ICC Test Rankings: ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್‌ಗೆ ಜಾಕ್‌ಪಾಟ್!
ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ಐಸಿಸಿ ಟೆಸ್ಟ್ ಶ್ರೇಯಾಂಕ ಪ್ರಕಟಗೊಂಡಿದ್ದು, ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಶುಭ್‌ಮನ್ ಗಿಲ್ 15 ಸ್ಥಾನ ಜಿಗಿತ ಕಂಡು ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
- FB
- TW
- Linkdin

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಬ್ಬರಿಸುತ್ತಿರುವ ಟೀಂ ಇಂಡಿಯಾದ ಟೆಸ್ಟ್ ನಾಯಕ ಶುಭ್‌ಮನ್ ಗಿಲ್ ಇದೇ ಮೊದಲ ಬಾರಿ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸರಣಿಗೂ ಮುನ್ನ 23ನೇ ಸ್ಥಾನದಲ್ಲಿದ್ದ ಗಿಲ್ ಬುಧವಾರ ಬಿಡುಗಡೆಯಾದ ಪಟ್ಟಿಯಲ್ಲಿ 15 ಸ್ಥಾನ ಏರಿಕೆ ಕಂಡಿದ್ದು, 6ನೇ ಸ್ಥಾನ ಪಡೆದಿದ್ದಾರೆ.
ಅವರು ಸರಣಿಯ ಆರಂಭಿಕ 2 ಪಂದ್ಯಗಳಲ್ಲಿ 585 ರನ್ ಕಲೆಹಾಕಿದ್ದು, ಇದೇ ಪ್ರದರ್ಶನ ಮುಂದುವರಿಸಿದರೆ ರ್‍ಯಾಂಕಿಂಗ್‌ನಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವ ಸಾಧ್ಯತೆಯಿದೆ.
ಇಂಗ್ಲೆಂಡ್‌ನ ಜೋ ರೂಟ್‌ರನ್ನು ಹಿಂದಿಕ್ಕಿ ಹ್ಯಾರಿ ಬ್ರೂಕ್ ನಂ.1 ಸ್ಥಾನಕ್ಕೇರಿದ್ದಾರೆ. ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಹ್ಯಾರಿ ಬ್ರೂಕ್ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ 158 ರನ್ ಸಿಡಿಸಿ ಮಿಂಚಿದ್ದರು.
ಈ ಮೊದಲು ಹ್ಯಾರಿ ಬ್ರೂಕ್ 2024ರ ಡಿಸೆಂಬರ್‌ನಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದರು. ಇದೀಗ ರೂಟ್ ಅವರನ್ನು ಹಿಂದಿಕ್ಕಿ ಬ್ರೂಕ್ ಮತ್ತೆ ಅಗ್ರಸ್ಥಾನಕ್ಕೇರಿದ್ದು, ಇಬ್ಬರ ನಡುವೆ 18 ರೇಟಿಂಗ್ ಅಂಕಗಳ ವ್ಯತ್ಯಾಸವಿದೆ.
ಟೀಂ ಇಂಡಿಯಾ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜೈಸ್ವಾಲ್ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿದ್ದಾರೆ
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಜಂಟಿ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಜತೆ ಜಂಟಿ ಏಳನೇ ಸ್ಥಾನ ಹಂಚಿಕೊಂಡಿದ್ದಾರೆ.
ಇನ್ನು, ಎಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಆಡದಿದ್ದರೂ ವೇಗಿ ಜಸ್‌ಪ್ರೀತ್ ಬುಮ್ರಾ ಬೌಲರ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.