು ಎನ್ನುವ ಆತಂಕಕಾರಿ ವಿಷಯವೂ ಈಗ ಬೆಳಕಿಗೆ ಬಂದಿದೆ.